ADVERTISEMENT

ಮೊದಲ ಓದು | ಅಕ್ಷರ ಲೋಕದಲ್ಲಿ ಹಂಗಿಲ್ಲದ ಅಲೆಮಾರಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 22:30 IST
Last Updated 24 ಫೆಬ್ರುವರಿ 2024, 22:30 IST
   

ಇಂಗ್ಲಿಷ್ ಅಧ್ಯಾಪಕರಾಗಿದ್ದ ಪ್ರೊ.ಬಿ.ಗಂಗಾಧರಮೂರ್ತಿ ನಾಡಿನ ವೈಚಾರಿಕ ವಲಯದಲ್ಲಿ ಗಮನಾರ್ಹ ಕೆಲಸ ಮಾಡಿದವರು. ದಲಿತ ಚಳವಳಿ ಸೇರಿದಂತೆ ಹಲವು ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಅವರು ಅಂಬೇಡ್ಕರ್ ಚಿಂತನೆಗಳನ್ನು ಕನ್ನಡಕ್ಕೆ ತಂದವರು. ಮೂರ್ತಿಯವರ ನಿಧನದ ನಂತರದಲ್ಲಿ ಅವರ 41 ಲೇಖನಗಳನ್ನು ‘ಅಕ್ಷರ ಲೋಕದ ಅಂಚಿನಲ್ಲಿ ಹಂಗಿಲ್ಲದ ಅಲೆಮಾರಿ’ ಎನ್ನುವ ಹೆಸರಿನಲ್ಲಿ ಎರಡು ಭಾಗಗಳಲ್ಲಿ ಪ್ರಕಟಿಸಲಾಗಿದೆ.

ದಲಿತರು, ಮುಸ್ಲಿಮರು, ಹಿಂದುತ್ವ, ಕೋಮುವಾದ, ಆರೆಸ್ಸೆಸ್ ಮುಂತಾದ ವಿಚಾರಗಳ ಬಗ್ಗೆ ಕೃತಿಯಲ್ಲಿ ಅಧ್ಯಯನಪೂರ್ಣವಾದ ಲೇಖನಗಳಿವೆ. ಆನಂದ್ ತೇಲ್ತುಂಬ್ಡೆ ಅವರ ‘ಅಂಬೇಡ್ಕರ್ ಮತ್ತು ಮುಸ್ಲಿಮರು’ ಪುಸ್ತಕಕ್ಕೆ ಬರೆದ ಮುನ್ನುಡಿ, ವಿಜೇತಾ ದಹಿಯಾ ಸಂಶೋಧನೆಯ ಆಧಾರದ ಮೇಲೆ ಧ್ರುವ ರಾಠಿ ರೂಪಿಸಿದ ಯೂ ಟ್ಯೂಬ್ ಕಾರ್ಯಕ್ರಮಗಳನ್ನು ಆಧರಿಸಿ ಬರೆದ ‘ದೇಶ ವಿಭಜನೆಯ ವಾಸ್ತವ ಸತ್ಯಗಳು’, ಮಧು ಲಿಮಯೆ ಅವರ ‘ಆರೆಸ್ಸೆಸ್ ನಿಜ ಬಣ್ಣ ಏನು’ ಎನ್ನುವ ಅನುವಾದಿತ ಲೇಖನದಂಥ ವಿಚಾರ ಪ್ರಚೋದಕ ಬರಹಗಳು ಪುಸ್ತಕದಲ್ಲಿವೆ. ಯಡಿಯೂರಪ್ಪ, ಸದಾನಂದಗೌಡರ ನಿಲುವುಗಳನ್ನು ಪ್ರಶ್ನಿಸಿ ಬರೆದ ಲೇಖನಗಳಿರುವ ಹಾಗೆಯೇ ಸಿದ್ದರಾಮಯ್ಯ ಸರ್ಕಾರ ಹೋಮ ಮಾಡಲು ಮುಂದಾಗಿದ್ದನ್ನು ಟೀಕಿಸಿದ ಲೇಖನವೂ ಇದೆ.

ವೃತ್ತಿಯಿಂದ ಅಧ್ಯಾಪಕರಾಗಿದ್ದ ಗಂಗಾಧರಮೂರ್ತಿಯವರು ಸಹಜವಾಗಿಯೇ ಶಿಕ್ಷಕರ ಗುಣಮಟ್ಟ, ಶಾಲೆಗಳಲ್ಲಿ ವಂದೇ ಮಾತರಂ ಕಡ್ಡಾಯ, ರಾಷ್ಟ್ರೀಯ ಶಿಕ್ಷಣದ ಕೇಸರೀಕರಣದ ಬಗ್ಗೆ ಬರೆದದ್ದು ಕೃತಿಯ ಎರಡನೇ ಭಾಗದಲ್ಲಿದೆ. ಅನಂತಮೂರ್ತಿ, ಕುಮಾರಪ್ಪ, ಎಚ್ಚೆನ್, ನಿಡುಮಾಮಿಡಿ ಸ್ವಾಮೀಜಿ, ಐಎಎಸ್ ಅಧಿಕಾರಿ ಶಂಕರನ್ ಮುಂತಾದವರ ವ್ಯಕ್ತಿಚಿತ್ರಗಳಿವೆ.

ನಮ್ಮ ಸುತ್ತಲಿನ ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕ ರಂಗದ ಹಲವು ಜ್ವಲಂತ ವಿಚಾರಗಳ ಬಗೆಗಿನ ವಿದ್ವತ್ಪೂರ್ಣ ಹಾಗೂ ಒಳನೋಟಗಳುಳ್ಳ ‘ಅಕ್ಷರ ಲೋಕದ ಹಂಗಿಲ್ಲದ ಅಲೆಮಾರಿ’ ಕನ್ನಡದ ವಿಚಾರ ಸಾಹಿತ್ಯಕ್ಕೆ ಮುಖ್ಯ ಸೇರ್ಪಡೆಯಾಗಿದೆ.

ಅಕ್ಷರ ಲೋಕದಲ್ಲಿ ಹಂಗಿಲ್ಲದ ಅಲೆಮಾರಿ- ಭಾಗ 1 ಮತ್ತು 2

ADVERTISEMENT

ಲೇ: ಪ್ರೊ.ಬಿ.ಗಂಗಾಧರಮೂರ್ತಿ

ಪ್ರ: ಆದಿಮ ಸಾಂಸ್ಕೃತಿಕ ಕೇಂದ್ರ, ಕೋಲಾರ

ಸಂ:9449073119

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.