ನವಿಲು ಪುರಾಣ
ಮೂಲ: ಇಂತಿಜಾರ್ ಹುಸೇನ್
ಕನ್ನಡಕ್ಕೆ: ಪ್ರೊ.ಕೆ.ಇ. ರಾಧಾಕೃಷ್ಣ
ಪ್ರ: ಸೃಷ್ಟಿ ಪಬ್ಲಿಕೇಷನ್ಸ್
ಸಂ: 9845096668
ಜೀವಪರ ಚಿಂತಕನಾದ ಯಾವೊಬ್ಬ ವ್ಯಕ್ತಿಗೂ ಜಾತಿ-ಕುಲ-ಗೋತ್ರ, ಧರ್ಮದ –ಅಂತೆಯೇ ದೇಶದ– ಗಡಿಗೆರೆಗಳು ಮುಖ್ಯವಾಗುವುದಿಲ್ಲ. ಅಷ್ಟೇ ಅಲ್ಲ, ಅವು ಆತನನ್ನು ತಡೆದು ನಿಲ್ಲಿಸಲಾರವು ಕೂಡ. ಇದಕ್ಕೆ ಬಹುದೊಡ್ಡ ಉದಾಹರಣೆ ಗೌತಮ ಬುದ್ಧ. ನೂರಾರು ಶತಮಾನಗಳಿಂದ ಇಂದಿನವರೆಗೂ ಮಿತಿಗಳನ್ನೆಲ್ಲ ಮೀರಿ ಆತ ಬೆಳೆದು ಉಳಿದವನು. ಅಂತೆಯೇ ಕಾಲಾಂತರದಲ್ಲಿ ಈ ನೆಲದ ಬಸವಾದಿ ಶರಣರು, ಸಂತರು, ಸೂಫಿಗಳು, ತತ್ವಪದಕಾರರೂ ಪ್ರತಿಪಾದಿಸಿರುವ ಬದುಕಿನ ಸತ್ಯಗಳು ಇಂದು, ಎಂದೆಂದೂ ಮನನ ಯೋಗ್ಯವಾಗಿವೆ. ಇಂತಹ ನೆಲೆಯಲ್ಲಿಯೇ ಚಿಂತಿಸಿದವರು ಕಥೆಗಾರ ಇಂತಿಜಾರ್ ಹುಸೇನ್.
ಭಾರತ ಮೂಲದವರೇ ಆದ ಹುಸೇನ್ ಅವರು ಭಾರತ ವಿಭಜನೆಯ ನಂತರ ಪಾಕಿಸ್ತಾನಕ್ಕೆ ಹೋದವರು. ಒಬ್ಬ ಕಾದಂಬರಿಕಾರರಾಗಿ, ಕಥೆಗಾರರಾಗಿ ರಾಷ್ಟ್ರ-ಅಂತರರಾಷ್ಟ್ರೀಯ ಮನ್ನಣೆಗೆ ಪಾತ್ರರಾದವರು. ಅವರು ಬರೆದಿರುವ (A chronicle of the Peacocks) ಕಥೆಗಳನ್ನು ಪ್ರೊ. ಕೆ.ಈ.ರಾಧಾಕೃಷ್ಣ ಅವರು ‘ನವಿಲು ಪುರಾಣ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ.
ಮೂಲ ನೆಲದಿಂದ ಬೇರು ಕಿತ್ತುಕೊಂಡ ಮರ ಇನ್ನೊಂದು ನೆಲದಲ್ಲಿ ಅಷ್ಟೊಂದು ಸಹಜವಾಗಿ, ಮೂಲ ನೆಲದಲ್ಲಿಯಷ್ಟು ಸದೃಢವಾಗಿ ಬೇರುಬಿಟ್ಟು ಬೆಳೆಯಲು ಸಾಧ್ಯವಾಗುವುದಿಲ್ಲ. ಹಾಗೆಯೇ ಮನುಷ್ಯ ಕೂಡ. ಆತ ತನ್ನ ಮೂಲ ನೆಲೆಯಿಂದ ಅನ್ಯ ನೆಲೆಗೆ ಅನಿವಾರ್ಯವಾಗಿ ಹೋಗಬೇಕಾದಾಗ, ಅಲ್ಲಿಯೇ ಬಾಳಬೇಕಾದಾಗ ಮೂಲದ ಆತ್ಮವಿಶ್ವಾಸ, ನಿಶ್ಚಿಂತಭಾವ ಕಡಿಮೆಯಾಗಿರುತ್ತದೆ. ತವಕ-ತಲ್ಲಣ, ಅತಂತ್ರಭಾವ ಸದಾ ಬಾಧಿಸುತ್ತಿರುತ್ತದೆ. ಮನುಷ್ಯ ತನ್ನ ದೇಹಕ್ಕಾದ ಗಾಯವನ್ನು ಕೆಲಕಾಲದ ನಂತರ ಮರೆಯಲು ಸಾಧ್ಯವಿದೆ. ಆದರೆ, ಮನಸ್ಸಿಗಾದ ಗಾಯ ಮತ್ತೆ ಮತ್ತೆ ಮರುಕಳಿಸುತ್ತದೆ. ಇಂತಹ ಸಂಕಟವೇ ಕೆಲವು ಸಲ ಆತನಿಂದ ಅದ್ಭುತವಾದದ್ದನ್ನು ಹುಟ್ಟಿಸುತ್ತದೆ. ಇದಕ್ಕೆ ತಕ್ಕ ಉದಾಹರಣೆ ಇಂತಿಜಾರ್ ಅವರ ಕಥೆಗಳು.
ಪಿತೃಭೂಮಿಯಾದ ಪಾಕಿಸ್ತಾನದ ಮುಸ್ಲಿಂ ತೀವ್ರವಾದಿಗಳು ತಮ್ಮನ್ನು ತಪ್ಪು ತಿಳಿಯಬಾರದು, ಅಂತೆಯೇ ಭಾರತದ ಹಿಂದೂ ಅತಿರೇಕವಾದಿಗಳೂ ತಮ್ಮನ್ನು ದುರುಪಯೋಗ ಮಾಡಿಕೊಳ್ಳಬಾರದು ಎಂಬ ವಿನಮ್ರತೆಯುಳ್ಳವರು ಅವರು. ಯಾವುದೇ ಕಲೆಯೂ ರಾಜಕೀಯದ ಅಡಿಯಾಳಾಗಬಾರದು ಎಂದು ನಂಬಿದ, ಆ ರೀತಿಯಲ್ಲಿಯೇ ಬದುಕಿದ, ಅದನ್ನೇ ತಮ್ಮ ಸಾಹಿತ್ಯದಲ್ಲಿ ಜೀವಂತಗೊಳಿಸಿದ ಕಥೆಗಾರ ಇಂತಿಜಾರ್.
‘ನವಿಲು ಪುರಾಣ’ದಲ್ಲಿ ಒಟ್ಟು ಹದಿನೈದು ಕಥೆಗಳಿವೆ. ‘ಬರೆಯಲಾಗದ ಪುರಾಣ’ ಕಥೆಯು ಕಥಾನಾಯಕನಿಗೆ ಇರಬೇಕಾದ ಎಲ್ಲ ಯೋಗ್ಯತೆಗಳಿದ್ದರೂ ಅವಕಾಶವಂಚಿತನಾಗುವುದರ ಸುತ್ತಲಿನ ವ್ಯವಸ್ಥೆಯ ಚಿತ್ರಣವನ್ನು ತೆರೆದುತೋರುತ್ತದೆ. ಭಾರತದಲ್ಲಿದ್ದಾಗ ತುಂಬ ಗೌರವಸ್ಥನೂ ಅನುಕೂಲಸ್ಥನೂ ಆಗಿದ್ದ ಈತ ಪಾಕಿಸ್ತಾನಕ್ಕೆ ಹೋದಮೇಲೆ ತನ್ನವರಿಂದಲೇ ಅವಮಾನಿತನಾಗಿ, ನಿರ್ಗತಿಕನಾಗಿ ತೊಳಲಾಡಬೇಕಾಗುತ್ತದೆ. ದೇಶವೊಂದರ ನಾಗರಿಕ ಮನಸ್ಸುಗಳು ಛಿದ್ರಗೊಂಡಾಗ, ಭವಿಷ್ಯದ ಅರಿವಿಲ್ಲದೆ ತೀರ್ಮಾನಗಳನ್ನು ಕೈಗೊಂಡಾಗ ಅಲ್ಲಿನ ಜನಜೀವನ ಅಸ್ತವ್ಯಸ್ತಗೊಳ್ಳುವ ಪರಿ ಮನ ಮಿಡಿಯುವಂತಹದ್ದು. ಅಂತಹ ಚಡಪಡಿಕೆಯನ್ನು ಕಥೆ ಸಶಕ್ತವಾಗಿ ಕಟ್ಟಿಕೊಟ್ಟಿದೆ.
ಯುವಕನೊಬ್ಬ ಸಂಬಂಧ-ವಿಘಟನೆಗಳ ಸಂದರ್ಭದಲ್ಲಿ ಪಡುವ ಸಂಕಟವನ್ನು ‘ಆಮೆ’ ಕಥೆಯು ಪ್ರತಿಬಿಂಬಿಸುತ್ತದೆ. ಗೋಪಾಲ, ವಿದ್ಯಾಸಾಗರ ಹಾಗೂ ಸುಂದರ ಸಮುದ್ರದ ನಡುವಿನ ಸಂಬಂಧಗಳ ಹೊಯ್ದಾಟ ಮನಕಲಕುವಂತಹದ್ದು, ಬಿಟ್ಟುಬಂದ ತಾಯ್ನೆಲ, ಅಲ್ಲಿನ ಸಮರಸದ ಸುಮಧುರ ಜೀವನಾನುಭವ ಇವ್ಯಾವುವನ್ನೂ ಮರೆಯಲಿಕ್ಕಾಗದ ಗೊಂದಲಮಯ ಸ್ಥಿತಿಯನ್ನು ಇಲ್ಲಿಯ ಪಾತ್ರಗಳು ಅನುಭವಿಸುವುದು ವ್ಯವಸ್ಥೆಯ ಪ್ರತಿಬಿಂಬವಾಗಿ ಕಂಡುಬರುತ್ತದೆ.
‘ಸಂಪೂರ್ಣ ಜ್ಞಾನ’ ಎಂಬ ಕಥೆಯು ಹಿಂದೂ-ಮುಸ್ಲಿಮರೆಲ್ಲ ಹೇಗೆ ಯಾವ ತರತಮವೂ ಇಲ್ಲದಂತೆ ಬೆರೆತು ಬಾಳಿ ಬದುಕುತ್ತಿದ್ದರು ಎನ್ನುವುದನ್ನು ಅರಿವಿಗೆ ತರುತ್ತದೆ. ಪ್ರತಿಹೆಜ್ಜೆಗೂ ಹೊಸತರೆಡೆಗೆ ತುಡಿಯುತ್ತ ಸಾಗುವ ಕಥೆ ಓದುಗರಲ್ಲಿ ಕುತೂಹಲವನ್ನು ಇಮ್ಮಡಿಗೊಳಿಸುತ್ತ ಮುಂದುವರಿಯುತ್ತದೆ. ಹುಟ್ಟು ಬ್ರಾಹ್ಮಣನಾಗಿದ್ದ ಮನೋಹರ ದಾರಿಬಿಟ್ಟು ನಡೆದವನು. ಒಮ್ಮೆ ತಂದೆಯ ಹಿತೋಪದೇಶವನ್ನು ಕೇಳಿ ಓದುಗಳನ್ನೆಲ್ಲ ಓದಿ ವಿದ್ವಾಂಸರೊಂದಿಗೆ, ಸಾಧಕರೊಂದಿಗೆ ಚರ್ಚಿಸಿ ಜ್ಞಾನಸಂಪಾದಿಸಿದರೂ ತೃಪ್ತಿ ಕಾಣದವನು. ಮನಸ್ಸಿನ ಚಂಚಲತೆಯಿಂದ ಕೊರಗಿದವನು. ಹಿತೈಷಿ ಗುರುವಿನ ಉಪದೇಶವನ್ನು ಕೇಳಿ ಎಲ್ಲ ಕಾಮನೆಗಳನ್ನು ಗೆದ್ದು ಗುರುವಿನಲ್ಲಿ ಅರ್ಪಿಸಿಕೊಂಡಾಗ ಗುರುವೇ ಆತನನ್ನು ತನ್ನ ಪೀಠದಲ್ಲಿ ಕುಳ್ಳಿರಿಸಿ ತಾನು ಹೊರಡುವುದು ಕಥೆಯ ಮಾರ್ಮಿಕವಾದ ಅಂತ್ಯ.
ಬುದ್ಧನಂತೆಯೇ ಇಲ್ಲಿಯೂ ಸಾಧಕನಿಗೆ ಮತ್ತೆ ಮತ್ತೆ ಪರೀಕ್ಷೆಗೆ ಈಡುಮಾಡುವ ಕ್ರಮ ಜಾತಕ ಕಥೆಗಳನ್ನು ನೆನಪಿಗೆ ತರುತ್ತದೆ. ಗಮನಿಸಬೇಕಾದ ಮತ್ತೊಂದು ಕಥೆ ‘ದುಃಖನಗರಿ’. ಈ ಕಥೆಯಲ್ಲಿ ಮೂರು ಪಾತ್ರಗಳು ತಾವೇ ಹುಟ್ಟುಹಾಕಿದ ವ್ಯವಸ್ಥೆಯಿಂದ ರೋಸಿಹೋದರೂ ಅದರಿಂದ ಬಿಡಿಸಿಕೊಳ್ಳದ ಅಸಹಾಯಕತೆಯಲ್ಲಿ ಸಿಲುಕುತ್ತವೆ. ತಮ್ಮನ್ನೇ ತಾವು ಕೊಂದುಕೊಂಡು ಹೆಣವಾಗಿರುವವರು ತಮ್ಮ ತಮ್ಮ ಹೆಣಗಳನ್ನೇ ಹೊತ್ತು ತಿರುಗಾಡಿ ಹೂಳಲು ಹೆಣಗಿ ಸೋಲುವ ಪರಿ ವ್ಯವಸ್ಥೆಯ ಮುಖಕ್ಕೆ ಕನ್ನಡಿ ಹಿಡಿಯುತ್ತದೆ. ನಿಷ್ಕರುಣೆ, ನಿರ್ದಯಿಗಳಾದ ಈ ಮೂರೂ ಪಾತ್ರಗಳು ವಿಭಜನೆಯ ಸಂದರ್ಭದ ಹಿಂದೂ-ಮುಸ್ಲಿಂ ಜನಾಂಗದ ಪ್ರತಿನಿಧಿಗಳಾಗಿ ಕಾಣುತ್ತವೆ.
‘ಹಿಂದೂಸ್ತಾನ ಒಂದು ಪತ್ರ’, ‘ದೋಣಿ’, ‘ಒಕ್ಕಣ್ಣ ದಜ್ಜಾಲ’, ‘ಎಲೆಗಳು’, ‘ರೈಲುನಿಲ್ದಾಣದ ಜಗಲಿ’ ಕುತೂಹಲದಿಂದ ಓದಿಸಿಕೊಂಡು ಹೋಗುವಕಥೆಗಳು. ಒಂದು ಕಾಲ-ದೇಶದ ಸಾಮಾಜಿಕ, ಸಾಂಸ್ಕೃತಿಕ ಜೀವನದ ವಿಘಟನೆಯ ಗಳಿಗೆಯಲ್ಲಿ ಅಲ್ಲಲ್ಲಿಯ ಜನ ಅನುಭವಿಸುವ ಸಂಕಟ-ವಿಷಾದ ಎಂತಹದ್ದು ಎನ್ನುವುದನ್ನು ಇಲ್ಲಿಯ ಕಥೆಗಳು ದರ್ಶಿಸುತ್ತವೆ. ‘ಒಕ್ಕಣ್ಣ ದಜ್ಜಾಲ’ ಕಥೆ ಭಾರತದ ಪ್ರಸ್ತುತ ರಾಜಕೀಯ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.
ಅನುವಾದ ಎನ್ನುವುದು ಪರಕಾಯ ಪ್ರವೇಶದಷ್ಟೇ ಸತ್ಯ. ಒಂದು ಭಾಷೆಯ ಭಾವ ಮುಕ್ಕಾಗದಂತೆ ಇನ್ನೊಂದು ಭಾಷೆಯಲ್ಲಿ ಎರಕಹೊಯ್ಯುವುದು ತುಂಬ ಎಚ್ಚರಿಕೆಯ ಕೆಲಸ. ಅನುವಾದಕ ಒಂದು ಭಾಷೆಯನ್ನು ಪ್ರತಿಭಾಷೆಯಲ್ಲಿ ಇಳಿಸುವ ಯಂತ್ರವಲ್ಲ. ಅನುವಾದಕನಲ್ಲಿ ಮೂಲಕರ್ತೃವಿನ ಕುರಿತು ವಿಶೇಷ ಕುತೂಹಲ ಹಾಗೂ ಗೌರವಗಳಿರಬೇಕು.
ಮೂಲಕರ್ತೃವಿನ ವಿಚಾರಶೀಲತೆಯನ್ನು ಅವನು ಚೆನ್ನಾಗಿ ಅರಿತಿರಬೇಕು. ರಾಧಾಕೃಷ್ಣ ಅವರು ಅಂತಹ ಸೂಕ್ಷ್ಮಗ್ರಾಹಿ. ಇಂತಿಜಾರ್ ಅವರ ಕಥೆಗಳನ್ನು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.