ಡಿ.ವಿ.ಎಸ್ ಕಾಲೇಜು ಸಮಿತಿ ಅಧ್ಯಕ್ಷ ಕೆ.ಎನ್.ರುದ್ರಪ್ಪ ಅವರ ಬದುಕಿನ ದರ್ಶನ ಮಾಡಿಸುವ ಕೃತಿ ‘ಕೊಳಲೆ ಕೆ.ಎನ್.ರುದ್ರಪ್ಪ ಮತ್ತು ಮಲೆನಾಡು ಕಥಾನಕ’. ಕೆ.ಎನ್.ರುದ್ರಪ್ಪನವರ ಕುಟುಂಬದ ಸದಸ್ಯರು, ಆಪ್ತರು ಅವರ ಕುರಿತಾಗಿ ಬರೆದ ಲೇಖನಗಳೆಲ್ಲ ಒಟ್ಟಾಗಿ ಈ ಕೃತಿ ರೂಪುಗೊಂಡಿದೆ. ಡಾ.ಎಚ್.ಟಿ.ಕೃಷ್ಣಮೂರ್ತಿ ಕೃತಿಯನ್ನು ಸಂಪಾದಿಸಿದ್ದಾರೆ.
‘ನೀವು ಯಾರ ರೀತಿ ಆಗಬೇಕೆಂದು ಇಷ್ಟಪಡುವಿರೋ ಅವರಂತೆ ಆಗುವ ಮೊದಲ ಹೆಜ್ಜೆಯೆಂದರೆ; ಅವರ ಪ್ರವೃತ್ತಿಗಳನ್ನು ಗುರುತಿಸುವುದು. ಬಹುಶಃ ಕೊಳಲೆ ರುದ್ರಪ್ಪಗೌಡರು ಈ ಆದರ್ಶವಾಕ್ಯವನ್ನು ತಮ್ಮ ಬದುಕಿನಲ್ಲಿ ಘೋಷವಾಕ್ಯವನ್ನಾಗಿ ಅಳವಡಿಸಿಕೊಂಡಿದ್ದರೋ ಏನೋ! ಇಲ್ಲದಿದ್ದಲ್ಲಿ ಇಂತಹ ಆದರ್ಶಮಯ ಜೀವನ ಕಥಾನಕ ನಮಗಿಂದು ಪ್ರಾಪ್ತಿಯಾಗುತ್ತಿರಲಿಲ್ಲ. ಒಳ್ಳೆಯ ಸಂದರ್ಭಗಳಲ್ಲಿ ಕೈಕುಲುಕುವುದರಿಂದ ಸಂಬಂಧ ಗಟ್ಟಿಯಾಗುವುದಿಲ್ಲ. ಬಿಕ್ಕಟ್ಟಿನ ಸ್ಥಿತಿಯಲ್ಲಿ ಹೃದಯಕ್ಕೆ ಹತ್ತಿರವಾಗುವುದರಿಂದ ಅದು ಗಟ್ಟಿಯಾಗುವುದು. ಬೇರೆಯವರ ಕಷ್ಟದಲ್ಲಿ ನೆರವಾಗುವುದರಿಂದ ತಪ್ಪಿಸಿಕೊಳ್ಳದೆ ತಮ್ಮ ಜೀವನಯಾನಕ್ಕೆ ಒಂದು ಸಾರ್ಥಕತೆಯನ್ನು ಕಂಡುಕೊಂಡವರು ಕೊಳಲೆ ರುದ್ರಪ್ಪಗೌಡರು’ ಎಂದು ಬಿ.ಎಲ್.ಶಂಕರ್ ತಮ್ಮ ಲೇಖನದಲ್ಲಿ ಕೆ.ಎನ್.ರುದ್ರಪ್ಪನವರ ವ್ಯಕ್ತಿತ್ವ ದರ್ಶನ ಮಾಡಿಸುತ್ತಾರೆ.
ರುದ್ರಪ್ಪನವರ ಬೆಳವಣಿಗೆಯಲ್ಲಿ, ಅಭಿವೃದ್ಧಿಯಲ್ಲಿ, ಪ್ರಜ್ಞೆ ಮೂಡುವಲ್ಲಿ ಬಹುಪಾಲು ಪಡೆದ ಅವರ ಕುಟುಂಬ, ಪರಿಸರದ ಕುರಿತು ಬರಹಗಳು ಕೃತಿಯ ಮೊದಲ ಭಾಗ ‘ಕೆ.ಎನ್. ರುದ್ರಪ್ಪ ಕಥಾನಕ’ದಲ್ಲಿದೆ. ಇಲ್ಲಿ ರುದ್ರಪ್ಪನವರ ಕುಟುಂಬದವರು, ಸಂಬಂಧಿಕರು ರುದ್ರಪ್ಪನವರ ಜೊತೆಗಿನ ತಮ್ಮ ಒಡನಾಟದ ಕುರಿತು ಬರೆದಿದ್ದಾರೆ. ಶೃಂಗೇರಿಯ ಶಾರದೆ ಸಂಬಂಧ ಕಾಶ್ಮೀರದವರೆಗೂ ಇದೆ. ಜಗತ್ತಿನಲ್ಲಿಯೇ ಅತ್ಯುತ್ತಮವಾದ ಕಾಫಿ ಬೆಳೆಯುವ ನಾಡು. ಸಾಹಿತ್ಯ, ಶಿಲ್ಪಕಲೆಗಳ ಬೀಡು ಹೌದು. ಇಂಥ ಶೃಂಗೇರಿ ಕ್ಷೇತ್ರವನ್ನು ಕೇಂದ್ರವಾಗಿರಿಸಿ ಕೃತಿಯ ಎರಡನೇ ಭಾಗ ‘ಮಲೆನಾಡು ಕಥಾನಕ’ ಹೆಣೆಯಲಾಗಿದೆ.
ಹಾಗಂತ ಇಡೀ ಕೃತಿ ವ್ಯಕ್ತಿ ಚಿತ್ರಣದಂತೆಯೋ, ಆತ್ಮಕಥೆಯಾಗಿಯೋ ಭಾಸವಾಗುವುದಿಲ್ಲ. ಇಂದಿನ ಪೀಳಿಗೆಗೆ ಸ್ಫೂರ್ತಿಯಾಗುವಂತಹ ರುದ್ರಪ್ಪನವರ ಸಾಧನಾ ಬದುಕಿನ ಅನಾವರಣ ಇಲ್ಲಿದೆ. ಮಲೆನಾಡಿನ ಸಮಸ್ಯೆ, ಹೋರಾಟ, ಶೈಕ್ಷಣಿಕ ಕ್ರಾಂತಿಯ ಕುರಿತಾದ ಸಾಕಷ್ಟು ವಿಚಾರಗಳು ಅಲ್ಲಲ್ಲಿ ಓದಲು ಸಿಗುತ್ತವೆ. ಒಟ್ಟಾರೆ 60 ಲೇಖನಗಳಿದ್ದು, ಆಪ್ತವಾಗುವ ಭಾಷೆಯಿದೆ. ಮಲೆನಾಡಿನ ಸೊಗಡು ಕಾಣುತ್ತದೆ.
ಸಂ: ಡಾ.ಎಚ್.ಟಿ.ಕೃಷ್ಣಮೂರ್ತಿ
ಪ್ರ: ಗೀತಾಂಜಲಿ ಪುಸ್ತಕ
ಸಂ:9449886390
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.