ADVERTISEMENT

ಮೊದಲ ಓದು: ಸೌಹಾರ್ದ ಪ್ರತಿಬಿಂಬಿಸುವ ಕಥೆಗಳು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 23:31 IST
Last Updated 26 ಅಕ್ಟೋಬರ್ 2024, 23:31 IST
ಮುಖಪುಟ
ಮುಖಪುಟ   

ತಮ್ಮ ಐವತ್ತನೇ ವಯಸ್ಸಿನಲ್ಲಿ ಬರವಣಿಗೆಗೆ ಅಡಿಯಿಟ್ಟ ಡಾ.ಮಿರ್ಜಾ ಬಷೀರರಿಗೆ ಭಾವಿ ಸಮಾಜದ ಬಗ್ಗೆ ಇರುವ ಅತಂಕ, ಭಯ, ದಿನಂಪ್ರತಿ ಕಣ್ಣಿಗೆ ರಾಚುವ ದ್ವೇಷ, ಬಡತನ, ಶೋಷಣೆ, ಮಾನವ ದೌರ್ಬಲ್ಯದಿಂದ ಘಟಿಸುವ ಅನ್ಯಾಯಗಳು, ಅವೆಲ್ಲವನ್ನೂ ಮೀರಿ ಸಮಾಜದಲ್ಲಿ ಅಡಗಿರುವ ಉತ್ಕಟ ಮಾನವ ಪ್ರೀತಿ, ಪ್ರಾಮಾಣಿಕತೆ, ಸಹಬಾಳ್ವೆ, ಆಶಾಭಾವನೆ, ಕಳಕಳಿಯ ಪ್ರತೀಕವೇ ‘ಅಬ್ರಕಡಬ್ರ’.

ಪುಸ್ತಕದಲ್ಲಿರುವ 9 ಕಥೆಗಳೂ ದೇಶದ ಸಾಮರಸ್ಯವನ್ನು ಬಿಂಬಿಸುವ, ಧರ್ಮಗಳ ಗೋಡೆ ಮೀರಿ ಜನರ ಮನಸಿನಲ್ಲಿ ಹಾಸುಹೊಕ್ಕಿರುವ ಸೌಹಾರ್ದವನ್ನು ಪ್ರತಿಬಿಂಬಿಸುತ್ತವೆ. ಜೊತೆಗೆ ಧರ್ಮ ಕಲಹ, ದೇಶ ಎಷ್ಟೇ ಮುಂದುವರಿದರೂ ಕೋಮುವಾದದ ವಿಷ ಇನ್ನೂ ಜನರ ಮನಸಿನಲ್ಲಿ ಆಳವಾಗಿ ಬೇರೂರಿರುವುದು, ಅದು ಮಾನವೀಯತೆಯನ್ನೂ ಮೀರಿ ದೊಡ್ಡ ಭೂತವಾಗಿ ಕಾಡುತ್ತಿರುವುದರ ಬಗೆಗಿನ ವಿಷಾದ, ನೋವು, ಸಂಕಟ ಕಥೆಗಳಲ್ಲಿ ಕಾಣಬಹುದು. ಗಾಢ ಕತ್ತಲೆಯ ನಡುವೆ ಬೆಳಕು ಚೆಲ್ಲಿ ಹಾರಿ ಬರುವ ಮಿಂಚುಹುಳದಂತೆ ಕಥೆಗಾರ ಆಶಾವಾದಿಯಾಗಿಯೂ ಕಾಣುತ್ತಾರೆ.

ಊರಲ್ಲಿ ನಿರ್ಮಾಣವಾಗುತ್ತಿರುವ ಹನುಮಂತನ ಗುಡಿಗೆ ದೇಣಿಗೆ ಕೊಡುವುದಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಣ್ಣನಿಗೆ ವಾಗ್ದಾನ ಮಾಡಿ ತೆರಳಿದ ಮಸ್ತಾನ್‌ ಸಾಹೇಬರು, ಕೋಮುಗಲಭೆಯ ಬೆಂಕಿಗೆ ಸಿಲುಕಿ ಆಸ್ಪತ್ರೆ ಸೇರಿ ಹಲವು ಗಂಟೆಗಳ ಬಳಿಕ ಕಣ್ಣು ತೆರೆದಾಗ ಮೊದಲು ಕಂಡಿದ್ದು ಚಂದ್ರಣ್ಣನ ಮುಖವನ್ನೇ.... ‘ಇರುವವನೊಬ್ಬನೇ ಚಂದಿರ’ ಕಥೆಯಲ್ಲಿ ಬರುವ ಈ ಸನ್ನಿವೇಶವು ಮಾನವ ಸಂಬಂಧಗಳಿಗೆ ಯಾವುದೇ ಗೋಡೆಯಿಲ್ಲ ಎನ್ನುವುದನ್ನು ನಿರೂಪಿಸುತ್ತದೆಯಲ್ಲದೇ, ಅದಕ್ಕೆ ಅಳಿವಿಲ್ಲ ಎನ್ನುವುದನ್ನೂ ಸಾರುತ್ತದೆ. ಇಬ್ಬರ ಮುಖವನ್ನು ಯುಗಾದಿ ಹಾಗೂ ರಂಜಾನ್ ಚಂದಿರನಿಗೆ ಕಥೆಗಾರ ಹೋಲಿಸಿದ್ದು ಸಮಾಜ ತಾಳಮೇಳವನ್ನು ಪ್ರತಿಬಿಂಬಿಸುತ್ತದೆ.

ADVERTISEMENT

‘ಅದಲು–ಬದಲು’ ಕಥೆಯಲ್ಲಿ ಭಿನ್ನ ಧರ್ಮಿಯರಿಬ್ಬರ ನಡುವ ಸಾಮರಸ್ಯ ಸಂಬಂಧ ಕಡಿದು, ಮತ್ತೆ ಹಿಂದಿನ ರೀತಿಯೇ ಸ್ನೇಹ ಚಿಗುರುವುದನ್ನು ಚಿತ್ರಿಸಿದ್ದಾರೆ. ಸಾಮರಸ್ಯಕ್ಕೆ ಕದಡುವ ಇಂಥ ವೈಮನಸ್ಸುಗಳು ತಾತ್ಕಾಲಿಕ ಎನ್ನುವುದನ್ನು ಲೇಖಕರು ನಿರೂಪಿಸಿದ್ದಾರೆ.

ಈ ಕಥೆಗಳು ಹಿಂದೆ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಳತೆನಿಸದ, ಸರಾಗವಾಗಿ ಓದಿಸಿಕೊಂಡು ಹೋಗವ ಮನೋಜ್ಞ ನಿರೂಪಣೆ ಗಮನ ಸೆಳೆಯುತ್ತದೆ. ಸಮಾಜವನ್ನು ಒಳಗಣ್ಣನಿಂದ ನೋಡಿ ಅದನ್ನು ಕಥಾ ರೂಪಕ್ಕಿಳಿಸಿರುವುದು ಕಥೆಗಾರರ ಹೆಚ್ಚುಗಾರಿಕೆ. ಇಲ್ಲಿನ ಕಥೆಗಳು ಇಂದಿನ ದುರಿತ ಕಾಲದ ಬಗ್ಗೆ ಆತಂಕಿತರಾಗುವ ‍ಪ್ರತಿಯೊಬ್ಬರ ಅಭಿವ್ಯಕ್ತಿಯೂ ಹೌದು.

ಅಬ್ರಕಡಬ್ರ

ಲೇ: ಡಾ. ಮಿರ್ಜಾ ಬಷೀರ್‌

ಪ್ರ: ಬಹುರೂಪಿ

ಸಂ: 7019182729

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.