ಕೃತಿ: ಮಾಧ್ಯಮ ತಂತ್ರಜ್ಞಾನ
ಲೇ: ಸಿಬಂತಿ ಪದ್ಮನಾಭ ಕೆ.ವಿ., ಶ್ರೀಶ ಎಂ.ಪುಣಚ
ಪ್ರ: ಅಂಕುರ್ ಮೀಡಿಯಾ ಪಬ್ಲಿಕೇಶನ್ಸ್
ಸಂ: 9449525854
***
ತಂತ್ರಜ್ಞಾನ; ಇದು ನಿಂತ ನೀರಲ್ಲ. ಕ್ಷಣಕ್ಷಣಕ್ಕೂ ಬದಲಾಗುವ, ನವೀನವಾಗುತ್ತ ಸಾಗುವ ಲೋಕವದು. ಮಾಧ್ಯಮ ಕ್ಷೇತ್ರವೂ ಈ ಓಟದಲ್ಲಿ ತನ್ನನ್ನು ತಾನು ಈ ವೇಗಕ್ಕೆ ಒಗ್ಗಿಸಿಕೊಂಡು ಸಾಗುತ್ತಿದೆ. ಹೀಗಾಗಿಯೇ ಇಂದು ಡೆಸ್ಕ್‌ಟಾಪ್ ಜಾಗಕ್ಕೆ ಟ್ಯಾಬ್‌ಗಳು ಬಂದಿವೆ, ಕ್ಯಾಮೆರಾಮೆನ್ ಜಾಗಕ್ಕೆ 5ಜಿ ವೇಗದ ಸ್ಮಾರ್ಟ್‌ಫೋನ್‌ಗಳು ಲಗ್ಗೆ ಇಟ್ಟು ಲೈವ್ ನೀಡುತ್ತಿವೆ! ಇಂತಹ ಮಾಧ್ಯಮ ತಂತ್ರಜ್ಞಾನಗಳನ್ನು ಪರಿಚಯಿಸುವುದೇ ಈ ಕೃತಿಯ ಉದ್ದೇಶ.
ಪ್ರಸಕ್ತ ಸಂದರ್ಭದಲ್ಲಿ ಉತ್ತಮ ಮಾತುಗಾರಿಕೆ, ಬರವಣಿಗೆ, ಅನುವಾದದ ಸಾಮರ್ಥ್ಯದ ಜೊತೆಗೆ ತಂತ್ರಜ್ಞಾನದ ಅರಿವೂ ಮಾಧ್ಯಮ ಕ್ಷೇತ್ರಕ್ಕೆ ಕಾಲಿಡಲು ಇರುವ ಅರ್ಹತೆಗಳಲ್ಲಿ ಸೇರ್ಪಡೆಯಾಗಿದೆ. ಹೀಗಾಗಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ, ಪತ್ರಕರ್ತರಿಗೆ ಇದೊಂದು ಕೈಪಿಡಿ ಅಥವಾ ಪಠ್ಯಪುಸ್ತಕವೆಂದೇ ಹೇಳಬಹುದು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ಇಲ್ಲಿರುವ ವಿಷಯಗಳನ್ನು ಆಯ್ದುಕೊಳ್ಳಲಾಗಿದೆ. ಈ ಕ್ಷೇತ್ರದಲ್ಲೇ ಪಳಗಿರುವ ಲೇಖಕರು ತಮ್ಮ ಅನುಭವ ಮತ್ತು ಅರಿವಿನ ಮೂಸೆಯಿಂದ ಈ ಕೃತಿ ಸಿದ್ಧಪಡಿಸಿದ್ದಾರೆ. ಆಂಗ್ಲ ಭಾಷೆಯಲ್ಲಿ ಪ್ರಕಟವಾಗಿದ್ದ ಈ ಕೃತಿಯನ್ನು ಇದೀಗ ಕನ್ನಡಕ್ಕೆ ಅನುವಾದಿಸಲಾಗಿದೆ.
ಕಂಪ್ಯೂಟರ್ ಎಂದರೇನು? ಎನ್ನುವ ವಿಷಯದೊಂದಿಗೇ ಈ ಕೃತಿಯನ್ನು ಆರಂಭಿಸಲಾಗಿದ್ದು, ನಂತರ ಈ ಕ್ಷೇತ್ರದಲ್ಲಿನ ಹಲವು ನೂತನ ತಂತ್ರಜ್ಞಾನಗಳ ಮಜಲುಗಳನ್ನು ಪರಿಚಯಿಸಿ, ವಿವರಿಸಲಾಗಿದೆ. ತಂತ್ರಜ್ಞಾನವನ್ನು ಓದಿ ಅರಿಯುವುದಕ್ಕಿಂತಲೂ, ಪ್ರಯೋಗಕ್ಕೆ ಒಡ್ಡಿ ಅನುಭವಿಸಿ ಕಲಿಯುವುದು ಮುಖ್ಯ. ಶಿಕ್ಷಣ ನೀತಿಯ ಅನುಸಾರ ಹೊಸ ಪಠ್ಯಕ್ರಮದಲ್ಲಿ ಬದಲಾವಣೆ ಮಾಡಿದರೂ, ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಕಾಲೇಜುಗಳು ವಿದ್ಯಾರ್ಥಿಗಳ ಕೈಗಳಿಗೆ ಈ ತಂತ್ರಜ್ಞಾನಗಳನ್ನು ನೀಡದೆ ಯಾವ ಪ್ರಯೋಜನವೂ ಇಲ್ಲ ಎಂಬುವುದನ್ನೂ ಸೂಕ್ಷ್ಮವಾಗಿ ಹೇಳುವಂತಿದೆ ಕೃತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.