ADVERTISEMENT

ಪುಸ್ತಕ ಪರಿಚಯ | ಅಣು - ಕಾಮಾಟಿಪುರ, ಧಾರಾವಿ ತೆರೆದಿಡುವ ವಾಸ್ತವ

ಅಭಿಲಾಷ್ ಪಿ.ಎಸ್‌.
Published 4 ಜೂನ್ 2022, 20:30 IST
Last Updated 4 ಜೂನ್ 2022, 20:30 IST
ಅಣು
ಅಣು   

‘ನನ್ನ ಕಥೆ ಇಲ್ಲಿನ ಬಹುತೇಕ ಎಪ್ಪತ್ತೆಂಬತ್ತು ಪರ್ಸೆಂಟ್‌ ಹೆಂಗಸರ ಕಥೆಯೇ ಆಗಿದೆ. ಹೊಟ್ಟೆ ಬಟ್ಟೆಗಾಗಿ ಸದಾ ಹೊಡೆದಾಡುವ ಹಸಿವಿನ ಸಾಮ್ರಾಜ್ಯದ ಕಥೆ ಇದಾಗಿದೆ’ ಎಂದು ಕಥಾನಾಯಕಿ ಲಕುಮಿಬಾಯಿ ನಕ್ಕಾಗ, ‘ಹೌದು, ಅದು ಪ್ರಪಂಚದ ಎಲ್ಲ ಜೀವಿಗಳ ಕಥೆಯೂ ಹೌದು. ಆದರೆ, ಅವುಗಳನ್ನು ದಕ್ಕಿಸಿಕೊಳ್ಳುವ ಮಾರ್ಗಗಳು, ತಂತ್ರಗಳು ತುಂಬಾ ಭಿನ್ನ ಭಿನ್ನವಾಗಿವೆ’ ಎಂದು ಕಥೆಗಾರ ಉತ್ತರಿಸುತ್ತಾನೆ. ಕಾದಂಬರಿಯ ಆರಂಭದಲ್ಲೇ ಬರುವ ಈ ಮಾತುಕತೆ ‘ಅಣು’ವಿನ ಜೀವಾಳ ಎನ್ನಬಹುದು.

ಲೇಖಕ ಕೇಶವರೆಡ್ಡಿ ಹಂದ್ರಾಳ ಅವರ ಚೊಚ್ಚಲ ಕಾದಂಬರಿ ಇದು.ಉತ್ತರ ಭಾರತವನ್ನು ಸುತ್ತಿದ ಅನುಭವದಲ್ಲಿ ಅವರನ್ನು ಬಹಳವಾಗಿ ಕಾಡಿದ್ದ ಪ್ರದೇಶಗಳೆಂದರೆ ಧಾರಾವಿ ಮತ್ತು ಕಾಮಾಟಿಪುರವಂತೆ. ಹೀಗಾಗಿ ಇವುಗಳನ್ನೇ ಕಥಾಕೇಂದ್ರವನ್ನಾಗಿಸಿ ಕೆಂಬೆಳಕಿನತ್ತ ಹೆಜ್ಜೆ ಹಾಕಿದ್ದಾರೆ.

‘ಕಾಮ, ಪ್ರೇಮ, ಜಾತಿ, ಧರ್ಮ, ಹೆಣ್ಣು, ಬಡತನ, ಮಣ್ಣು, ಹಸಿವು ನನ್ನ ಕಥಾನಕದ ಹಂದರಗಳು. ಪ್ರಮುಖವಾಗಿ ಹಸಿವು ಮತ್ತು ಕಾಮ ನನ್ನ ಕಥಾನಕವನ್ನು ದಟ್ಟವಾಗಿ ಆವರಿಸಿಕೊಂಡಿವೆ’ ಎಂದು ಸ್ವತಃ ಕೇಶವರೆಡ್ಡಿ ಅವರು ಆರಂಭದಲ್ಲೇ ಹೇಳುತ್ತಾರೆ. ಇದನ್ನು ಇಲ್ಲಿ ಉಲ್ಲೇಖಿಸಲು ಕಾರಣವಿದೆ. ‘ಯಾರಲ್ಲಿ ಹಸಿವು ಮತ್ತು ಕಾಮ ಇಂಗಿಹೋಗಿರುತ್ತದೆಯೋ ಅಂಥವರು ಮಾತ್ರ ದರಿದ್ರದಲ್ಲಿ ನರಳುತ್ತಿರುತ್ತಾರೆ’ ಎಂದು ಲಕುಮಿಬಾಯಿಯೂ ಉಲ್ಲೇಖಿಸುವ ಮಾತು ಕಥಾಹಂದರಕ್ಕೆ ಕಂಬವಾಗಿ ಒದಗಿಬಂದಿದೆ.

ADVERTISEMENT

ಏಷ್ಯಾದ ಅತಿದೊಡ್ಡ ಕೊಳೆಗೇರಿ ಎಂದೇ ಖ್ಯಾತವಾದ ಧಾರಾವಿ ಹಾಗೂ ಸೆಕ್ಸ್‌ ದಂಧೆಯ ಕೇಂದ್ರ ಕಾಮಾಟಿಪುರವನ್ನು ಕೇಂದ್ರವನ್ನಾಗಿಟ್ಟುಕೊಂಡು ಈ ಕಾದಂಬರಿ ತೆರೆದುಕೊಳ್ಳುತ್ತದೆ. ಕ್ಷಯರೋಗದಿಂದ ಗಂಡ ಮೃತಪಟ್ಟಾಗ ದುಡಿಯಲು ಎಲ್ಲ ವಿಧದಲ್ಲೂ ಸೋತು ಇಪ್ಪತ್ತೊಂದನೇ ವಯಸ್ಸಿಗೇ ಕಾಮಾಟಿಪುರ, ರೆಡ್‌ ಲೈಟ್‌ ಏರಿಯಾ, ಫ್ಲೆಶ್‌ ಮಾರ್ಕೆಟ್‌ ಎಂದೆಲ್ಲ ಖ್ಯಾತಿ ಪಡೆದಿರುವ ನಾಗ್ಪಾಡಿಯ ಸೆರಗಿನೊಳಗೆ ಸೇರುತ್ತಾಳೆ ಲಕುಮಿಬಾಯಿ. ಆಕೆ ಅಣುಅಣುವಿನಲ್ಲಿ ಅನುಭವಿಸಿದ, ಕಂಡ ಕಾಮಾಟಿಪುರ, ಧಾರಾವಿಯ ಲೋಕವೇ ಇಲ್ಲಿ ತೆರೆದುಕೊಂಡಿದೆ. ಪ್ರತಿ ಪುಟದಲ್ಲೂ ಲಕುಮಿಬಾಯಿ ಇದ್ದಾಳೆ. ಪ್ರತ್ಯಕ್ಷವಾಗಿಲ್ಲದೇ ಇದ್ದರೂ ಆಕೆಯ ಛಾಯೆ ಅಲ್ಲಿದೆ.

ಲಕುಮಿಬಾಯಿ ಮತ್ತು ಆಕೆಯ ಸುತ್ತಲಿನ ವಾತಾರಣದೊಂದಿಗೆ ಹಬ್ಬುವ ಕಥೆ ವಿವಿಧ ಜನರ ಸಂಕಷ್ಟಗಳನ್ನೂ ವಿವರಿಸುತ್ತದೆ. ಜೊತೆಗೆ ಬದುಕು ಕಟ್ಟಿಕೊಂಡವರ, ದುರಂತ ಅಂತ್ಯ ಕಂಡವರ ಕಥೆಗಳನ್ನು ಪರಿಚಯಿಸುತ್ತದೆ.ಕೊಚ್ಚೆಯಲ್ಲೂ ಮೈಬಳುಕಿಸುವ ಹುಳುಗಳಂತೆ ಇಲ್ಲಿನ ಜನರೂ ಸಂಭ್ರಮದಿಂದ ಬದುಕುವುದನ್ನು ಅಕ್ಷರ ರೂಪದಲ್ಲಿ ಹಂದ್ರಾಳರು ಕಟ್ಟಿಕೊಟ್ಟಿದ್ದಾರೆ. ದೇಹ ಮಾರಾಟ, ಆ ವ್ಯವಹಾರದ ವಿರಾಟ ದರ್ಶನ ಇಲ್ಲಿದೆ. ಇಲ್ಲಿ ಸರಿ ಯಾವುದು? ತಪ್ಪು ಯಾರದ್ದು? ಎನ್ನುವ ತರ್ಕ ಸಲ್ಲ. ‘ಕಾಮ’ಕ್ಕೆ ಯಾವ ನೈತಿಕತೆಯೂ ಇಲ್ಲ ಎನ್ನುವುದನ್ನು ವೇಶ್ಯಾವಾಟಿಕೆಯ ಸ್ವರೂಪ, ಅದರೊಳಗಿನ ಲೋಕವನ್ನು ತೆರದಿಡುತ್ತಾ ವಿವರಿಸಿದೆ ಈ ಕಾದಂಬರಿ.

ಜಾತಿಗಂಟಿಕೊಳ್ಳದ ಪುರಂದರ ಜೋಶಿ, ಕನಸುಗಳಿಗೊಂದು ಅರ್ಥ ತುಂಬಿ ಜೇಬು ತುಂಬಿಸಿದ ವೇದಾಂತರಾವ್‌, ಸನ್ನಡತೆಯ ಮುಖವಾಡದ ದೇಸಾಯಿ, ಸ್ಮಿತಾ, ಡಾ.ಊರ್ಮಿಳಾ ಥಾಪರ್‌ ಹೀಗೆ ಪ್ರತಿ ಪುಟಕ್ಕೊಂದು ಹೊಸಹೊಸ ಪಾತ್ರ, ಅವುಗಳ ಕಥೆ ಬಿಚ್ಚಿಡುತ್ತಾ ಸಾಗುವ ‘ಅಣು’ ಕುತೂಹಲ ಹಿಗ್ಗಿಸುತ್ತಾ ಸಾಗುವುದು ವಿಶೇಷ. ಎಲ್ಲ ಪಾತ್ರಗಳಿಗೂ ಲಕುಮಿಬಾಯಿಯೇ ಕೇಂದ್ರ. ಆಕೆಯ ಮಾತಿನ ಓಘ ಯಾವ ರೀತಿ ಕುತೂಹಲ ಸೃಷ್ಟಿಸಿ ಕಥಾನಾಯಕನನ್ನು ಹಿಡಿದಿಟ್ಟಿತ್ತೋ, ಲೇಖಕರ ಬರವಣಿಗೆ ಶೈಲಿ, ಭಾಷೆಯೂ ಹಾಗೆಯೇ ಓದುಗನನ್ನು ಹಿಡಿದಿಟ್ಟುಕೊಳ್ಳುತ್ತದೆ. ಇಂಥ ವಿಷಯವನ್ನು ಬರೆಯುವ ಸಂದರ್ಭದಲ್ಲಿ ಲೇಖನಿಗೂ ಇತಿಮಿತಿಯನ್ನು ಇರಿಸಿದ್ದಾರೆ.

ಎಲ್ಲ ಜೀವಿಗಳೂ ಪರಾವಲಂಬಿಗಳು ಎಂಬುವುದನ್ನು ಕಾದಂಬರಿಯಲ್ಲಿ ತೆರೆದಿಡಲಾಗಿದೆ. ಒಂದಿಷ್ಟು ವಾಸ್ತವವನ್ನೂ ಕಾದಂಬರಿಯುದ್ದಕ್ಕೂ ಲೇಖಕರು ಎದುರಿಟ್ಟಿದ್ದಾರೆ. ‘ಹಣ’ದ ಮುಂದೆ ಸಂಬಂಧವೂ ಕ್ಷಣಿಕ ಎನ್ನುವುದನ್ನು ಹಲವು ಆಯಾಮಗಳಲ್ಲಿ ‘ಅಣು’ ತೆರೆದಿಟ್ಟಿದೆ.

ಕೃತಿ: ಅಣು– All living things are parasites

ಲೇ: ಕೇಶವರೆಡ್ಡಿ ಹಂದ್ರಾಳ

ಪ್ರ: ಅಂಕಿತ ಪುಸ್ತಕ, ಬೆಂಗಳೂರು

ಸಂ: 080–26617100

ಪುಟ: 120

ದರ:120

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.