ADVERTISEMENT

ಮೊದಲ ಓದು: ವಿಶಾಲ ಅರ್ಥವಿರುವ ‘ಬಯಲ ಕಣಗಿಲೆ’

ಕೇಶವ ಮಳಗಿ ಅವರ ‘ಬಯಲ ಕಣಗಿಲೆ’ ಕೃತಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 20:29 IST
Last Updated 22 ಜೂನ್ 2024, 20:29 IST
<div class="paragraphs"><p> ಕೇಶವ ಮಳಗಿ ಅವರ ‘ಬಯಲ ಕಣಗಿಲೆ’ ಕೃತಿ</p></div>

ಕೇಶವ ಮಳಗಿ ಅವರ ‘ಬಯಲ ಕಣಗಿಲೆ’ ಕೃತಿ

   

ಕಥೆಯ ಹುಟ್ಟಿನ ಧಾತು ಯಾವುದು?, ಅನುಭಾವದ ಸಾರವನ್ನು ಅಕ್ಕರಗಳಲ್ಲಿ ರೂಕ್ಷವಾಗದಂತೆ ಹಿಡಿದಿಡುವುದು ಹೇಗೆ?, ಕಥಾ ವಸ್ತು, ಕಥೆಯಲ್ಲಿ ಬರುವ ಪ್ರತಿ ಪಾತ್ರಗಳು ಮತ್ತು ಕಥೆಯ ಹಿನ್ನೆಲೆಯು ರೂಪುಗೊಳ್ಳುವ ಬಗೆ ಎಂಥದ್ದು? ಎಂಬುದರ ಬಗ್ಗೆ ಓದುಗರಲ್ಲಿ ಕುತೂಹಲ ಇರುವುದು ಸಹಜ. ಕಥೆಗಾರನಿಗೂ ಆ ಕುತೂಹಲ ಇರಬೇಕಾಗಿದ್ದೆ. ಕಥೆಯನ್ನು ಸೃಷ್ಟಿಸುತ್ತಲೇ, ಅದರ ಮಾಂತ್ರಿಕತೆಗೆ ಬೆರಗಾಗುವ ಮುಗ್ಧತೆಯಲ್ಲಿಯೇ ಕಥೆಯ ಸಾರ್ಥಕ್ಯ ಅಡಗಿದೆ. ಹೀಗೆ ಕಥೆಯ ಹಿಂದಿನ ಕಥನವನ್ನು ಅರಿಯಲು ನೆರವಾಗುತ್ತದೆ ಕೇಶವ ಮಳಗಿ ಅವರ ‘ಬಯಲ ಕಣಗಿಲೆ’ ಕೃತಿ. 

ಅನುಭವದಿಂದ ಸಾಂದ್ರಗೊಂಡ ತೊರೆಯೊಂದು ಸದ್ದಿಲ್ಲದೇ ಹರಿಯುವ ಕಗ್ಗಾಡಿನಲ್ಲಿ ಕಥೆಗಾರನನ್ನು ಕಥೆಯೇ ಕೈ ಹಿಡಿದು ನಡೆಸುತ್ತದೆ.  ಲೋಕಾನುಭವಗಳ ಮಥನದಲ್ಲಿ ಕಥಾವಸ್ತು ಅಡಗಿದೆ.  ಅದಕ್ಕೆ ಅಗತ್ಯವಿರುವ ಟಿಪ್ಪಣಿ, ತಯಾರಿಗಳನ್ನು ಕಥೆಗಾರ ಮಾಡಿಕೊಳ್ಳಬೇಕು ಎಂಬುದನ್ನು ಸವಿಸ್ತಾರವಾಗಿ ಹೇಳಲಾಗಿದೆ.   ಯುಗಪಲ್ಲಟಗೊಳಿಸಿದ ಕಾರ್ಲ್‌ಮಾರ್ಕ್ಸ್‌, ಡಾರ್ವಿನ್‌ ಮತ್ತು ಸಿಗ್ಮೆಂಡ್‌ ಫ್ರಾಯ್ಡ್‌  ಸಿದ್ಧಾಂತಗಳ ಜತೆಗೆ ಸಮಾಜೋ ಆರ್ಥಿಕ ಸಿದ್ಧಾಂತಗಳ ಸೂಕ್ಷ್ಮ ವಿಶ್ಲೇಷಣೆಯನ್ನು ನೋಡಬಹುದು. ಲೇಖಕನಿಗೆ ಅಗತ್ಯವಿರುವ ‘ಒಳಕಸುವಿನ’ ಹಲವು ಅಂಶಗಳನ್ನು ಒಂದೇ ಚೌಕಟ್ಟಿನಲ್ಲಿ ನೀಡಲು ಪ್ರಯತ್ನಿಸಲಾಗಿದೆ.  

ADVERTISEMENT

ಕುವೆಂಪು ಅವರ ‘ಕಾನೂರು ಸುಬ್ಬಮ್ಮ ಹೆಗ್ಗಡಿತಿ’ ಕೃತಿಯ ಹೂವಯ್ಯ ಮತ್ತು ಸೀತೆಯ ಪಾತ್ರಗಳ ಜತೆ ಗೋರಾ ಕಾದಂಬರಿಯ ವಿನಯ ಮತ್ತು ಗೌರಮೋಹನರ ಉದಾರವಾದಿ–ಸಮಾಜವಾದಿ ಆದರ್ಶಗಳ ವಿಶ್ಲೇಷಣೆಯೂ ಇದೆ. ಸಾರಸ್ವತಲೋಕ ಕಂಡ ಮಹತ್‌ ಕೃತಿಗಳ ಪಾತ್ರಗಳನ್ನು ತುಲನಾತ್ಮಕವಾಗಿ ವಿಶ್ಲೇಷಿಸಲಾಗಿದೆ. ಲೇಖಕರು ಮೊದಲೇ ಹೇಳಿಕೊಂಡಂತೆ  ‘ಚದುರು ಅಕ್ಕರ’ವಾಗಿರುವುದರಿಂದ ಪುಟದಿಂದ ಪುಟಕ್ಕೆ ಚದುರಿದ ಚಿಂತನೆಗಳಿವೆ. ಕಥೆ, ಅನುವಾದ, ಚಿಂತನೆ, ಪ್ರಬಂಧ , ಕವಿತೆ ಹೀಗೆ ಎಲ್ಲ ಪ್ರಕಾರಗಳ ಕಡೆಗೂ ಕಣ್ಣು ಹಾಯಿಸಿದ್ದಾರೆ. ‘ಬಯಲ ಕಣಗಿಲೆ’ಯು ವಿಶಾಲ ಅರ್ಥವನ್ನು ಹೊಂದಿರುವ ಚದುರಿದ ಚಿತ್ರವಾಗಿ ರೂಪುಗೊಂಡಿರುವುದರಿಂದ ತಾಳ್ಮೆಯಿಂದ ಒಳಗಿಸಿಕೊಳ್ಳಬೇಕು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.