ಮಲ್ಲೇಪುರಂ ವೆಂಕಟೇಶ್ ಅವರ ಆತ್ಮಕಥನ ‘ದಿಟದ ದೀವಿಗೆ’ ಬೆಂಗಳೂರಿನ ಗಾಂಧಿಭವನದಲ್ಲಿ ಡಿಸೆಂಬರ್ 3ರ ಬೆಳಿಗ್ಗೆ 10.30ಕ್ಕೆ ಬಿಡುಗಡೆಯಾಗಲಿದೆ. ‘ಅಂಕಿತ ಪುಸ್ತಕ’ವು ಈ ಕೃತಿಯನ್ನು ಪ್ರಕಟಿಸಿದೆ. ಕೃತಿಯ ಒಂದು ಭಾಗದ ಓದು...
ಧಾರವಾಡದಿಂದ ಬಂದ ಮೇಲೆ ತೀವ್ರವಾಗಿ ಅಮ್ಮನ ನೆನಪಾಯಿತು. ಒಂದು ದಿನ ಬೆಳಿಗ್ಗೆ ಊರಿಗೆ ಹೋದೆ. ಯಥಾಪ್ರಕಾರ ಮನೆಯ ಸಮೀಪದಲ್ಲಿದ್ದ ಕಾಂಗ್ರೆಸ್ ಮುಖಂಡರೂ ನಮ್ಮ ಕುಟುಂಬದ ಹಿತೈಷಿಗಳೂ ಆದ ಶ್ರೀಅಂಜನಮೂರ್ತಿ ಅವರ ಮನೆಗೆ ಹೋದೆ. ಅಲ್ಲಿಗೆ ನನ್ನ ತಂಗಿ ಬಂದಳು. ಅಮ್ಮನನ್ನು ನೋಡುವ ಸೆಳೆತಕ್ಕೆ ಒಳಗಾಗಿ ಮನೆಗೆ ಹೋದೆ. ಅಮ್ಮ ನಡುಮನೆಯ ಮೂಲೆಯಲ್ಲಿ ಮಲಗಿದ್ದಳು. ನಾನು ತಲೆಯ ಬದಿ ಕುಳಿತು ತಲೆ ಸವರಿದೆ. ಅವಳು ಕಣ್ಣುಬಿಟ್ಟಳು. ಅವಳಿಗೆ ದುಃಖ ಇಮ್ಮಡಿಸಿತು. ಕಣ್ಣಲ್ಲಿ ನೀರು ತಂದಳು. ಅಮ್ಮನ ಮುಖ ಸೊರಗಿ ಹೋಗಿತ್ತು. ಕಣ್ಣುಗಳು ನಿಸ್ತೇಜಗೊಂಡಿದ್ದವು. ಜಯಕ್ಕ ಬಂದು ತೋಳು ಹಿಡಿದು ಕಣ್ಣಲ್ಲಿ ನೀರು ತಂದಳು. ಅಕ್ಕ-ತಂಗಿಯರ ಬಲವಂತಕ್ಕೆ ಒಂದಿಷ್ಟು ತಿಂದು ಬೆಂಗಳೂರಿನ ಕಡೆ ಹೊರಟೆ. ಅಮ್ಮ ಮನಸ್ಸಿನ ತುಂಬಾ ತುಂಬಿಕೊಂಡಿದ್ದಳು.
ಅದಾದ ಒಂದು ವಾರಕ್ಕೆ ಅಮ್ಮನನ್ನು ‘ಸರ್ಕಾರಿ ಆಯುರ್ವೇದ ಆಸ್ಪತ್ರೆ’ಗೆ ಸೇರಿಸಿರುವ ವಿಷಯ ತಿಳಿಯಿತು. ನಾನು ಆಸ್ಪತ್ರೆ ಬಳಿ ಬಂದೆ. ಜಯಕ್ಕ ವಾರ್ಡಿನ ಹೊರಗಡೆ ನಿಂತಿದ್ದಳು. ಅಪ್ಪ ಮರದ ಬಳಿ ಇದ್ದ ಬೆಂಚಿನ ಮೇಲೆ ಕುಳಿತಿದ್ದರು. ಅಪ್ಪನ ಮುಖ ಬಾಡಿಹೋಗಿತ್ತು. ನನಗೂ ಅಯ್ಯೋ ಎನಿಸಿತು. ಹುಲಿಯಂತಿದ್ದ ಮನುಷ್ಯ ಎಷ್ಟು ಸರಳನಾಗಿ ಬಿಟ್ಟನಲ್ಲ-ಎಂದೆನಿಸಿತು. ನಾನು ಕೊಠಡಿಗೆ ಹೋದೆ. ನಾನು ಪಕ್ಕ ಹೋಗಿ ಅಮ್ಮನ ತಲೆ ಸವರಿದೆ. ನನ್ನತ್ತ ನೋಡಿದವಳೇ ಸಣ್ಣ ನಗು ಬೀರಿದಳು. ಕಣ್ಣಲ್ಲಿ ಹನಿದುಂಬಿದುವು. ಪಕ್ಕದಲ್ಲಿ ಧಂಡಿಯಾಗಿ ಲೇಹ್ಯ, ಟಾನಿಕ್‌ಗಳು ಇದ್ದುವು. ಇದು ಕರುಳಿನ ವ್ಯಾಧಿ ಎಂದು ಹೇಳಿದ್ದಾರೆಂದು ಜಯಕ್ಕ ಹೇಳಿದಳು.
ನಾನು ಆಸ್ಪತ್ರೆಯಲ್ಲೇ ನಾಲ್ಕೈದು ದಿನವಿದ್ದೆ. ನನ್ನೊಡನೆ ಜಯಕ್ಕಳೂ ಇರುತ್ತಿದ್ದಳು. ನಾನು ರಾತ್ರಿ ಅಣ್ಣನ ಮನೆಯಿಂದ ಊಟಕೊಟ್ಟು ಅಮ್ಮನಿಗೆ ಹಣ್ಣಿನ ರಸ ಕುಡಿಸಿ ಹೊರಡುತ್ತಿದ್ದೆ. ಅಮ್ಮನಿಗೆ ಮಾತನಾಡಬೇಕೆಂದಿದ್ದರೂ ಮಾತನಾಡಲು ಆಗುತ್ತಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಒಂದೆರಡು ಪದಗಳನ್ನು ಆಡುತ್ತಿದ್ದಳು. ಅಮ್ಮನನ್ನು ನೋಡಿಕೊಳ್ಳುತ್ತಿದ್ದ ಆಯುರ್ವೇದ ವೈದ್ಯರು ‘ನಾಳೆ ಊರಿಗೆ ಕರೆದುಕೊಂಡು ಹೋಗಿ’ ಎಂದರು. ಆ ದಿನ ಅಪ್ಪ ಬಂದರು. ನಾನು ಅಮ್ಮನನ್ನು ಎರಡೂ ಕೈಗಳಲ್ಲೂ ಅನಾಮತ್ತಾಗಿ ಎತ್ತಿಕೊಂಡು ಬಸ್‌ನಿಲ್ದಾಣಕ್ಕೆ ಬಂದೆ. ನೆಲಮಂಗಲದ ಕಡೆ ಹೋಗುವ ಬಸ್ಸಿನಲ್ಲಿ ಕುಳಿತು ಮನೆಗೆ ಅಮ್ಮನನ್ನು ಕರೆತಂದೆವು. ನಾನು ಅಲ್ಲಿ ಒಂದೆರಡು ದಿನವಿದ್ದು ಬೆಂಗಳೂರಿಗೆ ಬಂದೆ.
ನನ್ನ ಅಮ್ಮ ತೀರಿಕೊಳ್ಳುವ ಹಿಂದಿನ ದಿನ ನನ್ನ ಮನಸ್ಸು ಅಸ್ತವ್ಯಸ್ತವಾಯಿತು. ಆ ದಿನ ಸಂಜೆ ಗ್ರಂಥಾಲಯದಲ್ಲಿ ಕುಳಿತಿದ್ದೆ. ಯಾಕೋ ತಳಮಳ ಉಂಟಾಗುತ್ತಿತ್ತು. ಏನೇನೋ ಅಪಶಕುನಗಳು. ಒಂದು ಕಡೆ ಕುಳಿತುಕೊಳ್ಳಲಾಗದ ನೋವು. ಹಾಸ್ಟೆಲ್ಲಿಗೆ ಬಂದೆ. ನನ್ನ ಮಾನಸಿಕ ತಳಮಳವನ್ನು ಗೆಳೆಯ ಎನ್.ಡಿ.ರಾಮಚಂದ್ರನಲ್ಲಿ ಹೇಳಿಕೊಂಡೆ. ಅವನು ಸಮಾಧಾನಿಸಿ-ತನ್ನೊಡನೆ ಊಟಕ್ಕೆ ಕರೆದುಕೊಂಡು ಹೋದ. ನನಗೆ ಎರಡು ತುತ್ತು ಅನ್ನ ತಿನ್ನಲು ಆಗಲಿಲ್ಲ. ಎದೆಯಲ್ಲಿ ಉಸಿರುಗಟ್ಟಿದಂತಾಯಿತು. ನನ್ನ ಅವಸ್ಥೆಯನ್ನು ರಾಮಚಂದ್ರನಿಗೆ ನೋಡಲಾಗಲಿಲ್ಲ. ಹಾಗೂ ಹೀಗೂ ರಾತ್ರಿ ಒಂಬತ್ತು ಗಂಟೆಯವರೆಗೂ ತಳ್ಳಿದೆ. ಅಮ್ಮನ ನೆನಪು ತೀವ್ರವಾಯಿತು. ಎದೆ ಬಡಿದುಕೊಳ್ಳಲಾರಂಭಿಸಿತು. ನನ್ನ ಕಣ್ಣು ಮಂಜಾಗುತ್ತಿತ್ತು. ನನ್ನ ಅವಸ್ಥೆ ಕಂಡ ರಾಮಚಂದ್ರ ಕೈಗೆ ಸ್ವಲ್ಪ ಹಣಕೊಟ್ಟು ಊರಿಗೆ ಹೋಗು ಎಂದ. ನಾನು ಆ ಕೂಡಲೇ ಸಿಟಿಬಸ್ ಹಿಡಿದು ಯಶವಂತಪುರಕ್ಕೆ ಬಂದೆ. ಅಲ್ಲಿಂದ ಲಾರಿಗಾಗಿ ಕಾದೆ. ಕೊನೆಗೆ ನೆಲಮಂಗಲಕ್ಕೆ ಹೋಗುವ ಲಾರಿಯನ್ನು ಹತ್ತಿದೆ. ಅದು ನೆಲಮಂಗಲ ಸ್ವಲ್ಪ ದೂರದಲ್ಲಿ ಇರುವಾಗಲೇ ಇಂಜಿನ್ ಸಮಸ್ಯೆಯಿಂದ ನಿಂತುಹೋಯಿತು. ನಾನು ಅಲ್ಲಿಂದ ನಡೆದುಕೊಂಡು ಮನೆ ತಲುಪಿದಾಗ ಬೆಳಗಿನ ಜಾವ ನಾಲ್ಕು ಗಂಟೆ ಆಗಿತ್ತು. ನಾನು ನೆಲಮಂಗಲಕ್ಕೆ ಸಮೀಪ ಬಂದಂತೆಲ್ಲಾ ಹೃದಯದ ಬಡಿತ, ಮನಸ್ಸಿನ ತಳಮಳ ಕಡಿಮೆ ಆಯಿತು. ಇನ್ನು ಮನೆ ಸಮೀಪ ಬಂದಾಗ ಮನಸ್ಸು ಶಾಂತಗೊಂಡಿತು.
ಮನೆಯ ಮುಂದೆ ದೀಪ ಉರಿಯುತ್ತಿತ್ತು. ಅಪ್ಪ ಹೊರಗೆ ಕುರ್ಚಿಯ ಮೇಲೆ ಕುಳಿತಿದ್ದರು. ನಾನು ಗೇಟ್ ಸರಿಸಿ ಮನೆಯೊಳಕ್ಕೆ ಹೋದೆ. ಹಾಲಿನಲ್ಲಿ ದೀಪ ಉರಿಯುತ್ತಿತ್ತು. ಅಮ್ಮ ಮಲಗಿದ್ದ ಜಾಗಕ್ಕೆ ಬಂದೆ. ಜಯಕ್ಕ-ತಂಗಿ ರತ್ನ-ಇಬ್ಬರು ತಮ್ಮಂದಿರು ಅಮ್ಮನ ಸುತ್ತ ಕುಳಿತಿದ್ದರು. ನಾನು ಹೋದವನೇ ಅಮ್ಮನ ಕೈಹಿಡಿದು ಕುಳಿತುಕೊಂಡೆ. ‘ಅಮ್ಮ ನಾನು ವೆಂಕಟೇಶ ಬಂದಿದ್ದೇನೆ’ ಎಂದು ಹೇಳಿದೆ. ಅವಳು ಕಣ್ಣನ್ನು ತೆರೆದು ನೋಡಿದಳು. ನನ್ನ ಕಡೆ ಕಣ್ಣು ತಿರುಗಿಸಿದಳು. ಉಸಿರು ಮೇಲಕ್ಕೂ ಕೆಳಕ್ಕೂ ತುಯ್ದಾಡುತ್ತಿತ್ತು! ನಾನು ಅಮ್ಮನ ತಲೆಯನ್ನು ಸವರಿದೆ. ಅವಳ ಕಣ್ಣಿನಲ್ಲಿ ನೀರು ಜಿನುಗಿತು! ಅಪ್ಪ ಬಂದರು. ತುಳಸಿ ಹಾಕಿಟ್ಟಿದ್ದ ನೀರನ್ನು ಅಮ್ಮನ ಬಾಯಿಗೆ ಬಿಟ್ಟೆ, ತುಸು ಗುಟುಕರಿಸಿದಳು. ಸ್ವಲ್ಪ ಹೊತ್ತಿಗೆ ಉಸಿರು ಇಲ್ಲವಾಯಿತು. ಜಯಕ್ಕ, ತಂಗಿ ರತ್ನ, ಮೀನಾ, ಪದ್ಮಾವತಿ, ತಮ್ಮಂದಿರಾದ ರವಿಶಂಕರ, ಪ್ರಭುದೇವ, ಕೃಷ್ಣಮೂರ್ತಿ ಜೋರಾಗಿ ಅಳಲಾರಂಭಿಸಿದರು. ತಂಗಿ ರತ್ನಮ್ಮ ನನ್ನ ಕೈಹಿಡಿದು ‘ನಮಗಿನ್ನಾರು ಗತಿ’ ಎಂದು ಅಳತೊಡಗಿದಳು. ನನ್ನ ಮನಸ್ಸು ಅಮ್ಮನ ಸುತ್ತ ತಿರುಗುತ್ತಿತ್ತು! ಅಂದು ಮಹಾಶಿವರಾತ್ರಿ ದಿನ. ನನ್ನಮ್ಮ ನಮ್ಮನ್ನೆಲ್ಲಾ ಬಿಟ್ಟು 28.02.1976ರಂದು ಅಗಲಿದಳು.
ಅಪ್ಪ ಕುರುಬರ ಹಟ್ಟಿಯ ಬೀರಮ್ಮಜ್ಜಿಗೆ ಹೇಳಿಕಳಿಸಿದ. ಆಕೆ ಬಂದಳು. ಆಕೆಯ ಜತೆ ಇನ್ನೊಂದಿಷ್ಟು ಜನ ಹೆಂಗಸರು ಬಂದರು. ಅವರೆಲ್ಲಾ ಅಮ್ಮನ ಗುಣಗಾನವನ್ನು ಮಾಡಿದರು. ಮಗ್ಗುಲಲ್ಲಿದ್ದ ಮಾದಿಗರಹಟ್ಟಿ-ಇನ್ನೊಂದು ಬದಿಯಿದ್ದ ಹೊಲೆಯರ ಹಟ್ಟಿಯ ಜನಕ್ಕೆ ಸುದ್ದಿ ಹಬ್ಬಿ ಜನ ಸಮೂಹವೇ ಬರತೊಡಗಿತು. ಹಂಚೀಪುರದ ಅತ್ತೆ ಬಂದವಳೇ ನಮಗೆಲ್ಲಾ ಧೈರ್ಯ ಹೇಳಿದಳು. ಬೆಂಗಳೂರಿನಲ್ಲಿದ್ದ ನಮ್ಮ ದೊಡ್ಡಕ್ಕ, ದೊಡ್ಡಣ್ಣ, ಇತರೆ ಸಂಬಂಧಿಗಳಿಗೆ ಸುದ್ದಿ ಹೋಯಿತು. ಅವರೆಲ್ಲಾ ಮಧ್ಯಾಹ್ನದ ಹೊತ್ತಿಗೆ ಬಂದರು! ಜನರೆಲ್ಲಾ ಅಮ್ಮನ ಗುಣಗಾನ ಮಾಡುತ್ತಲೇ ಇದ್ದರು. ಆಕೆಯ ಕ್ಷಮಾಗುಣ, ಸಹಾಯಹಸ್ತ, ಕೊಡುಗೈ ಸ್ವಭಾವಗಳನ್ನು ನೆನೆದು ಕಣ್ಣೀರಿಟ್ಟರು. ನಮ್ಮ ಅಮ್ಮ ಸಂಪಾದಿಸಿದ್ದು ಜನರ ಪ್ರೀತಿ ವಿಶ್ವಾಸವನ್ನು ಮಾತ್ರ. ಸಂಜೆಯ ಹೊತ್ತಿಗೆ ದೊಡ್ಡ ಬಾವಿಯ ಸಮೀಪ ಸಮಾಧಿಯನ್ನು ಮಾಡಲಾಯಿತು! ನಡುಮನೆಯಲ್ಲಿ ದೀಪವನ್ನು ಹಚ್ಚಿಡಲಾಯಿತು. ಬಂದ ಜನ ಸ್ವಲ್ಪಸ್ವಲ್ಪವೇ ಕರಗಿದರು. ಬೆಂಗಳೂರಿನಿಂದ ಬಂದ ನಮ್ಮ ದೊಡ್ಡಕ್ಕ ಪಾರ್ವತಮ್ಮ-ನಮ್ಮಪ್ಪನ ಜೊತೆ ಕುಳಿತು ಕಳೆದ ನಾಲ್ವತ್ತು ವರ್ಷಗಳ ಅಮ್ಮನ ಬದುಕನ್ನು ಸ್ಮರಣೆ ಮಾಡಿಕೊಂಡರು! ನಾನು ಅವರಿಬ್ಬರ ಮಾತುಗಳನ್ನು ಗೋಡೆಗೊರಗಿಕೊಂಡು ಕೇಳುತ್ತಲಿದ್ದೆ. ನಾನು ರಾತ್ರಿ ಎಷ್ಟು ಹೊತ್ತಿಗೆ ಮಲಗಿದೆನೋ ಗೊತ್ತಿಲ್ಲ. ಬೆಳಿಗ್ಗೆ ಎದ್ದಾಗ ಅಮ್ಮ ಇಲ್ಲವೆಂಬ ಭಾವ ಬಂದಾಗ ಕಣ್ಣೀರು ಕಟ್ಟೆಯೊಡೆದು ಜೋರಾಗಿ ಅಳಲಾರಂಭಿಸಿದೆ. ನನ್ನ ಅಳುವನ್ನು ಕೇಳಿ ಜಯಕ್ಕ-ಪಾರ್ವತಕ್ಕ ತಂಗಿರತ್ನ ಬಂದು ನನ್ನ ಕೈಹಿಡಿದುಕೊಂಡರು. ನನ್ನ ದೊಡ್ಡಕ್ಕ ನನ್ನನ್ನು ಒರಗಿಸಿಕೊಂಡು ಕುಳಿತಳು.
ಪ್ರತಿನಿತ್ಯ ಅಮ್ಮನನ್ನು ನೆನೆಯುತ್ತಿದ್ದೆ. ಜಯಕ್ಕನಿಗೆ ಶಿಕ್ಷಕಿ ಕೆಲಸ ಸಿಗಬೇಕು. ತಂಗಿ ರತ್ನ ಮತ್ತು ಮೀನಾಕ್ಷಿಗೆ ಮದುವೆಯಾಗಬೇಕು. ನಾನು ಇನ್ನೂ ಅತಂತ್ರದ ಸ್ಥಿತಿಯಲ್ಲಿ ನಿಂತಿದ್ದೇನೆ. ನಿಶ್ಚಿತವಾದ ಆದಾಯವಿಲ್ಲ, ವಯಸ್ಸು ಓಡುತ್ತಿದೆ. ಇದೆಲ್ಲಾ ನನ್ನ ಮನಸ್ಸನ್ನು ಆವರಿಸಿತು. ಏನು ಮಾಡಬೇಕೆಂದು ತೋಚುತ್ತಿಲ್ಲ. ಇದೇ ಚಿಂತೆಯಲ್ಲೇ ಮರ‍್ನಾಲ್ಕು ದಿನ ಕಳೆದೆ. ಅಮ್ಮ ಸತ್ತ ಮಾರನೆಯ ದಿನದ ಹಾಲು-ತುಪ್ಪದ ಶಾಸ್ತ್ರ ಮಾಡಲಾಯಿತು. ಅಮ್ಮ ತೀರಿಕೊಂಡದ್ದು ಮಹಾಶಿವರಾತ್ರಿ ದಿನದಂದು. ಅವಳು ಸರಿಯಾದ ದಿನದಂದೇ ಜೀವಬಿಟ್ಟಳು. ಒಬ್ಬರಿಗೂ ಕೇಡನ್ನು ಬಯಸದೆ, ಸದಾ ಒಳಿತನ್ನೇ ಬೇಡುತ್ತಿದ್ದ ಆ ಮಹಾತಾಯಿಯ ಹದಿಮೂರನೆಯ ದಿನದ ಕಾರ್ಯವನ್ನು ಮುಗಿಸಿ ಬೆಂಗಳೂರಿನ ಕಡೆ ಹೋಗಲು ಸಿದ್ಧನಾದೆ. ಅಮ್ಮ ಸತ್ತ ಮೂರನೆಯ ದಿನಕ್ಕೆ ಹೋದ ದೊಡ್ಡಕ್ಕ ಹದಿಮೂರನೆಯ ದಿನಕ್ಕೆ ಬಂದಳು. ನಾನು ಜಯಕ್ಕ, ತಂಗಿ ರತ್ನ, ಮೀನಾಕ್ಷಿ ಇವರಿಗೆ ಸಾಂತ್ವನ ಹೇಳಿ ಮುಂದಿನ ಬದುಕನ್ನು ಕಟ್ಟಿಕೊಳ್ಳಲು ಸಿದ್ಧನಾದೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.