ಈ ಪುಸ್ತಕ ಒಂದು ಬಗೆಯ ಬೌದ್ಧಿಕ ಆತ್ಮಚರಿತ್ರೆಯಿದ್ದಂತೆ. ಇಲ್ಲಿ ನಮ್ಮ ಮುಖ್ಯ ಕವಿ, ವಿದ್ವಾಂಸ ಕೆ.ವಿ. ತಿರುಮಲೇಶರ ಚಿಂತನೆಯ ನೆಲೆಗಟ್ಟಿರುವ ಆತ್ಮೀಯ ಸಂಸ್ಮರಣೆಗಳು, ಸಾಹಿತ್ಯ ಕಲೆಗಳ ವಿಮರ್ಶೆ, ಜಗತ್ತಿನ ಕೆಲವು ಸೂಕ್ಷ್ಮ ವಿದ್ಯಮಾನಗಳ ವ್ಯಾಖ್ಯಾನ, ಹೀಗೆ ಹಲವು ಕ್ಷೇತ್ರಗಳ ದರ್ಶನವಿದೆ. ನಮ್ಮ ಸಾಹಿತ್ಯವನ್ನೂ ಒಳಗೊಂಡು ಜಗತ್ತಿನ ಸಾಹಿತ್ಯ, ಸಾಹಿತ್ಯ ಕೃತಿಗಳ ಬಗ್ಗೆ ತಿರುಮಲೇಶರಿಗೆ ಎಷ್ಟೆಲ್ಲ ಹಸಿವಿದೆ ಎಂಬುದಕ್ಕೂ ಈ ಪುಸ್ತಕ ಒಂದು ನಿದರ್ಶನ. ಇಲ್ಲಿ ನಿಜವಾದ ಲೇಖಕ ಎಂದರೆ ಎಲ್ಲದರಲ್ಲೂ ಆಸಕ್ತಿ ಇರುವವನು ಎಂಬುದಕ್ಕೂ ಪುರಾವೆಯುಂಟು.
ಸುಮಾರು ಮೂರು ದಶಕಗಳ ದೀರ್ಘಾವಧಿಯಲ್ಲಿ ರಚಿತಗೊಂಡ, ಅನುರಣನ ಶಕ್ತಿಯುಳ್ಳ ಬರಹಗಳ ಈ ಸಂಕಲನದಲ್ಲಿರುವುದು ಬಾಲ್ಯ, ವಿದ್ಯಾಭ್ಯಾಸ, ಸಾಹಿತ್ಯ, ಕಲೆ, ರಾಜಕೀಯ, ಚರಿತ್ರೆ, ಧರ್ಮ ಮೊದಲಾದವುಗಳನ್ನು ಕುರಿತ ಸಣ್ಣ ಸಣ್ಣ ಲೇಖನಗಳು. ಇವುಗಳಲ್ಲಿ ಹಾಸುಹೊಕ್ಕಾಗಿರುವುದು ಅಂತರಾರ್ಥ, ವ್ಯಾಖ್ಯಾನ, ಓದುಗನನ್ನು ಯೋಚಿಸುವಂತೆ ಮಾಡಬಲ್ಲ ಪ್ರತಿಭೆ. ಇವುಗಳ ಉದ್ದೇಶ ಓದುಗರಿಗೆ ಏನು ಯೋಚಿಸಬಹುದೆಂದು ಹೇಳುವುದಷ್ಟೇ ಅಲ್ಲ, ಏನೆಲ್ಲ ವಿಷಯಗಳ ಬಗ್ಗೆ ಹೇಗೆಲ್ಲ ಯೋಚಿಸಲಾಗಿದೆ ಎಂಬುದನ್ನು ತಿಳಿಸಿಕೊಡುವುದು ಕೂಡ.
ಇಲ್ಲಿನ ಬಹುಪಾಲು ಲೇಖನಗಳು ತಿರುಮಲೇಶರ ವಿಚಾರಗಳ ವಿಕಸನವನ್ನು ಪ್ರತಿಫಲಿಸುವುದಲ್ಲದೆ ಅವರ ಆಸಕ್ತಿ ಅನುರಕ್ತಿಗಳ ಆಳಅಗಲಗಳನ್ನೂ ಪ್ರಕಾಶಪಡಿಸುತ್ತವೆ. ಅವರು ಸಾಹಿತ್ಯದ ರೂಪಕಶಕ್ತಿಯ ಬಗೆಗೆ ಬರೆಯಲಿ, ಎಲಿಯಟ್ ಸೃಷ್ಟಿಯ ಮೆಕಾವಿಟಿ ಬೆಕ್ಕಿನ ಬಗ್ಗೆ ಬರೆಯಲಿ, ವಿವಿಧ ತರಕಾರಿ, ಸಂಸ್ಕೃತಿ ಸಂಕರ, ಜೇನುಪೆಟ್ಟಿಗೆ, ಅತಿ ಸಣ್ಣಕತೆ, ಭಾಷಾಶಾಸ್ತ್ರ, ಹೀಗೆ ಯಾವುದರ ಬಗೆಗೆ ಬರೆದರೂ ಅವುಗಳಲ್ಲಿ ಹಲವು ಮಗ್ಗುಲುಗಳನ್ನು ಒಟ್ಟಿಗೇ ಕಾಣಿಸುವ ಪ್ರಬಂಧಧ್ವನಿ ಇರುತ್ತದೆ. ಇಲ್ಲಿ ಅವರೊಬ್ಬ ವಿದ್ವಾಂಸರಾಗಿ, ವಿಮರ್ಶಕರಾಗಿ ಮಾತ್ರವಲ್ಲ, ಒಬ್ಬ ಲೇಖಕರಾಗಿಯೂ ಸಹ ಲೇಖಕರ ಕೃತಿಗಳ ಬಗ್ಗೆ ಯೋಚಿಸುತ್ತಾರೆ. ಈ ಸಹ ಲೇಖಕರು ನಮ್ಮವರಾಗಿರಬಹುದು, ಪಾಶ್ಚಾತ್ಯ ದೇಶಗಳಿಗೆ ಸೇರಿದವರಾಗಿರಬಹುದು, ಹಿಂದಿನವರಾಗಿರಬಹುದು ಅಥವಾ ನಮ್ಮ ಸಮಕಾಲೀನರೇ ಆಗಿರಬಹುದು.
ವಿಮರ್ಶಾಪ್ರಜ್ಞೆಯ ಜೊತೆ ಔದಾರ್ಯವನ್ನೂ ಬೆಳೆಸಿಕೊಂಡ ಕನ್ನಡದ ಮನಸ್ಸಿಗೆ ಕೀಟ್ಸ್, ರಿಲ್ಕೆ, ಕ್ಲೀಸ್ಟ್, ಹರ್ಮನ್ ಬ್ರಾಖ್, ಎಲಿಯಟ್, ಶಿಶುನಾಳ ಶರೀಫ, ಗೋವಿಂದ ಪೈ, ಕಾರಂತ, ಗೋಕಾಕ, ಹೀಗೆ ಎಲ್ಲರೂ ಎಷ್ಟೆಲ್ಲ ಮುಖ್ಯ ಎಂಬುದನ್ನು ಇಲ್ಲಿನ ಒಂದೊಂದು ಲೇಖನವೂ ಸಾಬೀತುಗೊಳಿಸುತ್ತದೆ. ಆದ್ದರಿಂದಲೇ ಅಮೆರಿಕನ್ ಕವಿ ಡಬ್ಲ್ಯೂ. ಎಸ್. ಮರ್ವಿನ್ ಜೊತೆ ಎಡ್ವರ್ಡ್ ಹರ್ಷ್ ನಡೆಸಿದ ಸಂದರ್ಶನಕ್ಕೂ ಹೋರ್ಹೆ ಲೂಯಿಸ್ ಬೋರ್ಹೆಸ್‍ನ ‘ಆತ್ಮಕಥಾರೂಪದ ಒಂದು ಪ್ರಬಂಧ’ಕ್ಕೂ (ಎರಡೂ ಅನುವಾದಗಳು) ಇಲ್ಲಿ ಸ್ಥಳಾವಕಾಶವುಂಟು.
ಭಾಷೆಯೆನ್ನುವುದು ಹೆಸರಿಲ್ಲದ್ದನ್ನು ಹೆಸರಿಸಬೇಕಾದ ಲೇಖಕನಿಗೂ ಅವನು ಎದುರಿಸುವ ಭಾಷಾರಹಿತ ವಾಸ್ತವಕ್ಕೂ ನಡುವೆ ಇರುವ ಒಂದು ವಾಹಕಶಕ್ತಿ. ತಿರುಮಲೇಶರಲ್ಲಿ ಇದು ಎಷ್ಟು ಧ್ವನಿಪೂರ್ಣವಾಗಿದೆಯೆನ್ನುವುದಕ್ಕೆ ಅವರು ಕಾಸರಗೋಡಿನ ಪನ್ನೆಪ್ಪಲದ ಬಗ್ಗೆ, ತಮ್ಮ ಬಾಲ್ಯದ ಅನುಭವಗಳ ಬಗ್ಗೆ, ತಾವು ಓದಿದ ಶಾಲೆ ಕಾಲೇಜುಗಳ ಬಗ್ಗೆ, ಪಾತ್ರೆಪಗಡೆಗಳ ಬಗ್ಗೆ, ಹುಲ್ಲು, ಕೀಟ, ತರಕಾರಿಗಳ ಬಗ್ಗೆ ಬರೆದಿರುವುದನ್ನು ಓದಬೇಕು.
ಉದಾಹರಣೆಗೆ ‘ತರ ತರದ ತರಕಾರಿ’ ಲೇಖನದಲ್ಲಿ ನುಗ್ಗೆಮರವನ್ನು ಕುರಿತ ಸಾಲುಗಳಿವು: ‘ನುಗ್ಗೆಯ ಸಮಸ್ಯೆ ಏನೆಂದರೆ ಗಿಡವಾಗಿ ಇರಲೋ ಮರವಾಗಿ ಬೆಳೆಯಲೋ ಎಂದು ಅದಿನ್ನೂ ತೀರ್ಮಾನಿಸದೆ ಇರುವುದು! ಬೆಳೆಯಲು ಬಿಟ್ಟರೆ ಇದು ಮರದಷ್ಟು ಬೆಳೆದರೂ, ಮರದ ಶಕ್ತಿಯಿಲ್ಲ. ಕೊಂಬುಗಳು ಗೊಂಚಲು ಗೊಂಚಲಾಗಿ ಇಳಿದರೂ ಅವನ್ನು ಕೊಯ್ಯಲು ದೋಟಿಯ ಸಹಾಯ ಬೇಕಾಗಬಹುದು. ಮರವೆಂದ ಮೇಲೆ ಹತ್ತಿದರೆ ಗೆಲ್ಲು ಹಿಸಿದು ಕೆಳಬೀಳುವ ಅಪಾಯವಿದೆ. ಇನ್ನೊಂದು ಸಮಸ್ಯೆಯೆಂದರೆ ಮರದಿಂದ ತಮ್ಮದೇ ನೂಲುಗಳಲ್ಲಿ ಪುಟ್ಟ ಮಕ್ಕಳಂತೆ ಕೆಳಕ್ಕೆ ನೇತಾಡುವ ಕಂಬಳಿ ಹುಳಗಳು. ಅವು ನುಗ್ಗೆಮರವನ್ನು ಹುಡುಕಿಕೊಂಡು ಬರುತ್ತವೆ. ಇದರ ಅರಿವಿಲ್ಲದೆ ಕೆಳಗೆ ಹೋಗುವ ಮನುಷ್ಯರ ತಲೆಮೇಲೆ ಈ ಹುಳಗಳು ಆಕಸ್ಮಿಕವಾಗಿ ಬೀಳಬಹುದು!’
ತಿರುಮಲೇಶರ ಈ ಕೃತಿಯ ಉದ್ದಕ್ಕೂ ಪಾಂಡಿತ್ಯದ ಸ್ಪರ್ಶವಿದೆ, ಸ್ನೇಹಿತರ ನಡುವಣ ಮಾತುಕತೆಯ ಆತ್ಮೀಯತೆಯಿದೆ, ತಿಳಿಹಾಸ್ಯವೂ ಇದೆ. ಜೊತೆಗೆ ಅಗತ್ಯವೆನಿಸಿದ ಕಡೆಗಳಲ್ಲಿ ಇಂಗ್ಲಿಷಿನ ಕೆಲವು ಪಾರಿಭಾಷಿಕ ಶಬ್ದಗಳಿಗೆ ಅವರು ನಿರಾಯಾಸವಾಗಿ ಟಂಕಿಸಿರುವ ಕನ್ನಡ ಶಬ್ದಗಳೂ ಇವೆ. ಉದಾಹರಣೆಗೆ: ಸ್ವಕುಲಾನುರಕ್ತ (ಕ್ಲಾನಿಷ್), ವ್ಯವಹಾರ ವ್ಯವಸ್ಥೆ (ನೆಟ್‍ವರ್ಕ್), ಜಾಕಿಣೀ ದ್ರಾವಣ (ವಿಚಸ್ ಬ್ರ್ಯೂ), ಕೆಡುಗಣ್ಣು (ಈವಿಲ್ ಐ), ಗೃಹೀಕರಣ (ಡೊಮೆಸ್ಟಿಕೇಷನ್), ಪ್ರಪಿತೃ (ಅತಾವಿಸ್ಟಿಕ್), ಸ್ವಯಂವಿರೋಧಿ (ಕಾಂಟ್ರಡಿಕ್ಷನ್) ಪ್ರಭಾಷೆ (ಮೆಟಾಲಾಂಗ್ವೇಜ್), ಆಟೋ ಸಜೆಶ್ಚನ್ (ಸ್ವಯಮಾವಾಹನೆ) ಮುಂತಾದವು.
ಈ ಕೃತಿಯನ್ನು ಓದುತ್ತಿರುವಾಗ ಉದ್ದಕ್ಕೂ ನಾನು ತಿರುಮಲೇಶರ ಆಸಕ್ತಿಗಳ ವ್ಯಾಪಕತೆಯನ್ನು ಕಂಡು ಬೆರಗಾದದ್ದುಂಟು. ಅವರು ನಿಜವಾದ ಅರ್ಥದಲ್ಲಿ ಬಹುಶ್ರುತರು. ‘ಎಂ.ಎ. ಎಂಬ ಪೋರ್ಟಲ್’ ಲೇಖನದಲ್ಲಿರುವ ಈ ವಾಕ್ಯಗಳನ್ನು ನೋಡಿ: ‘ಒಬ್ಬ ಓದುಗನಿಗೆ ತಾನು ಎಲ್ಲವನ್ನೂ ಓದಬೇಕು ಎನಿಸುತ್ತದೆ. ಆದರೆ ಎಲ್ಲವನ್ನೂ ಎಂದರೆ ಏನರ್ಥ? ಎಲ್ಲವೂ ಎಂದರೆ ಏನೆಂದೇ ನಮಗೆ ಗೊತ್ತಿರುವುದಿಲ್ಲ. ಗೊತ್ತಿದ್ದರೂ ಎಲ್ಲವನ್ನೂ ಓದುವುದು ಯಾರಿಂದಲೂ ಸಾಧ್ಯವಿಲ್ಲ. ದೊಡ್ಡದೊಂದು ಲೈಬ್ರರಿಗೆ ಅಥವಾ ಪುಸ್ತಕದಂಗಡಿಗೆ ಹೋದಾಗ ಗೊತ್ತಾಗುತ್ತದೆ, ಮನುಷ್ಯನ ಆಯಸ್ಸಿನ ಮಿತಿ’. ಹೀಗಿದ್ದೂ ನನಗೆ ತಿಳಿದಂತೆ ನಮ್ಮ ಕಾಲದಲ್ಲಿ ಅವರಷ್ಟು ಓದಿಕೊಂಡವರು ಕೆಲವೇ ಕೆಲವರು.
‘ಸಾಹಿತ್ಯದ ನಿಷಿದ್ಧ ವಲಯ’ ಎಂಬ ಲೇಖನದಲ್ಲಿ ಅವರಿಗೆ ನೋವುಂಟುಮಾಡಿರುವ, ಓದುವ ನಮಗೆ ವಿಷಾದವೆನಿಸುವ ಈ ಕೆಲವು ಮಾತುಗಳಿವೆ. ಇವು ನಮ್ಮ ಕಾಲದ ಸಾಹಿತ್ಯ ರಾಜಕೀಯಕ್ಕೊಂದು ಕನ್ನಡಿಯೂ ಹೌದು: ‘ನಾನು ಆಗಾಗ ರೋಮನ್ ಇತಿಹಾಸ ಓದುತ್ತಿದ್ದೆ. ಸಿಕ್ಕಿದ ಮಾಹಿತಿಗಳನ್ನೇ ಬಳಸಿಕೊಂಡು ಮೊದಲು ‘ಟೈಬೀರಿಯಸ್’, ನಂತರ ‘ಕಲಿಗುಲ’ ಬರೆದೆ. ಇವುಗಳ ಬಗ್ಗೆ ಜನ ಏನೆನ್ನುತ್ತಾರೋ ಎನ್ನುವ ಕುತೂಹಲ ಇತ್ತು. ಎರಡೂ ಪೂರ್ಣಪ್ರಮಾಣದ ನಾಟಕಗಳು. ನನ್ನ ಜೀವನಸಂಧ್ಯೆಯಲ್ಲಿ ಮಾಡಿದ ಕೆಲಸಗಳು. ಇನ್ನೂ ಬರೆಯಬೇಕೆಂದಿದ್ದೆ. ನನ್ನ ಭಾಷಾಬಾಂಧವರಿಂದ ಒಂದು ಒಳ್ಳೆಯ ಮಾತು ಬರುತ್ತಿದ್ದರೆ ಬಹುಶಃ ಹಾಗೆ ಮಾಡುತ್ತಿದ್ದೆನೋ ಏನೋ. ಆದರೆ ಜನರ ಅನಾದರ ನನ್ನ ಉತ್ಸಾಹವನ್ನು ಕೊಂದುಹಾಕಿತು.... ಇದರ ಬೆನ್ನಿನಲ್ಲೇ ನಾನು ‘ಅವ್ಯಯ ಕಾವ್ಯ’ವನ್ನು ಬರೆದೆ. ನಾಟಕ ಓದದವರು ಆದಿ ಪ್ರಾಯೋಗಿಕ ಕಾವ್ಯವನ್ನು ಓದುತ್ತಾರೆಯೆ? ‘ಅವ್ಯಯ ಕಾವ್ಯ’ ಮುಗ್ಗರಿಸಿ ಬಿತ್ತು. (ಇದರ ಹಿಂದಿನ ‘ಅಕ್ಷಯ ಕಾವ್ಯ’ಕ್ಕೆ ಪ್ರಶಸ್ತಿ ಬಂದಿತ್ತು ನಿಜ. ಅದೊಂದು ಆಶ್ಚರ್ಯ!)’
***
ಕೃತಿ: ಅಕ್ಷರಲೋಕದ ಅಂಚಿನಲ್ಲಿ
ಲೇಖಕ: ಕೆ.ವಿ. ತಿರುಮಲೇಶ್
ಪ್ರಕಾಶಕರು: ಅಭಿನವ
ಪುಟ:564
ಬೆಲೆ:ರೂ. 600
ಫೋನ್:9448804905
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.