ವೃತ್ತಿಯಿಂದ ಉಪನ್ಯಾಸಕರಾಗಿ, ಪ್ರವೃತ್ತಿಯಿಂದ ಬರಹಗಾರರಾಗಿರುವ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿಯವರು ಅಧ್ಯಯನಯೋಗ್ಯ ಕೃತಿಗಳಿಂದ ಪರಿಚಿತರು. ಅವರ ಈ ಹಿಂದಿನ ಕೃತಿಗಳಾದ ‘ಕಾಡಹಕ್ಕಿ ಹಾಡು’, ‘ಗೊಲ್ಲರ ಇತಿಹಾಸ ಕಥನ’ ಕೃತಿಗಳು ಗೊಲ್ಲ ಸಮುದಾಯದತ್ತ ಬೆಳಕು ಚೆಲ್ಲಿದ್ದವು. ಇದೀಗ ನೂತನ ಕೃತಿ ‘ಕಾಡುಗೊಲ್ಲ ಬುಡಕಟ್ಟು ಕುಲಕಥನ’ ಪ್ರಕಟಗೊಂಡಿದೆ.
‘ಕರ್ನಾಟಕದಲ್ಲಿನ ಬೇರೆ ಬೇರೆ ಸಮುದಾಯಗಳ ಮೇಲೆ ಅಪಾರ ಪ್ರಮಾಣದಲ್ಲಿ ಅಧ್ಯಯನಗಳು ನಡೆದಿವೆ. ಆದರೆ ಎಲ್ಲವೂ ಒಂದು ಚೌಕಟ್ಟಿನಡಿಯಲ್ಲಿ ಬಂಧಿತವಾದಂತೆ ಕಾಣುತ್ತವೆ. ಈ ಕೃತಿಯಲ್ಲಿ ಸಿದ್ಧಸೂತ್ರದಿಂದ ಹೊರಬಂದು, ಒಂದು ಸಮುದಾಯವನ್ನು ಪರಿಚಯಿಸುವ ಯತ್ನ ಕಾಣುತ್ತಿದೆ’ ಎಂದು ಡಾ.ರಹಮತ್ ತರೀಕೆರೆಯವರು ಟಿಪ್ಪಣಿಯಲ್ಲಿ ಹೇಳುತ್ತಾರೆ. ಲೇಖಕರು ಕಾಡುಗೊಲ್ಲ ಜನಾಂಗವನ್ನು ಬಹಳ ಕಾಲದಿಂದ ಅಧ್ಯಯನ ಮಾಡಿದ್ದಾರೆ ಮತ್ತು ಅದನ್ನು ವಿಭಿನ್ನ ನೆಲೆಯಲ್ಲಿ ಪರಿಚಯಿಸುವ ಯತ್ನ ಮಾಡಿದ್ದಾರೆಂಬುದು ಕೃತಿಯನ್ನು ಓದುತ್ತ ಹೋದಂತೆ ತಿಳಿಯುತ್ತದೆ.
‘ಕೃತಿಯ ಒಡಲೊಳಗೆ ಕಾಡುಗೊಲ್ಲ ಬುಡಕಟ್ಟಿನ ಚಾರಿತ್ರಿಕ ಸಂಗತಿಗಳನ್ನೊಳಗೊಂಡಂತೆ ಸಾಂಸ್ಕೃತಿಕ ಪರಂಪರೆ, ಮೌಖಿಕ ಕಥನಗಳ ಪರಿಕಲ್ಪನೆಗಳು, ಈ ಕಥನದೊಳಗಿನ ವಿವಿಧ ಸ್ವರೂಪದ ಸಂಘರ್ಷದ ನೆಲೆಗಳು, ಕಾಡುಗೊಲ್ಲರ ಬದುಕಿನ ಸ್ಥಿತ್ಯಂತರಗಳು, ವಿವಿಧ ಅಧ್ಯಯನಗಳನ್ನು ಒಂದೆಡೆ ತಂದು ವಿಶ್ಲೇಷಣೆಗೆ ಒಳಪಡಿಸುವ ಪ್ರಯತ್ನ ಮಾಡಿರುವೆ’ ಎಂದು ಲೇಖಕರು ಕೃತಿಯ ಮೊದಲ ಮಾತಿನಲ್ಲಿ ಹೇಳಿದ್ದಾರೆ.
ಕೃತಿಯ ಪ್ರಾರಂಭದ ಪುಟಗಳಲ್ಲಿ ಕೃತಿ ಕುರಿತಾಗಿ ವಿದ್ವಾಂಸರ ಟಿಪ್ಪಣಿಗಳಿವೆ. ಡಾ.ಕೃಷ್ಣಮೂರ್ತಿ ಹನೂರು, ರಹಮತ್ ತರೀಕೆರೆ, ಡಾ.ಬಂಜಗೆರೆ ಮೊದಲಾದ ವಿದ್ವಾಂಸರು ಕೃತಿ ಏನನ್ನು ಹೇಳಲು ಹೊರಟಿದೆ ಎಂಬ ಕಿರುನೋಟವನ್ನು ನೀಡುತ್ತಾರೆ. ನಂತರದ ಅಧ್ಯಾಯದಲ್ಲಿ ಕಾಡುಗೊಲ್ಲ ಬುಡಕಟ್ಟನ್ನು ಪರಿಚಯಿಸಿಕೊಡುವ ಕಥನಗಳಿವೆ. ಗೊಲ್ಲ ಶಬ್ದದ ನಿಷ್ಪತ್ತಿ ಹೇಗಾಯಿತು ಎಂಬ ವಿವರ ಸಿಗುತ್ತದೆ. ಪಶುಪಾಲಕರಾಗಿದ್ದ ಗೊಲ್ಲರನ್ನು ಸಂಸ್ಕೃತದಲ್ಲಿ ‘ಗೋಪಾಲ’, ‘ಗೋಪಿ’ ಎಂದು ಉಲ್ಲೇಖಿಸಿದ, ನಂತರ ಕನ್ನಡದಲ್ಲಿ ಅದು ‘ಗೋವಳ’ನೆಂದು ರೂಪಾಂತರಗೊಂಡ ಕಥೆ ಬರುತ್ತದೆ. ಕನ್ನಡದ ಯಾವ ಪ್ರಮುಖ ಕೃತಿಗಳಲ್ಲಿ ಗೊಲ್ಲರ ಕುರಿತಾಗಿ ಉಲ್ಲೇಖ ಬಂದಿದೆ ಎಂಬ ಸ್ಥೂಲ ಚಿತ್ರವನ್ನು ಲೇಖಕರು ಈ ಅಧ್ಯಾಯದಲ್ಲಿ ನೀಡುತ್ತಾರೆ. ವೇದ, ಪುರಾಣಗಳಲ್ಲಿಯೂ ಗೊಲ್ಲರ ಬಗೆಗಿನ ಉಲ್ಲೇಖದ ವಿವರಣೆಯನ್ನು ಓದುಗರಿಗೆ ಒದಗಿಸುತ್ತಾರೆ.
ನಂತರದ ಅಧ್ಯಾಯಗಳಲ್ಲಿ ಕಾಡುಗೊಲ್ಲ ಬುಡಕಟ್ಟಿನ ಪ್ರಾಚೀನತೆ, ಮೂಲನೆಲೆ, ಗೊಲ್ಲರ ಹಟ್ಟಿಯ ಸಂರಚನೆ ಕುರಿತಾದ ವಿವರಣೆಗಳು ಸಿಗುತ್ತವೆ. ಇದಕ್ಕೆ ಪೂರಕವಾದ ಮೂಲಗಳನ್ನು ಲೇಖಕರು ಉಲ್ಲೇಖಿಸುತ್ತಾರೆ. ಇಡೀ ಕೃತಿಯಲ್ಲಿನ ಬಹಳ ಆಸಕ್ತಿಕರ ಅಧ್ಯಾಯ ಕಾಡುಗೊಲ್ಲರ ಮೌಖಿಕ ಕಾವ್ಯ ಪರಂಪರೆ ಮತ್ತು ಪರಿಕಲ್ಪನೆಗಳು. ಗೊಲ್ಲರ ಸಾಹಿತ್ಯ ಜಗತ್ತನ್ನು ಪರಿಚಯಿಸುವ ಯತ್ನವಿಲ್ಲಿ ಕಾಣುತ್ತದೆ. ಒಟ್ಟಾರೆಯಾಗಿ ಗೊಲ್ಲ ಸಮುದಾಯದ ಕುರಿತು ಸಮಗ್ರ ಮಾಹಿತಿ ಒದಗಿಸುವ ಕೃತಿ.
ಕೃತಿ: ಕಾಡುಗೊಲ್ಲ ಬುಡಕಟ್ಟು ಕುಲಕಥನಲೇ: ಡಾ.ಮಲ್ಲಿಕಾರ್ಜುನ ಕಲಮರಹಳ್ಳಿಪ್ರ: ಗೀತಾಂಜಲಿ ಪುಸ್ತಕ ಪ್ರಕಾಶನ ಸಂ: 9449886390ಪು: 490ಬೆ: 600
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.