‘ವೈಷ್ಣವ ಜನತೋ’ ಲೋಕೇಶ ಅಗಸನಕಟ್ಟೆಯವರ ಇತ್ತೀಚಿನ ಕಾದಂಬರಿ. ಅಂತೆಯೇ ಇದು ಇತ್ತೀಚೆಗೆ ಬಂದಿರುವ ತುಂಬಾ ಮಹತ್ವದ ಕಾದಂಬರಿಯೂ ಹೌದು. ತಮ್ಮ ಕಥೆ, ಕಾದಂಬರಿಗಳ ಮೂಲಕ ಈಗಾಗಲೇ ಕನ್ನಡ ಓದುಗರಿಗೆ ಪರಿಚಿತರಿರುವ ಅಗಸನಕಟ್ಟೆ ಅವರನ್ನು ಈ ಕಥನ ಕನ್ನಡ ಸಾಹಿತ್ಯ ಲೋಕದ ಯಶಸ್ವಿ ಕಾದಂಬರಿಕಾರರ ಸಾಲಿನಲ್ಲಿ ಕೂರಿಸಿದೆ.
ಸಾವಧಾನದಿಂದ ಹರಿವ ತೊರೆಯಂತೆ ಸಾಗುತ್ತಾ ಅಷ್ಟೇ ಸಮಚಿತ್ತದ ಧ್ಯಾನದೊಂದಿಗೆ ಅನಾವರಣಗೊಳ್ಳುವ ಇದರೊಳಗಿನ ಲೋಕ, ಬಹುತ್ವ ಮತ್ತು ಬಹುಮುಖೀ ಬದುಕಿನ ಆಶಯಗಳನ್ನು ಹೊಂದಿದೆ. ಜತೆಗೆ, ಇತ್ತ ಕೇವಲ ಭಾವ ಪ್ರಧಾನವೂ ಆಗದೆ, ಅತ್ತ ಒಣ ವೈಚಾರಿಕತೆಯ ಸೋಂಕಿನಿಂದಲೂ ಸೊರಗದೆ ಅರಿವು ಹಾಗೂ ಮೀರುವ ಕ್ರಿಯೆಗಳ ಮುಖೇನ ಅಂತಸ್ಸಾಕ್ಷಿಯ ಬೆಳಕಿನಲ್ಲಿ ಬೆಳಗುತ್ತದೆ. ದಟ್ಟ ಜೀವನಾನುಭವವೊಂದು ಅಪ್ಪಟ ಪ್ರಾದೇಶಿಕ ನೆಲೆಯಲ್ಲಿ ನಿಂತು ಸಮಸಮಾಜದ ಕನಸಿಗಾಗಿ ಕಾತರಿಸುತ್ತಾ ಮನುಷ್ಯರೊಳಗಿನ ಕೇಡುಗಳನ್ನೂ, ಒಳಿತುಗಳನ್ನೂ ಹಾಗೂ ಅವರುಗಳು ಸ್ವತಿಳಿವಳಿಕೆಗಳಿಂದ ಬದಲಾಗುವ ಕ್ರಮವನ್ನೂ ತೋರಾಕುವ ಈ ವಿಶಿಷ್ಟ ಕಥನ ಸಾಮಾಜಿಕ, ರಾಜಕೀಯ, ಆಧ್ಯಾತ್ಮಿಕ ಹೀಗೆ ಹಲವು ಆಯಾಮಗಳಲ್ಲಿ ಓದಿಸಿಕೊಳ್ಳುತ್ತದೆ.
ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಗ್ರಾಮೀಣ ಬದುಕೊಂದರಲ್ಲಿ ಬೀಸುವ ಬದಲಾವಣೆಯ ಗಾಳಿಯಲ್ಲಿ ಹಾಗೂ ಗಾಂಧಿ, ಅಂಬೇಡ್ಕರರ ವಿಚಾರಧಾರೆಗಳ ಪ್ರವಾಹದಲ್ಲಿ ಅಲ್ಲಿನ ಪೂರ್ವಗ್ರಹಗಳು, ಜಾತಿ ಧರ್ಮಗಳ ಜಡತ್ವ ಹಾಗೂ ಕೇಡುಗಳು ಬಹುಮಟ್ಟಿಗೆ ತೂರಿ ಹೋಗುತ್ತವೆ. ಅಂತಃಕರಣದ ಮನಸ್ಸುಗಳನ್ನು ಅನನ್ಯವಾಗಿ ತಟ್ಟುವ ಇದರ ಇಂಥ ಕ್ರಿಯೆಯೇ ಈ ಕಥನದ ಸಾಫಲ್ಯವಾಗಿದೆ. ಗ್ರಾಮೀಣ ಪರಿಸರ, ಅಲ್ಲಿನ ಹಳ್ಳ ಕೊಳ್ಳಗಳು, ಮಳೆ ಬೆಳೆಗಳು, ತೋಟ ತುಡಿಕೆಗಳು, ದನಕರುಗಳು, ಮನೆ ಜೋಪಡಿಗಳು, ಕೃಷಿ, ಪಶುಪಾಲನೆ, ಗುಡಿ ಕೈಗಾರಿಕೆಗಳ ಬಗೆಗಿನ ವಿವರಗಳು ಮೈದುಂಬಿಕೊಂಡ ಪರಿಯಲ್ಲಿ ವಿಸ್ಮೃತಿಗೆ ಜಾರುತ್ತಿರುವ ಲೋಕವೊಂದು ಮತ್ತೆ ಕಣ್ಣೆದುರಿಗೆ ನಿಂತಂತೆ ಮುದಕೊಡುತ್ತದೆ.
ಈ ಕಥನದ ಕ್ರಿಯಾಭೂಮಿ ಬಸನಕಟ್ಟೆ ಎಂಬ ಹಳ್ಳಿ. ಈ ಹಳ್ಳಿಗೆ ವಾಸಣ್ಣನೆಂಬ ಮಾಗಿದ ಮನಸಿನ ಅಪ್ಪಟ ಗಾಂಧಿವಾದಿಯ ಆಗಮನದೊಂದಿಗೆ ಹಳ್ಳಿ ಹಲವು ಸ್ಥಿತ್ಯಂತರಗಳಿಗೆ ಸಾಕ್ಷಿಯಾಗುತ್ತಾ ಹೋಗುತ್ತದೆ. ಬಹುತೇಕ ವಾಸಣ್ಣ, ಬಸವರಾಜು ಎಂಬ ಬಿಸಿರಕ್ತದ ಯುವಕ ಹಾಗೂ ಖಾದಿ ಕೇಂದ್ರದ ಸುತ್ತ ಹೆಣೆಯಲ್ಪಟ್ಟಿರುವ ಕಾದಂಬರಿಯಲ್ಲಿ ವಾಸಣ್ಣ ಹಾಗೂ ಬಸವರಾಜುವಿನೊಳಗೆ ಆಗುವ ಈ ಪರಿವರ್ತನೆ ಖಾದಿಕೇಂದ್ರ ಹಾಗೂ ಇಡೀ ಹಳ್ಳಿಯ ಮೇಲೆ ಆಗುತ್ತಾ ಹೋಗುತ್ತದೆ. ಇದು ಸ್ಥಾಪಿತ ಮೌಲ್ಯಗಳ ವಾರಸುದಾರರನ್ನು ಕೆರಳಿಸುತ್ತದೆ. ತತ್ಪರಿಣಾಮ ಇದು ಹಳ್ಳಿಯಲ್ಲಿ ಹಲವು ಬಗೆಯ ಸಂಘರ್ಷಗಳಿಗೆ ಕಾರಣವಾಗುತ್ತದೆ.
ವಾಸಣ್ಣನ ವ್ಯಕ್ತಿತ್ವ ಮತ್ತು ಸರಳತೆಯ ಪ್ರಭಾವಕ್ಕೊಳಗಾದ ಅನೇಕ ಸಾಂಪ್ರದಾಯಿಕ ಮನಸ್ಸುಗಳು ವಾಸಣ್ಣನತ್ತ ವಾಲುತ್ತವೆ. ಇದಷ್ಟೇ ಅಲ್ಲದೆ ಇಲ್ಲಿ ಖುದ್ದು ವಾಸಣ್ಣ ಹಾಗೂ ಅಂಬೇಡ್ಕರ್ ವಿಚಾರಧಾರೆಗಳಿಂದ ಪ್ರಭಾವಿತನಾಗಿದ್ದ ಬಸವರಾಜು ಕೂಡ ಪರಿವರ್ತನೆಗೆ ಒಳಗಾಗುತ್ತಾನೆ. ಬಸವರಾಜು ವಾಸಣ್ಣನಿಗೆ ಅಂಬೇಡ್ಕರರನ್ನು ಓದಿಸುವ ಮೂಲಕ, ಅದೇ ರೀತಿ ವಾಸಣ್ಣ, ಬಸವರಾಜುವಿಗೆ ಗಾಂಧಿಯನ್ನು ಓದಿಸುವ ಮೂಲಕ ಇವರಿಬ್ಬರೂ ತಂತಮ್ಮ ಅರಿವಿನ ಲೋಕಕ್ಕೆ ಗಾಂಧಿ ಹಾಗೂ ಅಂಬೇಡ್ಕರರ ಬೆಳಕನ್ನು ಬಿಟ್ಟುಕೊಳ್ಳುತ್ತಾರೆ.
ಸಮಸಮಾಜದ ಕನಸಿನ ಸಾಕಾರಕ್ಕೆ ಗಾಂಧಿ–ಅಂಬೇಡ್ಕರ್ ಇಬ್ಬರೂ ಅನಿವಾರ್ಯ ಎಂಬುದನ್ನು ‘ಕಾಲು ದೀಪ’ದ ಅದ್ಭುತ ರೂಪಕದ ಮೂಲಕ ಪ್ರತಿಪಾದಿಸುತ್ತಾರೆ. ಜೋಡಿ ಹಣತೆಗಳಿರುವ ಈ ಬೆಳಕೇ ತುಂಬಾ ವಿಶೇಷವಾಗಿ ಕಾಣುತ್ತದೆ. ಎರಡನ್ನೂ ಒಟ್ಟಿಗೇ ಹಚ್ಚಿದರೆ ಮಾತ್ರ ಹಚ್ಚಿಕೊಳ್ಳುವ, ಒಂಟೊಂಟಿಯಾಗಿ ಹತ್ತಿಕೊಳ್ಳದ ಈ ದೀಪದ ರೂಪಕ ಆಶಯ ಕಾದಂಬರಿಯ ಉದ್ದಗಲಕ್ಕೂ ಅಂತರ್ಗಾಮಿಯಾಗಿ ಅನುರಣಿಸುತ್ತದೆ. ಈ ಕಾರಣಕ್ಕೇ ಇಡೀ ಕಥನ ಮನುಕುಲದ ಒಳಿತಿನತ್ತ ಮುಖ ಮಾಡಿದಂತೆ ಕಾಣುತ್ತದೆ.
ಇಲ್ಲಿ ಗಾಂಧಿಯವರ ‘ವೈಷ್ಣವ ಜನತೋ’ ‘ಮನುಜರೆಂದರೆ ಯಾರೆಂದು ಬಲ್ಲಿರೇನು?’ ಎಂದಾಗುತ್ತದೆ. ಖಾದಿ ಕೇಂದ್ರದಲ್ಲಿ ಗಾಂಧಿ ಫೋಟೊದ ಜೊತೆಗೆ ಅಂಬೇಡ್ಕರ್ ಫೋಟೊ ಬರುತ್ತದೆ. ವಾಸಣ್ಣ, ವಿಧವೆ ಬಸವ್ವನನ್ನು ಮದುವೆ ಆಗುವುದರೊಂದಿಗೆ ವಿಧವಾ ವಿವಾಹವೂ, ಬಸವರಾಜು, ಶೀಲಾಳನ್ನು ವರಿಸುವುದರೊಂದಿಗೆ ಅಂತರ್ಜಾತಿ ವಿವಾಹವೂ ಒಪ್ಪಿತ ಸಂಗತಿಯಾಗಿ ನಡೆಯುತ್ತದೆ. ದಲಿತರ ಕೇರಿಯಲ್ಲಿ ಬಾವಿಯೊಂದು ತೋಡಲ್ಪಡುತ್ತದೆ. ನಿಧಾನಕ್ಕೆ ಹಳ್ಳಿಯಲ್ಲಿ ಮನುಷ್ಯತ್ವದ ಸೆಲೆಯೊಂದು ಸರುಕಾಡತೊಡಗುತ್ತದೆ. ಊರುಕೇರಿಗಳ ನಡುವಿನ ಗೆರೆ ತೆಳ್ಳಗಾಗುತ್ತಾ ಹೋಗುತ್ತದೆ.
ಓದುಗನೊಳಗೆ ಒಂದು ವಿಶೇಷ ಅನುಭವವನ್ನು ನೀಡುವ ‘ವೈಷ್ಣವ ಜನತೋ’ದ ಬಲು ವಿಸ್ತಾರದ ಸಹಜ ನಡಿಗೆಯು ಕೆಲವೊಮ್ಮೆ ತುಂಬಾ ಮಂದಗತಿಯಂತೆ ಹಾಗೂ ವಿವರಣೆಗಳಲ್ಲಿ ಅಲ್ಲಲ್ಲಿ ಕೊಂಚ ಅತಿಯಂತೆ ಕಾಣುತ್ತಾ ಕಾದಂಬರಿಯ ಮುಕ್ತಾಯ ನಾಟಕೀಯವೂ ನಿರೀಕ್ಷಿತವೂ ಆಗಿರುವಲ್ಲಿ ಲೇಖಕರು ತುಸು ಸುಸ್ತಾದವರಂತೆ ಕಾದಂಬರಿಯ ಬಿಗಿ ಹಿಡಿತವನ್ನು ಕೊಂಚ ಸಡಿಲಾಗಿಸಿದ್ದಾರೆ.
ಆದರೆ ಈ ಮಿತಿ, ಕಥನಕಾರನ ಪ್ರಾಮಾಣಿಕತೆ ಹಾಗೂ ಮನುಕುಲದ ಬಗೆಗಿರುವ ಪ್ರೀತಿಯಲ್ಲಿ ಗೌಣವಾಗಿದೆ. ಏಕೆಂದರೆ, ತನ್ನ ಅನುಭವಕ್ಕೆ ದಕ್ಕಿದ ಲೋಕವನ್ನು ಯಾವುದೇ ಚಾಲಾಕಿತನ ತೋರದೆ ‘ಮುಟ್ಟಿ ಮಾತನಾಡಿಸುವ’ ಕ್ರಮ, ಭಾಷೆಯ ಆಪ್ತತೆ, ನಿರೂಪಣೆಯಲ್ಲಿನ ತಾಳ್ಮೆ, ಮೈದುಂಬಿಕೊಂಡಿರುವ ಪಾತ್ರಗಳಿಂದಾಗಿ ಈ ಕಾದಂಬರಿ ವಿಶಿಷ್ಟವಾಗಿ ಕಾಡುತ್ತದೆ ಮತ್ತು ಓದುಗನೊಳಗೆ ಬೆಳೆಯುತ್ತಾ ಹೋಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.