ADVERTISEMENT

ವಿಮರ್ಶೆ: ಸರ್ವಾಧಿಕಾರದಿಂದ ಫ್ಯಾಸಿಸಂವರೆಗಿನ ಪ್ರತಿರೋಧದ ಪಯಣ

ಪ್ರಜಾವಾಣಿ ವಿಶೇಷ
Published 4 ನವೆಂಬರ್ 2023, 23:30 IST
Last Updated 4 ನವೆಂಬರ್ 2023, 23:30 IST
ಪುಸ್ತಕದ ಮುಖಪುಟ
ಪುಸ್ತಕದ ಮುಖಪುಟ   

'ಮಹಾಸಂಗ್ರಾಮಿ'-ಇದು ಸಾಮಾಜಿಕ ಹೋರಾಟಗಾರ ಎಸ್‌.ಆರ್‌.ಹಿರೇಮಠ ಅವರ ರಚನಾತ್ಮಕ ಪ್ರಯೋಗಗಳ ಬಾಳ್ಕಥನ. ಇದನ್ನು ಬರೆದವರು ಇನ್ನೊಬ್ಬ ಸಾಮಾಜಿಕ ಕಾರ್ಯಕರ್ತೆ, ಲೇಖಕಿ ರೂಪಾ ಹಾಸನ. ಎಂಬತ್ತರ ವಯೋಮಾನದ ಹೊಸ್ತಿಲಿನಲ್ಲಿರುವ ಎಸ್‌.ಆರ್‌.ಹಿರೇಮಠ ಅವರ ಸಾಮಾಜಿಕ ಜೀವನಕ್ಕೆ ಐವತ್ತು ವರ್ಷಗಳ ಅನುಭವವಿದೆ. ಅವರ ಈ ಅನುಭವವು ಚಟುವಟಿಕೆ ಮತ್ತು ಚಳವಳಿಗಳಿಂದಲೂ ಭೌಗೋಳಿಕವಾಗಿಯೂ ವಿಭಿನ್ನ, ವೈವಿಧ್ಯಮಯ  ವಿಷಯ, ವಸ್ತುಗಳನ್ನೊಳಗೊಂಡಿದೆ. ಇಂಥ ವ್ಯಕ್ತಿಯ ಕುರಿತು ಕೃತಿ ರಚಿಸಬೇಕಾದ ಸಂದರ್ಭದಲ್ಲಿ ಪಟ್ಟ ಪರಿಶ್ರಮವನ್ನು ಲೇಖಕಿ ರೂಪಾ 'ಚಿನ್ನಕ್ಕಾಗಿ ಮಣ್ಣು ಸೋಸೆ ಸೂಸಿ' ಎಂಬ ತಮ್ಮ ಆರಂಭಿಕ ಮಾತುಗಳಲ್ಲಿ ದಾಖಲಿಸಿದ್ದಾರೆ. ಕರ್ನಾಟಕ, ಭಾರತ, ಅಮೆರಿಕ, ಯೂರೋಪ್‌ ಹೀಗೆ ಹಲವು ದೇಶಗಳಲ್ಲಿ ವ್ಯಾಪಿಸಿರುವ ಹಿರೇಮಠ ಅವರ ಚಟುವಟಿಕೆ, ಚಳವಳಿಗಳ ವಿವರಗಳನ್ನು ಸಂಗ್ರಹಿಸುವುದು, ಅವುಗಳನ್ನು ವಿಷಯಕ್ಕೆ ಅನುಗುಣವಾಗಿ ಸಂಕಲಿಸುವುದು ಅಪಾರವಾದ ದೈಹಿಕ, ಮಾನಸಿಕ ಶ್ರಮವನ್ನು ಬೇಡುತ್ತದೆ. ಅಂಥ ಶ್ರಮವನ್ನು ವರ್ಷಾನುಗಟ್ಟಲೆ ನಿರ್ವಹಿಸಿ ಒಂದು ಅಮೂಲ್ಯವಾದ ಹೋರಾಟದ ಕಥನವನ್ನು ಲೇಖಕಿ ಕಟ್ಟಿಕೊಟ್ಟಿದ್ದಾರೆ. ವ್ಯಕ್ತಿ ಕೇಂದ್ರೀತವಾಗದ ಹಾಗೆ, ವ್ಯಕ್ತಿ ವೈಭವೀಕರಣಕ್ಕೆ ತುತ್ತಾಗದ ಹಾಗೆ, ವ್ಯವಸ್ಥೆಯ ವಿಮರ್ಶೆ ಮತ್ತು ಪರ್ಯಾಯ ವ್ಯವಸ್ಥೆಯ ನಿರ್ಮಾಣ ಮಾರ್ಗದಲ್ಲಿ ಶ್ರಮಿಸಿದ ಚೇತನಗಳನ್ನು ಕೇಂದ್ರವಾಗಿಟ್ಟುಕೊಂಡು ರಚನೆಯಾದ ಕೃತಿ ಇದು. ಎಸ್‌.ಆರ್‌.ಹಿರೇಮಠ ಅವರ ಸಂದರ್ಶನ, ಅವರ ಸಹವರ್ತಿಗಳ ಸಂದರ್ಶನಗಳು ಮತ್ತು ಹಿರೇಮಠ ಅವರು ಒದಗಿಸಿದ ಸುಮಾರು ಆರು ಸಾವಿರ ಪುಟಗಳ ದಾಖಲೆಗಳು ಈ ಕೃತಿಯ ಆಕರಗಳಾಗಿವೆ.

ಅಂದಿನ ಧಾರವಾಡ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕೆ ಗ್ರಾಮದಲ್ಲಿ 1944 ನವೆಂಬರ್‌ 5ರಂದು ಜನಿಸಿದ ಸಂಗಯ್ಯ.ರಾಚಯ್ಯ. ಹಿರೇಮಠ ಅವರು ಊರಿನ ವ್ಯಾಜ್ಯವೊಂದರಲ್ಲಿ ಬಡ ರೈತರ ಪರವಾಗಿ ನಿಂತು ಉಳ್ಳವರ ವೈರತ್ವ ಕಟ್ಟಿಕೊಂಡು ಊರು ಬಿಡುತ್ತಾರೆ. ಪುಟ್ಟ ಬಾಲಕ ತಂದೆ ರಾಚಯ್ಯ ತಾಯಿ ರಾಚವ್ವನ ಜೊತೆ ತಾಯಿಯ ತವರು ವಿಜಾಪುರಕ್ಕೆ ವಲಸೆ ಹೋಗುತ್ತಾರೆ. ಸಂಗಯ್ಯ ಐದು ವರ್ಷದವನಿದ್ದಾಗ ತಂದೆ ರಾಚಯ್ಯ ನಿಧನ ಹೊಂದುತ್ತಾರೆ. ಬಳಿಕ ತಾಯಿ ರಾಚವ್ವ, ದೊಡ್ಡಮ್ಮ ನಿಂಬೆವ್ವನ ಆಶ್ರಯದಲ್ಲಿ ಸಂಗಯ್ಯ ಕಡುಬಡತನದಲ್ಲಿ ಬೆಳೆಯುತ್ತಾನೆ. ಬಡತನ ಮತ್ತು ಪ್ರತಿಭೆಯ ಮಧ್ಯೆ ಪೈಪೋಟಿ ನಡೆದು ಪ್ರತಿಭೆ ಗೆಲ್ಲುವ ಸಂಗಯ್ಯನ ಬಾಲ್ಯ, ವಿದ್ಯಾಭ್ಯಾಸದ ವಿವರಗಳು ಈ ಕೃತಿಯ ಆರಂಭಿಕ ಅಧ್ಯಾಯಗಳಲ್ಲಿ ಹೃದಯಂಗಮವಾಗಿ ಮೂಡಿಬಂದಿವೆ. ಹುಬ್ಬಳ್ಳಿಯಲ್ಲಿ ಎಂಜಿನಿಯರಿಂಗ್‌ ಪದವಿ ಮುಗಿಸಿ 1968ರಲ್ಲಿ ಅಮೆರಿಕದ ಕ್ಯಾನ್ಸಸ್‌ ಸ್ಟೇಟ್‌ ಯೂನಿವರ್ಸಿಟಿಗೆ ಎಂ.ಎಸ್‌ ಓದಲು ಹೋಗುತ್ತಾನೆ ಸಂಗಯ್ಯ. ಅಲ್ಲಿಂದ ಅವರೊಳಗೊಬ್ಬ ಸಾಮಾಜಿಕ ಚಿಂತಕ ನಂತರ ಸುಧಾರಕ ರೂಪುಗೊಳ್ಳುವ ವಿವರಗಳು ಆಸಕ್ತಿದಾಯಕವಾಗಿವೆ.

ಬಡತನದ ವಿರುದ್ಧ ಹೋರಾಡುವ ಎರಡು ಮಾದರಿಗಳಿವೆ. ಮೊದಲನೆಯದು, ಸಿರಿವಂತನಾಗಿ ಸಿರಿತನ ಅನುಭವಿಸುವುದು. ಎರಡನೆಯದು, ಬಡತನವೇ ಇರಬಾರದೆಂದು ಹೋರಾಡುವುದು. ಹಿರೇಮಠ ಅವರು ಅಮೆರಿಕದಲ್ಲಿ ವಿದ್ಯಾಭ್ಯಾಸ ಮುಗಿಸಿ, ಅಲ್ಲಿಯೇ ಒಳ್ಳೆಯ ಉದ್ಯೋಗದಲ್ಲಿದ್ದಾಗಲೂ ಭಾರತದ ಬಡತನ, ಅನಾರೋಗ್ಯ, ಗ್ರಾಮಗಳ ಸ್ಥಿತಿಗಳ ಕುರಿತು ಚಿಂತಿಸುತ್ತಲೇ ಅಲ್ಲಿನ ಸಮಾನಮನಸ್ಕರನ್ನು ಸೇರಿಸಿಕೊಂಡು ಹುಟ್ಟುಹಾಕುವ ಸಂಘಟನೆ ‘ಇಂಡಿಯಾ ಡೆವೆಲಪ್‌ಮೆಂಟ್‌ ಸರ್ವೀಸ್‌’(1974) ಅವರ ತಾಯಿನಾಡಿನ ಕುರಿತಾದ ತುಡಿತಕ್ಕೊಂದು ಸಾಕ್ಷಿ. ಭಾರತದಲ್ಲಿ 1975ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿ ಘೋಷಿಸಿದಾಗ ಅಮೆರಿಕದಲ್ಲಿರುವ ಪ್ರಜ್ಞಾವಂತ ಭಾರತೀಯರೆಲ್ಲರೂ ಸೇರಿ ತುರ್ತು ಪರಿಸ್ಥಿತಿಯ ವಿರುದ್ಧದ ಪ್ರಚಾರಕ್ಕಾಗಿ ‘ಇಂಡಿಯನ್ಸ್ ಫಾರ್‌ ಡೆಮಾಕ್ರಸಿ’ ಎಂಬ ವೇದಿಕೆಯನ್ನು ಹುಟ್ಟುಹಾಕುತ್ತಾರೆ. ಅದರ ಸಕ್ರಿಯ ಸಂಘಟಕನಾಗಿ ಬೆಳೆಯುವ ಎಸ್‌.ಆರ್‌.ಹಿರೇಮಠ ಅವರು ಸ್ನೇಹಿತರೊಡಗೂಡಿ ಅಮೆರಿಕದಾದ್ಯಂತ ಪ್ರತಿಭಟನೆಗಳನ್ನು ನಡೆಸುತ್ತಾರೆ. ಹಿರೇಮಠ ಅವರು ಇಂಗ್ಲೆಂಡ್‌, ಜರ್ಮನಿ, ಫ್ರಾನ್ಸ್‌, ಜಿನೇವಾ ಎಲ್ಲೆಡೆ ಸುತ್ತಿ ತುರ್ತು ಪರಿಸ್ಥಿತಿ ವಿರುದ್ಧ ಅಭಿಪ್ರಾಯ ರೂಪಿಸುತ್ತಾರೆ. ಈ ಸಂದರ್ಭದ ಹಲವಾರು ಮಹತ್ವಪೂರ್ಣ ವಿವರಗಳು ಈ ಕೃತಿಯಲ್ಲಿವೆ. ಹಿರೇಮಠ ಅವರು ಅಮೆರಿಕದ ಮೇವಿಸ್‌ ಸಿಗ್ವಾಲ್ವ ಎಂಬ ಯುವತಿಯನ್ನು ಪ್ರೀತಿಸುತ್ತಾರೆ. ಅವರು ಅಲ್ಲಿಯೇ ಸುಖಜೀವನ ನಡೆಸಬಹುದಿತ್ತು. ಆದರೆ ಭಾರತದಲ್ಲಿ ಗ್ರಾಮೀಣಾಭಿವೃದ್ಧಿಯ ಕನಸು ಹೊತ್ತು 1979ರಲ್ಲಿ ಭಾರತಕ್ಕೆ ಮರಳುತ್ತಾರೆ. ಮೇವಿಸ್‌ ಕೂಡ ಮದುವೆಯಾಗಿ ಹಿರೇಮಠರ ಜೊತೆ ಭಾರತಕ್ಕೆ ಬರುತ್ತಾರೆ. ಇಲ್ಲಿ ಬಂದಾಗ ಅವರ ಹೆಸರು ಶಾಮಲಾ. 

ADVERTISEMENT

ಧಾರವಾಡಕ್ಕೆ ಬರುವ ಹಿರೇಮಠ ಮತ್ತು ಅವರ ಪತ್ನಿ ರಾಣೆಬೆನ್ನೂರು ತಾಲ್ಲೂಕಿನ ಅತ್ಯಂತ ಹಿಂದುಳಿದ ಪ್ರದೇಶವಾದ ಮೆಡ್ಲೇರಿ ಗ್ರಾಮವನ್ನು ಕೇಂದ್ರವಾಗಿಟ್ಟುಕೊಂಡು, ಅಲ್ಲಿನ ಜನರ ಆರೋಗ್ಯ, ಸ್ವಾವಲಂಬನೆ, ಮಹಿಳೆಯರ ಜಾಗೃತಿಯಂತಹ ಅನೇಕ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡುತ್ತಾರೆ. ಈ ಅಧ್ಯಾಯಗಳಲ್ಲಿ ಹಿರೇಮಠರಿಗಿಂತಲೂ ಅವರ ಪತ್ನಿ ಶಾಮಲಾ ಈ ನೆಲದ ಮಗಳಾಗಿ ಬೆಳೆಯುವ ವಿವರಗಳು ಅದ್ಭುತವಾಗಿ ಮೂಡಿಬಂದಿವೆ. ಮೆಡ್ಲೇರಿಯಲ್ಲಿ ಆರಂಭಿಸುವ ‘ಇಂಡಿಯಾ ಡೆವೆಲಪ್‌ಮೆಂಟ್‌ ಸರ್ವೀಸ್‌’(ಐಡಿಎಸ್‌) ಸಂಸ್ಥೆಯು ಅಭಿವೃದ್ಧಿ ಚಟುವಟಿಕೆಗಳಿಗೆ ಸೀಮಿತವಾಗಿದ್ದರೆ ಹಿರೇಮಠರು ಹಲವಾರು ಇತರೆ ಸಂಸ್ಥೆಗಳ ಮುಖ್ಯಸ್ಥರಲ್ಲಿ ಒಬ್ಬರಾಗುತ್ತಿದ್ದರು. ಆದರೆ ಹರಿಹರದ ಪಾಲಿಫೈಬರ್‌ ಫ್ಯಾಕ್ಟರಿಯ ತ್ಯಾಜ್ಯ ತುಂಗಭದ್ರಾ ನದಿ ಸೇರಿ ನೀರು ವಿಷಗೊಂಡಾಗ ಹಿರೇಮಠರು ಹೋರಾಟ ನಡೆಸುತ್ತಾರೆ. 1984ರ ಈ ಹೋರಾಟ ಅವರನ್ನು ಸಾಮಾಜಿಕ ಚಳವಳಿಯತ್ತ ಕರೆತರುತ್ತದೆ. ಬಳ್ಳಾರಿ ರಿಪಬ್ಲಿಕ್ ಎಂದೇ ಕುಖ್ಯಾತಿ ಪಡೆದಿದ್ದ ಅಕ್ರಮ ಗಣಿಗಾರಿಕೆ ವಿರುದ್ಧ ಹುಟ್ಟುಹಾಕಿದ ‘ಜನಸಂಗ್ರಾಮ ಪರಿಷತ್‌’(2010) ಬೀದಿ ಹೋರಾಟ ಮತ್ತು ನ್ಯಾಯಾಲಯದಲ್ಲಿನ ಹೋರಾಟಕ್ಕೆ ಮಾದರಿಯಾಗಿದೆ. ಈ ಹೋರಾಟದಿಂದ ಗಣಿಗಾರಿಕೆಗೆ ತಡೆಯಾಗಿ ಗಣಿಗಳ್ಳರ ಬಂಧನವೂ ಆಗುತ್ತದೆ. ಇಲ್ಲಿಂದ ನಂತರ ‘ಜನಸಂಗ್ರಾಮ ಪರಿಷತ್‌’ ಸಾಗಿಬಂದ ವಿವರಗಳು ಸೊಗಸಾಗಿವೆ.

ಒಬ್ಬ ವ್ಯಕ್ತಿ, ವ್ಯಕ್ತಿಯಾಗಿ ಮತ್ತು ವ್ಯಕ್ತಿತ್ವವಾಗಿ ಎರಡೂ ರೀತಿಯಲ್ಲಿ ಸದಾ ವ್ಯಕ್ತವಾಗುತ್ತಾರೆ. ಹಿರೇಮಠರ ವ್ಯಕ್ತಿತ್ವವನ್ನು ಪ್ರಧಾನವಾಗಿಯೂ ವ್ಯಕ್ತಿಯ ಮಿತಿಗಳನ್ನು ಸೂಕ್ಷ್ಮವಾಗಿಯೂ ಲೇಖಕಿ ಈ ಕೃತಿಯಲ್ಲಿ ಪ್ರತಿಪಾದಿಸಿದ್ದಾರೆ. ಹಿರೇಮಠರ ವೈಯಕ್ತಿಯ ಜೀವನದ ಏರಿಳಿತಗಳನ್ನು ದಾಖಲಿಸಿದ್ದಾರೆ. ಅವರ ಹೋರಾಟಗಳು ಯಾಕೆ ದೊಡ್ಡ ಆಂದೋಲನವಾಗಲಿಲ್ಲ ಎಂಬ ಹಿರೇಮಠರ ಸಹವರ್ತಿಗಳ ಆಯಾಮವೂ ಕೃತಿಯಲ್ಲಿ ಸಿಗುತ್ತದೆ. ಈ ಕೃತಿಯ ಓದು ಕೇವಲ ಒಬ್ಬ ವ್ಯಕ್ತಿಯ ಜೀವನದ ಕಥೆಯಾಗದೆ ದೇಶದ ಐದು ದಶಕಗಳ ರಾಜಕೀಯ, ಸಾಮಾಜಿಕ, ಆಡಳಿತಾತ್ಮಕ ಮತ್ತು ಪರಿಸರದ ಕಥೆಯಾಗಿದೆ. ಅಂತಿಮವಾಗಿ ಪರ್ಯಾಯ ಬದುಕಿನ ಕನಸುಗಳನ್ನೂ ಒಳಗೊಂಡಿದೆ. 

ಮಹಾಸಂಗ್ರಾಮಿ

ಲೇ: ರೂಪಾ ಹಾಸನ

ಪ್ರ:ಅಭಿರುಚಿ ಪ್ರಕಾಶನ

ಸಂ:9980560013‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.