ವೈವಿಧ್ಯ
ಲೇ: ಕೆ.ಸತ್ಯನಾರಾಯಣ
ಪ್ರ: ವಸಂತ ಪ್ರಕಾಶನ, ಬೆಂಗಳೂರು
ಪು: 344
ರೂ. 250
ತಮ್ಮ ಕತೆ, ಕಾದಂಬರಿ, ಪ್ರಬಂಧ, ವಿಮರ್ಶೆಗಳಿಂದ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿ ಪ್ರಸಿದ್ಧರಾಗಿರುವ ಕೆ. ಸತ್ಯನಾರಾಯಣ ಅವರ ಈಚಿನ ನಲವತ್ತೇಳು ಲೇಖನಗಳ ಬೃಹತ್ ಸಂಕಲನ ‘ವೈವಿಧ್ಯ’. ಶೀರ್ಷಿಕೆಯೇ ಸೂಚಿಸುವಂತೆ ಈ ಬರಹಗಳ ಬೀಸು, ವೈವಿಧ್ಯ, ವ್ಯಾಪ್ತಿಗಳು ಬೆರಗು ಹುಟ್ಟಿಸುವಂತಿವೆ.
ಇಲ್ಲಿ ಹಲವಾರು ಸಮಕಾಲೀನ ವಿದ್ಯಮಾನಗಳ ಸೂಕ್ಷ್ಮವಾದ ವಿಚಾರ ಮಂಥನ ನಡೆದಿದೆ; ಕನ್ನಡ ಮತ್ತು ಇತರ ಭಾಷೆಗಳ ಹಲವು ಮೌಲಿಕ ಕೃತಿಗಳ ಪ್ರೌಢವಾದ ವಿಮರ್ಶೆ ಇದೆ; ನಮ್ಮ ಕಾಲವನ್ನು ಪ್ರಭಾವಿಸಿದ, ನಮ್ಮ ಸಂವೇದನೆಗಳನ್ನು ರೂಪಿಸಿದ ಧೀಮಂತರನ್ನು ಕುರಿತ ನೆನಪುಗಳಿವೆ; ಚರಿತ್ರೆಗೆ ಮುಖಾಮುಖಿಯಾಗಿ ಬರೆಯುತ್ತಿದ್ದರೂ ಲೇಖಕರ ಆತ್ಮಚರಿತ್ರೆಯ ತುಣುಕುಗಳೋ ಎಂಬಂಥ ಅನುಭವ ಕಥನಗಳೂ ಇವೆ.
ಇಲ್ಲಿನ ನಲವತ್ತಾರು ಲೇಖನಗಳು ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಈಗ ಇಲ್ಲಿ ಸಂಗ್ರಹಗೊಂಡು ಪುಸ್ತಕ ರೂಪದಲ್ಲಿ ಹೊರಬಂದಿರುವುದರಿಂದ ಲೇಖಕರ ಆದ್ಯತೆ, ಅಭಿರುಚಿ, ಆಸಕ್ತಿ ಮತ್ತು ಒಟ್ಟಾರೆ ಜೀವನದೃಷ್ಟಿಯನ್ನು ಒಟ್ಟಂದದಲ್ಲಿ ಗಮನಿಸಿ ಗುರುತಿಸಿಕೊಳ್ಳಲು ಓದುಗರಿಗೆ ಒಂದು ಅವಕಾಶವನ್ನು ಕಲ್ಪಿಸಿದೆ. ಒಂದು ಲೇಖನವನ್ನು ಮಾತ್ರ ದಿನಪತ್ರಿಕೆಗಳು ಪ್ರಕಟಿಸಲು ನಿರಾಕರಿಸಿದವಂತೆ.
ಆ ಲೇಖನದ ಶೀರ್ಷಿಕೆ, ‘ನಮ್ಮ ಕುವೆಂಪು ಒಕ್ಕಲಿಗರು ಮಾತ್ರರೇ?’. ಇದಕ್ಕೆ ಲೇಖನವೇ ಧ್ವನಿಸುವ ಉತ್ತರ, ‘ಅಲ್ಲ’ ಎಂದು. ಈ ಲೇಖನವು ಸತ್ಯನಾರಾಯಣರ ಉಳಿದ ಬರಹಗಳಂತೆಯೇ ಇದೆ. ನಿಲುವು, ಧಾಟಿ, ತರ್ಕ ಎಲ್ಲದರಲ್ಲಿಯೂ ಇದೊಂದು ಪ್ರತ್ಯೇಕ ಲೇಖನವೆಂದೇನೂ ಅನ್ನಿಸುವುದಿಲ್ಲ.
ಹಾಗಿದ್ದೂ ಈ ಲೇಖನವು ಪತ್ರಿಕೆಗಳಿಂದ ನಿರಾಕರಣೆಗೆ ಒಳಗಾಗಿದ್ದು ಆಶ್ಚರ್ಯಕರ. ಒಕ್ಕಲಿಗರ ಸಮ್ಮೇಳನದ ಭಾಗವಾಗಿ ಬೆಂಗಳೂರಿನ ತುಂಬಾ ಹಾಕಲಾಗಿದ್ದ ಪೋಸ್ಟರುಗಳಲ್ಲಿ ಮತ್ತು ಫ್ಲೆಕ್ಸ್ ಬೋರ್ಡುಗಳಲ್ಲಿ ಕುವೆಂಪು ಭಾವಚಿತ್ರವು ಎಲ್ಲ ರಾಜಕಾರಣಿಗಳ ಫೋಟೋಗಳಾದ ಮೇಲೆ ಕೊನೆಯಲ್ಲಿ, ಅಂಚಿನಲ್ಲಿ, ಬಲವಂತದಿಂದ ಎಂಬಂತೆ ಕಾಣಿಸಿಕೊಂಡಿದ್ದು ಸತ್ಯನಾರಾಯಣ ಅವರಿಗೆ ಬೇಸರವನ್ನೂ ನೋವನ್ನೂ ತಂದಿತು.
ಕುವೆಂಪು ಅಂಥ ಒಬ್ಬ ಸಂಸ್ಕೃತಿ ಧೀಮಂತರನ್ನು ಒಂದು ಜಾತಿಗೆ ಸಮೀಕರಿಸುವ ಪ್ರಯತ್ನದ ಹಿಂದಿನ ಪ್ರೇರಣೆ ಮತ್ತು ಪರಿಣಾಮಗಳನ್ನು ಲೇಖಕರು ದಿಟ್ಟವಾಗಿ ಪ್ರಶ್ನಿಸುತ್ತಾರೆ; ಗಂಭೀರವಾದ ಜಿಜ್ಞಾಸೆಗೆ ಒಳಪಡಿಸುತ್ತಾರೆ. ಈ ಲೇಖನದ ಧಾಟಿ ಹೇಗಿದೆ ಎಂದರೆ, ಓದುಗರು ಇಂಥದೊಂದು ಪ್ರಶ್ನೆಯನ್ನು ಬಸವಣ್ಣ, ಅಂಬೇಡ್ಕರ್ ಮುಂತಾದ ಧೀಮಂತ ವ್ಯಕ್ತಿತ್ವಗಳ ಬಗ್ಗೆಯೂ ಕೇಳಬಹುದಾಗಿದೆ. ಸ್ವತಃ ಕುವೆಂಪು ಅವರ ಸುಪ್ರಸಿದ್ಧ ಪದ್ಯ ‘ಅನಿಕೇತನ’ವೇ ಇಂಥ ಸಂಗತಿಗಳ ಬಗ್ಗೆ ಮರುಯೋಚಿಸಲು ನಮಗೆ ಪ್ರೇರಣೆ ನೀಡುತ್ತದೆ ಎಂದು ಸತ್ಯನಾರಾಯಣ ಸಕಾರಣವಾಗಿ ಚಿಂತಿಸಿದ್ದಾರೆ.
ಒಂದು ಕಲೆ, ವಿಚಾರ ಅಥವಾ ಪುಸ್ತಕವು ಯಾವ ಭಾಷೆ ಅಥವಾ ಸಮಾಜದಲ್ಲಿ ಸೃಷ್ಟಿಯಾಯಿತೋ ಕೇವಲ ಅದರ ಚೌಕಟ್ಟಿನಲ್ಲಿ ಪರಿಭಾವಿಸದೆ ತನ್ನ ಭಾಷೆ, ಸಂದರ್ಭ ಮತ್ತು ಸಂಸ್ಕೃತಿಗಳಿಗೂ ಅದು ಹೇಗೆ ಮುಖ್ಯ ಮತ್ತು ಪ್ರಸ್ತುತ ಎಂಬ ವಿಶಾಲ ಪರಿಪ್ರೇಕ್ಷ್ಯದಲ್ಲಿ ಧ್ಯಾನಿಸುವುದು ಸತ್ಯನಾರಾಯಣ ಅವರ ಬರವಣಿಗೆಯ ಮೂಲಶ್ರುತಿ ಎನ್ನಬಹುದು.
ಆದುದರಿಂದಲೇ ಅವರಿಗೆ ಸಿಂಗರ್ ಇಲ್ಲವೇ ದೊಸ್ತವೆಸ್ಕಿ ಕನ್ನಡೇತರ ಲೇಖಕರು ಅನ್ನಿಸುವುದಿಲ್ಲ. ನಾವು ವಿಶ್ವದ ಯಾವ ಶ್ರೇಷ್ಠ ಲೇಖಕರುಗಳನ್ನು ಅಥವಾ ಪುಸ್ತಕಗಳನ್ನು ಓದಿದರೂ ಅವು ನಮ್ಮ ಸಂವೇದನೆಗಳನ್ನು ಹೇಗೆ ಪೋಷಿಸಬಹುದು ಎಂಬ ಲಕ್ಷ್ಯದಲ್ಲೇ ಅವರು ಎಲ್ಲವನ್ನೂ ಅನುಸಂಧಾನ ಮಾಡುತ್ತಾರೆ. ಆರ್ಟಿಗಾ ಗ್ಯಾಸೆಯ ‘ರಿವೋಲ್ಟ್ ಆಫ್ ದಿ ಮಾಸಸ್’ ಕೃತಿಯಾಗಲೀ, ವಾಲ್ಟರ್ ಬೆಂಜಮಿನ್ ಅವರ ‘ಕಥನಜಿಜ್ಞಾಸೆ’ಯಾಗಲೀ ಲೇಖಕರಿಗೆ ಯಾಕೆ ಮುಖ್ಯವಾಗುತ್ತದೆ ಎಂಬುದು ಈಗ ಸ್ಪಷ್ಟವಾಗುತ್ತದೆ.
ಕೃತಿಗಳನ್ನು ಅವು ರಚಿತವಾದ ಸಂದರ್ಭ ಮತ್ತು ನಾವು ಓದುಗರಾಗಿ ಅವುಗಳನ್ನು ಅನುಸಂಧಾನ ಮಾಡುವ ಸಂದರ್ಭ ಇವುಗಳ ಚಲನಶೀಲ ಸಂಬಂಧದಲ್ಲಿ ಚರ್ಚೆಗೆ ಒಳಪಡಿಸುವುದರ ಮೂಲಕ ಸತ್ಯನಾರಾಯಣ ಅವರು ಕೃತಿಗಳ ಸಾಧ್ಯತೆಗಳನ್ನೂ ಹಿಗ್ಗಿಸಿ ಪರಿಶೀಲನೆಗೆ ಒಡ್ಡುತ್ತಾರೆ.
ಕಥನವೆಂಬುದು ಮೂಲಭೂತ ಪ್ರವೃತ್ತಿ ಮಾತ್ರವಲ್ಲ. ನಮ್ಮ ನಮ್ಮ ಕಥೆಗಳನ್ನು ನಮಗೆ ಬೇಕಾದಷ್ಟು, ಬೇಕಾದ ರೀತಿಯಲ್ಲಿ ಬೇಕಾದಾಗ ಹೇಳುವುದು ನಮ್ಮ ಹಕ್ಕು. ಏಕೆಂದರೆ ಇನ್ನೊಬ್ಬರು ನಮ್ಮ ಕಥೆಯನ್ನು ಎಂದೂ ಕಾಣಲಾರರು, ಪರಿಭಾವಿಸಲಾರರು ಎಂಬುದನ್ನು ತಾತ್ವಿಕವಾಗಿ ಒಪ್ಪಿರುವ ಸಂದರ್ಭದಲ್ಲಿ ನಾವು ಬರೆಯುತ್ತಿದ್ದೇವೆ ಎಂದು ಭಾವಿಸುವ ಲೇಖಕರು, ಇನ್ನೊಬ್ಬರ, ಇನ್ನೊಂದು ಕಾಲದ, ಇನ್ನೊಂದು ಸಂಸ್ಕೃತಿಯ ಕಥೆಗಳನ್ನು ಒಳಗೆ ಮಾಡಿಕೊಂಡು ಪೊರೆದು ನಂತರ ಕಥೆಗಳನ್ನು ಬರೆಯಬೇಕು.
ಕಥೆ ಬರೆಯುವುದೆಂದರೆ, ಅದೊಂದು ಭಾಷಿಕ ಕ್ರಿಯೆ ಮಾತ್ರವಲ್ಲ, ಆಧ್ಯಾತ್ಮಿಕ, ಧಾರ್ಮಿಕ ಕ್ರಿಯೆಯೆಂದು ಭಾವಿಸಿ ಬರೆದ ಮಾಸ್ತಿಯವರಿಂದ ನಾವು ಇಷ್ಟೊಂದು ದೂರ ಬಂದಿದ್ದೇವೆ ಎಂದು ವಿಶ್ಲೇಷಿಸುತ್ತ, ಹೀಗೆ ಒಡೆದುಕೊಳ್ಳುವ ಮನಸ್ಥಿತಿಯನ್ನು ಪೋಷಿಸಿಯೇ ಬಂಡವಾಳಶಾಹಿ ಬೆಳೆಯುವುದಲ್ಲವೆ ಎಂದು ತಮ್ಮ ಜಿಜ್ಞಾಸೆಯ ವ್ಯಾಪ್ತಿಯನ್ನು ವಿಸ್ತರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಬೆಂಜಮಿನ್ ಅವರ ಲೇಖನವನ್ನು ಚರ್ಚಿಸಬೇಕೆನಿಸುತ್ತದೆ.
ಇದು ಸತ್ಯನಾರಾಯಣರು ಉದ್ದಕ್ಕೂ ನಡೆಸಿಕೊಂಡು ಬಂದಿರುವ ಸಣ್ಣಕತೆ ಮತ್ತು ಕಾದಂಬರಿಗಳ ಅಭ್ಯಾಸ, ಅಧ್ಯಯನ ಮತ್ತು ವಿಮರ್ಶೆಗಳಿಗೆ ಒಂದು ಮೂಲಭಿತ್ತಿಯಾಗಿ ಕಾಣುತ್ತದೆ. ಈ ಸಂಗ್ರಹದಲ್ಲೇ ಅವರು ಕಾರಂತ, ಭೈರಪ್ಪ, ಚಿತ್ತಾಲ, ಶಾಂತಿನಾಥ ದೇಸಾಯಿ, ವೀಣಾ ಶಾಂತೇಶ್ವರ, ದೇವನೂರ ಮಹಾದೇವ, ಬೆಸಗರಹಳ್ಳಿ ರಾಮಣ್ಣ ಮುಂತಾದ ಬೇರೆಬೇರೆ ಕಾಲದ, ಹಿನ್ನೆಲೆಯ, ಮನೋಧರ್ಮಗಳ ಲೇಖಕರನ್ನು ಚರ್ಚಿಸಿರುವ ಲೇಖನಗಳಿವೆ.
ಈ ಎಲ್ಲ ಲೇಖಕರು ತಮ್ಮ ವೈಯಕ್ತಿಕ ಅನನ್ಯತೆ ಮತ್ತು ವಿಶಿಷ್ಟತೆಗಳಿಂದ ಆಕರ್ಷಿಸುವಂತೆ ಕನ್ನಡ ಕಥನವೆಂಬ ಅಷ್ಟೇಕೆ ಕಥನವೆಂಬ ಲೋಕವ್ಯಾಪಾರದ ಕೊಂಡಿಗಳೂ ಹೌದಲ್ಲವೆ ಎಂಬ ಪ್ರಶ್ನೆ ಸತ್ಯನಾರಾಯಣರ ವಿಮರ್ಶೆಯಲ್ಲಿ ಅಂತರ್ಗತವಾಗಿದೆ ಎನಿಸುತ್ತದೆ. ಆದರೆ ಸಂಸ್ಕೃತಿ ಕಥನವನ್ನು, ವಿಮರ್ಶೆಯನ್ನು ಮಾಡುವಾಗ ಲೇಖಕ–ಲೇಖಕರ ನಡುವಣ ಗಾಢ ವೈದೃಶ್ಯಗಳು, ಕೃತಿ–ಕೃತಿಗಳ ನಡುವಣ ನಿರ್ಣಾಯಕ ವ್ಯತ್ಯಾಸಗಳು ಅವರ ಕಣ್ಣು ತಪ್ಪಿಸಿಕೊಳ್ಳುವುದಿಲ್ಲ.
ಉದಾಹರಣೆಗೆ, ಭೈರಪ್ಪನವರ ‘ಗೃಹಭಂಗ’ ಮತ್ತು ಕಾರಂತರ ‘ಮರಳಿ ಮಣ್ಣಿಗೆ’ ಕಾದಂಬರಿಗಳನ್ನು ವಸ್ತುವಿನ ನೆಲೆಯಲ್ಲಿ ಒಟ್ಟಿಗೆ ನೋಡುತ್ತಲೇ ಅವುಗಳ ನಡುವಣ ವ್ಯತ್ಯಾಸಗಳನ್ನು, ಅನುಭವ ಮತ್ತು ವಾಸ್ತವ ಕಲಾಕೃತಿಯೊಳಗೆ ಹೇಗೆ ಬರಬೇಕು? ಎಂಬ ಪ್ರಶ್ನೆಯ ಹಿನ್ನೆಲೆಯಲ್ಲಿ ಸತ್ಯನಾರಾಯಣರು ನಡೆಸುವ ತೌಲನಿಕ ವಿಮರ್ಶೆ ಅರ್ಥಪೂರ್ಣವಾಗಿದೆ. ಅವರ ಪ್ರಕಾರ, ‘ಗೃಹಭಂಗ’ ನಿಜಜೀವನದ ವಾಸ್ತವಕ್ಕೆ ಗಂಟುಬಿದ್ದು ಕಾದಂಬರಿಯೊಳಗೆ ಸೃಷ್ಟಿಸಬಹುದಾದ ಹೊಸವಾಸ್ತವದ ಸಾಧ್ಯತೆಯನ್ನು ಕಳಕೊಂಡುಬಿಟ್ಟಿದೆ.
ಆದರೆ, ಕಾರಂತರು ಕೂಡ ಭೈರಪ್ಪನವರು ಆರಿಸಿಕೊಂಡಿರುವ ಜನಸಮುದಾಯದಿಂದಲೇ ಪಾತ್ರಗಳನ್ನು ಕಥನದ ಎಳೆಗಳನ್ನು ಆಯ್ದಿದ್ದಾರೆ. ಅದೇ ಬಡತನ, ಅದೇ ಬವಣೆ, ಅದೇ ಪುರುಷ ದಬ್ಬಾಳಿಕೆ. ಅವರು ಕೂಡ ಅನುಭವನಿಷ್ಠರೇ. ಆದರೆ ಇಲ್ಲಿ ನಿಜಜೀವನದ ಹಂಗನ್ನು, ವಾಸ್ತವದ ಕವಚವನ್ನು ಕಳೆದುಕೊಂಡು ಸ್ವತಂತ್ರವಾಗಿದೆ.
ಈ ಸ್ವಾತಂತ್ರ್ಯದಿಂದಾಗಿ ಕಥನ ಉತ್ತರೋತ್ತರ ಬೆಳೆಯುತ್ತಾ ಹೋಗುವುದು ಮಾತ್ರವಲ್ಲ, ಕಥನವು ನಿಜಜೀವನದ ತರ್ಕವನ್ನು, ನಿಯಮವನ್ನು ಮೀರಿದ ಹೊಸತರ್ಕ ಮತ್ತು ನಿಯಮವನ್ನು ರೂಪಿಸಿಕೊಂಡು, ಕಥನವನ್ನು ಮೀರಿ ಚರಿತ್ರೆ ಪ್ರಕೃತಿಯೊಡನೆ ಸಂಬಂಧವನ್ನು ಸ್ಥಾಪಿಸಿಕೊಳ್ಳಲು ಹವಣಿಸುತ್ತದೆ. ಇದೇ ರೀತಿ ಮನ ಕಲಕುವ ಹಲವು ಪ್ರಸಂಗಗಳಿದ್ದರೂ, ಅನೇಕ ಮನುಷ್ಯರ ಹೃದಯಸ್ಪರ್ಶಿ ಚಿತ್ರಗಳಿದ್ದರೂ ಭೈರಪ್ಪನವರ ಆತ್ಮಚರಿತ್ರೆ ‘ಭಿತ್ತಿ’ ತನ್ನ ಭರ್ತ್ಸನೆಯ ಮತ್ತು ಸ್ವಸಮರ್ಥನೆಯ ನಾನೇ ಸರಿ ಧಾಟಿ ಧ್ವನಿಗಳಿಂದಾಗಿ ಸೋಲುತ್ತದೆ ಎಂದು ಸತ್ಯನಾರಾಯಣ ಅಭಿಪ್ರಾಯಪಡುತ್ತಾರೆ.
ಕೆ.ಎಸ್. ನರಸಿಂಹಸ್ವಾಮಿ ಅವರ ‘ಮೈಸೂರ ಮಲ್ಲಿಗೆ’ ಕವನ ಸಂಕಲನವನ್ನು ಕುರಿತ ವಿಮರ್ಶಾತ್ಮಕ ಬರಹಗಳ ಸಂಕಲನ ‘ಪರಿಮಳದ ಪರಿಧಿ’ಗೆ ಬರೆದ ಮುನ್ನುಡಿಯೂ ಸತ್ಯನಾರಾಯಣ ಅವರ ವಿಮರ್ಶನ ಪ್ರತಿಭೆಗೆ ಉತ್ತಮ ಉದಾಹರಣೆಯಾಗಿದೆ. ಕನ್ನಡದ ಮನಸ್ಸು ‘ಮೈಸೂರ ಮಲ್ಲಿಗೆ’ಯನ್ನು ಗ್ರಹಿಸಿ ಪ್ರತಿಕ್ರಿಯಿಸಿದ, ಪ್ರತಿಸ್ಪಂದಿಸಿದ ಹಲವು ಬಗೆಗಳನ್ನು ಗಾಢವಾದ ಚಾರಿತ್ರಿಕ ಪ್ರಜ್ಞೆಯಲ್ಲಿ ಸಮೀಕ್ಷಿಸಿ, ಈ ವಿಮರ್ಶೆಯ ವೈವಿಧ್ಯದ ಹಿಂದಿನ ಪ್ರೇರಣೆಗಳನ್ನು ಗುರುತಿಸಿ ಚರ್ಚಿಸುವ ಸತ್ಯನಾರಾಯಣ, ನರಸಿಂಹಸ್ವಾಮಿ ಅವರ ಕಾವ್ಯದ ಮಹತ್ವವನ್ನು ತೆರೆದು ತೋರಿರುವ ರೀತಿ ಗಮನಾರ್ಹವಾಗಿದೆ.
ಹಾಗೆಯೇ ರಾಮಚಂದ್ರ ಶರ್ಮರ ಕಥೆಗಳ ಬಗ್ಗೆ ಬರೆಯುತ್ತ, ನವ್ಯರನ್ನು ಒಟ್ಟಾರೆಯಾಗಿ ಹಿನ್ನೋಟದಿಂದ ಗಮನಿಸಿದಾಗ ಶರ್ಮ ಮತ್ತು ದೇಸಾಯಿ ಮಾತ್ರ ತಮ್ಮ ಬರವಣಿಗೆಯುದ್ದಕ್ಕೂ ಬದುಕಿನುದ್ದಕ್ಕೂ ನವ್ಯರಾಗಿ ಆಧುನಿಕರಾಗಿ ಉಳಿದರು ಎಂಬ ಅವಲೋಕನವೂ ಸತ್ಯನಾರಾಯಣರ ಗ್ರಹಿಕೆಯ ಸೂಕ್ಷ್ಮತೆಗೆ ಸಾಕ್ಷಿಯಾಗಿದೆ.
ಬರವಣಿಗೆಯನ್ನು ಕ್ರಿಯಾಶೀಲತೆಯ ಮಟ್ಟಕ್ಕೆ ಏರಿಸಿಬಿಡುವ ಮಹಾದೇವರ ಬರವಣಿಗೆಯ ಬಗ್ಗೆ, ಗ್ರಾಮಭಾರತದ ಚಲನಶೀಲತೆಯ ರಾಮಣ್ಣನವರ ಕಥನದ ಬಗ್ಗೆ, ಕೃತಿಗಿಂತ ಮುಖ್ಯವಾಗಿ ಅವರು ಎತ್ತಿಕೊಂಡಿರುವ ಸಮಸ್ಯೆಯೇ ನಮ್ಮ ಗಮನವನ್ನು ಸೆಳೆಯುವ ವೀಣಾ ಶಾಂತೇಶ್ವರ ಅವರ ಕಿರುಕಾದಂಬರಿಯ ಬಗ್ಗೆ ಸತ್ಯನಾರಾಯಣವರ ವಿಮರ್ಶೆ ಓದಿನ ಹೊಸ ಸಾಧ್ಯತೆಗಳನ್ನು ತೋರುವಂತಿವೆ.
ಸತ್ಯನಾರಾಯಣ ಅವರು ವಿಶ್ವವಿದ್ಯಾನಿಲಯಗಳ ಅಕಡೆಮಿಕ್ ಪ್ರಪಂಚದಲ್ಲಿ ತಮ್ಮ ಸಂವೇದನೆಗಳನ್ನು ರೂಪಿಸಿಕೊಂಡವರಲ್ಲ. ಸಾಹಿತ್ಯ ವಿಮರ್ಶೆಯನ್ನೂ ಸಾಹಿತ್ಯದ ಒಂದು ಪ್ರಕಾರವೆಂದೇ ನಂಬಿ ಎಲ್ಲ ಬಗೆಯ ಸಾಹಿತ್ಯಿಕ ಓದುಗರನ್ನು ಉದ್ದೇಶಿಸಿ ಅವರು ಬರೆಯುತ್ತಾರೆ. ಹಾಗಾಗಿ ಅವರ ಹೆಚ್ಚಿನ ವಿಮರ್ಶಾ ಲೇಖನಗಳಲ್ಲಿ ಕಥನದ, ಪ್ರಬಂಧದ ಧಾಟಿ ಕಂಡುಬಂದರೆ ಅದು ತೀರ ಸಹಜವೆಂದೇ ಅನ್ನಿಸುತ್ತದೆ. ಹಾಗೆಂದು ಅವರ ಬರಹಗಳು ಕೇವಲ ಲಹರಿಯ ಸ್ವರೂಪದ್ದೂ ಅಲ್ಲ.
ಅವುಗಳ ಹಿಂದಿನ ವಿದ್ವತ್ತು, ಬೌದ್ಧಿಕ ಶೋಧ, ಸಾಹಿತ್ಯಾನುಭವ ಮತ್ತು ಜೀವನಾನುಭವವನ್ನು ಪರಸ್ಪರ ಮುಖಾಮುಖಿಯಾಗಿಸುವ ರೀತಿ ಅವರ ಬರವಣಿಗೆಗೆ ಒಂದು ಬಗೆಯ ಪ್ರೌಢತೆಯನ್ನೂ ಮಹತ್ವಾಕಾಂಕ್ಷೆಯನ್ನೂ ತಂದುಕೊಟ್ಟಿವೆ. ಅವರು ಕೇವಲ ಸಾಹಿತ್ಯ ಕೃತಿಗಳಿಂದ, ಕೇವಲ ಕನ್ನಡ ಪುಸ್ತಕಗಳಿಂದ ತಮ್ಮ ಸಂವೇದನೆಗಳನ್ನು ಕಟ್ಟಿಕೊಂಡವರಲ್ಲ. ಈ ಸಂಕಲನದಲ್ಲಿಯೇ ಗಾಂಧಿಯವರನ್ನು ಕುರಿತಂತೆ ನಾಲ್ಕಾರು ಲೇಖನಗಳನ್ನು ಕಾಣಬಹುದು. ಕನ್ನಡ ಭಾಷೆ, ಸಂಸ್ಕೃತಿ, ಶಿಕ್ಷಣ, ರಾಜಕೀಯ ಕುರಿತಂತೆ ಅವರು ಉದ್ದಕ್ಕೂ ಧ್ಯಾನಿಸುತ್ತ ಬಂದಿದ್ದಾರೆ.
ಅದರ ಕೆಲವು ಸ್ವಾರಸ್ಯಕರ ಮಾದರಿಗಳು ಈ ಸಂಗ್ರಹದಲ್ಲಿ ದಾಖಲಾಗಿವೆ. ‘ಸೆಮಿನಾರ್’ ಪತ್ರಿಕೆಯನ್ನು ಕುರಿತು, ಖ್ಯಾತ ಸಮಾಜಶಾಸ್ತ್ರಜ್ಞ ಎಂ.ಎನ್. ಶ್ರೀನಿವಾಸ್ ಅವರ ‘ನೆನಪಿನ ಹಳ್ಳಿ’ ಕುರಿತು ಸತ್ಯನಾರಾಯಣ ಆತ್ಮೀಯವಾಗಿ ಬರೆಯುತ್ತಲೇ ಅವುಗಳ ಸಾಂಸ್ಕೃತಿಕ ಮಹತ್ವವನ್ನು ಕಾಣಿಸಿರುವ ರೀತಿ ಉಪಯುಕ್ತವಾಗಿದೆ. ತಮ್ಮ ಅಯೋಧ್ಯಾ ಪ್ರವಾಸ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ ಇಂಥಲ್ಲಿಯೂ ಸತ್ಯನಾರಾಯಣರ ಪ್ರಬಂಧದ ಧಾಟಿ ಓದುಗರನ್ನು ಹತ್ತಿರಕ್ಕೆ ಬರಮಾಡಿಕೊಳ್ಳುವಂತಿವೆ.
ಮುಖ್ಯವಾದ ಮಾತು ಇದು: ಸತ್ಯನಾರಾಯಣ ಅವರು ಇತರ ಭಾಷೆ, ಸಂಸ್ಕೃತಿ, ಸಮಾಜ ಮತ್ತು ಜ್ಞಾನಶಾಖೆಗಳಿಂದ ತಮ್ಮ ಬರವಣಿಗೆಯ ಮೂಲದ್ರವ್ಯವನ್ನು ಮೊಗೆಮೊಗೆದು ಪಡೆದುಕೊಳ್ಳುತ್ತಿದ್ದರೂ ಅದನ್ನು ಸಾಹಿತ್ಯ ರಚನೆ ಮತ್ತು ಓದುಗಳಿಗೆ ಸೃಜನಶೀಲವಾಗಿ ಬಳಸಿಕೊಳ್ಳುತ್ತಾರೆ.
ಎರಡನೆಯದಾಗಿ, ಕನ್ನಡೇತರ ಸಂದರ್ಭಗಳಿಂದ ಪಡೆದ ಮಾಹಿತಿ ಮತ್ತು ಜ್ಞಾನಗಳನ್ನು ತಮ್ಮ ಸಂದರ್ಭಕ್ಕೆ, ಕನ್ನಡ ಭಾಷೆ, ಸಂಸ್ಕೃತಿ ರಾಜಕೀಯಗಳಿಗೆ ಮುಖಾಮುಖಿಯಾಗಿಸಿ ತಮ್ಮ ಬರವಣಿಗೆಗೆ ಸದ್ಯದ ತುರ್ತನ್ನೂ ಪ್ರಸ್ತುತತೆಗಳನ್ನೂ ತಂದುಕೊಳ್ಳುತ್ತಾರೆ. ಹಾಗಾಗಿ ಇವರ ಅನೇಕ ವಿಚಾರಗಳೊಂದಿಗೆ ಭಿನ್ನಾಭಿಪ್ರಾಯವನ್ನಿಟ್ಟುಕೊಂಡೂ ಅವರ ಮಾತುಗಳನ್ನು ಕೇಳಿಸಿಕೊಳ್ಳಬಹುದಾಗಿದೆ. ನಮ್ಮ ಮನಸ್ಸನ್ನು ಅರಳಿಸಬಲ್ಲ, ಹೊಸ ಓದು–ಚರ್ಚೆಗಳಿಗೆ ಆಹ್ವಾನಿಸಬಲ್ಲ ಈ ಕೃತಿಯ ಪ್ರಕಟಣೆ ಸ್ವಾಗತಾರ್ಹವೂ ಅರ್ಥಪೂರ್ಣವೂ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.