ಕವಿತೆಯ ಹೊರತು ಬೇರೇನನ್ನೂ ಬರೆಯದಿರುವ ಹಾಗೂ ಬರೆದುದೆಲ್ಲವನ್ನೂ ಕವಿತೆಯಾಗಿಸುವ ಹಟ ತೊಟ್ಟವರಂತೆ ಕಾವ್ಯಧ್ಯಾನದಲ್ಲಿ ಮುಳುಗಿರುವ ಆರಿಫ್ ರಾಜಾ ಅವರ ಹೊಸ ಕವನ ಸಂಕಲನ ‘ಎದೆ ಹಾಲಿನ ಪಾಳಿ.’ ಮೊದಲ ಸಂಕಲನದ ಕವಿಗಳೇ ಹೆಚ್ಚಾಗಿರುವ ಕನ್ನಡ ಕಾವ್ಯಸಂದರ್ಭದಲ್ಲಿ, ಐದನೇ ಸಂಕಲನದ ವೇಳೆಗೂ ಸಹೃದಯರ ಮನಸ್ಸಿನಲ್ಲಿ ಕಾವ್ಯದಲೆಗಳನ್ನು ಮೂಡಿಸುವ ಕಸುವು ಉಳಿಸಿಕೊಂಡಿರುವುದು ಹಾಗೂ ಕಸುಬುದಾರಿಕೆಯನ್ನು ಸತತವಾಗಿ ನಿಶಿತಗೊಳಿಸಿಕೊಳ್ಳುತ್ತಿರುವುದು ಕವಿಯಾಗಿ ಆರಿಫ್‌ರ ಬಹುದೊಡ್ಡ ಸಾಧನೆ. ಅವರ ಓರಗೆಯ ಕವಿಗಳು ಕಾವ್ಯಪಯಣದಲ್ಲಿ ಈಗ ಎಲ್ಲಿ ನಿಂತಿದ್ದಾರೆ ಎನ್ನುವುದನ್ನು ಗಮನಿಸಿದರೆ ಆರಿಫ್‌ರ ಸಾಧನೆ ನಿಚ್ಚಳವಾಗುತ್ತದೆ.
‘ಒಂದು ಮುತ್ತಿನ ಭಾಷೆ’ ಹೆಸರಿನ ಕವಿತೆ ಕೊನೆಗೊಳ್ಳುವುದು ಹೀಗೆ: ‘ನನಗೆ ಗೊತ್ತಿರುವುದಿಷ್ಟೆ / ಒಂದು ಮುತ್ತಿನ ಭಾಷೆ / ಒಂದು ತುತ್ತಿನ ಭಾಷೆ / ಒಂದು ಹೊತ್ತಿನ ಭಾಷೆ’. ಈ ಸಾಲುಗಳೊಂದಿಗೆ‘ಕಾವ್ಯ ನನ್ನ ಹೊರಗಿನ ಗದ್ದಲವಲ್ಲ, ನನ್ನೊಳಗಿನ ಗದ್ದಲವೂ ಹೌದು’ ಎನ್ನುವ ಕವಿಯ ಮಾತನ್ನೂ ನೆನಪಿಸಿಕೊಂಡರೆ, ಆರಿಫ್‌ರ ಕಾವ್ಯದ ಪ್ರವೇಶಕ್ಕೊಂದು ದಾರಿ ದೊರೆಯುತ್ತದೆ. ಮುತ್ತು, ತುತ್ತು ಹಾಗೂ ಹೊತ್ತು – ಇವೆಲ್ಲವೂ ಹಸಿವಿನ ಬೇರೆ ಬೇರೆ ರೂಪಗಳಷ್ಟೆ. ಈ ಬಹುರೂಪಿ ಹಸಿವಿನ ಧ್ಯಾನ ವರ್ತಮಾನದೊಂದಿಗಿನ ಅನುಸಂಧಾನವಲ್ಲದೆ ಬೇರೇನಲ್ಲ. ಈ ಅನುಸಂಧಾನ ಯಾವ ಬಗೆಯದೆನ್ನುವುದಕ್ಕೆ ಪ್ರಾತಿನಿಧಿಕವಾಗಿ ‘ಈ ನೆತ್ತರು ಎಷ್ಟೊಂದು ಹರಾಮಿ’, ‘ಶಾಪ’ ಹಾಗೂ ‘ಲೈವ್ ಷೋ’ ಕವಿತೆಗಳನ್ನು ಗಮನಿಸಬಹುದು.
‘ಲೈವ್ ಷೋ’ ಕವಿತೆ ಮೂರು ದೃಶ್ಯಗಳ ಶಬ್ದಚಿತ್ರ. ಮೊದಲ ದೃಶ್ಯದಲ್ಲಿ ವ್ಯಕ್ತಿಯೊಬ್ಬನನ್ನು ಬೆಡ್‌ರೂಮಿನಿಂದ ಬಯಲಿನ ಚೌಕಕ್ಕೆ ಎಳೆತಂದು ಕೈಗಳ ಕಟ್ಟಿ, ಹಿಂಬದಿಯಿಂದ ಗುಂಡು ಹಾರಿಸುವ ಘಟನೆ ಟೀವಿಯಲ್ಲಿ ಬಿತ್ತರಗೊಳ್ಳುತ್ತಿದೆ. ಆ ದೃಶ್ಯದ ಬೆನ್ನಿಗೇ ಫೇರ್ ಆ್ಯಂಡ್ ಲವ್ಲಿ, ಸೋಪು, ಶಾಂಪು, ಪರ್‌ಫ್ಯೂಮ್‌ಗಳ ಜಾಹೀರಾತು. ನಂತರದ ದೃಶ್ಯದಲ್ಲಿ ಕ್ಯಾಮೆರಾ ಎದುರು ನಿಂತಿರುವ ಗುಂಡು ಹಾರಿಸಿದ ಸಮವಸ್ತ್ರಧಾರಿಗಳು – ‘ನಾವು ನಮ್ಮ ಕರ್ತವ್ಯ ಮಾಡಿದ್ದೇವೆ ಅಷ್ಟೇ’ ಎಂದು ನಿರ್ಲಿಪ್ತವಾಗಿ ಹೇಳುತ್ತಿದ್ದಾರೆ. ಏನನ್ನು ಬಿಡಿಸಿ ಹೇಳುವುದು, ದೇಶಪ್ರೇಮದ ಧರ್ಮನಿಷ್ಠೆಯ ಈ ಜಗತ್ತಿನಲ್ಲಿ ಎಲ್ಲರೂ ಮಾಡುತ್ತಿರುವುದು ಅವರವರ ಕರ್ತವ್ಯಗಳನ್ನಷ್ಟೇ.
ಎದುರಾಳಿಯ ಎರಡು ಕಣ್ಣು ಹೋಗುವುದಾದರೆ ನನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ ಎನ್ನುವ ಎಲ್ಲ ಕಾಲದ ಮನೋಭಾವ ಆಧುನಿಕ ಸಂದರ್ಭದಲ್ಲಿ ಮತ್ತಷ್ಟು ತೀವ್ರಗೊಂಡಿರುವುದನ್ನು ‘ಶಾಪ’ ಕವಿತೆ ತಣ್ಣಗೆ ಕಟ್ಟಿಕೊಡುತ್ತದೆ. ನನಗಾಗುವ ನೋವು ಅವನನ್ನು ಗಾಯಗೊಳಿಸುವುದೆನ್ನುವ ಗುಟ್ಟು ತಿಳಿದ ಅವನು, ‘ತನಗೆ ತಾನೇ ಹಿಂಸಿಸಿಕೊಂಡು / ದಿನಾ ರಾತ್ರಿ / ನನಗೆ ನೋವುಣಿಸುತ್ತಿದ್ದಾನೆ.’ ಹಿಂಸೆಯೆನ್ನುವುದು ಜೀವನವಿಧಾನವೇ ಆಗಿರುವ ಸಂದರ್ಭ ಶಾಪವಲ್ಲದೆ ಮತ್ತಿನ್ನೇನು? ಈ ‘ಶಾಪ’ವನ್ನು ಚಿತ್ರಿಸಲಿಕ್ಕೆ ಕವಿಗೆ ಬೇಕಾಗಿರುವುದು ಇಪ್ಪತ್ತಾರು ಶಬ್ದಗಳಷ್ಟೇ ಎನ್ನುವುದು ಕಾವ್ಯಕ್ಕಿರುವ ಶಕ್ತಿಯನ್ನೂ ಕವಿಯ ಶಕ್ತಿಯನ್ನೂ ಸೂಚಿಸುವಂತಿದೆ.
ಸರಿ, ಹಿಂಸೆಯೇ ಸುಖವೆನ್ನಿಸುತ್ತಿರುವುದಕ್ಕೆ ಕಾರಣವೇನಿರಬಹುದು? ಈ ಪ್ರಶ್ನೆಗೆ ಉತ್ತರವನ್ನು ‘ಈ ನೆತ್ತರು ಎಷ್ಟೊಂದು ಹರಾಮಿ‘ ಕವಿತೆಯಲ್ಲಿ ಹುಡುಕಬಹುದು. ‘ನನ್ನ ಗರ್ಭದಿಂದ ಚಿಮ್ಮಿದ / ಮೊತ್ತ ಮೊದಲ ನೆತ್ತರ ಹನಿ / ಈ ನೆಲಕ್ಕೆ ಬಿದ್ದು ಗೊಬ್ಬರವಾಯಿತು ಗೆಳೆಯಾ’ ಎಂದು ಆರಂಭವಾಗುವ ನೆತ್ತರ ಕವಿತೆ, ‘ಎಲೆ ಮಿತ್ರಾ / ನೆತ್ತರಿನಿಂದ ದೂರವೆಂದರೆ / ಏನೆಂದು ಗೊತ್ತಾ ನಿನಗೆ? / ನೆತ್ತರಿಗೆ ಹತ್ತಿರವೆಂದರೆ / ಎಷ್ಟೊಂದು ಹತ್ತಿರ ಗೊತ್ತಾ ಕೊನೆಗೆ?’ ಎಂದು ಕೊನೆಗೊಳ್ಳುತ್ತದೆ. ವರ್ತಮಾನದ ದಂದುಗಗಳಿಗೆ ಬೆನ್ನುಹಾಕಿ – ಹಸಿವು, ಬಡತನ, ಶೋಷಣೆಯನ್ನೂ ರಮ್ಯವಾಗಿ ಚಿತ್ರಿಸುವಸೌಂದರ್ಯೋಪಾಸಕರು, ರಸತಜ್ಞರನ್ನು ತಿವಿಯುವಂತಿರುವ ಈ ಕವಿತೆ, ವ್ಯಕ್ತಿ ಹಾಗೂ ಸಮಷ್ಟಿಯ ಪ್ರತಿ ಹಂತದಲ್ಲೂ ನೆತ್ತರ ಕಲೆ ಇರುವುದನ್ನು ಕಾಣಿಸುತ್ತದೆ. ಈ ರಕ್ತ ಎಷ್ಟೊಂದು ಬಗೆಯದು: ಮಗುವಿನ ರಕ್ತ, ವೃದ್ಧೆಯ ರಕ್ತ, ಲಂಗ ದಾವಣಿಗಂಟಿದ ಹುಡುಗಿಯ ಚೀರುರಕ್ತ, ಕಂಬನಿಯ ಸೋಗಿನಲಿ ಜಿನುಗುವ ರಕ್ತ, ಬರಿಗಾಲಲಿ ನಡೆದೂ ನಡೆದೂ ದಾಸವಾಳದ ದಳಗಳಾದ ಕೊರೊನಾ ಯಾತ್ರಿಗಳ ಕಡುಗೆಂಪು ರಕ್ತ, ಬರಗಾಲದ ಕೆರೆಯಂತಹ ಹಿಮ್ಮಡಿಯಲಿ ಹಸಿಬಿಸಿಯಾಗಿ ಹೆಪ್ಪುಗಟ್ಟಿದ ರಕ್ತ... ಹೀಗೆ ಎಲ್ಲೆಡೆ ರಕ್ತವೇ ಇದ್ದರೂ, ರಕ್ತವೆಂದರೆ ಹಿಂಜರಿಯುವವರನ್ನು ಕವಿತೆ ಆಶ್ಚರ್ಯದಿಂದ ಪ್ರಶ್ನಿಸುತ್ತದೆ: ‘ನಿನ್ನ ತಾಯಿಯ ತೊಡೆಸಂದಿಯಿಂದ ಬರುವಾಗಲೇ / ನೆತ್ತರ ಸ್ನಾನ ಮಾಡಿ ಬಂದವ ನೀನು / ಈಗ ಬೀದಿಯಲ್ಲಿ ಬಿದ್ದ ರಕ್ತವ ನೋಡಿ / ಮಾರು ದೂರ ಸರಿದು ನಿಲ್ಲುತ್ತೀಯಾ!’
ತುದಿಮೊದಲಿಲ್ಲದ ಸಂಕಟಗಳ ಕುರಿತು ಹಾಡಿದರೂ, ‘ಮುರಿದ ಆಟಿಕೆಯೊಂದಿಗೆ ಮಗು /ಹೇಗೆ ತಿಳಿಸಿ ಹೇಳುವುದು ಶಿವನೆ /ಮುರಿಯುವುದು ಮಾತ್ರ ಮನುಷ್ಯರ ಕೆಲಸ /ಜೋಡಿಸುವುದಲ್ಲ’ ಎನ್ನುವ ವಿಷಾದವಿದ್ದರೂ ಆರಿಫ್‌ರ ಕಾವ್ಯ ಜೀವಕಾರುಣ್ಯದ ಬಗ್ಗೆ ಭರವಸೆ ಕಳೆದುಕೊಳ್ಳುವುದಿಲ್ಲ. ‘ಕೊಲ್ಲುವುದಕ್ಕೆಂದೇ ಬಂದವರು ನೀವು / ಕೊಂದಾದ ಮೇಲೆ ಏನು ಮಾಡುವಿರಿ?’ (ಎದೆ ಹಾಲಿನ ಪಾಳಿ) ಎಂದು ಹಿಂಸೆ–ಸಾವಿನ ನಿರರ್ಥಕತೆಯತ್ತ ಗಮನಸೆಳೆಯುವ ಕವಿ, ಈ ಕ್ಷೋಭೆಯ ಕೊನೆಗೆ ಜಗತ್ತು ತಾಯಿಯ ಮೊಲೆ ಹಾಲಿನತ್ತ ಮೊಗ ಹೊರಳಿಸಬೇಕಾದುದು ಅನಿವಾರ್ಯ ಎಂದು ನಂಬಿದ್ದಾರೆ. ‘ಯಾರೇನ ಹೇಳಲಿ / ಇದು ಎದೆ ಹಾಲಿನ ಪಾಳಿ / ನೆತ್ತರೋ ಹಾಲೊ / ಕೆಚ್ಚಲಿಗೆ ಬಾಯಿ ಹಚ್ಚಿದವರೇ ಎಲ್ಲಾ’ ಎನ್ನುವ ದರ್ಶನ ಇಲ್ಲಿದೆ.
ಶಬ್ದ ಸದ್ದಾಗಿಯಷ್ಟೇ ಕೊನೆಗೊಳ್ಳುವ ಉದಾಹರಣೆಗಳೇ ಹೆಚ್ಚಾಗಿರುವ ಸಂದರ್ಭದಲ್ಲಿ ಭಾಷೆಯ ಧ್ವನಿಶಕ್ತಿಯ ಬಗ್ಗೆ ಆರಿಫ್‌ರಂಥ ಕವಿಗಳು ನಂಬಿಕೆ ಮೂಡಿಸುತ್ತಾರೆ.ಭಾಷೆ, ಭಾವಕೋಶ ಹಾಗೂ ವಿಚಾರ ಅಭಿನ್ನವಾಗಿರುವ ಅವರ ಕವಿತೆಗಳು ಓದುಗರನ್ನು ದಣಿಸುವುದಿಲ್ಲ. ಅರ್ಥದ ಪದರುಗಳನ್ನು ಬಿಟ್ಟುಕೊಟ್ಟೂ ಬೆಡಗಿನಂತೆ ಉಳಿಯುವ, ಪ್ರತಿ ಓದಿನೊಂದಿಗೂ ಬೆಳೆಯುವ ರಚನೆಗಳು ಅವರವು. ಮನಸ್ಸನ್ನು ಪ್ರಪುಲ್ಲಗೊಳಿಸುವ ಜೊತೆಜೊತೆಗೇ ಕದಡುವ ಕಾವ್ಯಗುಣದ ಅನುಭವಕ್ಕೆ ಆರಿಫ್‌ರ ಕಾವ್ಯವನ್ನು ಓದಬೇಕು.
ಮನು ವಿ. ದೇವದೇವನ್ ಅವರ ಮುನ್ನುಡಿ ಆರಿಫ್ ಕಾವ್ಯವನ್ನು ಬೆಲೆಗಟ್ಟುವ ಕೆಲಸ ಮಾಡಿದೆ. ಮುನ್ನುಡಿಕಾರರ ಕಾವ್ಯನೋಟಗಳು ಕುತೂಹಲಕರವಾಗಿವೆ. ಆದರೆ, ಕನ್ನಡಕಾವ್ಯ ಪರಂಪರೆಯಲ್ಲಿ ಆರಿಫ್‌ರನ್ನು ಎಲ್ಲಿ ಮತ್ತು ಹೇಗೆ ಗುರ್ತಿಸಬೇಕು ಎನ್ನುವ ಪ್ರಯತ್ನದಲ್ಲಿ ಅವರು ಕನ್ನಡ ಕಾವ್ಯಕ್ಷಿತಿಜವನ್ನೇ ಸಂಕುಚಿತಗೊಳಿಸಿದಂತೆ ಕಾಣಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.