ADVERTISEMENT

ಹೊಸ ಓದಿಗೆ ಅನುವು ಮಾಡುವ ಅನುವಾದಗಳು

ಸಂದೀಪ ನಾಯಕ
Published 20 ಜೂನ್ 2015, 19:30 IST
Last Updated 20 ಜೂನ್ 2015, 19:30 IST

ಇಲ್ಲಿನ ನಾಲ್ಕು ಪುಸ್ತಕಗಳನ್ನು ಸಂಪಾದಿಸಿದವರು ಲೇಖಕಿ ಎಚ್‌.ಎಸ್‌. ಅನುಪಮಾ. ‘ನಡೆಯೋಣ, ಕೇಳುತ್ತಾ’ ಎಂಬುದು ಕಾರಿನ್‌ ಕುಮಾರ್‌ ಅವರು ಇಂಗ್ಲಿಷ್‌ ಭಾಷೆಯಲ್ಲಿ ನಾಲ್ಕು ಸಂಪುಟಗಳಲ್ಲಿ ಸಂಪಾದಿಸಿದ ಮಹತ್ವದ ಪುಸ್ತಕದ ಮುಖ್ಯ ಬರಹಗಳನ್ನು ಮಾತ್ರ ಒಳಗೊಂಡಿದೆ. 

ಜಗತ್ತಿನ ದಕ್ಷಿಣ ಭಾಗದಲ್ಲಿ ಪರ್ಯಾಯ ಬದುಕನ್ನು ಕಂಡುಕೊಳ್ಳುವಲ್ಲಿ ನಡೆದ ಚಿಂತನೆ, ಹೋರಾಟವನ್ನು ಇದು ದಾಖಲಿಸುತ್ತದೆ. ಇದರಲ್ಲಿ ಜಗತ್ತಿನ ಹಲವು ಚಿಂತಕರು ಬರೆದ ಮಹತ್ವದ ಎನ್ನುವುದಕ್ಕಿಂತ ನಮಗೆ ಬೇಕಾದ ಬರಹಗಳು ಇವೆ. ಎಡ್ವರ್ಡೊ ಗಾಲಿನೊ, ಜಾನ್‌ ಬರ್ಗರ್‌, ನಾಮ್‌ ಚಾಮ್‌ಸ್ಕಿ, ಶಿವ ವಿಶ್ವನಾಥನ್‌ ಮತ್ತಿತರರ ಬರಹಗಳಲ್ಲಿ ದಕ್ಷಿಣದ ಬದುಕಿನಲ್ಲಿ ಸೃಷ್ಟಿಯಾದ ಹೊಸ ಹಾದಿಗಳ ಹುಡುಕಾಟವಿದೆ.

ಅಧಿಕಾರ, ಮಾರುಕಟ್ಟೆ, ಬ್ರಿಟಿಷ್‌ ವಸಾಹತುಶಾಹಿ ಸೃಷ್ಟಿಸಿದ ಗುಲಾಮಗಿರಿ, ವೈದ್ಯಕೀಯ, ಕೃಷಿಯ ಹಲವು ಅವತಾರಗಳು ಇಲ್ಲಿ ಕಾಣಸಿಗುತ್ತವೆ. ಮೂರನೇ ಜಗತ್ತಿನ ಜೀವಪರ ಚಿಂತನೆ, ನೋಟಗಳನ್ನು ಈ ಬರಹಗಳು ಒಳಗೊಂಡಿವೆ. ಹಾಗೆನೋಡಿದರೆ ಮೂರನೇ ಜಗತ್ತಿನ ಒಳಿತು ಕೆಡಕಗಳ ವಿರಾಟ್‌ ಸ್ವರೂಪವನ್ನು ತೋರುವುದು ಈ ಪುಸ್ತಕದ ಮುಖ್ಯ ಸಂಗತಿಗಳಲ್ಲಿ ಒಂದಾಗಿದೆ. ಇಲ್ಲಿ 20 ಲೇಖನಗಳನ್ನಷ್ಟೆ ಕನ್ನಡಕ್ಕೆ ಅನುವಾದಿಸಲಾಗಿದೆ. ಇದೊಂದು ಕನ್ನಡಕ್ಕೆ ಅಗತ್ಯವಾದ ಚಿಂತನೆಗಳನ್ನು ಕೊಡುವ ಪುಸ್ತಕವಾಗಿ ರೂಪತಾಳಿದೆ.

‘ಪ್ರತಿಬಿಂಬ’ ಪುಸ್ತಕವು 2014ರಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ಅನುವಾದಿತ ಪತ್ರಿಕಾಬರಹಗಳನ್ನು ಒಳಗೊಂಡಿದ್ದರೆ, ‘ಕಸಿಮಾವು’ ಕನ್ನಡ ಪತ್ರಿಕೆಗಳಲ್ಲಿ ಬಂದ ವಿವಿಧ ಭಾಷೆಗಳ ಕತೆಗಳನ್ನು ಸಂಗ್ರಹಿಸಿದೆ. ಮೊದಲನೆ ಪುಸ್ತಕ ‘ಪ್ರತಿಬಿಂಬ’ದಲ್ಲಿ ಮನುಷ್ಯಲೋಕದ ಹಲವು ಸ್ತರ, ಸಮಸ್ಯೆಗಳು ಇರುವ ಬರಹಗಳಿವೆ. ಇಲ್ಲಿ ಅನುವಾದಿಸಲ್ಪಟ್ಟ ಅನೇಕ ಲೇಖಕರು ಪ್ರಸಿದ್ಧರಲ್ಲ. ಬಹಳಷ್ಟು ಲೇಖನಗಳು ಅವುಗಳ ವಿಷಯ ಮಂಡನೆಯಿಂದಾಗಿಯೇ ಚರ್ಚೆಗೆ ಆಸ್ಪದ ಮಾಡಿಕೊಡುವಂತಿವೆ.

ಯಾವ ಮೂಲ ಭಾಷೆಯಿಂದ ಇವುಗಳನ್ನು ಕನ್ನಡಕ್ಕೆ ತರಲಾಗಿದೆ ಎಂಬುದನ್ನು ಇಲ್ಲಿನ ಬಹುಪಾಲು ಲೇಖನಗಳ ಜೊತೆ ಕೊಡಲಾಗಿಲ್ಲ. ಅನೇಕ ಬರಹಗಳು ಇಂಗ್ಲಿಷ್‌ ಭಾಷೆಯಿಂದ ಬಂದಿವೆ. ಇದಲ್ಲದೆ ಈ ಸಂಗ್ರಹಕ್ಕೆ ಪತ್ರಿಕೆಗಳಿಂದ ಅನುಮತಿ ಪಡೆಯಲಾಗಿದೆ ಎಂದು ಸಂಪಾದಕಿ ಅನುಪಮಾ ಪ್ರಸ್ತಾವನೆಯಲ್ಲಿ ಹೇಳಿಕೊಂಡಿದ್ದಾರೆ. ಇದು ಮತ್ತು ‘ಕಸಿ ಮಾವು’ ಸಂಕಲನದ ಕತೆಗಳಿಗೆ ಸಂಬಂಧಿಸಿದಂತೆ ಆ ಸೌಜನ್ಯವನ್ನು ಅವರಾಗಲಿ, ‘ಕುವೆಂಪು ಭಾಷಾ ಭಾರತಿ ಪ್ರಾಧಿಕಾರ’ವಾಗಲಿ ತೋರಿದಂತಿಲ್ಲ.

‘ಕಸಿಮಾವು’ ಸಂಕಲನವು 2014ರಲ್ಲಿ ಪತ್ರಿಕೆಗಳಲ್ಲಿ ಬಂದ ಕತೆಗಳ ಕನ್ನಡ ಅನುವಾದಗಳನ್ನು ತನ್ನಲ್ಲಿ ಸೇರಿಸಿಕೊಂಡಿದೆ. ಇಲ್ಲಿ ಯಾವ ಆಯ್ಕೆಯ ಮಾನದಂಡವೂ ಕಾಣುವುದಿಲ್ಲ. ಪತ್ರಿಕೆಗಳಲ್ಲಿ ಪ್ರಕಟವಾದ ಅನುವಾದಿತ ಕತೆಗಳನ್ನು ಇಲ್ಲಿ ರಾಶಿ ಒಟ್ಟಲಾಗಿದೆ. ಭಾರತೀಯ ಭಾಷೆಗಳ ಕತೆಗಳನ್ನು ಮಾತ್ರ ಇದರಲ್ಲಿ ಸೇರಿಸುವುದು ಸಾಧ್ಯವಿತ್ತು. ಕನ್ನಡದ ಹಿರಿಯರೊಂದಿಗೆ ಕಿರಿಯರ ಅನುವಾದಗಳೂ ಇಲ್ಲಿ ಒಟ್ಟುಗೂಡಿವೆ. ತೆಲುಗು, ಮಲಯಾಳಂ, ಫ್ರೆಂಚ್‌, ಯಿದ್ದಿಶ್, ತಮಿಳು, ಮರಾಠಿ ಮತ್ತಿತರ ಭಾಷೆಯ ಕತೆಗಳು ಇಲ್ಲಿವೆ. ಬಹುತೇಕ ವಿದೇಶಿ ಕತೆಗಳು ಇಂಗ್ಲಿಷ್‌ ಕನ್ನಡಿಯಲ್ಲಿ ಪ್ರತಿಫಲನಗೊಂಡು ಅಲ್ಲಿಂದ ಹಾದುಬಂದ ರೂಪಾಂತರಗಳು. ಪತ್ರಿಕೆಗಳಲ್ಲಿ ಬಂದ ಅನುವಾದಿತ ಕಥೆಗಳನ್ನೆಲ್ಲ ಪ್ರಕಟಿಸಬೇಕು ಎನ್ನುವ ಉದ್ದೇಶದಿಂದ ಇದನ್ನ ಅಚ್ಚು ಮಾಡಿರುವ ‘ಕುವೆಂಪು ಭಾಷಾ ಭಾರತಿ ಪ್ರಾಧಿಕಾರ’ ತನ್ನ ದಾರಿ, ಗುರಿ ಎರಡರಲ್ಲೂ ಎಡವಿದೆ.

‘ಮಣಿಸರ’ ಸಂಕಲನ ಅನುವಾದಿತ ಕವಿತೆಗಳ ಸಂಗ್ರಹವಾಗಿದೆ. ಇದೂ ಸಹ ಮೇಲಿನ ಸಂಗ್ರಹದ ಜಾಡನ್ನೇ ತುಳಿದಿದೆ. ಆದರೆ, ಇದು ಅದಕ್ಕಿಂತ ಕೊಂಚ ಭಿನ್ನವಾಗಿದೆ. ಈ ಸಂಕಲನ ಪತ್ರಿಕೆಗಳನ್ನು ಆಶ್ರಯಿಸಿಲ್ಲ. ಹತ್ತಾರು ಭಾಷೆಗಳ ಹಲವಾರು ಕವಿಗಳ ಕವಿತೆಗಳು ಇಲ್ಲಿ ಕಿವಿ ತುಂಬುತ್ತವೆ. ಬೇರೆ ಭಾಷೆಗಳ ಕವಿತೆಗಳಲ್ಲಿ ಅಡಗಿರುವ ‘ಮೂಕ ಮರ್ಮರ’ ಹಾಗೂ ಹಲಬಗೆಯ ಹೊಸ ಉಲಿಗಳನ್ನು ಕನ್ನಡದಲ್ಲೇ ಕೇಳಿಸಿಕೊಳ್ಳಲು ಇದು ಅವಕಾಶ ಮಾಡಿಕೊಡುತ್ತದೆ.

ಕನ್ನಡದ ಹಲವಾರು ಅನುವಾದಕರು ಇದಕ್ಕಾಗಿಯೇ ತಮ್ಮ ಅನುವಾದಗಳನ್ನು ಕೊಟ್ಟಿದ್ದಾರೆ. ‘ಗಡಿ ದಾಟಿದ ಕವಿತೆಗಳು (2014)’ ಎಂಬ ಉಪನಾಮದ ಅಡಿಯಲ್ಲಿ ಕವಿತೆಗಳು ಬಂದಿದ್ದರೂ ಅವು ಇದೇ ವರ್ಷ ಈ ಸಂಕಲನಕ್ಕಾಗಿಯೇ ಅನುವಾದಿಸಿದವುಗಳಲ್ಲ. ಅನುವಾದಕರು ತಮ್ಮ ಖುಷಿಗಾಗಿ ಯಾವತ್ತೋ ಮಾಡಿದ ಅನುವಾದಗಳನ್ನು ಇಲ್ಲಿ ಸೇರಿಸಿಕೊಳ್ಳಲಾಗಿದೆ.

ಹಲವರನ್ನು ಒಳಗೊಳ್ಳಬೇಕು ಎಂಬುದನ್ನು ಬಿಟ್ಟರೆ, ಇದಕ್ಕೆ ಬೇರೆ ಉದ್ದೇಶ ಏನಿಲ್ಲ. ಹಾಗಾಗಿ ಇದು ವೃತ್ತಿಪರತೆಯನ್ನು ತೊರೆದ ಹವ್ಯಾಸಿ ಸಂಪಾದನೆಯಾಗಿದೆ. ಜೊತೆಗೆ ಅವಸರದ್ದೂ ಸಹ. ಇಂಥ ಸಂಕಲನಗಳನ್ನು ಸಂಪಾದಿಸುವಾಗ ಮುಖ್ಯವಾಗಿ ಗಮನಿಸಬೇಕಾದದ್ದು ಯಾವುದು ಎಷ್ಟಿರಬೇಕು ಎಂಬ ಔಚಿತ್ಯ ಪ್ರಜ್ಞೆ. ಏಕೆಂದರೆ ಇಂಥ ಸಂಪಾದಿತ ಸಂಕಲನಗಳಿಗೆ ಯಾವ ಭಾಷೆಯ ಯಾವ ಕವಿಯನ್ನೂ ಯಾವಾಗ ಬೇಕಾದರೂ ಜೋಡಿಸುವ ಸಾಧ್ಯತೆ ಇದ್ದೇಇರುತ್ತದೆ. ಕಾಲಮಾನದ ಹಂಗೂ ಇರುವುದಿಲ್ಲ. ಆದ್ದರಿಂದ ಇದಕ್ಕೆ ಅದರದ್ದೇ ಆದ ಚಹರೆಯೊಂದು ಬಂದಿಲ್ಲ. ಕನ್ನಡದ ಅನುವಾದಕರು ತಮ್ಮ ಅನುವಾದದ ಕುರಿತು ಪುಟ್ಟ ಟಿಪ್ಪಣಿಗಳನ್ನು ಕೊಟ್ಟಿದ್ದಾರೆ. ಇದಷ್ಟೆ ಇಲ್ಲಿ ಇರುವ ವಿಶಿಷ್ಟ ಅಂಶ.

‘ಕುವೆಂಪು ಭಾಷಾ ಭಾರತಿ ಪ್ರಾಧಿಕಾರ’ ಪ್ರಕಟಿಸಿದ ಈ ನಾಲ್ಕು ಪುಸ್ತಕಗಳನ್ನು ಸಂಪಾದಿಸಿರುವ ಎಚ್‌.ಎಸ್‌. ಅನುಪಮಾ, ಈ ಪ್ರಾಧಿಕಾರದ ಸದಸ್ಯರು ಕೂಡ. ಸದಸ್ಯರೊಬ್ಬರೇ ನಾಲ್ಕು ಪುಸ್ತಕಗಳನ್ನು ಸಂಪಾದಿಸುವುದು ಭಾಷಾ ಭಾರತಿ ಪ್ರಾಧಿಕಾರದ ಬೌದ್ಧಿಕ ಬರಡುತನವನ್ನು ಅಥವಾ ಕನ್ನಡದಲ್ಲಿ ಇಂತಹ ಪುಸ್ತಕಗಳನ್ನು ಸಂಪಾದಿಸುವವರ ಕೊರತೆಯನ್ನು ಸೂಚಿಸುತ್ತಿರಬಹುದು. ಪ್ರಜಾಪ್ರಭುತ್ವದಲ್ಲಿ, ಇದೂ ಒಂದು ರೀತಿಯಲ್ಲಿ ಅಧಿಕಾರದ ದುರುಪಯೋಗ. ‘ಒಂದು ವಸ್ತು ಇರುವಾಗಲೇ ಇನ್ನೊಂದನ್ನು ಇಟ್ಟುಕೊಳ್ಳುವುದು ಭ್ರಷ್ಟತೆ’ ಎಂದು ಮಹಾತ್ಮ ಗಾಂಧಿ ಹೇಳುತ್ತಿದ್ದರು. ಇದನ್ನೂ ಅದೇ ಸಾಲಿಗೆ ಸೇರಿಸಬಹುದೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.