ADVERTISEMENT

ಮೊದಲ ಓದು: ಗಾಂಧಿ ಕಗ್ಗೊಲೆ ಮತ್ತು ಆನಂತರದ ಭಾರತ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 0:09 IST
Last Updated 23 ಜೂನ್ 2024, 0:09 IST
ಗಾಂಧೀಜಿಯ ಹಂತಕ ಮತ್ತು ಗೋಡ್ಸೆ ಎಂಬ ವ್ಯಕ್ತಿ ಆತನ ದೃಷ್ಟಿಯ ಭಾರತ
ಗಾಂಧೀಜಿಯ ಹಂತಕ ಮತ್ತು ಗೋಡ್ಸೆ ಎಂಬ ವ್ಯಕ್ತಿ ಆತನ ದೃಷ್ಟಿಯ ಭಾರತ   

ಇದು ಭಾವಕೋಶದ ತಂತ್ರದಿಂದ ನವಿರಾಗಿ ಹೆಣೆದ ಕಥೆಯಲ್ಲ. ಸ್ವತಂತ್ರ ಭಾರತದಲ್ಲಿ ಸಂಭವಿಸಿದ ಮೊದಲ ಭಯೋತ್ಪಾದಕ ಕೃತ್ಯ ಎನಿಸಿರುವ ಮಹಾತ್ಮ ಗಾಂಧಿಯ ಹತ್ಯೆಯ ಭೂತ ವರ್ತಮಾನವನ್ನು ಅನುಸಂಧಾನ ಮಾಡುವ ಕ್ರಿಯೆ. ಚಾರಿತ್ರಿಕವಾದ ಆ ದುರ್ಘಟನೆಗೆ ಕಾರಣೀಭೂತವಾದ ವ್ಯವಸ್ಥಿತ ಸಂಚಿನ ಹಲವು ಸಂಗತಿಗಳು ನಿಗೂಢವಾಗಿದ್ದು, ಅವುಗಳನ್ನು ಬೆಳಕಿಗೆ ಒಡ್ಡುವ ಕ್ರಿಯೆ ಇಲ್ಲಿ ನಡೆದಿದೆ. ಅದಕ್ಕಾಗಿ ಸಾವಿರಾರು ದಾಖಲೆಗಳ ಹಿಡಿದುಕೊಂಡು ಸತ್ಯದ ಆವಿಷ್ಕಾರವನ್ನು ಪತ್ರಕರ್ತ ಧೀರೇಂದ್ರ ಕೆ. ಝಾ ಮಾಡಿದ್ದಾರೆ. ಅದನ್ನು ಅಷ್ಟೇ ಆಸ್ಥೆಯಿಂದ ಅಂಕಣಕಾರ ಎ. ನಾರಾಯಣ, ಪತ್ರಕರ್ತ ಮನೋಜಕುಮಾರ್‌ ಗುದ್ದಿ ಕನ್ನಡಕ್ಕೆ ಅನುವಾದಿಸಿದ್ದಾರೆ.

1948 ಜನವರಿ 30ರಂದು ಮಹಾತ್ಮ ಗಾಂಧಿ ಹತ್ಯೆ ನಡೆಯುತ್ತದೆ. ಆ ಘಟನೆಯನ್ನೇ ಗರ್ಭೀಕರಿಸಿ ಕೃತಿ ವಿಕಾಸವಾಗುತ್ತದೆ. ಹಿನ್ನೋಟ ತಂತ್ರದ ಮೂಲಕ ಭಾರತದ ರಾಷ್ಟ್ರೀಯ ಚಳವಳಿಯ ಚರಿತ್ರೆಯ ಅನಾವರಣವನ್ನು ಲೇಖಕ ಸಂಶೋಧನಾ ಶಿಸ್ತಿನಲ್ಲಿ ಮಾಡಿದ್ದಾರೆ. ಅಪಾರ ಪರಿಶ್ರಮ ಮತ್ತು ಅಸಂಖ್ಯೆ ದಾಖಲೆಗಳ ಅಧ್ಯಯನದಿಂದ ಕೃತಿ ರೂಪಿಸುವ ಧೀರೇಂದ್ರ ಕೆ. ಝಾ ಅಗತ್ಯ ಅನಿಸಿದಲ್ಲಿ ಆಕರ ಸಾಮಗ್ರಿಗಳ ಅಡಿಟಿಪ್ಪಣಿಯನ್ನು ಪ್ರತ್ಯೇಕವಾಗಿ ನೀಡಿದ್ದಾರೆ. ಕೃತಿ ‘ಆರಂಭಿಕ ತಂತ್ರ’ ಮತ್ತು ‘ಅಂತಿಮ ಸಂಚು’ ಎಂದು ಎರಡು ಭಾಗವನ್ನು ಒಳಗೊಂಡಿದೆ. ಹಂತಕನ ಬಂದೂಕಿನ ನಳಿಕೆಯಲ್ಲಿ ಕಣ್ಣಿಟ್ಟು ಮಹಾತ್ಮ ಗಾಂಧಿ ಬದುಕಿನ ಶೋಧವನ್ನು ಮಾಡುವ ಕೃತಿಕಾರರ ಯತ್ನ 18 ಅಧ್ಯಾಯಗಳಲ್ಲಿ ಅನಾವರಣಗೊಂಡಿದೆ. 

ಭಾರತ ಸ್ವತಂತ್ರ ಚಳವಳಿಯಲ್ಲಿ ಭಾಗಿವಾಗಿದ್ದ ನಾಥುರಾಮ್‌ ವಿನಾಯಕ ಗೋಡ್ಸೆ, ಮಹಾತ್ಮ ಗಾಂಧಿ ಅನುಯಾಯಿಯಾಗಿರುತ್ತಾರೆ. ಅಪಾರ ಆಧ್ಯಾತ್ಮಿಕ ಮನೋಭಾವದ ಗೋಡ್ಸೆ ಮೆಟ್ರಿಕ್ಯುಲೇಶನ್ ಫೇಲಾಗಿ ಶಿಕ್ಷಣವನ್ನು ಅಲ್ಲಿಗೆ ಬಿಟ್ಟು ರಾಷ್ಟ್ರೀಯ ಚಳವಳಿಯಲ್ಲಿ ತೊಡಗುತ್ತಾರೆ. ವಿನಾಯಕ ದಾಮೋದರ ಸಾವರ್ಕರ್‌ ಪರಿಚಯ ಆತನ ಚಿಂತನೆಯ ದಿಕ್ಕನ್ನೇ ಬದಲಿಸುತ್ತದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಕಾಂಗ್ರೆಸನ್ನು ಮುನ್ನೆಡೆಸುವ ಮುನ್ನವೇ ಸಾವರ್ಕರ್‌ ಕೂಡ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಿದ್ದರು. ಬಾಲಗಂಗಾಧರ ತಿಲಕ್‌, ಸಾವರ್ಕರ್‌ ಅವರನ್ನು ಇಂಗ್ಲೆಂಡ್‌ಗೆ ಉನ್ನತ ವ್ಯಾಸಂಗಕ್ಕೆ ಕಳಿಸುತ್ತಾರೆ. ಅಲ್ಲಿದ್ದಾಗಲೇ ‘ಮೊದಲ ಸ್ವಾತಂತ್ರ್ಯ ಸಂಗ್ರಾಮ’ಕ್ಕೆ 50 ವರ್ಷ ತುಂಬಿದ್ದರಿಂದ ಅದರ ಸ್ಮರಣೆಗೆ ಅವರು ‘ದ ಫಸ್ಟ್‌ ವಾರ್‌ ಆಫ್‌ ಇಂಡಿಪೆಂಡೆನ್ಸ್‌’ ಕೃತಿಯನ್ನು 1907ರಲ್ಲಿ ಪ್ರಕಟಿಸುತ್ತಾರೆ. ಬಾಂಬ್‌ ತಯಾರಿಸುವ ಬಗ್ಗೆ ಕೈಪಿಡಿಯನ್ನೂ ರಚಿಸಿ ಭಾರತಕ್ಕೆ ಕಳಿಸುತ್ತಾರೆ. ಲಂಡನ್‌ನಲ್ಲಿ ಮದನ್‌ ಲಾಲ್‌ ದಿಂಗ್ರಾ ಸ್ನೇಹ ಸಂಪಾದಿಸಿ ರಾಷ್ಟ್ರೀಯ ಚಳವಳಿಯ ಸಂರಚನೆಯ ಬಗ್ಗೆ ಚಿಂತಿಸುತ್ತಾರೆ. ಕ್ರಮೇಣ ಅವರು ಮುಸ್ಲಿಮರ ವಿರುದ್ಧ ಹಿಂದೂಗಳನ್ನು ಸಂಘಟಿಸಲು ಮುಂದಾಗಿ, ರಾಷ್ಟ್ರೀಯ ಕಾಂಗ್ರೆಸ್‌ ಚಳವಳಿಯಿಂದ ವಿಮುಖರಾಗುವ ವಿವರವನ್ನು ಈ ಕೃತಿ ನೀಡುತ್ತದೆ. ಈ ಬೆಳವಣಿಗಳು ಸ್ವಾತಂತ್ರೋತ್ತರ ಭಾರತವನ್ನು ರೂಪಿಸುವಲ್ಲಿ ಹೇಗೆ ಸವಾಲಾದವು ಎನ್ನುವ ಒಳನೋಟವನ್ನೂ ಒಳಗೊಂಡಿದೆ.

ADVERTISEMENT

ಗಾಂಧೀಜಿಯ ಹಂತಕ ಮತ್ತು ಗೋಡ್ಸೆ ಎಂಬ ವ್ಯಕ್ತಿ ಆತನ ದೃಷ್ಟಿಯ ಭಾರತ ಇಂಗ್ಲಿಷ್‌ ಮೂಲ: ಧೀರೇಂದ್ರ ಕೆ ಝಾ ಕನ್ನಡ ಅನುವಾದ: ಎ. ನಾರಾಯಣ ಮನೋಜಕುಮಾರ್‌ ಗುದ್ದಿ ಪ್ರ: ಅಹರ್ನಿಶಿ ಪ್ರಕಾಶನ ಸಂ: 9449174662

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.