ಪ್ರಬಂಧ, ಪ್ರಸ್ತಾಪ, ಸಾಂದರ್ಭಿಕ, ಸಂದರ್ಶನ ಎಂಬ ನಾಲ್ಕು ಭಾಗಗಳಲ್ಲಿರುವ ಈ ‘ಮಾಯದಕನ್ನಡಿ’ಯಲ್ಲಿ ನಾವು ನಮ್ಮನ್ನು ಬೆರಗುಗೊಳಿಸುವಷ್ಟು ವ್ಯಾಪಕ ಜ್ಞಾನವುಳ್ಳ ಒಬ್ಬ ವಿದ್ವಾಂಸನನ್ನಷ್ಟೇ ಅಲ್ಲ, ನಮಗೆ ಮನವರಿಕೆ ಮಾಡಿಕೊಡುವಷ್ಟೇ ಉಜ್ವಲವಾಗಿ ನಮ್ಮನ್ನು ಪ್ರಚೋದಿಸುವ ಪ್ರಬಂಧಕಾರನನ್ನೂ ಎದುರುಗೊಳ್ಳುತ್ತೇವೆ. ಈ ಬರಹಗಳು ತಮ್ಮ ಬೌದ್ಧಿಕ ವ್ಯಾಪ್ತಿಯಿಂದ ಹೇಗೋ ಹಾಗೆ ತಮ್ಮ ಸೂಕ್ಷ್ಮ ಗ್ರಹಣಶಕ್ತಿಯಿಂದಲೂ ವಿಶಿಷ್ಟ ದೃಷ್ಟಿಕೋನದಿಂದಲೂ ನಮ್ಮ ಗಮನ ಸೆಳೆಯುತ್ತವೆ.
‘ಮೈಲುತುತ್ತದ ನೀಲ ಸ್ಫಟಿಕ’ ಎಂಬ ಪ್ರಬಂಧವನ್ನೇ ತೆಗೆದುಕೊಳ್ಳಿ. ಅಡಿಕೆಯ ಕೊಳೆರೋಗಕ್ಕೆ ಸಿಂಪಡಿಸುವ ಮೈಲುತುತ್ತವನ್ನು ಕುರಿತು ಒಂದು ಧ್ಯಾನದಂತಿರುವ ಈ ಪ್ರಬಂಧ 18ನೆಯ ಶತಮಾನದಲ್ಲಿ ಫ್ರಾನ್ಸಿನ ಬೋರ್ದೊ ವಿಶ್ವವಿದ್ಯಾಲಯ ಕಂಡುಹಿಡಿದ ಬೋರ್ದೊ ದ್ರಾವಣ, ಕೆನಡಾದ ಲೆಸ್ಲೀ ಕೋಲ್ಮನ್ ಮೈಸೂರು ಪ್ರಾಂತ್ಯದಲ್ಲಿ ಅಡಿಕೆಯ ಕೊಳೆ ರೋಗಕ್ಕೆ ಸೂಚಿಸಿದ ಅದೇ ಬೋರ್ದೊ ದ್ರಾವಣ, ಮೈಲುತುತ್ತದ ನೀಲಿಬಣ್ಣದ ಪ್ರಭೆ, ಸಂಸ್ಕೃತದಲ್ಲಿ ಅದಕ್ಕಿರುವ ತುತ್ಥ, ತುತ್ಥಕ ಎಂಬ ಹೆಸರುಗಳು, ಮಯೂರ-ಮೈರ-ಮೈಲು ಎಂಬ ಮಾರ್ಗದಲ್ಲಿ ನಡೆದ ಅಪಭ್ರಂಶ, ನವಿಲು ತುತ್ತವೇ ಮೈಲುತುತ್ತವಾದ ಬಗೆ, ರಾಸಾಯನಿಕ ಕ್ರಿಯೆಯಿಂದ ಉಂಟಾಗುವ ವಸ್ತುಧರ್ಮದ ಬದಲಾವಣೆ, ಕ್ವಾಂಟಂ ಭೌತಶಾಸ್ತ್ರ, ದರ್ಶನಶಾಸ್ತ್ರದ ಭಾಷೆಯಲ್ಲಿ ಪದಾರ್ಥ ಮೀಮಾಂಸೆ, ಛಾಂದೋಗ್ಯೋಪನಿಷತ್ತಿನ ‘ತ್ರಿವೃತ್ಕರಣ’, ಆಮೇಲಿನ ಸಿದ್ಧಾಂತಕಾರರ ‘ಪಂಚೀಕರಣ’ವೆಂಬ ಪರಿಕಲ್ಪನೆ, ತಾಮ್ರ-ಗಂಧಕ-ನೀರುಗಳಿಂದ ಹುಟ್ಟಿದ ಮೈಲುತುತ್ತದ ಸ್ಫಟಿಕ ಆ ಐದು ಮೂಲವಸ್ತುಗಳಲ್ಲೂ ಇಲ್ಲದ ನೀಲಿಪ್ರಭೆಯನ್ನು ಪಡೆದುಕೊಳ್ಳುವ ಪರಿ, ಮೈಲುತುತ್ತದ ನೀಲಿಯನ್ನು ದ್ವೈತ-ಅದ್ವೈತ-ವಿಶಿಷ್ಟಾದ್ವೈತಗಳು ಹೇಗೆ ಗ್ರಹಿಸಬಹುದೆಂಬ ವಿಚಾರಲಹರಿ- ಹೀಗೆ ನಾವು ಯೋಚಿಸಿರದ/ಗಮನಿಸಿರದ ಅನೇಕ ವಸ್ತು ವಿಶೇಷಗಳನ್ನು ಚರ್ಚಿಸುವ, ಕೇಂದ್ರದಿಂದ ಹೊರಟು ಹತ್ತು ದಿಕ್ಕುಗಳಲ್ಲಿ ಸಂಚರಿಸಿ ಮತ್ತೆ ಕೇಂದ್ರಕ್ಕೇ ಹಿಂದಿರುಗುವ ಈ ಪ್ರಬಂಧ ಹಲವು ಬಣ್ಣದ ಎಳೆಗಳನ್ನು ನೆಯ್ದು ರಚಿಸಲಾದ ಒಂದು ಸುಂದರ ವಿನ್ಯಾಸ.
ಈ ಪುಸ್ತಕದ ಶೀರ್ಷಿಕೆಯೂ ಆಗಿರುವ ಮೊದಲ ಪ್ರಬಂಧ ‘ಮಾಯದ ಕನ್ನಡಿ’ ಕೇರಳದ ಕಣ್ಣೂರಿನ ಬಳಿಯ ಒಂದು ಊರಿನಲ್ಲಿ ನಡೆದ ತೆಯ್ಯಮ್ ಪ್ರದರ್ಶನವನ್ನು ನಿರೂಪಿಸುತ್ತ ಅದ್ವೈತದಂಥ ಅಮೂರ್ತತತ್ತ್ವವನ್ನು ಸಾಕ್ಷಾತ್ಕರಿಸಿ ಕೊಡುತ್ತದೆ. ಲೌಕಿಕ ಬುನಾದಿಯಲ್ಲೇ ಅಲೌಕಿಕ ಅನುಭವವೊಂದು ಘಟಿಸಿಬಿಟ್ಟಿತೆಂದು ನಮಗೆ ಮನವರಿಕೆ ಮಾಡಿಕೊಡುವ ಅಕ್ಷರ ‘ನಾವೆಲ್ಲ ನಿಜವೆಂದು ಭಾವಿಸಿರುವ ಈ ಲೋಕದಲ್ಲಿ ಎಷ್ಟು ನೆಮ್ಮದಿಯಾಗಿ ಮುಳುಗಿಕೊಂಡಿರುತ್ತೇವೆ ಅಂದರೆ, ಅದರ ಆಚೆಗಿನ ಒಂದು ಝಲಕು ಕಂಡರೂ ಸಾಕು, ನಮ್ಮ ಮನಸ್ಸು ವಿಚಲಿತಗೊಂಡು ಆತಂಕ ಹುಟ್ಟುತ್ತದೆ; ನಮಗೆ ಕಾಣುವ ಈ ಭೌತಿಕದ ಆಚೆಗೂ ಏನೆಲ್ಲ ಇರಬಹುದಲ್ಲ ಅನ್ನಿಸಿ ಭಯವಾಗತೊಡಗುತ್ತದೆ’ ಎಂದು ತಮ್ಮ ಮಿತ್ರರೊಬ್ಬರ ಮಾತನ್ನು ಉಲ್ಲೇಖಿಸುತ್ತಾರೆ. ‘ಕಾಣ್ಕೆ ಕಣ್ಕಟ್ಟುಗಳ ನಡುವೆ ಗೆರೆ ಬಲು ತೆಳುವು’.
‘ಪ್ರಜ್ಞೆ ಎಂಬ ಪದಾರ್ಥ’ ಇನ್ನೊಂದು ಮುಖ್ಯ ಪ್ರಬಂಧ. ಅಮೆರಿಕನ್ ಕಂಪೆನಿಯ ಉನ್ನತ ಉದ್ಯೋಗಿಗಳಾದ ಗಂಡ–ಹೆಂಡಿರ (ಸಂಭವನೀಯ) ವೈಯಕ್ತಿಕ ಸಮಸ್ಯೆಯೊಂದರ ಜಾಡು ಹಿಡಿದು ಕೃತಕ ಬುದ್ಧಿಮತ್ತೆ, ಪ್ರಜ್ಞೆ ಪದಾರ್ಥದ ಮೇಲೆ ಎಂಥ ಯಶಸ್ಸು ಸಾಧಿಸಬಹುದೆಂದು ಸೂಚಿಸುವ ಒಂದು ರಂಗಪ್ರಸಂಗ, ಸ್ಟಾನಿಸ್ಲಾವ್‌ಸ್ಕಿಯ ಅಭಿನಯ ಶಿಕ್ಷಣ ವಿಧಾನ, ಮನೋವಿಜ್ಞಾನ, ಡೆಕಾರ್ಟ್ ಮತ್ತು ಗೆಲಿಲಿಯೋರ ವಿಚಾರಗಳು, ಸಾಂಖ್ಯದರ್ಶನ ಮೊದಲಾದವುಗಳನ್ನು ಪರಿಗ್ರಹಿಸಿ ಕಡೆಗೆ ಅಂತರ್ಜಾಲದಲ್ಲಿ ‘ಪ್ಯಾನ್‌ಸೈಖಿಸಮ್‌ನ ತತ್ತ್ವದ ಮೂಲಾಂಶವು ಅದ್ವೈತ ಮತ್ತು ಪ್ರತ್ಯಭಿಜ್ಞಾನಗಳಲ್ಲಿ ಕಾಣಸಿಗುತ್ತದೆ ಎಂದು ಸೂಚಿಸುವ ಹಲವು ಉಲ್ಲೇಖಗಳು ನನಗೆ ಕಾಣಸಿಕ್ಕಿದವು’ ಎಂದು ಕೊನೆಗೊಳ್ಳುತ್ತದೆ.
ಭಾರತದಲ್ಲಿ ಬ್ರಿಟಿಷರ ಆಡಳಿತಕ್ಕೆ ಮೊದಲು ಎಂಥ ಪರಿಸ್ಥಿತಿಯಿತ್ತೆಂದು ತಿಳಿಯಲು ಹಲವು ದಶಕಗಳ ಕಾಲ ಸಂಶೋಧನೆ ನಡೆಸಿದ ಧರಮ್‌ಪಾಲ್ ಲಂಡನ್ನಿನ ಬ್ರಿಟಿಷ್ ಮ್ಯೂಸಿಯಮ್‌ನಲ್ಲಿ ಮತ್ತು ಇಂಡಿಯಾ ಆಫೀಸ್ ಲೈಬ್ರರಿಯಲ್ಲಿ ಸಾವಿರಾರು ಪುಟಗಳಷ್ಟು ದಾಖಲೆಗಳನ್ನು ಕೈಯಲ್ಲಿ ಬರೆದು ಪ್ರತಿಮಾಡಿಕೊಂಡವರು. ‘ಗಾಂಧಿಯ ಗುರಿಗೆ ಧರಮ್‌ಪಾಲ್ ದಾರಿಗಳು’ ಎಂಬ ಲೇಖನದಲ್ಲಿ ಅಕ್ಷರ ಅವರು ಇಂಗ್ಲಿಷಿನಲ್ಲಿರುವ ಧರಮ್‌ಪಾಲರ ಐದು ಮುಖ್ಯ ಗ್ರಂಥಗಳ ವಿಚಾರಗಳನ್ನು ಸಂಗ್ರಹಿಸಿ ಕೊಡುತ್ತ, ‘18-19ನೆಯ ಶತಮಾನಗಳ ಇತಿಹಾಸ ಕುರಿತು ಭಾರತದ ಇನ್ನಾವ ಸಂಶೋಧಕನೂ ಮಾಡಿದ್ದಕ್ಕಿಂತ ಹೆಚ್ಚು ಕೆಲಸ ಮಾಡಿದ್ದಾರೆ; ಆದರೆ, ಇತಿಹಾಸದ ಪಠ್ಯಗಳಲ್ಲಿ ಅವರ ಹೆಸರು ಕಾಣಸಿಗುವುದಿಲ್ಲ’ ಎಂದಿರುವುದು ನಮ್ಮಕಾಲದ ವ್ಯಂಗ್ಯವೇ ಸರಿ.
ಒಳ್ಳೆಯ ಬರವಣಿಗೆಯನ್ನು ಇಷ್ಟಪಡುವವರೆಲ್ಲರೂ ಅಕ್ಷರ ಅವರ ಶೈಲಿಯನ್ನು, ಆ ಶೈಲಿಗಿರುವ ಧ್ವನಿಶಕ್ತಿಯನ್ನು,ಅದಕ್ಕಿರುವ ಓಜಸ್ಸನ್ನುಇಷ್ಟಪಡಲೇಬೇಕು. ಅವರಲ್ಲಿ ಅಸ್ಪಷ್ಟತೆಯಿಲ್ಲ; ‘ರಾಜಕೀಯವಾಗಿ ಸರಿ’ಎನ್ನುವಂಥ ಒಂದೇಒಂದು ವಾಕ್ಯವೂ ಇಲ್ಲ. ಇನ್ನು ಅವರ ಪ್ರಬಂಧಗಳಲ್ಲಿ/ಲೇಖನಗಳಲ್ಲಿ ಎಂಥ ಸಂರಚನೆಯಿರುತ್ತದೆಂದರೆ ಅವು ಪರಿಪೂರ್ಣವಾಗಿ ಕಟ್ಟಿದ ಕಟ್ಟಡದಂತೆ ನಿಜಕ್ಕೂ ಪ್ರಮಾಣಬದ್ಧವಾಗಿರುತ್ತವೆ. ನನಗೆ ಅನ್ನಿಸುವಂತೆ ಅವರದು ಡಿವಿಜಿಯವರ ಗದ್ಯಕ್ಕೆ ಹತ್ತಿರವಾಗಿರುವ ಗದ್ಯ. ತೀರ ಗಂಭೀರವಾದ ವಿಷಯವನ್ನು ಚರ್ಚಿಸುವಾಗ, ಒಂದು ಮುಖ್ಯ ವಿಚಾರವನ್ನು ವಿಷದಪಡಿಸಬೇಕೆನಿಸಿದಾಗ ಅವರು, ಡಿವಿಜಿಯವರ ಹಾಗೆಯೇ, ಓದುಗರನ್ನು ಹೆಜ್ಜೆಹೆಜ್ಜೆಗೂ ನಡೆಸುತ್ತ, ವಿಶಿಷ್ಟ ಕತೆ-ಪ್ರಸಂಗಗಳಿಂದ ಅವರ ಮನಸ್ಸನ್ನುಸೆಳೆದುಕೊಳ್ಳುತ್ತ ತಾರ್ಕಿಕ ಅಂತ್ಯವನ್ನು ತಲಪುತ್ತಾರೆ. ಅವರಿಗೆ ಬುದ್ಧಿವಂತರೆನಿಸಿಕೊಂಡವರ ಕೆಲವು ಅಭಿಪ್ರಾಯಗಳು ಮನವೊಲಿಕೆಯಿಂದ, ನಿರ್ಭೀತ ನಿಲುವಿನಿಂದ, ಸಮಗ್ರ ದೃಷ್ಟಿಯಿಂದ ಬದಲಾಗಬಹುದೇ ಹೊರತು ಒತ್ತಾಯ ಹೇರುವುದರಿಂದಲ್ಲ ಎಂದು ಗೊತ್ತಿದೆ.
ಕ್ಲೀಶೆಗಳನ್ನು ಬಹುವಾಗಿ ದ್ವೇಷಿಸಿದ ಜಾರ್ಜ್ರ‍್ವೆಲ್ ಅಭಿವ್ಯಕ್ತಿಯಲ್ಲಿ ನುಸುಳಬಹುದಾದ ಎಲ್ಲ ಬಗೆಯ ನಿರ್ಲಕ್ಷ್ಯವನ್ನೂ ದ್ವೇಷಿಸಿದ. ಅದಕ್ಕೆಕಾರಣ ಅವನಿಗೆ ಸ್ಪಷ್ಟ ಚಿಂತನೆಗೆ ಭಾಷೆಯ ಸ್ಪಷ್ಟತೆ ಅತ್ಯಗತ್ಯವೆಂಬ, ಸ್ಪಷ್ಟಚಿಂತನೆಯಿಲ್ಲದಿದ್ದರೆ ಸಾಮಾಜಿಕ ಆರೋಗ್ಯವೂ ಇಲ್ಲವೆಂಬ ನಂಬಿಕೆಯಿದ್ದದ್ದು. ಅಕ್ಷರ ಅವರು ಸಂಸ್ಕೃತಿಗಿರಬೇಕಾದ ಸ್ವಾಯತ್ತತೆಯ ಬಗ್ಗೆ ಬರೆಯಲಿ, ಕನ್ನಡ ಭಾಷೆಯ ಕ್ರಿಯಾಶೀಲತೆಗೆ ಬದಲಾಗಿ ನಾವು ಅನುಸರಿಸುತ್ತಿರುವ ‘ಪ್ರತಿಕ್ರಿಯಾಶೀಲತೆ’ಯ ಬಗ್ಗೆ ಎಚ್ಚರಿಸಲಿ, ಕನ್ನಡ ಪುಸ್ತಕೋದ್ಯಮ ಹುಡುಕಿಕೊಳ್ಳಬೇಕಾದ ದಾರಿಗಳ ಬಗ್ಗೆ ಬರೆಯಲಿ, ಚಿಪ್ಪಳಿ ಗೋಪಾಲಕೃಷ್ಣರಾಯರ ವ್ಯಕ್ತಿತ್ವವನ್ನು ಚಿತ್ತಿಸಲಿ, ಎಂ.ಎ. ಹೆಗಡೆ, ಜಿ.ರಾಜಶೇಖರ ಅವರ ಪಾಂಡಿತ್ಯ, ವೈಚಾರಿಕತೆಗಳ ಬಗ್ಗೆ ಬರೆಯಲಿ, ಅವರು ತೀರ ವೈಯಕ್ತಿಕ ಪ್ರಬೇಧ ಎನ್ನಿಸುವ ಪ್ರಬಂಧವನ್ನು ಸಾಮಾಜಿಕ ಚಿಂತನೆಯ ಒಂದು ಆಯಾಮವಾಗಿ ಪರಿವರ್ತಿಸುತ್ತಾರೆ. ಹಾಗಾಗಿ ಅವರು ಕೇವಲ ಚಿಂತಿಸುವುದಿಲ್ಲ, ತಮ್ಮ ಓದುಗರನ್ನೂ ಚಿಂತಿಸುವಂತೆ ಪ್ರೇರೇಪಿಸಬಲ್ಲವರು.
ಚರಿತ್ರೆ ವರ್ತಮಾನಗಳಲ್ಲಿ ಆಳವಾಗಿ ಮುಳುಗಿರುವ, ಪ್ರಸಂಗಗಳಿಂದ ಸೂಕ್ತಿಗಳಿಂದ ಸಮೃದ್ಧವಾಗಿರುವ, ಒಂದು ಜೀವಮಾನದ ಓದು ಅಧ್ಯಯನಗಳಿಂದ ಪ್ರಬೋಧನೆಗೊಂಡ ಒಂದು ಮನಸ್ಸು ಈ ‘ಮಾಯದಕನ್ನಡಿ’. ಇದು ನಮ್ಮ ಕಾಲದ ಬಹುಮುಖ್ಯ ಚಿಂತಕರೊಬ್ಬರ ವಿಚಾರಗಳನ್ನು ಕನ್ನಡಿಸುವ ಕನ್ನಡಿಯೂ ಹೌದು.
ಮಾಯದ ಕನ್ನಡಿ (ಲೇಖನ ಸಮುಚ್ಚಯ) ಲೇ: ಅಕ್ಷರ ಕೆ.ವಿ. ಪ್ರ: ಅಕ್ಷರ ಪ್ರಕಾಶನ ಹೆಗ್ಗೋಡು ಪು: 224 ದರ: ₹250 ಫೋನ್: 9449623526
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.