ಬಹುವಚನ ಭಾರತ
(ಸಮಕಾಲೀನ ಸಮಾಜಕ್ಕೊಂದು ಪ್ರತಿಕ್ರಿಯೆ)
ಲೇ: ಜಿ.ರಾಜಶೇಖರ
ಪ್ರ: ಅಭಿನವ, ಬೆಂಗಳೂರು
ಜಿ.ರಾಜಶೇಖರ ಕನ್ನಡದ ಸಮಕಾಲೀನ ಚಿಂತಕರಲ್ಲೇ ತುಂಬ ಅನನ್ಯರೂ ವಿಶಿಷ್ಟರೂ ಆಗಿದ್ದಾರೆ. ಯಾವುದೇ ಭಾಷೆಯಲ್ಲಿ ಇಂಥ ಚಿಂತಕರು ತುಸು ವಿರಳ ಮತ್ತು ಅಪರೂಪ ಎಂದೇ ಹೇಳಬೇಕು. ಸಭ್ಯ ಗೃಹಸ್ಥ, ಜವಾಬ್ದಾರಿಯುತ ನಾಗರಿಕ, ಬದ್ಧತೆಯುಳ್ಳ ಸಾಮಾಜಿಕ / ರಾಜಕೀಯ ಕಾರ್ಯಕರ್ತ, ಸದಭಿರುಚಿಯ ಸಾಹಿತ್ಯಾಸಕ್ತ, ವಿನಯಶೀಲ ವಿಮರ್ಶಕ– ಇವರೆಲ್ಲರ ಗುಣಗಳನ್ನು ಒಂದು ಹದದಲ್ಲಿ ರೂಪಿಸಿಕೊಂಡ, ರೂಢಿಸಿಕೊಂಡ ವ್ಯಕ್ತಿತ್ವ ಇವರದು.
ನಾಡಿನ ಸಮಸ್ಯೆಗಳನ್ನು ತೀವ್ರವಾದ ವೈಯಕ್ತಿಕ ನೈತಿಕ ಪ್ರಶ್ನೆಯೆಂಬಂತೆ ಅನುಸಂಧಾನ ಮಾಡುವ ರಾಜಶೇಖರ್ ಬಹುಮುಖಿ ಆಸಕ್ತಿಗಳನ್ನು ಇಟ್ಟುಕೊಂಡಿರುವವರೂ ಹೌದು. ಅವರ ಓದಿನ ವಿಸ್ತಾರ, ಅದನ್ನು ನಿತ್ಯಜೀವನದ ಬಿಕ್ಕಟ್ಟುಗಳನ್ನು ಅರ್ಥೈಸಿಕೊಳ್ಳಲು ಬಳಸಿಕೊಳ್ಳುವ ಎಚ್ಚರ, ಒಂದು ಸಂಗತಿಯನ್ನು ಅದರ ಎಲ್ಲ ಮುಖಗಳಲ್ಲಿ, ಸೂಕ್ಷ್ಮತೆಗಳಲ್ಲಿ ಪರಿಶೀಲಿಸಿಕೊಳ್ಳುವ ಸಹನೆ ಮತ್ತು ವ್ಯವಧಾನಗಳು ಅವರ ಬರವಣಿಗೆಯ ಸ್ವರೂಪವನ್ನು ನಿರ್ಧರಿಸಿವೆ. ಸಾಮಾಜಿಕ, ರಾಜಕೀಯ ಸಮಸ್ಯೆಗಳು ಮತ್ತು ಬಿಕ್ಕಟ್ಟುಗಳನ್ನು ವಿಶ್ಲೇಷಿಸುವಂತೆ, ಸಾಹಿತ್ಯ – ಚಲನಚಿತ್ರ – ರಂಗಕೃತಿಗಳನ್ನೂ ಅವರು ಅಷ್ಟೇ ಆಳವಾಗಿ, ವೈಯಕ್ತಿಕ ತುರ್ತಿನಿಂದ ಅನುಸಂಧಾನ ಮಾಡಬಲ್ಲವರಾಗಿದ್ದಾರೆ.
ಕಲೆಗಳಲ್ಲಿ ಆಸಕ್ತಿ ಇವರ ರಾಜಕೀಯ ಹೋರಾಟಗಳಿಗೆ ಎಂದೂ ಅಡ್ಡಬಂದಿಲ್ಲ. ಹೋರಾಟಗಾರರಾಗಿ ಇವರು ಕಲೆಗಳ ಮಹತ್ವವನ್ನು ಕಡೆಗಣಿಸಿಲ್ಲ. ಅವೆರಡೂ ಬೇರೆ ಬೇರೆ ಎಂದು ಅವರು ಯೋಚಿಸಿದವರೇ ಅಲ್ಲ. ಅವರ ಸೌಂದರ್ಯ ಮೀಮಾಂಸೆ ಸದ್ಯದ ಹಂಗನ್ನು ತೊರೆಯದು. ಹಾಗೆಯೇ ಅವರ ಹೋರಾಟಗಳು ಸದ್ಯಕ್ಕೆ ಮಾತ್ರ ಸೀಮಿತಗೊಳ್ಳದೆ ಅವರ ಕಲಾವಿಮರ್ಶೆಯನ್ನೂ ಪ್ರಭಾವಿಸಿ ಹಿಗ್ಗಿಸುವುದು. ಒಂದೇ ಮಾತಿನಲ್ಲಿ ಹೇಳಬೇಕಾದರೆ ‘ಪಾಲಿಟಿಕ್ಸ್’ ಮತ್ತು ‘ಪೊಯಟಿಕ್ಸ್’ಗಳನ್ನು ಸಮತೋಲನಗೊಳಿಸುವಲ್ಲಿ ರಾಜಶೇಖರ ಅವರ ಸಾಹಿತ್ಯ ಮತ್ತು ವ್ಯಕ್ತಿತ್ವ ರೂಪುಗೊಂಡಿದೆ. ಒಂದು ಸಂದರ್ಭದಲ್ಲಿ ಅನಂತಮೂರ್ತಿ, ಮತ್ತೂಂದು ಸಂದರ್ಭದಲ್ಲಿ ಲಂಕೇಶ್ ಇವರನ್ನು ಖ್ಯಾತ ಬ್ರಿಟಿಷ್ ಲೇಖಕ ಜಾರ್ಜ್ ಆರ್ವೆಲ್ ಜೊತೆ ಹೋಲಿಸಿ ಮಾತನಾಡಿದ್ದು ನೆನಪಿಗೆ ಬರುತ್ತದೆ.
ಕಳೆದ ನಾಲ್ಕು ದಶಕಗಳಿಂದ ಬರೆಯುತ್ತಿದ್ದರೂ ರಾಜಶೇಖರ್ ತಮ್ಮ ಬರಹಗಳನ್ನು ಪುಸ್ತಕಗಳ ರೂಪದಲ್ಲಿ ಪ್ರಕಟಿಸಲು ಅಷ್ಟಾಗಿ ಆಸಕ್ತಿ ತೋರಿಸಿಲ್ಲ. ಪ್ರಕಟಿಸಿದ ಕೆಲವೇ ಕೃತಿಗಳಲ್ಲಿ ‘ಕಾಗೋಡು ಸತ್ಯಾಗ್ರಹ’, ‘ಬ್ರೆಕ್ಟ್ ಪರಿಚಯ’, ರೇಮಂಡ್ ವಿಲಿಯಮ್ಸ್ ಅವರ ಪುಸ್ತಕದ ಅನುವಾದ ‘ಸಮಾಜವಾದ ಮತ್ತು ಪರಿಸರ’ ಆಸಕ್ತರ ಗಮನವನ್ನು ಸೆಳೆದಿವೆ. ಪ್ರಸ್ತುತ ‘ಬಹುವಚನ ಭಾರತ’ವು ಇಪ್ಪತ್ತೆಂಟು ಲೇಖನಗಳ ಸಂಕಲನವಾಗಿದ್ದು, ರಾಜಶೇಖರ್ ಅವರ ಮುಖ್ಯ ಕಾಳಜಿಗಳೆಲ್ಲವನ್ನೂ ಸಮರ್ಥವಾಗಿ ಪ್ರತಿನಿಧಿಸುವಂತಿದೆ. ಪುಸ್ತಕವು ಎರಡೂ ಭಾಗಗಳಲ್ಲಿದ್ದು, ಮೊದಲ ಭಾಗದಲ್ಲಿ ಸಮಾಜ ಮತ್ತು ರಾಜಕೀಯಗಳಿಗೆ ಅವರ ಪ್ರತಿಕ್ರಿಯೆಗಳನ್ನು ದಾಖಲಿಸಿದರೆ, ಎರಡನೆಯ ಭಾಗವು ಹೆಚ್ಚಾಗಿ ಸಾಹಿತ್ಯ–ಸಂಸ್ಕೃತಿಗಳ ಅನುಸಂಧಾನತ್ತ ಮುಖ ಮಾಡಿವೆ. ಈ ಎರಡೂ ಭಾಗಗಳು ಒಗ್ಗೂಡಿ ನಮ್ಮ ಸಮಕಾಲೀನ ಕಾಲ–ದೇಶಗಳ ಸುಮಾರು ಅರ್ಧ ಶತಮಾನದ ಆಗುಹೋಗುಗಳ ಒಂದು ಸಂಕೀರ್ಣ ನೋಟ ರೂಪುಗೊಂಡಿದೆ.
ಮೊದಲ ಲೇಖನ ‘ನಮ್ಮ ಸದ್ಯದ ಬಿಕ್ಕಟ್ಟುಗಳು’ ಇಡೀ ಪುಸ್ತಕಕ್ಕೆ ಒಂದು ಪ್ರವೇಶಿಕೆಯಂತಿದೆ. ‘‘ಭಿನ್ನಮತದ ಸ್ವಾತಂತ್ರ್ಯ, ಹಲವು ಬಗೆಯ ಜೀವನಶೈಲಿಗಳ ಸಹಬಾಳ್ವೆ, ಎಲ್ಲರಿಗೂ ಸಮಾನ ಹಕ್ಕು ಮತ್ತು ಅವಕಾಶಗಳನ್ನು ಕಲ್ಪಿಸಿಕೊಡುವ ಆರ್ಥಿಕತೆ– ಇವು ನಾವು ಈಗ ಅಗತ್ಯವಾಗಿ ಎತ್ತಿ ಹಿಡಿಯಬೇಕಾದ ಮೌಲ್ಯಗಳು’’ ಎಂದು ನಂಬಿರುವ, ವೈಯಕ್ತಿಕವಾಗಿ ಕಟ್ಟಾ ಸಮಾಜವಾದಿಯಾಗಿಯೇ ಆಗಿ ಉಳಿದಿರುವ ರಾಜಶೇಖರ್ ಜಾಗತಿಕವಾಗಿ ಸಮಾಜವಾದದ ಸೋಲನ್ನು ತುಂಬ ವಿಷಾದದಿಂದ ಗುರುತಿಸಿ ಅಷ್ಟೇ ಖಚಿತವಾಗಿ ಬಂಡವಾಳಶಾಹೀ ವ್ಯವಸ್ಥೆಯಲ್ಲಿಯೂ ಈ ಮೌಲ್ಯಗಳಿಗೆ ರಕ್ಷಣೆ ಇಲ್ಲ ಎಂದು ಪ್ರತಿಪಾದಿಸುತ್ತಾರೆ. ‘‘ಎಡ, ಬಲ, ಮಧ್ಯಮ– ಎಲ್ಲ ರಾಜಕೀಯ ಪಕ್ಷಗಳೂ ಒಂದೇ ತರಹದ ನುಡಿಗಟ್ಟುಗಳಲ್ಲಿ ಚರ್ಚಿಸುವ ಮತ್ತು ಒಂದೇ ನಮೂನೆಯ ಜನ ಸಂಘಟನೆಯ ತಂತ್ರಗಳನ್ನು ಅನುಸರಿಸುತ್ತಿರುವ ಸದ್ಯದ ಸನ್ನಿವೇಶದಲ್ಲಿ ಈ ಸಮಾಜದ ದಟ್ಟದರಿದ್ರರ ಸಂಕಟಗಳಿಗೆ ಧ್ವನಿಕೊಡುವ ಸಂಘಟನೆಗಳೇ ಇಲ್ಲ’’ ಎಂದು ಕಾಣಿಸುತ್ತಾರೆ. ನಮ್ಮ ಎಲ್ಲ ಆಯ್ಕೆಗಳೂ, ಶೋಧಗಳೂ, ಹೋರಾಟಗಳೂ ಈ ಹಿನ್ನೆಲೆಯಲ್ಲಿ ರೂಪುಗೊಳ್ಳಬೇಕು ಎಂಬುದು ಅವರ ಇಂಗಿತವಾಗಿದ್ದು ಅವರ ಈ ಬಗೆಯ ಎಲ್ಲ ಬರಹಗಳ ಮೂಲಶ್ರುತಿಯಾಗಿದೆ.
ಜಾತೀಯತೆ, ಅಸ್ಪೃಶ್ಯತೆ, ಕೋಮುವಾದ ಮತ್ತು ಜಾಗತೀಕರಣದ ಪರಿಣಾಮಗಳ ಬಗ್ಗೆ ಅವರು ಮತ್ತೆ ಮತ್ತೆ ಚಿಂತಿಸಿದ್ದಾರೆ. ಈ ಎಲ್ಲದರ ಹಿಂದಿನ ಹಿಂಸೆಯ ಸ್ವರೂಪವನ್ನು ಸೂಕ್ಷ್ಮವಾಗಿ ಬಿಡಿಸಲು ಅವರು ಯತ್ನಿಸಿದ್ದಾರೆ. ತೀರಾ ವೈಯಕ್ತಿಕವೆಂದು ಮೇಲು ನೋಟಕ್ಕೆ ಕಂಡುಬರುವ ಹಿಂಸೆಯ ಪ್ರಕರಣಗಳ ಹಿಂದೆಯೂ ಅಯಾ ಸಮುದಾಯ, ಸಮಾಜ, ಸಂಸ್ಕೃತಿಗಳು ಪೋಷಿಸಿಕೊಂಡ ಮೌಲ್ಯವ್ಯವಸ್ಥೆಗಳು ಕೆಲಸ ಮಾಡುತ್ತಿರುತ್ತವೆ ಎಂದು ಅವರು ವಿಶ್ಲೇಷಿಸುತ್ತಾರೆ. ಆದರೆ ಪ್ರಭುತ್ವಗಳು ನಡೆಸುವ ಹಿಂಸೆಯನ್ನು ಅವರು ‘ಔದ್ಯಮೀಕೃತ’ ಹಿಂಸೆಯಾಗಿ ಪರಿಗಣಿಸುತ್ತಾರೆ.
ಎಲ್ಲ ಬಗೆಯ ಸರ್ವಾಧಿಕಾರೀ ವ್ಯವಸ್ಥೆಗಳು ಸಂಘಟಿತ ಹಿಂಸೆಯ ಮೂಲಕ ಭಿನ್ನಮತವನ್ನು ಬಗ್ಗುಬಡೆಯುವ ಹಲವು ಉದಾಹರಣೆಗಳನ್ನು ಅವರು ಇತಿಹಾಸ ಮತ್ತು ವರ್ತಮಾನದ ವಿದ್ಯಮಾನಗಳಲ್ಲಿ ತೋರಿಸಿಕೊಡುತ್ತಾರೆ. ‘ಪ್ರಜಾಪ್ರಭುತ್ವ’ವೆಂದು ಕರೆಯಲಾಗುವ ‘ರಾಷ್ಟ್ರಪ್ರಭುತ್ವ’ದ ಹುಟ್ಟಿನಲ್ಲಿಯೇ ಹಿಂಸೆಯು ಅಂತರ್ಗತವಾಗಿರುವುದನ್ನು ಅವರು ವಿಷಾದದಿಂದ ಗಮನಿಸುತ್ತಾರೆ. ಜನಾಂಗೀಯವಾದ, ಕೋಮುವಾದ, ಫ್ಯಾಸಿಸಂಗಳಲ್ಲಿ ಹಿಂಸೆ ನಿರೀಕ್ಷಿತ; ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಜನರಿಂದ ಆಯ್ಕೆಯಾದ ಸರಕಾರಗಳೇ ನಡೆಸುತ್ತಿರುವ ವ್ಯವಸ್ಥಿತ ಹಿಂಸೆ ಅವರನ್ನು ದಿಗ್ಭ್ರಾಂತರನ್ನಾಗಿ ಮಾಡಿದೆ. ಎಲ್ಲ ಸಿದ್ಧಾಂತಗಳೂ ಹಿಂಸೆಯನ್ನು ತಮ್ಮ ಒಡಲಲ್ಲೇ ಕಟ್ಟಿಕೊಂಡು ಬರುವ ವಿಪರ್ಯಾಸವನ್ನು ಅವರು ತಮ್ಮ ಅನೇಕ ಲೇಖನಗಳಲ್ಲಿ ಚರ್ಚಿಸಿದ್ದಾರೆ. ಜೀವನಕ್ರಮಗಳ, ನಂಬಿಕೆಗಳ ಬಹುತ್ವವನ್ನು ನಾಶಮಾಡುವ, ಮಾಡಲೆತ್ನಿಸುವ ಹಿಂಸೆಯನ್ನು ತಮ್ಮ ಬರಹಗಳಲ್ಲಿ ಉದ್ದಕ್ಕೂ ಪ್ರಸ್ತಾಪಿಸಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಪ್ರಭುತ್ವದೊಂದಿಗೆ ಲೇಖಕರ ಸ್ವರೂಪ ಹೇಗಿರುತ್ತದೆ, ಹೇಗಿರಬೇಕು ಎಂದು ಅವರು ಆಳವಾಗಿ ಆಲೋಚಿಸಿದ್ದಾರೆ.
ಈ ದೃಷ್ಟಿಯಿಂದ ರಾಜಶೇಖರ ಅವರ ಈ ಬಗೆಯ ಲೇಖನಗಳು ಮೇಲುನೋಟಕ್ಕೆ ಬಿಡಿಬಿಡಿಯಾಗಿ ಕಂಡರೂ ಹಲವು ಮೂಲಭೂತ ಕಾಳಜಿಗಳು ಮತ್ತು ನಂಬಿಕೆಗಳು ಪುನರಾವರ್ತಿತ ಆಶಯಗಳೆಂಬಂತೆ ಮತ್ತೆಮತ್ತೆ ಕಾಣಿಸಿಕೊಂಡು ಅವರ ವಾಙ್ಮಯವನ್ನು ಸಮಗ್ರವಾಗಿ ಗ್ರಹಿಸಬೇಕಾದ ಒತ್ತಾಯವನ್ನು ಮಾಡುವಂತಿವೆ. ‘ನಾಗರಿಕ ಸಮಾಜ’ವೊಂದನ್ನು ನಿರ್ಮಿಸಿಕೊಳ್ಳುವುದು ಹೇಗೆ? ಒಂದು ವ್ಯವಸ್ಥೆಯಲ್ಲಿ ವ್ಯಕ್ತಿಗಳಾಗಿ ನಮ್ಮ ನೈತಿಕ ಜವಾಬ್ದಾರಿ ಏನು? ಈ ಮೂಲಭೂತ ಪ್ರಶ್ನೆಗಳು ಅವರ ಎಲ್ಲಾ ರಾಜಕೀಯ ಚಿಂತನೆ ಮತ್ತು ವಿಶ್ಲೇಷಣೆಗಳನ್ನು ಪ್ರಭಾವಿಸಿವೆ. ರಾಜಶೇಖರ್ ಅವರು ಎಲ್ಲ ವಿದ್ಯಮಾನಗಳಿಗೂ ವೈಯಕ್ತಿಕ ತುರ್ತಿನಿಂದ ಸ್ಪಂದಿಸಿ ಪ್ರತಿಕ್ರಿಯಿಸುವವರಾದರೂ ಅವರ ವಿಚಾರಗಳ ಹಿಂದೆ ಮಾರ್ಕ್ಸ್, ಗಾಂಧಿ, ಅಂಬೇಡ್ಕರ್. ಲೋಹಿಯಾರವರಂಥ ಧೀಮಂತರೂ, ಸಮಕಾಲೀನ ಚಿಂತಕರಾದ ಅಶೀಶ್ ನಂದಿ, ಅನಂತಮೂರ್ತಿ ಮುಂತಾದವರೂ ಇದ್ದಾರೆ ಎಂಬುದನ್ನು ಗಮನಿಸಬೇಕು.
ಇವರಲ್ಲಿ ಯಾರನ್ನೂ ರಾಜಶೇಖರ್ ಏಕಮುಖವಾಗಿ ಆರಾಧಿಸುವುದೂ ಇಲ್ಲ, ತಿರಸ್ಕರಿಸುವುದೂ ಇಲ್ಲ. ಒಂದು ವಿಮರ್ಶಾತ್ಮಕ ಎಚ್ಚರದಲ್ಲಿ ಇವರ ಚಿಂತನೆಗಳನ್ನು ಗ್ರಹಿಸಿ ತಮ್ಮ ಸದ್ಯದ ಗ್ರಹಿಕೆಗೆ ಒಂದು ಬಗೆಯ ಸ್ಪಷ್ಟತೆಯನ್ನು ತಂದುಕೊಳ್ಳಲು ಅವರು ಹೆಣಗುತ್ತಾರೆ. ಅಷ್ಟೇ ಅಲ್ಲ, ಅಡಿಗರ ಕಾವ್ಯ, ಕಾರಂತರ ಕಾದಂಬರಿ, ಬ್ರೆಕ್ಟನ ನಾಟಕಗಳು, ಕಮೂ–ಸಾರ್ತ್ರವರಂಥ ಲೇಖಕರ ಜಿಜ್ಞಾಸೆಗಳೂ ರಾಜಶೇಖರ ಅವರ ಸಂವೇದನೆಯನ್ನು ರೂಪಿಸಿವೆ. ಇತಿಹಾಸದ ವಿದ್ಯಮಾನಗಳ ಗಾಢವಾದ ಅರಿವು ಮತ್ತು ಸಾಹಿತ್ಯದಿಂದ ಪಡೆದ ತಿಳಿವಳಿಕೆಗಳಲ್ಲಿ ಅವರು ವರ್ತಮಾನವನ್ನು ಅನುಸಂಧಾನ ಮಾಡುತ್ತಾರೆ. ಪ್ರಗತಿಗಾಮಿ–ಪ್ರತಿಗಾಮಿ, ಅಭಿವೃದ್ಧಿ–ಹಿಂದುಳಿದಿರುವಿಕೆ, ಕೋಮುವಾದ–ಸೆಕ್ಯುಲರಿಸಂ ಈ ಎಲ್ಲ ವಿಚಾರಗಳನ್ನು ಚರ್ಚಿಸುವಾಗ ಕೂಡ ಆ ದ್ವಿದಳ ವಿಭಜನೆಯ ಸಮೀಕರಣದಲ್ಲಷ್ಟೇ ಅವರು ಬದುಕನ್ನು ಗ್ರಹಿಸುವುದಿಲ್ಲ. ‘ಹಿಂಸೆಯ ಸಾಮಾನ್ಯತೆ’, ‘ಸೆಕ್ಯುಲರಿಸಂ ಎಂಬ ಪರಿಕಲ್ಪನೆ’, ‘ಪ್ರಭುತ್ವ, ಹಿಂಸೆ ಮತ್ತು ಲೇಖಕ’, ‘ಬಿಜಾಪುರದ ಸೂಫಿಗಳು’, ಮುಂತಾದ ಲೇಖನಗಳು ಸದ್ಯದ ಪ್ರತಿಕ್ರಿಯೆಗಳನ್ನೂ ಮೀರಿ ನಿಲ್ಲುವುದು ಹೀಗೆ.
ಭಾಗ ಎರಡರಲ್ಲಿ ರಾಜಶೇಖರ್ ಅವರು ರವೀಂದ್ರನಾಥ ಟ್ಯಾಗೋರ್, ಸಾದತ್ ಹಸನ್ ಮಾಂಟೋ, ಪಾಬ್ಲೊ ನೆರೂಡ, ಗಂಗಾಧರ ಚಿತ್ತಾಲ, ಲಂಕೇಶ್ ಮುಂತಾದ ಲೇಖಕರ ಹಲವಾರು ಕೃತಿಗಳನ್ನು ಚರ್ಚಿಸಿದ್ದಾರೆ. ಆರಿಫ್ ರಾಜಾರಂಥ ಯುವ ಸಮಕಾಲೀನರಿಗೂ ಉತ್ಸಾಹದಿಂದ ಪ್ರತಿಸ್ಪಂದಿಸಿದ್ದಾರೆ. ಸಾಹಿತ್ಯ ಕೃತಿಗಳನ್ನು ಅವರು ಅವು ರಚಿತವಾದ ಸಂದರ್ಭ ಮತ್ತು ನಾವು ಇಂದು ಅವುಗಳನ್ನು ಓದುವ ಸಂದರ್ಭ ಎರಡನ್ನೂ ಗಮನಿಸಿ ಅನುಸಂಧಾನ ಮಾಡುತ್ತಾರೆ. ನಮ್ಮ ಕಾಲದ ಹಲವು ಸಾಹಿತ್ಯಿಕ–ಸಾಂಸ್ಕೃತಿಕ ವಿದ್ಯಮಾನಗಳನ್ನೂ ಅವರು ಸೂಕ್ಷ್ಮವಾಗಿ ಪರಿಶೀಲಿಸಿದ್ದಾರೆ. ಕೆ.ವಿ. ಸುಬ್ಬಣ್ಣನವರೊಂದಿಗೆ ಅವರು ನಡೆಸಿರುವ ಮಾತುಕತೆ, ಅನಂತಮೂರ್ತಿ – ಅಶೀಶ್ ನಂದಿಯವರ ಜುಗಲಬಂದಿಯನ್ನು ಅವರು ಅರ್ಥಮಾಡಿಕೊಂಡಿರುವ ರೀತಿ, ಲೇಖಕರ ಆತ್ಮಸಾಕ್ಷಿಯ ಪ್ರಶ್ನೆಯನ್ನು ಕುರಿತು ಲಂಕೇಶರೊಂದಿಗೆ ಅವರ ಮುಖಾಮುಖಿ, ಇಲ್ಲೆಲ್ಲ ರಾಜಶೇಖರ ಅವರ ಸೂಕ್ಷ್ಮ ವ್ಯಕ್ತಿತ್ವವೂ ಪರ್ಯಾಯವಾಗಿ ಬಿಚ್ಚಿಕೊಂಡಿದೆ. ವಿನಯವನ್ನು ಬಿಟ್ಟುಕೊಡದೆ ನಿಷ್ಠುರವಾಗಿ ಇರುವುದು ಹೇಗೆ ಎಂಬುದನ್ನು ಕಲಿಯಲು ರಾಜಶೇಖರ್ ಅವರ ಬರಹಗಳನ್ನು ಅವಶ್ಯವಾಗಿ ಗಮನಿಸುವ ಅಗತ್ಯವಿದೆ.
ನಮ್ಮ ಸಾಹಿತ್ಯದ ಓದು ಮತ್ತು ಅನುಭವವನ್ನು ವಿಸ್ತರಿಸಬಲ್ಲ ಹಲವು ವಿಮರ್ಶಾತ್ಮಕ ಬರಹಗಳು ಈ ಸಂಗ್ರಹದಲ್ಲಿವೆ. ರಾಜಶೇಖರ್ ಅವರು ವಿಶ್ವವಿದ್ಯಾಲಯಗಳ ಅಕಡೆಮಿಕ್ ಜಗತ್ತಿನಲ್ಲಿ ತಮ್ಮ ಸಂವೇದನೆಗಳನ್ನು ರೂಪಿಸಿಕೊಂಡವರಲ್ಲ. ಅವರ ಬರಹಗಳು ತಮ್ಮ ಸುತ್ತಲ ಬದುಕಿಗೆ, ಸಮಕಾಲೀನರಿಗೆ ಮುಖಮಾಡಿವೆ. ಹಾಗಾಗಿ ಅವರ ಸಂವಹನ ಸರಳವಾಗಿದೆ, ಆದರೆ ತೀವ್ರವಾಗಿದೆ. ಜಾರ್ಗನ್ನುಗಳ ಕ್ಲೀಷೆಯಿಂದ ಮುಕ್ತವಾಗಿವೆ. ಘನಪಾಂಡಿತ್ಯದ ಸೋಗು ಮತ್ತು ತೋರುಗಾಣಿಕೆಯಿಂದ ದೂರವಾಗಿವೆ. ಆದರೆ ರಾಜಶೇಖರ್ ಕೇವಲ ವಿವರಣಾತ್ಮಕವಾಗಿ ಅಥವಾ ವರ್ಣನಾತ್ಮಕವಾಗಿ ಬರೆಯುವ ವಿಮರ್ಶಕರಲ್ಲ.
ತಮ್ಮ ಇಡೀ ವ್ಯಕ್ತಿತ್ವ ಮತ್ತು ಜೀವನಾನುಭವಗಳನ್ನು ಒಡ್ಡಿಕೊಂಡೇ ಅವರು ಸಾಹಿತ್ಯಲೋಕವನ್ನು ಪ್ರವೇಶಿಸುವುದು. ಆದುದರಿಂದಲೇ ಸಾಮಾಜಿಕ ಮತ್ತು ರಾಜಕೀಯ ವಿಷಯಗಳನ್ನು ಕುರಿತ ಅವರ ಬರಹಗಳಿಗೂ ಅವರ ಸಾಹಿತ್ಯ ವಿಮರ್ಶೆಯ ಲೇಖನಗಳಿಗೂ ಒಂದು ಬಗೆಯ ಸಾವಯವ ಸಂಬಂಧವಿರುವುದು ಕಂಡುಬರುತ್ತದೆ. ರವೀಂದ್ರನಾಥ ಟ್ಯಾಕೂರರ ಕಾದಂಬರಿ ‘ಗೋರಾ’ ರಾಜಶೇಖರ್ ಅವರಿಗೆ ಮಹತ್ವದ್ದೆಂದು ಅನ್ನಿಸಲು ಕಾರಣ: ‘‘ತನ್ನ ಕಾಲದ ರಾಜಕೀಯದ ಬಿರುಗಾಳಿ ಮನುಷ್ಯರ ಮನೆ ಮತ್ತು ಮನಸ್ಸುಗಳ ಒಳನುಗ್ಗಿ ಧಾಂದಲೆ ನಡೆಸಿದ್ದನ್ನು ಕತೆಕಟ್ಟಿ ಹೇಳಿರುವುದೇ ‘ಗೋರಾ’ದ ವಿಶೇಷ ಸಾಧನೆ’’. ಲಂಕೇಶರ ‘ರೊಟ್ಟಿ’ ಮತ್ತು ‘ದಾಳಿ’ ಎಂಬ ಎರಡು ಕಥೆಗಳನ್ನು ವಿಶ್ಲೇಷಿಸಿ ಲೇಖನದ ಕೊನೆಯಲ್ಲಿ ರಾಜಶೇಖರ್ ತಲುಪುವ ತೀರ್ಮಾನಗಳೂ ಅವರ ಒಟ್ಟಾರೆ ಲೋಕಗ್ರಹಿಕೆಗೆ ಪೂರಕವೇ ಆಗಿವೆ. ‘ರೊಟ್ಟಿ’ ಕಥೆಯನ್ನು ಲಂಕೇಶರ ಕಥೆಗಾರಿಕೆಯ ಒಂದು ಹೊಸ ಮೈಲಿಗಲ್ಲು ಎಂದು ಗುರುತಿಸುವ ರಾಜಶೇಖರ್ ಅದು ಕನ್ನಡ ಸಾಹಿತ್ಯದಲ್ಲೇ ಅತ್ಯುತ್ತಮ ಸಣ್ಣಕಥೆ ಎಂದು ಅಭಿಪ್ರಾಯ ಪಡುತ್ತಾರೆ. ಈ ಕಥೆಗಳ ಮಹತ್ವವನ್ನು ಲೇಖಕರು ಈ ರೀತಿ ಸೂಚಿಸುತ್ತಾರೆ: ‘‘ಈಗ ‘ದಾಳಿ’ ಮತ್ತು ‘ರೊಟ್ಟಿ’ ಕಥೆಗಳ ಓದನ್ನು ಅವುಗಳ ಕಾಲದೇಶ ಸಂದರ್ಭದ ಆಚೆಗೂ ವಿಸ್ತರಿಸಬಹುದಾಗಿದೆ.
ಈ ಕಥೆಗಳು, ಎಲ್ಲ ಬಗೆಯ ಗುಂಪು ಯಜಮಾನಿಕೆಗೂ ರೂಪಕಗಳಾಗಿವೆ. ಜಾತಿ, ಧರ್ಮ, ಭಾಷೆ, ರಾಜ್ಯ ಮತ್ತು ರಾಷ್ಟ್ರ-ಇವುಗಳೂ ಕೂಡ ವೈಭವೀಕೃತ ಗುಂಪುಗಳಲ್ಲದೆ ಮತ್ತಿನ್ನೇನು?’’. ಮಾಂಟೊ ರಾಜಶೇಖರ್ ಅವರ ಅತ್ಯಂತ ಪ್ರಿಯ ಲೇಖಕ. ಮಾಂಟೊ ಓರ್ವ ಕತೆಗಾರನಾಗಿ ಕಾಫ್ಕನಷ್ಟೇ ಮಹತ್ವದ ಕತೆಗಾರ ಯಾಕೆಂದರೆ: ‘‘ಹಿಂಸೆಯ ಅಸಂಬದ್ಧತೆ ಮತ್ತು ತನ್ನನ್ನೂ ಒಳಗೊಂಡು ಯಾರು ಬೇಕಾದರೂ ಅಂತಹ ಹಿಂಸೆ ಎಸಗುವ ಸಾಧ್ಯತೆಯನ್ನು ತನ್ನ ಅನುಭವದಿಂದ ಮನಗಂಡಿದ್ದ. ಅಸ್ತಿತ್ವವಾದ ಫ್ಯಾಶನ್ನಿಗೆ ಬರುವ ಮೊದಲೇ ಮಾಂಟೊ ಹಿಂಸೆಯ ಅಸ್ತಿತ್ವವಾದೀ ಶೋಧಕನಾಗಿದ್ದ.
ರಾಜಕೀಯ ಸಿದ್ಧಾಂತ –ಎಡ ಬಲ ಎರಡೂ– ಹಿಂಸೆಯನ್ನು ವಿವರಿಸ ಹೊರಟರೆ ಮಾಂಟೊ ವಿವರಣೆಗೆ ಸಿಗದ ಅದರ ಅರ್ಥಹೀನತೆಯ ಕಡೆ ಬೆಟ್ಟುಮಾಡಿ ತೋರಿಸುತ್ತಾನೆ. ಜೊತೆಗೆ ಯಾರು ಬೇಕಾದರೂ– ನಮ್ಮ ನಿಮ್ಮಂತಹ ಸದ್ಗೃಹಸ್ಥರು, ಕೂಲಿಕಂಬಳಿಯವರು, ಗತಿಗೆಟ್ಟವರು ಮತ್ತು ಇತರರನ್ನು ಸೇರಿ– ಕೋಮುಹಿಂಸೆಯಲ್ಲಿ ಭಾಗೀದಾರರಾಗಬಹುದಾದ ಸಾಧ್ಯತೆಯಂತೂ ಆತನ ಹೆಚ್ಚಿನ ಕತೆಗಳ ವಸ್ತುವೇ ಆಗಿದೆ. ಕಾಫ್ಕನಿಗೆ ಆಫೀಸು ಬದುಕಿನ ಅರ್ಥಹೀನತೆಯ ಪ್ರತೀಕವಾದರೆ, ಮಾಂಟೋಗೆ ಕೋಮುಹಿಂಸೆ, ರಾಷ್ಟ್ರೀಯತೆಯ ಅರ್ಥಹೀನತೆಯ ಪ್ರತೀಕವಾಗಿದೆ’’. ವಿಭಜನೆಯ ದುರಂತ, ಗುಜರಾತ್‌ನ ನರಮೇಧಗಳು ಮತ್ತು ಮಾಂಟೊಕಥೆಗಳ ಸಮಗ್ರ ತಿಳಿವಳಿಕೆಯಲ್ಲಿ ಜಿ. ರಾಜಶೇಖರ ಅವರ ಬರವಣಿಗೆ ತನ್ನ ಸ್ವರೂಪವನ್ನು ಕಂಡುಕೊಳ್ಳುವುದು ಹೀಗೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.