ಹೌದು, ಜಗತ್ತಿನ ಎಲ್ಲ ಭಾಷೆಗಳ ಸಮಕಾಲೀನ ಕಾವ್ಯದ ಮೇಲೆ ಇನ್ನಿಲ್ಲದಂತೆ ಪ್ರಭಾವ ಬೀರಿದ, ಹೊಸ ಕಾಲದ ಮಹಾಕಾವ್ಯವೆಂಬಂಥ ಮಹಾನ್ ಕವಿತೆ ಎಲಿಯಟ್‌ನ ‘ವೇಸ್ಟ್ ಲ್ಯಾಂಡ್’ ಪ್ರಕಟವಾಗಿ ಇದೀಗ ನೂರು ವರ್ಷ (1922 ಡಿಸೆಂಬರ್). ಅದು ಇಂಗ್ಲೆಂಡಿನ ಕಾವ್ಯಲೋಕದಲ್ಲಿ ಒಂದು ಕ್ರಾಂತಿಯನ್ನೇ ಉಂಟುಮಾಡಿದ ಕವಿತೆ. ಅಷ್ಟೇ ಅಲ್ಲ; ಆಗತಾನೆ ಆರಂಭವಾಗಿದ್ದ ಯೂರೋಪಿನ modernist ಪಂಥಕ್ಕೆ ತುಂಬು ಕಸುವು ತುಂಬಿದ ಕವಿತೆ. ಅದರಲ್ಲೂ ಕನ್ನಡದಲ್ಲಿ ನವ್ಯ ಕವಿತೆಯ ಹುಟ್ಟಿಗೆ ಪ್ರೇರಕವಾದ ಕವಿತೆಯೆಂದರೆ ‘ವೇಸ್ಟ್ ಲ್ಯಾಂಡ್’ ಎಂಬುದು ಸಾಹಿತ್ಯ ಜಗತ್ತಿನಲ್ಲಿ ಚಿರಪರಿಚಿತವಾಗಿರುವ ಸಂಗತಿ.
ಈ ಕವಿತೆಯ ಪ್ರಕಟಣೆ ಮೂಲಕ ಎಲಿಯಟ್ ಅಜರಾಮರವಾದ ಕೀರ್ತಿಗೆ ಭಾಜನನಾದ. ಆಧುನಿಕ ನಾಗರಿಕತೆಯ ಭ್ರಷ್ಟತೆ, ಕುರೂಪ ಮತ್ತು ಬಂಜೆತನಗಳನ್ನು ಸಂಕೀರ್ಣವಾಗಿ ಚಿತ್ರಿಸುವ ಕವಿತೆಯಾಗಿ ಇದು ಒಂದು ಮೈಲಿಗಲ್ಲೆನಿಸಿತು. ಅಷ್ಟೇ ಅಲ್ಲದೆ, ಮೊದಲನೇ ಮಹಾಯುದ್ಧದ ನಂತರ ಪಾಶ್ಚಾತ್ಯ ಜಗತ್ತಿನಲ್ಲಿ ಸಂಸ್ಕೃತಿ, ಆಧ್ಯಾತ್ಮಿಕ ಮೌಲ್ಯಗಳು ನಾಶಗೊಂಡು, ಹತಾಶೆ, ಆತಂಕ, ಭಯಗಳು ಆವರಿಸಿಕೊಂಡು, ದೈನಂದಿನ ಬದುಕು ಅರ್ಥ ಕಳೆದುಕೊಂಡಿರುವ ಚಿತ್ರಣ ನೀಡುವುದರ ಜೊತೆಜೊತೆಗೇ ಭಾರತೀಯ ಆಧ್ಯಾತ್ಮಿಕ ಮೌಲ್ಯಗಳನ್ನು ಅರ್ಥೈಸಿಕೊಂಡು ಆಚರಿಸುವುದರಲ್ಲಿಯೇ ಜಗತ್ತಿಗೆ ನೆಮ್ಮದಿ ಎಂಬುದನ್ನು ಎಲಿಯಟ್ ಇದರಲ್ಲಿ ಸಾರಿಹೇಳಿದ್ದಾನೆ.
ಕಾವ್ಯಕ್ಕೆ ನೊಬೆಲ್ ಪ್ರಶಸ್ತಿ ಗಳಿಸಿದ ಎಲಿಯಟ್ ಅಮೆರಿಕದಲ್ಲಿ ಹುಟ್ಟಿ (1888), ವಿದ್ಯಾಭ್ಯಾಸದ ನಂತರ ಇಂಗ್ಲೆಂಡಿನಲ್ಲಿ ನೆಲೆಸಿದವನು. ಕ್ರಿಶ್ಚಿಯನ್ ಧರ್ಮದಲ್ಲಿ ಗಾಢವಾದ ಶ್ರದ್ಧೆ, ನಂಬಿಕೆ ಹೊಂದಿದ್ದವನು. ಹೆಂಡತಿಯ ಅನಾರೋಗ್ಯದಿಂದಾಗಿ ಸಾಂಸಾರಿಕ ಜೀವನದ ಸಂಕಷ್ಟಗಳು ತಂದೊಡ್ಡಿದ ಚಿಂತೆಗಳು, ಮೊದಲನೇ ಮಹಾಯುದ್ಧದ ಪರಿಣಾಮವಾಗಿ ಇಂಗ್ಲೆಂಡ್ ಎದುರಿಸಬೇಕಾಗಿ ಬಂದ ಆರ್ಥಿಕ ಬಿಕ್ಕಟ್ಟು, ಆಗಿನ ಜಾಗತಿಕ ವಿದ್ಯಮಾನ, ಎಲ್ಲೆಡೆ ಕಂಡುಬಂದ ಹತಾಶೆ, ನೈರಾಶ್ಯ, ಒಂಟಿತನಗಳು ಅವನ ಕಾವ್ಯವನ್ನು ಚೆನ್ನಾಗಿಯೇ ಪ್ರಭಾವಿಸಿದುವೆಂದು ಹೇಳಲಾಗುತ್ತದೆ.
ನಾಗರಿಕತೆಯ ಅವನತಿಯನ್ನು ಚಿತ್ರಿಸುವುದನ್ನು ಉದ್ದೇಶವಾಗುಳ್ಳ ‘ವೇಸ್ಟ್ ಲ್ಯಾಂಡ್’ ಸೇರಿದಂತೆ ಅವನ ಇನ್ನಿತರ ಕವಿತೆಗಳಾದ Love song of alfred j. prufroc, The portrait of a lady gerontionಗಳಲ್ಲೂ ಮನುಷ್ಯ ಬದುಕಿನ ಪೊಳ್ಳುತನ, ಅರಾಜಕತೆ, ಮೌಲ್ಯರಾಹಿತ್ಯ, ಹತಾಶೆ ಮತ್ತು ಏಕಾಂಗಿತನಗಳ ಚಿತ್ರಗಳೇ ಮುನ್ನೆಲೆಯಲ್ಲಿವೆ. ಇದನ್ನೆಲ್ಲ ಚಿತ್ರಿಸಲು ಎಲಿಯಟ್ ಅಳವಡಿಸಿಕೊಂಡ ಕಾವ್ಯಮಾರ್ಗ ಅದುವರೆಗಿನ ಕಾವ್ಯಮಾರ್ಗಕ್ಕಿಂತ ವಿಭಿನ್ನವಾದದ್ದು. ಅದೆಂದರೆ ಚಿರಪರಿಚಿತ ಶಬ್ದಗಳಿಂದ ಕೂಡಿದ ಸರಳ ಭಾಷೆಯೇ ಆದರೂ ಒಂದಕ್ಕೊಂದು ಸಂಬಂಧವೇ ಇಲ್ಲದಂಥ ಸಾಲುಗಳಿಂದ, ಪ್ರತಿಮೆಗಳಿಂದ ಇಡಿಕಿರಿದ ಕಾವ್ಯದ ಹಾದಿ. ಒಂದು ರೀತಿಯಲ್ಲಿ ಮಾಂಟಾಜ್ ತಂತ್ರವನ್ನು ಹೋಲುವಂಥದು. ಇನ್ನು ಭಾಷೆಯಾದರೋ ತಾನು ಹೇಳಬೇಕೆಂದಿದ್ದನ್ನು ಹೇಳುವ ಸಲುವಾಗಿ ಛಿದ್ರೀಕರಿಸಿದಂಥ ಭಾಷೆ. ಜೊತೆಗೆ ಬೇರೊಬ್ಬ ಪ್ರಸಿದ್ಧ ಕವಿಯ ಯಾವುದೋ ಕವಿತೆಯ ಸಾಲನ್ನು ಇಲ್ಲವೆ ಪ್ರಸಿದ್ಧ ಗ್ರಂಥದ ಸಾಲನ್ನು ನಡು ನಡುವೆ ಉದ್ಧರಿಸಿ ಕೊಡುವುದು. ಇನ್ನು ಲಯವಂತೂ ಪರಿಚಿತವಾದ ಲಯಗಳಿಗಿಂತ ತೀರ ಬೇರೆಯದೇ ಆದ ಲಯ. ಈ ಕಾವ್ಯವಿಧಾನದ ಮೂಲಕ modernist ಎಂದು ಕರೆಯಲಾಗುವ ಕಾವ್ಯಮಾರ್ಗದ ಉದ್ಘಾಟನೆಯಾಯಿತು.
ದಿ ವೇಸ್ಟ್ ಲ್ಯಾಂಡ್ (ಬಂಜರು ಭೂಮಿ ಅಥವಾ ಪಾಳುಭೂಮಿ) ಎಂಬುದು ‘ಬರಿಯಲ್ ಆಫ್ ದಿ ಡೆಡ್’, ‘ಎ ಗೇಮ್ ಆಫ್ ಚೆಸ್’, ‘ದಿ ಫೈರ್ ಸರ್ಮನ್’, ‘ಡೆತ್ ಬೈ ವಾಟರ್’ ಮತ್ತು ‘ವಾಟ್ ದಿ ಥಂಡರ್ ಸೇಡ್’ ಎಂಬ ಐದು ಭಾಗಗಳಲ್ಲಿ ಹರಡಿಕೊಂಡು 433 ಸಾಲುಗಳನ್ನು ಒಳಗೊಂಡಿರುವ ನೀಳ್ಗವಿತೆ.
ಯುದ್ಧದಿಂದ ಉಧ್ವಸ್ತಗೊಂಡ ಯುರೋಪ್‌ನ ನಗರ ಜೀವನದಲ್ಲಿ ಎಲಿಯಟ್ ಕಣ್ಣಿಗೆ ಕಂಡದ್ದು ಸೃಜನಶೀಲತೆ, ಫಲವಂತಿಕೆಗಳು ಮಾಯವಾಗಿ ಜೀವಪೋಷಕ ಮೌಲ್ಯಗಳನ್ನು ನೀಗಿಕೊಂಡು ಹೊಸದಾಗಿ ಏನನ್ನೂ ಬಿತ್ತಿ ಬೆಳೆಯಲಾರದ ಒಂದು ರೀತಿಯ ಬಂಜೆ ಬದುಕು. ಎಲ್ಲೆಲ್ಲೂ ನಿರಾಶೆ, ಅತೃಪ್ತಿ, ಭಯವೇ ವ್ಯಾಪಿಸಿದೆ ಎನಿಸಿತು.
ಎಲಿಯಟ್ ಇದರಲ್ಲಿ ಮುಂದಿಡುವುದು ನಗರ ನಾಗರಿಕತೆಯ ಇಂಥ ಸತ್ವಹೀನವೂ ನಿರರ್ಥಕವೂ ಆದ ಅವನತಿಯ ಸ್ಥಿತಿಯನ್ನು. ಈ ಸ್ಥಿತಿಯನ್ನು ಹಲವಾರು ಮಿಥ್‍ಗಳು, ಬೈಬಲ್‍ನ ದರ್ಶನ, ಜನಪದ/ದಂತ ಕಥೆಗಳು, ಪುರಾಣಗಳು ಇವುಗಳ ಚಿತ್ರಣಗಳ ಮೂಲಕ ಪ್ರಸ್ತುತಪಡಿಸುತ್ತ ಹೋಗುತ್ತಾನೆ. ದಿ ವೇಸ್ಟ್ ಲ್ಯಾಂಡ್‌ನ ಆರಂಭವೇ ವಸಂತಾಗಮನ ಸಾರುವ ಏಪ್ರಿಲ್‌ಅನ್ನು ಕ್ರೂರಿ ತಿಂಗಳೆಂದು ಘೋಷಿಸುವ ಮೂಲಕ-
‘April is the cruellest month, breeding
lilacs ant of the dead of the land, mixing
memory and desire stirring
dull roots with spring rain…’
ಇದು ಸತ್ತವರ ಭೂಮಿಯಾಗಿ, ಪುನಶ್ಚೇತನದ ಯಾವ ಚಿಹ್ನೆಯೂ ಇಲ್ಲದ ಬಂಜರು ಭೂಮಿಯಾಗಿದೆ. ಇಲ್ಲಿನ ಮರವೂ ಮೃತಿಹೊಂದಿದ, ನೆರಳೀಯದ ಮರ. ಫಲವತ್ತಾದ ಬೆಳೆಯನ್ನು ಆಶಿಸಿ ದೇವರುಗಳ ನಕಲಿ ಶವಗಳನ್ನು ನೆಲದಲ್ಲಿ ಹೂಳುತ್ತಿದ್ದ ಒಂದು ಕಾಲದ ಈಜಿಪ್ಷಿಯನ್ನರ ಆಚರಣೆಯನ್ನು ಹೇಳಿ, ಅದು ಮೊಳೆತು ಅರಳುವುದೆ? ಎಂಬ ಭೀತಿಸೂಚಕ ಮಾತಿನಿಂದ ಮುಗಿಯುತ್ತದೆ.
‘ಚದುರಂಗದ ಆಟ’ವೆಂಬ ಎರಡನೇ ಭಾಗದಲ್ಲಿ ಮೇಲುವರ್ಗದ ಮತ್ತು ಕೆಳವರ್ಗದ ಹೆಂಗಸರ ಎರಡು ಚಿತ್ರಗಳಿವೆ. ಮೊದಲ ಭಾಗದಲ್ಲಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಅಲಂಕರಿಸಿಕೊಳ್ಳುತ್ತ ಸುಗಂಧ ದ್ರವ್ಯಗಳನ್ನು ಪೂಸಿಕೊಳ್ಳುತ್ತಿರುವ ಹೆಣ್ಣಿನ ಚಿತ್ರಣವಿದೆ. ಪರಸ್ಪರ ಸಂಭಾಷಣೆಯಲ್ಲಿ ತೊಡಗಿರುವ ಗಂಡ ಹೆಂಡತಿ ತಮ್ಮ ಭಾವನೆಗಳನ್ನು ಸರಿಯಾಗಿ ಸಂವಹನ ಮಾಡುವಲ್ಲಿ ಸೋಲುತ್ತಾರೆ. ಇಲ್ಲಿಂದ ಮುಂದಕ್ಕೆ ಪಬ್ ಒಂದರಲ್ಲಿ ಲವ್ ಎಂಬುವವಳು ತನ್ನ ಕೆಲ ಗೆಳೆತಿಯರೊಂದಿಗೆ ಲಿಲ್ ಎಂಬ ಗೆಳತಿಯ ಬಗ್ಗೆ ಹರಟುತ್ತಿರುವ ಚಿತ್ರವಿದೆ. ಹಲವು ಗರ್ಭದಾರಣೆ ಮತ್ತು ಗರ್ಭಪಾತಗಳ ಫಲವಾದ ಅಕಾಲ ವಾರ್ಧಕ್ಯದ ಚಿತ್ರವೂ ಇದೆ. ಇದು ಯಾಂತ್ರಿಕ ದಾಂಪತ್ಯ ಕಾಮ ಮತ್ತು ಅದರ ಸೋಲುಗಳನ್ನು ಸೂಚಿಸುತ್ತಿದೆ.
ಮೂರನೇ ಭಾಗವಾದ ‘ಅಗ್ನಿ ಉಪದೇಶ’ದಲ್ಲಿಯೂ (ಫೈರ್ ಸರ್ಮನ್) ವಿವಾಹೇತರ ಲೈಂಗಿಕ ಸಂಬಂಧಗಳ ಚಿತ್ರಗಳು, ನಗರ ಜೀವನದ ಕೊಳಕುಗಳು ಎದ್ದುಕಾಣುತ್ತವೆ. ಥೇಮ್ಸ್ ನದಿಯ ದಡದಲ್ಲಿ ವೇಶ್ಯೆಯರ ಕಾಮಜೀವನದ ಚಿತ್ರಗಳು. ಹಟಾತ್ ಸಂಭೋಗ, ಒಂದು ರೀತಿಯ ಭಾವಶೂನ್ಯ ಸ್ಥಿತಿ ಇದೆ. ಇದರ ಅಂತ್ಯದಲ್ಲಿ ಬುದ್ಧ ಮತ್ತು ಕ್ರೈಸ್ತ ಸಂತ ಆಗಸ್ಟೀನ್ ಬರುತ್ತಾರೆ. ದುಃಖಕ್ಕೆ ಕಾರಣವಾದ ಅರಿಷಡ್ವರ್ಗಗಳ ಬೆಂಕಿಯಲ್ಲಿ ಬೇಯುತ್ತಿರುವವರ ಬಗ್ಗೆ ಹೇಳುತ್ತ ಸಕಲ ಬಯಕೆಗಳಿಂದ ಮುಕ್ತನಾದಾಗಲೇ ಮನುಷ್ಯನ ನಿಜವಾದ ಮೋಕ್ಷ ಎಂದು ಬುದ್ಧ ಉಪದೇಶಿಸುವ ಮತ್ತು ಸಂತ ಆಗಸ್ಟೀನ್ ತನ್ನ ಯೌವನದ ಲಂಪಟತನದ ಬಗ್ಗೆ ಕನ್ಫೆಷನ್ ಮಾಡಿಕೊಳ್ಳುತ್ತ ಪರಿಶುದ್ಧನಾಗುವ ಚಿತ್ರಗಳಿವೆ. ಒಟ್ಟಾರೆ ದುಃಖದ ಅನುಭವ ಮತ್ತು ಪಶ್ಚಾತ್ತಾಪಗಳ ಮೂಲಕ ಬಿಡುಗಡೆ ಎಂಬುದರ ಸೂಚನೆ ಇದೆ.
ನಾಲ್ಕನೆಯ ಭಾಗವಾದ ‘ಡೆತ್ ಬೈ ವಾಟರ್’ ( ನೀರಿನ ಮೂಲಕ ಮೃತ್ಯು) ಕೇವಲ ಹತ್ತು ಸಾಲುಗಳ ಭಾವಗೀತೆಯ ರೀತಿಯದು. ಇದರಲ್ಲಿ ಮೊದಲ ಭಾಗದಲ್ಲಿ ಉಕ್ತವಾದ, ಸಮುದ್ರದಲ್ಲಿ ಮುಳುಗಿ ಸತ್ತ ಫ್ಲೆಬಾಸ್ ಎಂಬ ಫೀನಿಸ್ ವ್ಯಾಪಾರಿ ಮತ್ತಿನ್ನೊಂದೆರಡು ಪಾತ್ರಗಳು ಬರುತ್ತವೆ. ಜೀವದಾಯಕವೂ ಶುದ್ಧಿಕಾರಕವೂ ಆದ ನೀರು ಅದರ ವೈಪುಲ್ಯ ಮತ್ತು ಕೊರತೆಯಿಂದ ಮೃತ್ಯುವಿಗೂ ಕಾರಣವಾಗಬಹುದಾದ ವೈರುಧ್ಯದ ಸೂಚನೆ ಇಲ್ಲಿದೆ.
ಕವಿತೆಯ ಕೊನೆಯ ಭಾಗವಾದ ‘ವಾಟ್ ದಿ ಥಂಡರ್ ಸೇಡ್’ (ಗುಡುಗು ಹೇಳಿದ್ದು) ಮುಕ್ತ ಛಂದಸ್ಸಿನ ಪ್ರಾಸರಹಿತವಾಗಿ ಉದ್ದಕ್ಕೆ ಸಾಗುವ ಸಾಲುಗಳಿಂದ ಕೂಡಿದ ಭಾಗ. ನೀರಿಗಾಗಿ ಹಪಹಪಿಸುತ್ತ ಯಾತ್ರೆ ಹೊರಟಿರುವ ಮನುಷ್ಯ (ಎಮ್ಮಾವುಸ್) ನೀರು ದೊರೆಯುವ ಪವಿತ್ರ ಬಟ್ಟಲಿನ ಸ್ಥಳ ತಲುಪುವುದು ಮತ್ತು ಯುದ್ಧಾನಂತರದ ಯೂರೋಪಿನ ಅಧೋಗತಿ ಇಲ್ಲಿಯ ಮುಖ್ಯ ಚಿತ್ರ. ಜೀವದಾಯಕ ಜಲಕ್ಕಾಗಿ ಹಪಹಪಿಸುತ್ತಿರುವಾಗ ಹಿಮಾಲಯದ ಮೇಲೆ ಮೋಡಗಳು ಮಂದೈಸಿ
ದ.....ದ.....ದ.....
ದತ್ತ..... ದಯಧ್ವಂ..... ದಾಮ್ಯತ....
ಎಂದು ಗುಡುಗಿನ ದನಿ ಕೇಳಿಸುತ್ತದೆ. ಇವು ಬೃಹದಾರಣ್ಯಕೋಪನಿಷತ್ತಿನ ಶಬ್ದಗಳು. ಪ್ರಜಾಪತಿಯ ಮಕ್ಕಳಾದ ದೇವತೆಗಳು ಮನುಷ್ಯರು ಮತ್ತು ದಾನವರು ತಮಗೆ ಹಿತೋಪದೇಶ ಕೊಡು ಎಂದು ಕೇಳಿದಾಗ ಪ್ರಜಾಪತಿ ಅವರೆಲ್ಲರಿಗೂ ‘ದ’ ‘ದ’ ‘ದ’ ಎಂದು ಉಪದೇಶಿಸುತ್ತಾನೆ. ‘ದ’ಗೆ ದೇವತೆಗಳು ‘ದಮ’ ಎಂದು, ಮನುಷ್ಯರು ‘ದಾನ’ ಎಂದು ಮತ್ತು ದಾನವರು ‘ದಯೆ’ ಎಂದು ಅರ್ಥಮಾಡಿಕೊಂಡರು. ಎಲಿಯಟ್ ಪದ್ಯದಲ್ಲಿ ಅದು ದಾನ, ದಯ ಮತ್ತು ದಮ ಎಂದು ಕ್ರಮ /ವಿಪರ್ಯಯವಾಗಿದೆ. ದಮ, ದಾನ, ಮತ್ತು ದಯೆ ಇಲ್ಲದ ಕಾರಣ ಅದು ವೇಸ್ಟ್ ಲ್ಯಾಂಡ್ ಎನಿಸಿದೆ. ಅದರ ನಂತರ ‘ಶಾಂತಿಃ ಶಾಂತಿಃ ಶಾಂತಿಃ’ ಎಂಬ ಉಪನಿಷತ್ತಿನ ಶಾಂತಿಮಂತ್ರದೊಂದಿಗೆ ಕವಿತೆ ಕೊನೆಗೊಳ್ಳುತ್ತದೆ.
ಕನ್ನಡದಲ್ಲಿ ಐತಿಹಾಸಿಕವಾಗಿ ನವ್ಯತೆಯನ್ನು ತಂದ ಗೋಕಾಕರು 1950ರಲ್ಲಿ ‘ಎಲಿಯಟ್ಟನ ವೇಸ್ಟ್ ಲ್ಯಾಂಡ್’ ಅನ್ನು ಹೆಸರಿಸಿ ಅದರಂತೆಯೇ ವಾಸ್ತವಿಕ ಪ್ರತಿಮೆಗಳು ಮತ್ತಿನ್ನಿತರ ತಂತ್ರಗಳನ್ನಳವಡಿಸಿಕೊಂಡ ‘ನವ್ಯಕಾವ್ಯ’ವೇ ಕನ್ನಡ ಕಾವ್ಯದ ದಾರಿಯಾಗಬೇಕು ಎಂದು ಘೋಷಿಸುತ್ತಾರೆ. ಆದರೆ ಅಡಿಗರ ಕಾವ್ಯಮಾರ್ಗದಲ್ಲಿ ಮುನ್ನಡೆದ ಕನ್ನಡದ ನವ್ಯ ಕಾವ್ಯ ಅಡಿಗರೇ ಸೂಚಿಸಿದಂತೆ ಎಲಿಯಟ್ ಆಡೆನ್ ಮುಂತಾದವರಿಂದ ಸ್ಫೂರ್ತಿ ಪಡೆದಿದೆ.
ತಮ್ಮ ‘ಚಂಡೆ ಮದ್ದಳೆ’ಯ ‘ಹಿಮಗಿರಿಯ ಕಂದರ’ ಮತ್ತು ‘ಗೊಂದಲಪುರ’ಗಳಲ್ಲಿ ಎಲಿಯಟ್ಟನ ‘ವೇಸ್ಟ್ ಲ್ಯಾಂಡ್’ನಲ್ಲಿಯ ತಂತ್ರ ಮತ್ತು ವಸ್ತುವಿನ್ಯಾಸವನ್ನು ಅಡಿಗರು ಅನುಸರಿಸಿದ್ದಾರೆ. ‘ಹಿಮಗಿರಿಯ ಕಂದರ’ದ ಪ್ರಾರಂಭದಲ್ಲಿನ ಬೆಂಕಿಯ ವರ್ಣನೆ ವೇಸ್ಟ್ ಲ್ಯಾಂಡ್‌ನ ಮೂರನೇ ಭಾಗದ ‘ದಿ ಫೈರ್ ಸರ್ಮನ್’ ಅನ್ನು, ಮತ್ತು ಅದೇ ‘ಹಿಮಗಿರಿಯ ಕಂದರ’ದ ಭಗ್ನ ಸೇತುವೆ. ಮತ್ತು ಗೊಂದಲಪುರದ ಫಿಷ್ ಪ್ಲೇಟ್ ಕಿತ್ತಿರುವ ರೈಲು ಮಾರ್ಗ ಎಲಿಯಟ್‌ನ ‘ವೇಸ್ಟ್ ಲ್ಯಾಂಡ್’ ನ ಲಂಡನ್ ಬ್ರಿಡ್ಜ್‌ನ ಪ್ರತಿಮೆಯನ್ನು (ಲಂಡನ್ ಬ್ರಿಡ್ಜ್ ಈಸ್ ಫಾಲಿಂಗ್ ಡೌನ್, ಫಾಲಿಂಗ್ ಡೌನ್, ಫಾಲಿಂಗ್ ಡೌನ್) ನೆನಪಿಸುತ್ತವೆ. ಇದರ ಜೊತೆಗೆ ಎಲಿಯಟ್‌ನ ವಿಮರ್ಶೆಯ ಪ್ರಭಾವ ನಮ್ಮ ವಿಮರ್ಶಕರು ಮತ್ತು ಕವಿಗಳ ಮೇಲೆ ಅಗಾಧವಾಗಿ ಅಗಿದೆ. ಹೀಗೆ ಕನ್ನಡ ನವ್ಯಕಾವ್ಯ ಮತ್ತು ವಿಮರ್ಶೆಯ ಮೇಲೆ ‘ವೇಸ್ಟ್ ಲ್ಯಾಂಡ್’ ಮತ್ತು ಅದರ ಕವಿಯ ಅಚ್ಚಳಿಯದ ಪ್ರಭಾವವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.