ADVERTISEMENT

ಪುಸ್ತಕ ವಿಮರ್ಶೆ | ಅಭಿನಯ ಜಂಗಮನ ಹಿಂದೆಬಿದ್ದು...

ಪ್ರೀತಿ ನಾಗರಾಜ
Published 8 ಅಕ್ಟೋಬರ್ 2022, 19:30 IST
Last Updated 8 ಅಕ್ಟೋಬರ್ 2022, 19:30 IST
ಮುಖಪುಟ
ಮುಖಪುಟ   

ನೀವು ನಟರಾಗಿರಬಹುದು ಅಥವಾ ನಟನೆಯ ಕನಸು ಕಾಣುತ್ತಿರುವವರೂ ಆಗಿರಬಹುದು. ಇಲ್ಲವೆ ಸುಮ್ಮನೆ ನಟನೆಯ ಬಗ್ಗೆ ಕೌತುಕ ಹೊಂದಿರುವವರೂ ಆಗಿರಬಹುದು. ರಂಗ ತಂಡಗಳೇ ಒಂದಾಗಿ ಮಾಡಿರುವ ಥಿಯೇಟರ್ ತಾತ್ಕಾಲ್ ಬುಕ್ಸ್‌ನ ಪ್ರಕಟಣೆ, ಅಭಿನಯದ ಮೇಷ್ಟ್ರು ಮೌನೇಶ ಬಡಿಗೇರರ ‘ಅಭಿನಯ ಕಲಿಸಲು ಸಾಧ್ಯವಿಲ್ಲ’ ಪುಸ್ತಕವನ್ನು ಒಮ್ಮೆ ಓದಬೇಕು. ಅದರಲ್ಲಿ ಇರುವ ಒಳನೋಟಗಳು ನಿಮ್ಮ ಹಾಗೂ ಪುಸ್ತಕದ ನಡುವಿನ ಏಕಾಕಿತನದ ಸಂಸರ್ಗದಲ್ಲಿ ಅರಳುವುದು ಖಚಿತ. ‘ಏನನ್ನೋ ಮಾಡಲು ಸಾಧ್ಯವಿಲ್ಲ’ ಎಂದು ಹೇಳುವುದು ರಿವರ್ಸ್ ಸೈಕಾಲಜಿಯ ಭಾಗವೇ ಸರಿ. ‘ಇದು ಆಗಲ್ಲ ಎಂದರೆ ಯಾಕಾಗಲ್ಲ’ ಎನ್ನುವುದೂ ಒಂದು ಮಾರ್ಗದ ಹುಡುಕಾಟವೇ. ಈ ಪುಸ್ತಕದಲ್ಲಿ ಅದೇ ಹುಡುಕಾಟ ನಡೆದಿದೆ.

ಕನ್ನಡದಲ್ಲಿ ಅಭಿನಯದ ಬಗ್ಗೆ ಬಂದಿರುವ ಪುಸ್ತಕಗಳು ಬಹಳ ಕಡಿಮೆ ಎಂದೇ ಹೇಳಬೇಕು. ನೀನಾಸಂ ಸಂಸ್ಥಾಪಕ ಕೆ.ವಿ. ಸುಬ್ಬಣ್ಣನವರಿಂದ (ಕೋನ್‌ಸ್ತಂತಿನ್ ಸ್ತಾನಿಸ್ಲಾವ್ಸ್ಕಿ ವಿರಚಿತ ಪುಸ್ತಕದ ಅನುವಾದ ‘ರಂಗದಲ್ಲಿ ಅಂತರಂಗ’) ಮೊದಲಾಗಿ ಹಲವರ ಉತ್ತಮ ಕೃತಿಗಳು ಅಭಿನಯದ ಬಗ್ಗೆ ಹೆಚ್ಚು ತಿಳಿಯುವ ಆಸೆ ಇರುವ ಮನಸ್ಸುಗಳಿಗೆ ದಕ್ಕಿವೆ. ರಂಗ ದಿಗ್ಗಜ ಶ್ರೀರಂಗರು ಬರೆದ ‘ನಾಟ್ಯ ಶಾಸ್ತ್ರದ ನಟ’, ಹಿರಿಯ ರಂಗನಿರ್ದೇಶಕ ಪ್ರಸನ್ನ ಅವರು ಬರೆದಿರುವ ‘ನಟನೆಯ ಪಾಠಗಳು’ ಕೃತಿಗಳು ಕೂಡ ಇಲ್ಲಿ ಉಲ್ಲೇಖನಾರ್ಹ.

ರಂಗಾಯಣದ ಹಿರಿಯ ಕಲಾವಿದರಾದ ರಾಮನಾಥ ಅವರ ‘ಡ್ರಾಮಾ ಕ್ಲಬ್’ ಕೃತಿಯಲ್ಲಿ ನಟನೆಯನ್ನು ಕೇಂದ್ರೀಕರಿಸಿ ಸಾಕಷ್ಟು ಅಂಶಗಳನ್ನು ಹೇಳಲಾಗಿದೆ. ಹಿರಿಯ ರಂಗ ನಿರ್ದೇಶಕ ಶ್ರೀಪಾದ ಭಟ್ಟರು ನಟನೆಯನ್ನು ರೂಢಿಸಿಕೊಳ್ಳುವ ಬಗ್ಗೆ ‘ನಟನೆಯ ಕೈಪಿಡಿ’ ಎಂಬ ಪುಟ್ಟ ಹೊತ್ತಗೆಯನ್ನು ತಂದಿದ್ದಾರೆ. ಇವಿಷ್ಟೂ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ನೋಡಿದರೆ ಕನ್ನಡದಲ್ಲಿ ಅಭಿನಯದ ಬಗ್ಗೆ ಇನ್ನೂ ಹೆಚ್ಚಿನ ಸಾಹಿತ್ಯ ಬೇಕೆನಿಸುವುದು ಸುಳ್ಳಲ್ಲ.

ADVERTISEMENT

ರಂಗಭೂಮಿಗೆ ಬರುತ್ತಿರುವ ಎಳೆವಯಸ್ಸಿನ ನಟರನ್ನು ನೋಡಿದರೆ ಮನಸ್ಸು ತುಂಬಿ ಬರುತ್ತದೆ. ಈ ಹೊತ್ತು ನಾವು ನೋಡುತ್ತಿರುವ ರಂಗಭೂಮಿ ಎಪ್ಪತ್ತು-ಎಂಬತ್ತರ ದಶಕದ ಅತ್ಯಂತ ಸೃಜನಶೀಲ ರಂಗಭೂಮಿ ಅಲ್ಲ. ರಂಗಭೂಮಿಯನ್ನು ಮೀರಿದ ನೂರಾರು ಆಕರ್ಷಣೆಗಳ ನಡುವೆಯೂ ಇಲ್ಲಿಗೆ ಬಂದು ಪ್ರೊಡಕ್ಷನ್ನು, ಸ್ಕ್ರಿಪ್ಟು, ರೀಡಿಂಗು, ರಿಹರ್ಸಲ್ಲು, ಸ್ಕ್ರೀನ್, ಲೈಟು, ಮ್ಯೂಸಿಕ್ಕು, ಕಾಸ್ಟ್ಯೂಮು ಎಂದೆಲ್ಲ ಯೋಚಿಸುತ್ತಾ ರೋಮಾಂಚನದಿಂದ ಕೆಲಸ ಮಾಡುವುದನ್ನು ಕಂಡರೆ ಒಂದು ಕಡೆ ಖುಷಿ, ಇನ್ನೊಂದು ಕಡೆ ಆತಂಕ. ಇವರ ರಂಗಭೂಮಿಯ ಕನಸು ನನಸಾಗದೆ ಹೋದರೆ ಇದರಿಂದ ದೂರವೇ ಆಗಿಬಿಡುತ್ತಾರೇನೋ ಎನ್ನುವ ಪುಕಪುಕ ಬೇರೆ!

‘ಅಭಿನಯ ಕಲಿಸಲು ಸಾಧ್ಯವಿಲ್ಲ’ ಎನ್ನುವ ಪುಸ್ತಕ ಕೂಡ ತನ್ನಿಂತಾನೇ ಸಂಪೂರ್ಣವಲ್ಲ. ಇದು ಎಲ್ಲಾ ಪ್ರಶ್ನೆಗಳಿಗೂ ಉತ್ತರವಲ್ಲ ಅಥವಾ ಸೂಕ್ತ ಹಾಗೂ ಪ್ರಬುದ್ಧ ಅಭಿನಯ ತರಬೇತಿಗೆ ಪರ್ಯಾಯವೂ ಅಲ್ಲ. ಈ ಮಾತನ್ನು ಇಲ್ಲಿ ಮೌನೇಶರೂ ಹೇಳಿಯೇ ಹೇಳುತ್ತಾರೆ. ಕಲಿಸಲು ಸಾಧ್ಯವಿಲ್ಲ; ಆದರೆ, ನೀವೇ ಕಲಿಯಲು ಸಾಧ್ಯವಿದೆ ಎನ್ನುವ ಬೆಳಕಿನ ಹೊಳಹನ್ನೂ ಅವರೇ ತೋರುತ್ತಾರೆ. ಇದರಲ್ಲಿ ಅವರು ಮಂಡಿಸುವ ಪ್ರತಿಯೊಂದು ಮಾತಿಗೂ ಭರಪೂರ ಉದಾಹರಣೆಗಳನ್ನು ಅವರೇ ನೀಡುತ್ತಾ, ಅವರ ಮಾತುಗಳು ಎದೆಗಿಳಿದು ಸಂಪೂರ್ಣವಾಗಿ ಮನದಟ್ಟಾಗುವಂತೆ ಹೇಳುತ್ತಾರೆ. ಏಕಲವ್ಯನ ಉದಾಹರಣೆಯಿಂದ ಮೊದಲುಗೊಂಡು ನೀಡುವ ಪ್ರತಿಯೊಂದು ಉದಾಹರಣೆ ಮನಸ್ಸಿಗೆ ನಾಟಿ ಅಲ್ಲೇ ನೆಲೆ ನಿಲ್ಲುವ ಹಾಗೆ ವಿಷಯ ಮಂಡನೆಯಾಗುತ್ತದೆ.

ಪುಸ್ತಕದ ಓದಿನುದ್ದಕ್ಕೂ ಅವರೇ ಕೂತು ಮಾತನಾಡುತ್ತಿದ್ದಾರೆ ಎಂತಲೇ ಅನಿಸುತ್ತದೆ. ಒಬ್ಬ ನಟ/ನಟಿ ಕೇಳಿಕೊಳ್ಳಬೇಕಾದ ಮೂಲಭೂತವಾದ ಪ್ರಶ್ನೆಗಳು, ಪಾತ್ರಕ್ಕೆ ಮಾಡಿಕೊಳ್ಳಬೇಕಾದ ಸಿದ್ಧತೆ, ಓದು, ಆಂಗಿಕ-ವಾಚಿಕ ಅಭಿನಯ, ಪಾತ್ರ ಪೋಷಣೆ, ವಿವಿಧ ಬಗೆಯ ಭಾವಗಳು, ಪಾತ್ರಕ್ಕೆ ಬೇಕಾದ ವಿವಿಧ ಭಾವಗಳನ್ನು ಹೊಂದಲು ಬೇಕಾದ ಓದು ಹಾಗೂ ನೋಡುವಿಕೆ, ಅಲ್ಲಲ್ಲಿ ಕಥೆಗಳು, ನಿದರ್ಶನಗಳು, ಸ್ಕ್ರಿಪ್ಟಿನ ಆಯ್ದ ಭಾಗಗಳು, ಎಲ್ಲವೂ ಪುಸ್ತಕವನ್ನು ಅತ್ಯಂತ ಪ್ರಸ್ತುತವಾಗಿಸಿವೆ.

ನಟನೆಯನ್ನು ಆರ್ಥಿಕವಾಗಿ ಲಾಭವಿಲ್ಲದ ಕೆಲಸ ಎಂದು ಹೀಗಳೆದು ನೋಡುವ ಜನರೂ ಈ ಪುಸ್ತಕವನ್ನೊಮ್ಮೆ ಓದಿದರೆ ನಟನೆಯ ಅಭಿಮಾನಿಗಳೇ ಆಗಿಬಿಡುವುದು ಖಂಡಿತ. ಇದರಲ್ಲಿ ಕೊರತೆಗಳು ಇಲ್ಲವೆಂದಲ್ಲ. ಎಲ್ಲವನ್ನೂ ಸರಳೀಕರಿಸಿ ನೋಡುವ ದೃಷ್ಟಿಕೋನ ಒಮ್ಮೊಮ್ಮೆ ಅಪಾಯಕಾರಿ ಆಗಿ ಕಾಣಬಹುದು. ಅದನ್ನು ಮೀರಬೇಕಾದ ಅವಶ್ಯಕತೆ ಇದ್ದೇ ಇದೆ. ಆದರೆ, ಅಭಿನಯ ಶಾಲೆಗಳಿಗೆ ಇದೊಂದು ಅತ್ಯುತ್ತಮ ಪಠ್ಯ ಎನ್ನುವುದು ಸುಳ್ಳಲ್ಲ.

ಕೃತಿ: ಅಭಿನಯ ಕಲಿಸಲು ಸಾಧ್ಯವಿಲ್ಲ
ಲೇ: ಮೌನೇಶ ಬಡಿಗೇರ
ಪ್ರ: ಥಿಯೇಟರ್‌ ತತ್ಕಾಲ್‌ ಬುಕ್ಸ್‌
ಸಂ: 9901234161

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.