ADVERTISEMENT

40 ಸಿನಿಮಾಗಳ ಲೋಕದಲ್ಲೊಂದು ಸುತ್ತು

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2023, 20:07 IST
Last Updated 29 ಏಪ್ರಿಲ್ 2023, 20:07 IST
ಸಿನಿಲೋಕ 
ಸಿನಿಲೋಕ    

ಕೆ.ಪಿ.ಟಿ.ಸಿ.ಎಲ್‌ನಲ್ಲಿ ಎಂಜಿನಿಯರ್‌ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಲೇಖಕ ಪ್ರಸನ್ನ ಅವರು ಸಾಹಿತ್ಯ ಕೃಷಿಯ ಜೊತೆಗೆ ಸಿನಿಮಾಸಕ್ತರಾಗಿ ಈ ಕ್ಷೇತ್ರದಲ್ಲೂ ಕೃಷಿ ಮಾಡಿದ್ದಾರೆ. ಈ ಆಸಕ್ತಿಯೇ ಸಿನಿಮಾ ಕುರಿತ ಅವರ ನಾಲ್ಕನೇ ಕೃತಿಯಾಗಿ ಮೂಡಿಬಂದಿದೆ. 

ಈ ಕೃತಿಯು ಇಪ್ಪತ್ತೊಂದನೇ ಶತಮಾನದ ಮೊದಲಿನ ಎರಡು ದಶಕಗಳಲ್ಲಿ (2001–2021) ಹೊರದೇಶಗಳಲ್ಲಿ ಬಿಡುಗಡೆಯಾಗಿ ಜಗತ್ತಿನ ಗಮನಸೆಳೆದ ಆಯ್ದ ನಲವತ್ತು ಚಿತ್ರಗಳ ವಿಶ್ಲೇಷಣಾತ್ಮಕ ಲೇಖನಗಳ ಮಾಲೆ. ಇಲ್ಲಿನ ಹಲವು ಲೇಖನಗಳು ಈಗಾಗಲೇ ಇ–ಮ್ಯಾಗಜಿನ್‌ವೊಂದರಲ್ಲಿ ಪ್ರಕಟವಾಗಿದ್ದು, ಇವುಗಳನ್ನು ಕ್ರೋಡೀಕರಿಸಿ ಗುಚ್ಛವಾಗಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ. 31 ದೇಶಗಳ 40 ಚಿತ್ರಗಳ ವಿಮರ್ಶೆ ಇಲ್ಲಿದೆ. ಈ ಪೈಕಿ ಆಸ್ಕರ್‌ ಪ್ರಶಸ್ತಿ ವಿಭಾಗದಲ್ಲಿ ಅತ್ಯುತ್ತಮ ಚಿತ್ರದ ಪ್ರಶಸ್ತಿ ಪಡೆದ ‘ದ ಕಿಂಗ್ಸ್‌ ಸ್ಪೀಚ್‌’, ‘ದ ಆರ್ಟಿಸ್ಟ್‌’, ‘ಮೂನ್‌ಲೈಟ್‌’, ‘ಡ್ರೈವ್‌ ಮೈ ಕಾರ್‌’ ಸೇರಿದಂತೆ ಹಲವು ಚಿತ್ರಗಳ ಛಾಯಾಚಿತ್ರಗಳ ಸಹಿತ ವಿಮರ್ಶೆಗಳೂ ಸೇರಿವೆ.

ಜಗತ್ತಿನಲ್ಲಿ ನಡೆದ ಹಲವು ಕ್ರಾಂತಿಗಳು, ಘಟನೆಗಳು, ಸಾಂಸ್ಕೃತಿಕ ತಲ್ಲಣಗಳು ಹಲವು ಶೈಲಿಯ ಸಿನಿಮಾಗಳಿಗೆ ಅಡಿಪಾಯ ಹಾಕಿವೆ. ಇಪ್ಪತ್ತೊಂದನೇ ಶತಮಾನದಲ್ಲಾಗಿರುವ ತಂತ್ರಜ್ಞಾನದ ಬೆಳವಣಿಗೆಯನ್ನು ಬಳಸಿಕೊಂಡು ಇಂದಿನ ಸಿನಿಮಾಗಳು ಮನುಷ್ಯನ ಹೊಸ ಆಲೋಚನೆ, ತಲ್ಲಣಗಳನ್ನು ತೆರೆಗೆ ತಂದು ಹೊಸ ಸಿನಿಮಾ ಪರಿಭಾಷೆ ಹುಟ್ಟುಹಾಕಿವೆ. ತಾವು ಕಂಡ ಸಿನಿಮಾಗಳಲ್ಲಿ ಈ ಬೆಳವಣಿಗೆಯನ್ನು ದಾಖಲಿಸಿದ್ದಾರೆ ಲೇಖಕರು. ಕೇವಲ ಸಿನಿಮಾದ ವಿಮರ್ಶೆ ಇಲ್ಲಿಲ್ಲ. ಬದಲಾಗಿ ಆ ಸಿನಿಮಾಗೆ ವೇದಿಕೆಯಾದ ದೇಶ, ಅಲ್ಲಿನ ಸ್ಥಿತಿಯನ್ನೂ ಸೂಚ್ಯವಾಗಿ ದಾಖಲಿಸಿದ್ದಾರೆ. ಕೆಲವೆಡೆ ಇಡೀ ಸಿನಿಮಾ ಕಥೆಯನ್ನೇ ಬರೆದಿದ್ದಾರೆ.  

ADVERTISEMENT

ಸಿನಿಲೋಕ 21 ಲೇ: ಎ.ಎನ್‌.ಪ್ರಸನ್ನ  ಪ್ರ: ಪಾಂಚಜನ್ಯ ಪಬ್ಲಿಕೇಷನ್ಸ್‌  ಸಂ: 9740066842 ದರ: 350 ಪುಟ: 340

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.