ADVERTISEMENT

ಅಂಬೇಡ್ಕರ್‌ ಜಗತ್ತು ಪುಸ್ತಕ ವಿಮರ್ಶೆ: ಪ್ರಭಾವೀ ವ್ಯಕ್ತಿತ್ವದ ಪ್ರಾಮಾಣಿಕ ಚಿತ್ರ

ಚಿದಾನಂದ ಸಾಲಿ
Published 2 ಡಿಸೆಂಬರ್ 2023, 23:30 IST
Last Updated 2 ಡಿಸೆಂಬರ್ 2023, 23:30 IST
ಅಂಬೇಡ್ಕರ್‌ ಜಗತ್ತು
ಅಂಬೇಡ್ಕರ್‌ ಜಗತ್ತು   
ಹಲವಾರು ಚರ್ಚಾಸ್ಪದ ಸಂಗತಿಗಳು, ಚಿಂತನೆಗೆ ಹಚ್ಚುವ ಹೇಳಿಕೆಗಳು ಈ ಕೃತಿಯಲ್ಲಿ ಇದ್ದು ಸಾವಧಾನದ ಓದನ್ನು ಕೃತಿಯು ನಿರೀಕ್ಷಿಸುತ್ತದೆ. ಒಂದೆರಡು ಕಡೆ ಊಹಾತ್ಮಕ ಹೇಳಿಕೆಗಳಿರುವುದು ಬಿಟ್ಟರೆ ಇಡೀ ಕೃತಿಯ ಭಾಷೆ ಖಚಿತವಾಗಿದೆ...

ಅಮೆರಿಕೆಯ ಸಂಶೋಧಕಿ ಎಲೀನರ್ ಜೆಲಿಯೆಟ್ ಅವರ ಸಂಶೋಧನಾ ಮಹಾಪ್ರಬಂಧ `ಡಾ. ಅಂಬೇಡ್ಕರ್ ಮತ್ತು ಮಹಾರ್ ಚಳುವಳಿ’ಯನ್ನು ‘ಅಂಬೇಡ್ಕರ್ ಜಗತ್ತು’ ಎಂಬ ಹೆಸರಿನಲ್ಲಿ ವಿಕಾಸ್ ಮೌರ್ಯ ಕನ್ನಡಕ್ಕೆ ಅನುವಾದಿಸಿದ್ದಾರೆ. 1890ರಿಂದ 1956ರ ನಡುವೆ ಮಹಾರ್ ಜಾತಿಯು ಅಂಬೇಡ್ಕರ್‌ರ ನೇತೃತ್ವದಲ್ಲಿ ಸಾಂಪ್ರದಾಯಿಕ ವಿಧಾನಗಳನ್ನು ಬದಿಗೊತ್ತಿ, ಆಧುನಿಕ ವಿಧಾನಗಳ ನೆರವಿನಿಂದ ರಾಜಕೀಯ ಜಾಗೃತಿ ಮತ್ತು ಏಕತೆಗಳ ಸಾಧನೆಗಾಗಿ ಶ್ರಮಿಸಿದ ಪರಿಯನ್ನು, ತಲುಪಿರುವ ಗುರಿಯನ್ನು ಇದು ಸಾದ್ಯಂತವಾಗಿ ವಿವರಿಸುತ್ತದೆ.

ವಿದ್ವತ್ಪೂರ್ಣ ಭಾಷೆ, ವ್ಯಾಪಕವಾದ ಸಂಬಂಧಿತ ಸಾಹಿತ್ಯಾವಲೋಕನ, ಸಂಶೋಧನೆಯ ತಾತ್ವಿಕ ಚೌಕಟ್ಟು, ಅಚ್ಚುಕಟ್ಟಾದ ಅಧ್ಯಾಯೀಕರಣ, ಇಟ್ಟುಕೊಂಡಿರುವ ಪ್ರಾಕ್ಕಲ್ಪನೆ ಮತ್ತು ಕಂಡುಕೊಂಡಿರುವ ಫಲಿತಾಂಶ ಮುಂತಾದ ಎಲ್ಲ ದೃಷ್ಟಿಯಿಂದಲೂ ಈ ಕೃತಿಯು ಸಂಶೋಧನಾಶಿಸ್ತನ್ನು ಸಮಗ್ರವಾಗಿ ನಿರ್ವಹಿಸಿದೆ. ಸ್ಪಷ್ಟ ಹಾಗೂ ಖಚಿತವಾದ ಭಾಷೆಯ ಮೂಲಕ ಸಾಧ್ಯವಾದಷ್ಟೂ ಸತ್ಯಕ್ಕೆ ಹತ್ತಿರವಾಗಿರಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಿದೆ. ಸಂಶೋಧನಾ ಪ್ರಬಂಧಗಳ ಗುಣಮಟ್ಟವು ಕ್ರಮೇಣವಾಗಿ ಕುಸಿಯುತ್ತಿರುವ ಈ ದಿನಮಾನದಲ್ಲಿ ಇದು ಗತಕಾಲದ ಸಂಶೋಧನಾಶಿಸ್ತಿನ ಸ್ವರೂಪವನ್ನು ನಮಗೆ ಕಾಣಿಸುವಂತಿದೆ.

ಎಲ್ಲಿಯೂ ಭಾವುಕತೆಗೆ ಒಳಗಾಗದ, ಸಮಚಿತ್ತದ, ಸುದೂರದ ಥರ್ಡ್ ಅಂಪೈರ್ ಮಾದರಿಯ ನೋಟಕ್ರಮ ಇಲ್ಲಿದೆ. ಅಭಿಮಾನದಿಂದ ಆರಾಧಿಸುವ ಮತ್ತು ಅನುಮಾನದಿಂದ ದೂರೀಕರಿಸುವ ಎರಡೂ ವರ್ಗಗಳಿಂದ ದೊರೆತ ಅಂಬೇಡ್ಕರರ ಚಿತ್ರಗಳು ಅಪೂರ್ಣವಾಗಿದ್ದು, ಅರ್ಧಸತ್ಯವನ್ನಷ್ಟೇ ನುಡಿದವು. ವಿದೇಶೀ ದೃಷ್ಟಿಕೋನದಲ್ಲಿ ಮೂಡಿರುವ ಈ ಅಂಬೇಡ್ಕರರ ಚಿತ್ರವು ಸಾಕಷ್ಟು ವಸ್ತುನಿಷ್ಠವಾಗಿದೆ ಮತ್ತು ಪ್ರಾಮಾಣಿಕತೆಯಿಂದ ಕೂಡಿದೆ. ಗಾಂಧಿ, ಅಂಬೇಡ್ಕರ್, ತಿಲಕ್‌ರಂಥ ಮಹಾನ್ ವ್ಯಕ್ತಿತ್ವಗಳಲ್ಲಿನ ಹಠಮಾರಿತನ, ಅತಿಭಾವುಕತೆ, ನಾಜೂಕುತನ, ರಾಜಕೀಯ ಅಧಿಕಾರದ ಹಂಬಲ, ಸ್ವಜನಪಕ್ಷಪಾತ, ಇಬ್ಬಗೆಯ ನೀತಿಗಳಂಥ ಮಾನವಸಹಜ ದೌರ್ಬಲ್ಯಗಳನ್ನು, ಅವರ ಮೇಲಿನ ಅಭಿಮಾನಕ್ಕೆ ಧಕ್ಕೆಯಾಗದ ರೀತಿಯಲ್ಲಿ ತಣ್ಣಗೆ ಹೇಳಿರುವ ಕ್ರಮವು ಪ್ರಶಂಸಾರ್ಹವಾಗಿದೆ. ಗಾಂಧಿ ಮತ್ತು ಅಂಬೇಡ್ಕರ್ ಅವರ ನಡುವಿನ ಸಂಘರ್ಷದ ಸ್ವರೂಪವು ಸೈದ್ಧಾಂತಿಕ ಮತ್ತು ತಾತ್ವಿಕ ಸ್ವರೂಪದ್ದಾಗಿದ್ದು, ವೈಯಕ್ತಿಕವಾಗಿ ಅವರು ಪರಸ್ಪರರ ಕುರಿತಾಗಿ ಹೊಂದಿದ್ದ ಸದ್ಭಾವವನ್ನೂ ಇದು ಕಾಣಿಸಿದೆ.

ADVERTISEMENT

‘ಅಂಬೇಡ್ಕರ್ ಪೂರ್ವದ ನಾಯಕತ್ವ’ ಎಂಬ ಉಪ ಅಧ್ಯಾಯದಲ್ಲಿ ಅವರ ವ್ಯಕ್ತಿತ್ವ ಮತ್ತು ಹೋರಾಟಗಳ ರೂಪಣೆಗೆ ಅಡಿಪಾಯ ಒದಗಿಸಿದ ಮಹಾತ್ಮಾ ಬುದ್ಧ, ಜೋತಿಬಾ ಫುಲೆ, ಸಂತ ತುಕಾರಾಂ, ಗೋಪಾಲಬಾಬಾ ವಾಲಂಗ್ಕರ್, ಶಿವರಾಂ ಜಾನ್ಬಾ ಕಾಂಬಳೆ, ಕಿಸಾನ್ ಫಗೋಜಿ ಬನ್ಸೋಡೆ, ಜಿ.ಎ.ಗವಾಯಿ ಮುಂತಾದವರ ಪ್ರಸಂಗಗಳಿವೆ. ಹಾಗೆಯೇ ಅಂಬೇಡ್ಕರರ ಉನ್ನತ ವ್ಯಾಸಂಗಕ್ಕೆ ನೆರವಾದ ಬರೋಡಾದ ಗಾಯಕವಾಡರು ಮತ್ತು ಕೊಲ್ಹಾಪುರದ ಶಾಹು ಮಹಾರಾಜರ ಚಿತ್ರಗಳಿವೆ. ಅವರ ನೆರಳಂತೆ ಬದುಕಿ ಬಹುಬೇಗ ತೀರಿಕೊಂಡ ರಮಾಬಾಯಿ, ಅವರ ಅನುಯಾಯಿಗಳಿಂದ ಹೆಚ್ಚು ಟೀಕೆಗೊಳಗಾದ ಎರಡನೇ ಪತ್ನಿ ಸವಿತಾ, ಕೊನೆವರೆಗೂ ನಿಷ್ಠರಾಗಿದ್ದ ಚಿತ್ಪಾವನ ಬ್ರಾಹ್ಮಣರಾದ ಜಿ.ಎನ್.ಸಹಸ್ರಬುದ್ಧೆ ಹೀಗೆ ಅಂಬೇಡ್ಕರ್ ಎಂಬ ವ್ಯಕ್ತಿತ್ವವನ್ನು ಹತ್ತಿರವಿದ್ದು ರೂಪಿಸಿದ ನಿಕಟಸ್ತರಿದ್ದಾರೆ. ಕಾಲಕಾಲಕ್ಕೆ ವೇದಿಕೆಗಳನ್ನು ಒದಗಿಸುತ್ತ ಬಂದ ಸಮಾಜೋ-ರಾಜಕೀಯ ಸಂದರ್ಭಗಳ ಹಿನ್ನೆಲೆಗಳಿವೆ.

ಹಲವಾರು ಚರ್ಚಾಸ್ಪದ ಸಂಗತಿಗಳು, ಚಿಂತನೆಗೆ ಹಚ್ಚುವ ಹೇಳಿಕೆಗಳು ಈ ಕೃತಿಯಲ್ಲಿ ಇದ್ದು ಸಾವಧಾನದ ಓದನ್ನು ಕೃತಿಯು ನಿರೀಕ್ಷಿಸುತ್ತದೆ. ಒಂದೆರಡು ಕಡೆ ಊಹಾತ್ಮಕ ಹೇಳಿಕೆಗಳಿರುವುದು ಬಿಟ್ಟರೆ ಇಡೀ ಕೃತಿಯ ಭಾಷೆ ಖಚಿತವಾಗಿದೆ. ವಿದರ್ಭದವರು ಅಪರೂಪಕ್ಕಾದರೂ ಅಂಬೇಡ್ಕರ್‌ರನ್ನು ತಮ್ಮ ನಾಯಕರೆಂದು ಒಪ್ಪಿ ಬರಮಾಡಿಕೊಳ್ಳಲಿಲ್ಲ(ಪು-62), ಬಲವಾದ ಹಿಂದುತ್ವದ ಬಯಕೆಯಿಂದ ಉದ್ಭವಿಸಿದ್ದರೂ ಮಹಾಡ್ ಸತ್ಯಾಗ್ರಹಕ್ಕೆ ವೀರ್ ಸಾವರ್ಕರ್ ನೀಡಿದ ಬೆಂಬಲ ದಿಟ್ಟ ಮತ್ತು ಅಸಾಂಪ್ರದಾಯಿಕವಾಗಿತ್ತು(ಪು-65), ಮಹಾರ್ ಚಳವಳಿಯು ಪ್ರತಿ ಹಂತದಲ್ಲಿಯೂ ತಾನು ಅಸ್ಪೃಶ್ಯರ ವಿಶಾಲ ಗುಂಪಿನ ಭಾಗವೆಂದು ಘೋಷಿಸಿಕೊಂಡರೂ ಇತರೆ ಅಸ್ಪೃಶ್ಯ ಜಾತಿಗಳನ್ನು ತನ್ನೊಂದಿಗೆ ಕರೆದುಕೊಂಡು ಹೋಗುವಲ್ಲಿ ವಿಫಲವಾಯಿತು(ಪು-84), ಅಂಬೇಡ್ಕರ್ ತಮ್ಮ ಪ್ರತಿಸ್ಪರ್ಧಿ ಎಂ.ಸಿ.ರಾಜಾ ನವದೆಹಲಿಯಲ್ಲಿ ಕರೆದಿದ್ದ ದಮನಿತ ವರ್ಗಗಳ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿಲ್ಲ. ಬಹುಶಃ ಇನ್ನೊಬ್ಬನ ನಾಯಕನ ಚಳವಳಿಯೊಂದಿಗೆ ಬಾಂಧವ್ಯ ಬೇಡವೆಂದಿರಬೇಕು ಅಥವಾ ಇತರರ ನಿಯಂತ್ರಣವಿಲ್ಲದೆ ತನ್ನದೇ ಆದ ಹೇಳಿಕೆ ನೀಡಬೇಕೆಂದು ಭಾವಿಸಿರಬೇಕು(ಪು-109), ಅಂಬೇಡ್ಕರ್ ಅವರ ಮೇಲೆ ಅವಕಾಶವಾದಿಯೆಂಬ ಆರೋಪವೂ ಇದ್ದು ಅದನ್ನು ಅವರು ಬಾಂಬೆ ಏಶಿಯಾಟಿಕ್ ಸೊಸೈಟಿಯ ಸಭೆಯಲ್ಲಿ ನಿರಾಕರಿಸಿದರು (ಪು-148) ಮುಂತಾದ ಸಾಲುಗಳನ್ನು ಅಂಬೇಡ್ಕರ್‌ವಾದಿಯೆಂದೇ ಹೆಸರಾಗಿರುವ ಲೇಖಕಿಯು ಬರೆದಿದ್ದಾರೆಂದರೆ ಆಶ್ಚರ್ಯವಾಗುತ್ತದೆ.

ಈ ಅನುವಾದದಲ್ಲಿ ದೋಷಗಳಿಲ್ಲವೆಂದಲ್ಲ. ಕೆಲವೆಡೆ ಇರುವ ಸಂಕೀರ್ಣ ವಾಕ್ಯಗಳು ಉದ್ದೇಶಿತ ಅರ್ಥವನ್ನು ದಾಟಿಸಲಾಗದೆ ಗೊಂದಲ ಮೂಡಿಸುವಂತಿವೆ. ಅಂಬೇಡ್ಕರರ ಕರ್ನಾಟಕ ಸಂಪರ್ಕದ ಬಗ್ಗೆ ಮೂರು ಕಡೆಗಳಲ್ಲಿ ಉಲ್ಲೇಖವಿದ್ದು, ಅವಕ್ಕೆ ಸಂಬಂಧಿಸಿ ಟಿಪ್ಪಣಿಗಳನ್ನು ಒದಗಿಸಬಹುದಿತ್ತು. ಬೆಂಗಳೂರಿನಲ್ಲಿ ಬೌದ್ಧ ಅಕಾಡೆಮಿ ಸ್ಥಾಪಿಸಲು ಉದ್ದೇಶಿಸಿದ್ದ ಭೂಮಿಗೆ ಸಂಬಂಧಿಸಿದ 104ನೇ ಟಿಪ್ಪಣಿಯ ಉಲ್ಲೇಖವಿದೆ. ಟಿಪ್ಪಣಿಯೇ ಇಲ್ಲ. ಅಧ್ಯಾಯ-2ರ 5ನೇ ಟಿಪ್ಪಣಿಯೇ ಗೊಂದಲಕಾರಿಯಾಗಿದೆ. ಅದಲ್ಲದೆ ಸಂಶೋಧನೆಯ ಭಾಷೆಯನ್ನು ಹಾಗೇ ಉಳಿಸಿಕೊಳ್ಳದೆ ತುಸು ಚೆಂದಗಾಣಿಸಿದ್ದರೆ, ತಲುಪುವಿಕೆಯ ಪ್ರಮಾಣವು ಹೆಚ್ಚಾಗುತ್ತಿತ್ತು. ಆದರೂ ವೈಯಕ್ತಿಕ ಬರೆಹಗಳೆಡೆಗೇ ವಾಲುವ ಯುವಮನಸ್ಸುಗಳ ನಡುವೆ ಇಂಥ ಸಂಶೋಧನಾ ಕೃತಿಯ ಅನುವಾದಕ್ಕೆ ತನ್ನನ್ನು ಒಡ್ಡಿಕೊಂಡ ವಿಕಾಸ್ ಮೌರ್ಯ ನಡೆ ಅಭಿನಂದನೀಯವಾಗಿದೆ. ಅಪಾರ ಶ್ರಮ, ಶ್ರದ್ಧೆ ಮತ್ತು ತಾಳ್ಮೆಗಳ ಎರಕದಲ್ಲಿ ರೂಪುಗೊಂಡಿರುವ ಈ ಕೃತಿಯ ಸಾಂಸ್ಕೃತಿಕ ಮಹತ್ವದಲ್ಲಿ ಇಂಥ ಸಣ್ಣಪುಟ್ಟ ದೋಷಗಳು ಗೌಣವಾಗುತ್ತವಷ್ಟೇ.

ಕೃತಿ: ಅಂಬೇಡ್ಕರ್ ಜಗತ್ತು

ಮೂಲ: ಎಲೀನರ್ ಜೆಲಿಯೆಟ್

ಕನ್ನಡಕ್ಕೆ: ವಿಕಾಸ್ ಮೌರ್ಯ

ಪ್ರ: ಜೀರುಂಡೆ ಪುಸ್ತಕ ಬೆಂಗಳೂರು

ಪು: 288

ಬೆಲೆ: ₹395

ದೂ: 97422 25779

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.