ADVERTISEMENT

ಒಳನೋಟ | ಹರಿವಾಣ ತುಂಬಿದ ತೆನೆ: ರಾಗಿಭಗೀರಥನ ಯಶೋಗಾಥೆ

ವಿ.ಗಾಯತ್ರಿ
Published 9 ಜುಲೈ 2022, 20:15 IST
Last Updated 9 ಜುಲೈ 2022, 20:15 IST
ಹರಿವಾಣ ತುಂಬಿದ ತೆನೆ
ಹರಿವಾಣ ತುಂಬಿದ ತೆನೆ   

ಮಳೆಯಾಶ್ರಿತ ಸಣ್ಣ ರೈತರು ಮತ್ತು ದುಡಿಯುವ ಜನರ ಬದುಕಿನಲ್ಲಿ ಹಾಸುಹೊಕ್ಕಾಗಿ ಬೆಸೆದು ಬಂದ ವಿನೀತ ರಾಗಿಗಿಂದು ಜಾಗತಿಕ ಮನ್ನಣೆ ಸಂದಿದೆ. ತೀರಾ ನಿರ್ಲಕ್ಷ್ಯಕ್ಕೊಳಗಾಗಿದ್ದ ರಾಗಿಯ ಉದ್ಧಾರಕ್ಕೆ ಪಣತೊಟ್ಟು ಲಕ್ಷ್ಮಣಯ್ಯನವರಂತಹ ಒಬ್ಬ ಮೇಧಾವಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಧೀರಗಾಥೆ ಇದರ ಹಿಂದಿದೆ. ಸರ್ವಗುಣ ಸಂಪನ್ನ ರಾಗಿ ತಳಿಗಳನ್ನು ಸೃಷ್ಟಿಸಿಕೊಟ್ಟು, ‘ರಾಗಿ ಲಕ್ಷ್ಮಣಯ್ಯ’ನವರೆಂದೇ ಜನಾನುರಾಗಿಯಾಗಿದ್ದ ಅವರೀಗ ನಮ್ಮೊಡನೆ ಇದ್ದಿದ್ದರೆ ಜನ್ಮಶತಾಬ್ದಿ ಸಂಭ್ರಮದಲ್ಲಿರುತ್ತಿದ್ದರು. ಜನ್ಮಶತಮಾನೋತ್ಸವದ ನೆಪದಲ್ಲಿ ಮಂಡ್ಯದ ‘ರಾಗಿ ಲಕ್ಷ್ಮಣಯ್ಯ ಸ್ಮಾರಕ ಸಮಿತಿ’ಯು ‘ಹರಿವಾಣ ತುಂಬಿದ ತೆನೆ’ ಎನ್ನುವ 400 ಪುಟಗಳ ಸಂಸ್ಮರಣಾ ಗ್ರಂಥವನ್ನು ಹೊರತಂದಿದೆ.

ಲಕ್ಷ್ಮಣಯ್ಯನವರ ಒಡನಾಡಿಗಳು, ಸಹೋದ್ಯೋಗಿಗಳು, ಅಭಿಮಾನಿಗಳು ಬರೆದ ಇಲ್ಲಿನ ಸುಮಾರು 70 ಲೇಖನಗಳಲ್ಲಿ, ಈ ರಾಗಿಬ್ರಹ್ಮನ ತಾಂತ್ರಿಕ ನೈಪುಣ್ಯ ಮತ್ತು ವ್ಯಕ್ತಿ ವೈಶಿಷ್ಟ್ಯ ಪ್ರಕಾಶಿಸುತ್ತಿವೆ. ಜೊತೆಗೆ, ರಾಗಿಯ ಗುಣಬಾಹುಳ್ಯದ ವಿಪುಲ ಮಾಹಿತಿಯುಳ್ಳ ಅನೇಕ ಲೇಖನಗಳಿವೆ. ಸಸ್ಯತಳಿ ವಿಜ್ಞಾನಿ ಡಾ.ಶರಣಬಸವೇಶ್ವರ ಅಂಗಡಿಯವರ ಸುದೀರ್ಘ ಲೇಖನವಂತೂ ಲಕ್ಷ್ಮಣಯ್ಯನವರ ರಾಗಿ ಬದುಕಿನ ದಿನಚರಿಯ ಯಥಾವತ್ತಾದ ದಾಖಲಾತಿಯಾಗಿದೆ.

ವಿಜ್ಞಾನದಲ್ಲಿ ಪದವಿ ಪಡೆದು ಸಸ್ಯತಳಿ ಮ್ಯೂಸಿಯಂ ನಿರ್ವಹಣೆಯ ಕೆಲಸಕ್ಕೆ ನೇಮಕಗೊಂಡ ಲಕ್ಷ್ಮಣಯ್ಯನವರು ಮುಂದೆ ಬರೊಬ್ಬರಿ ಹದಿನೇಳು ಅಸಾಧಾರಣ ರಾಗಿ ತಳಿಗಳನ್ನು ಅಭಿವೃದ್ಧಿಪಡಿಸಿ ಇಡೀ ಜಗತ್ತಿನ ಸಸ್ಯತಳಿ ವಿಜ್ಞಾನಿಗಳನ್ನು ನಿಬ್ಬೆರಗಾಗಿಸಿದ್ದು ಚರಿತ್ರಾರ್ಹವೇ ಸರಿ. 1951ರಿಂದ ಸುಮಾರು 40 ವರ್ಷಗಳ ಅವಧಿಯಲ್ಲಿ ಇವರು ಸೃಷ್ಟಿಸಿದ ರಾಗಿತಳಿಗಳಿಗೆ ಸರಿಸಾಟಿಯಾಗಬಲ್ಲ ಮತ್ತೊಂದು ತಳಿ ಇವತ್ತಿನತನಕ ಬಿಡುಗಡೆ ಆಗಿಲ್ಲವೆಂಬುದು ಸೋಜಿಗ ಮಾತ್ರವಲ್ಲ, ಅವರ ಸಂಶೋಧನೆಗಿರುವ ಮಹತ್ವಕ್ಕೂ ಸಾಕ್ಷಿ.

ADVERTISEMENT

ಲಕ್ಷ್ಮಣಯ್ಯನವರಿಗೆ ರಾಗಿ ಈ ಪರಿಯಾಗಿ ಒಲಿದದ್ದು ಹೇಗೆ ಎನ್ನುವುದು ಕಾಡುವ ಪ್ರಶ್ನೆ. ರಾತ್ರಿಯೆಲ್ಲ ರಾಗಿ ಹೊಲದಲ್ಲಿ ಹೊಕ್ಕು, ‘ಪರಾಗರೇಣು ಅಂಡಾಶಯದ ಮೇಲೆ ಉದುರುವಾಗ ಸರಿಯಾಗಿ ಮೂರು ಗಂಟೆಯಾಗಿತ್ತಾ ಅಥವಾ ಮೂರೂವರೆಯಾಗಿತ್ತಾ’, ‘ಯಾವ ಸರಿರಾತ್ರಿಯ ಇಬ್ಬನಿಯಲ್ಲಿ ರಾಗಿ ಕೊರೆಯಲು ಕೀಟ ಬಂತು’, ‘ಇಬ್ಬನಿ ಬಿದ್ದಾಗ, ಗರಿ ರೋಮಾಂಚನಗೊಂಡ ಪರಿ ಹೇಗಿತ್ತು’ ಎಂದೆಲ್ಲಾ ಕಣ್ಣಿಗೆ ಎಣ್ಣೆ, ತಲೆಗೆ ಹುಳು ಬಿಟ್ಟುಕೊಂಡು ತಲ್ಲೀನರಾಗಿಬಿಡುತ್ತಿದ್ದ ಅವರಿಗೆ ದಕ್ಕಿದ ಕಾಣ್ಕೆಗಳೇನೋ ಬಲ್ಲವರಾರು? ಆಫ್ರಿಕಾದಲ್ಲೆಲ್ಲೋ ಸಂಗ್ರಹಿಸಿದ 900 ರಾಗಿ ತಳಿಗಳು ಅಮೆರಿಕದ ಮೂಲಕ ಪ್ರಯಾಣಿಸಿ, ಮಂಡ್ಯದ ವಿ.ಸಿ.ಫಾರಂ ಬಿಟ್ಟಗಲದ ಲಕ್ಷ್ಮಣಯ್ಯನವರ ಮಡಿಲು ತಲುಪಿದ್ದೇನು ಅಕಸ್ಮಿಕವೇ ಮತ್ತೆ?

ಲಕ್ಷ್ಮಣಯ್ಯನವರಿಗೆ ರಾಗಿಯ ಗೀಳು ಹತ್ತಿದ್ದು ಹೇಗೆ? ರಾಗಿಯನ್ನೇ ನೆಮ್ಮಿಕೊಂಡ ಸಣ್ಣ ರೈತರಿಗೆ ಎಕರೆಗೆ ಮೂರ್ನಾಲ್ಕು ಚೀಲ ಬರುವಲ್ಲಿ 20-25 ಚೀಲ ಬರುವಂತಾದರೆ? ಎರಡು ಹೊತ್ತಿನ ಊಟಕ್ಕೆ ಪರದಾಟವಿರುವ ಮನೆಗಳಲ್ಲಿ ವರ್ಷವಿಡೀ ರಾಗಿ ತುಂಬಿ ತುಳುಕುವಂತಾದರೆ? ಹಸಿವಿನ ಸಂಕಟವನ್ನು ಬಲ್ಲ ಲಕ್ಷ್ಮಣಯ್ಯನವರ ಅಂತರಂಗದ ಈ ಕರೆಯೇ ಅವರನ್ನು ರಾಗಿ ತಳಿ ವಿಜ್ಞಾನಿಯಾಗಿಸಿದ್ದು ಎನ್ನುವುದನ್ನು ಇಲ್ಲಿನ ಎಲ್ಲಾ ಲೇಖಕರು ಒಂದಲ್ಲ ಒಂದು ರೀತಿಯಲ್ಲಿ ದಾಖಲಿಸಿದ್ದಾರೆ. ಪ್ರಸಿದ್ಧಿ, ಹಣ, ವಿದೇಶೀ ಪ್ರವಾಸಗಳ ಆಕರ್ಷಣೆ ಸೂಜಿಗಲ್ಲಿನಂತೆ ಸೆಳೆಯುವ ಈ ಕ್ಷೇತ್ರದಲ್ಲಿ ಅದರಿಂದ ತಪ್ಪಿಸಿಕೊಂಡು ತಮ್ಮ ರಾಗಿ ಕಾಯಕದಲ್ಲಿ ತಲ್ಲೀನರಾಗಲು ಲಕ್ಷ್ಮಣಯ್ಯ ಹರಸಾಹಸ ಮಾಡಿದ್ದನ್ನು ಅನೇಕರು ಮಾರ್ಮಿಕವಾಗಿ ಕಟ್ಟಿಕೊಟ್ಟಿದ್ದಾರೆ.

ಸಂಕರಣ (ಹೈಬ್ರಿಡ್) ಬೀಜಗಳ ತಂದೆ- ತಾಯಿ (parent line) ಬ್ರೀಡರ್‌ಗಳ ಬಳಿ ಗೌಪ್ಯವಾಗಿರುವುದರಿಂದ ಪ್ರತೀ ಸಲ ರೈತರು ದುಬಾರಿ ಬೆಲೆತೆತ್ತು ಬೀಜ ಕೊಳ್ಳಬೇಕು. ಲಕ್ಷ್ಮಣಯ್ಯನವರು ಕೂಡ ಹೊಸ ತಳಿ ಅಭಿವೃದ್ಧಿಪಡಿಸಲು ಎರಡು ನಿರ್ದಿಷ್ಟ ಗುಣದ ರಾಗಿ ತಳಿಗಳನ್ನು ಸಂಕರಣಗೊಳಿಸುತ್ತಿದ್ದರು. ಆದರೆ, ಆ ಸಂಕರಣ ಬೀಜವನ್ನು ಅನೇಕ ಹಂಗಾಮುಗಳಲ್ಲಿ ಮತ್ತೆ, ಮತ್ತೆ ಬಿತ್ತಿ, ಆಯ್ಕೆಮಾಡಿ ಬೆಳೆಸುತ್ತಾ ಅಂತಿಮವಾಗಿ ಅದನ್ನು ರೈತರ ಕೈಗೇ ಕೊಟ್ಟುಬಿಡುತ್ತಿದ್ದರು. ಮುಂದೆ ರೈತರು ತಾವೇ ಬೀಜ ಆಯ್ಕೆ ಮಾಡಿ ಬಿತ್ತನೆಗೆ ಎತ್ತಿರಿಸಿಕೊಳ್ಳಲು ಸಾಧ್ಯವಾಗುವಂತೆ ಲಕ್ಷ್ಮಣಯ್ಯ ಅದನ್ನು ಒ.ಪಿ. (ಮುಕ್ತ ಪರಾಗಸ್ಪರ್ಶಿ) ಬೀಜವಾಗಿ ಅಭಿವೃದ್ಧಿಪಡಿಸಿರುತ್ತಿದ್ದರು. ಇದರಲ್ಲಿ ಅಡಗಿದ್ದ ತಂತ್ರಜ್ಞಾನವೇನೂ ಸಾಮಾನ್ಯವಾದುದಲ್ಲ. ಸ್ವಕೀಯ ಪರಾಗಸ್ಪರ್ಶಿಯಾದ ರಾಗಿಯ ಎರಡು ತಳಿಗಳನ್ನು ಪರಕೀಯ ಪರಾಗಸ್ಪರ್ಶಕ್ಕೆ ಒಳಪಡಿಸುವುದು ಬಲು ಕಷ್ಟ. ಸಣ್ಣ ಸಣ್ಣ ಅಸಂಖ್ಯಾತ ಸಂಯೋಜಿತ ಹೂವುಗಳನ್ನು ಹೊಂದಿರುವ ರಾಗಿಯಲ್ಲಿ, ಭತ್ತದಲ್ಲಿ ಮಾಡುವಂತೆ ಗಂಡು ಭಾಗವನ್ನು ತೆಗೆದು ಕ್ರಾಸ್ ಮಾಡುವುದು (Emasculation) ಅಸಾಧ್ಯವಾಗಿತ್ತು. 1951ರವರೆಗೂ ಯಾವ ವಿಜ್ಞಾನಿಯೂ ಅದಕ್ಕೆ ಪ್ರಯತ್ನಿಸಿರಲಿಲ್ಲ.

ರಾಗಿಯ ಹೊಸತಳಿ ಸಂಶೋಧನೆಗೆ ಪಣತೊಟ್ಟಿದ್ದ ಲಕ್ಷ್ಮಣಯ್ಯನವರು ಅವಿರತ ಹುಡುಕಾಟ ನಡೆಸಿದ್ದಾಗ, ಹಿಂದೆ ಕೆಲ ವಿಜ್ಞಾನಿಗಳು ಹತ್ತಿಯಂತಹ ಬೆಳೆಗಳಿಗೆ ಸೂಚಿಸಿದ್ದ ‘ಕಾಂಟ್ಯಾಕ್ಟ್ ಮೆಥೆಡ್’ ಗಮನಕ್ಕೆ ಬಂತು. ವಿಭಿನ್ನ ಗುಣಗಳ ಎರಡು ತಳಿಗಳನ್ನು ಒಟ್ಟಿಗೆ ಬೆಳೆದು ಹೂಬಿಡುವ ಕಾಲಕ್ಕೆ ಅವುಗಳ ತೆನೆಗಳನ್ನು ಒಟ್ಟಿಗೆ ಸೇರಿಸಿ ದಾರ ಕಟ್ಟಿ ಕಾಗದದ ಕವರಿನಿಂದ ಮುಚ್ಚಿ ಪರಕೀಯ ಪರಾಗಸ್ಪರ್ಶಕ್ಕೆ ಒಳಪಡಿಸುವುದು ಈ ವಿಧಾನ. ಲಕ್ಷ್ಮಣಯ್ಯ ‘ಕರಿಕಡ್ಡಿ’ ಮತ್ತು ‘ಹುಲ್ಲುಬೆಳೆ’ ಎಂಬ ರಾಗಿಯ ಎರಡು ಸ್ಥಳೀಯ ನಿರ್ದಿಷ್ಟ ಗುಣಗಳ ತಳಿಗಳನ್ನು ಈ ಪ್ರಯೋಗಕ್ಕೆ ಒಳಪಡಿಸಿ ಶೇ ನೂರರಷ್ಟು ಯಶಸ್ವಿಯಾದರು. ‘ಈ ವಿಧಾನ ಲಕ್ಷ್ಮಣಯ್ಯನವರ ಅನ್ವೇಷಣೆಯ ‘ಸ್ಪೆಷಲ್ ಕಾಂಟ್ಯಾಕ್ಟ್ ಮೆಥೆಡ್’ ಎಂಬ ಹೆಸರು ಪಡೆದು ಇಂದಿಗೂ ರಾಗಿ ತಳಿ ಅಭಿವೃದ್ಧಿಯಲ್ಲಿ ಬಳಕೆಯಾಗುತ್ತಿರುವ ಏಕೈಕ ವಿಧಾನವಾಗಿದೆ. ಡಾ.ಚನ್ನೇಶ್ ಒಳಗೊಂಡಂತೆ ಅನೇಕ ವಿಜ್ಞಾನಿಗಳು ಇಲ್ಲಿ ಅದರ ಹೊಳಹುಗಳನ್ನು ನೀಡಿದ್ದಾರೆ.

1964ರವೇಳೆಗೆ ತಮ್ಮ ಕೈಸೇರಿದ ಆಫ್ರಿಕಾ ತಳಿಗಳ ದಷ್ಟಪುಷ್ಟವಾದ ಕಾಂಡವನ್ನು ಕಂಡ ಲಕ್ಷ್ಮಣಯ್ಯ, ಜಾನುವಾರಿನ ಮೇವಿಗೆ ಭರ್ಜರಿ ಹುಲ್ಲು ಸಿಕ್ಕಿತೆಂದು ಸಂಭ್ರಮಿಸಿದ್ದರು. ಅವುಗಳ ನಿರ್ದಿಷ್ಟ ಗುಣಗಳನ್ನು ಸ್ಥಳೀಯ ತಳಿಗಳ ನಿರ್ದಿಷ್ಟ ಗುಣಗಳೊಂದಿಗೆ ಸಂಕರಣಗೊಳಿಸಿ 8-10 ಅಸಾಧಾರಣ ತಳಿಗಳನ್ನು ಸೃಷ್ಟಿಸಿದ್ದರು. ಆಫ್ರಿಕಾದ ಹೆಸರೂ ಉಳಿಯುವಂತೆ ‘ಇಂಡಾಫ್’ ಎಂದು ಹೆಸರಿಟ್ಟು, ರೈತರನ್ನು ಕರೆದು ಅವುಗಳ ಬಗ್ಗೆ ವಿವರಿಸಿ, ಅವರು ಒಪ್ಪಿದ ತಳಿಗಳನ್ನೇ ಬಿಡುಗಡೆ ಮಾಡಿದ್ದರು.

ಮಳೆಯಾಶ್ರಿತ ಮತ್ತು ನೀರಾವರಿ ಬೇಸಾಯವೆರಡಕ್ಕೂ ಹೊಂದಿಕೊಳ್ಳುವ, ಅತ್ಯಧಿಕ ಇಳುವರಿಯ ಜೊತೆಗೆ ಉತ್ತಮ ಮೇವನ್ನೂ ಕೊಡುವ, ಒಂದು ಹಂಗಾಮು ತಪ್ಪಿದರೆ ಮಗದೊಂದು ಹಂಗಾಮಿಗೂ ಬೆಳೆಯಬಹುದಾದ ಈ ರೈತಸ್ನೇಹಿ ತಳಿಗಳು ಮುಂದೆ ರೈತರ ನಸೀಬನ್ನೇ ಬದಲಾಯಿಸಿದವು. ರೈತ-ಸಹಭಾಗಿತ್ವದ ಈ ತಳಿ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸ್ವತಃ ಭಾಗಿಯಾಗಿದ್ದ ಕೆ.ಬೋರಯ್ಯನವರು ಇದನ್ನು ಕಣ್ಣಿಗೆ ಕಟ್ಟಿದಂತೆ ವಿವರಿಸಿದ್ದಾರೆ. ಕೃತಿಯನ್ನು ಓದಿ ಮುಗಿಸಿದಾಗ ರೈತರೆಡೆಗಿನ ಈ ಮಟ್ಟದ ಕಾಳಜಿ, ಬದ್ಧತೆಗಳುಳ್ಳ ಮತ್ತೊಬ್ಬ ಲಕ್ಷ್ಮಣಯ್ಯ ಮತ್ತೆ ಎಂದಾದರೂ ಸಿಕ್ಕಾರೆಯೇ ಎಂಬ ಭಾವ ಹರಳುಗಟ್ಟುತ್ತದೆ.

ಕೃತಿ: ಹರಿವಾಣ ತುಂಬಿದ ತೆನೆ

(ರಾಗಿ ತಳಿ ವಿಜ್ಞಾನಿ ಡಾ.ಸಿ.ಎಚ್‌ ಲಕ್ಷ್ಮಣಯ್ಯ ಅವರ ಜೀವನ ಸಾಧನೆ ಕೊಡುಗೆಗಳ ಸಂಸ್ಮರಣ ಗ್ರಂಥ)

ಪ್ರಕಟಣೆ: ರಾಗಿ ಲಕ್ಷ್ಮಣಯ್ಯ ಸ್ಮಾರಕ ಸಮಿತಿ, ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.