ಸೋಲಿಗ ಚಿತ್ರಗಳು
(ಆದಿವಾಸಿಗಳ ಬದುಕಿನೊಂದಿಗಿನ ಸ್ಮೃತಿಚಿತ್ರಗಳು)
ಲೇ: ಜಿ.ಎಸ್. ಜಯದೇವ
ಪ್ರ: ಪರಸ್ಪರ ಪ್ರಕಾಶನ
ಪುಟ: 298 ಬೆಲೆ: ರೂ. 320
ಸುಮಾರು ನಲವತ್ತು ವರ್ಷಗಳಿಂದ ಬಿಳಿಗಿರಿರಂಗನ ಬೆಟ್ಟದ ಸೋಲಿಗರಿಗಾಗಿ ತಮ್ಮ ಬದುಕನ್ನು ಮೀಸಲಿಟ್ಟು ಬದುಕಿದ ಜಿ.ಎಸ್. ಜಯದೇವ ಅವರ ದೀರ್ಘಕಾಲೀನ ಅನುಭವಗಳ ದಾಖಲೆ ಈ ಪುಸ್ತಕ. ಇದು ಬರೀ ಪುಸ್ತಕವಲ್ಲ; ತನ್ನನ್ನೇ ಎದುರಿನಲ್ಲಿ ಕರಗಿಸಿಕೊಂಡು ಅವರೊಡನೆ ನಡೆಸಿದ ಮಹಾಯಾನ. ಇದೊಂದು ರಸಯಾತ್ರೆ. ಸೋಲಿಗರ ರಂಗೇಗೌಡ ಮೈಸೂರು ಮಹಾರಾಜರಿಗೆ ಬಡಿಸಿದ ತಿಳಿಸಾರಿನಿಂದ ಆರಂಭವಾಗುವ ಈ ಯಾನ ತುದಿ ಮೊದಲಿಲ್ಲದ್ದು. ಇಲ್ಲಿ ಯಾವುದೂ ಮುಖ್ಯವೂ ಅಲ್ಲ; ಅಮುಖ್ಯವೂ ಅಲ್ಲ. ಇಲ್ಲಿನ ಒಬ್ಬೊಬ್ಬರ ಆಸೆ ಆಶೋತ್ತರಗಳೂ ಮತ್ತೊಬ್ಬರ ಅನುಕರಣೆ ಅಲ್ಲ. ಇಲ್ಲಿಯ ಮಸಣಮ್ಮ, ಭೂಲೋಕಶೆಟ್ಟಿ, ಅಚ್ಚುಗೇಗೌಡ, ಕುನ್ನೇಗೌಡ, ಮಂಜಿಗುಂಡಿ ಕೇತಮ್ಮ, ಕೇತೇಗೌಡ, ಡಾ.ಮಾದೇಗೌಡ, ಪುಸುಬ – ಡಾ.ರತ್ನಮ್ಮ, ಡಾ.ಜಡೇಗೌಡ – ಇವರೆಲ್ಲ ಹಲವು ಮಕ್ಕಳ ತಾಯಿಯ ಬೇರುಗಳ ಗುಚ್ಛದಂತೆ ಕಾಣಿಸುತ್ತಾರೆ. ಎಲ್ಲವೂ ಎಲ್ಲರದ್ದು ಎಂದುಕೊಂಡೇ ಸಾವಿರಾರು ವರ್ಷಗಳಿಂದ ಬಾಳಿದ ಇವರನ್ನು ಈಗ ಈ ಕಾಡು ನಿನ್ನದೆನ್ನುವುದಕ್ಕೆ ನಿನ್ನ ಹತ್ತಿರ ಏನು ದಾಖಲೆಯಿದೆ ಎಂದು ಕೇಳಿದರೆ ಏನು ಹೇಳಿಯಾರು?
ಬಿಳಿಗಿರಿರಂಗನ ಕಾವ್ಯದ ಒಂದು ಸಾಲು ಗಂಗಾಧರೇಶ್ವರನನ್ನು ಒಕ್ಕಲೆಬ್ಬಿಸಿದ್ದನ್ನು ಹಾಡುತ್ತದೆ. ದಾಸಯ್ಯನಾಗಿ ಒಳಬಂದ ಬಿಳಿಗಿರಿ ರಂಗ ಇಲ್ಲಿನ ಗಂಗಾಧರನನ್ನು ಒಕ್ಕಲೆಬ್ಬಿಸಿ ಬಾಳೆಪೋಡಿಗೆ ಕಳಿಸಿದ್ದು ಒಂದು ಕತೆ ಅಷ್ಟೇ ಅಲ್ಲ. ಅದು ಈ ಹೊತ್ತಿಗೂ ನಡೆಯುತ್ತಲೇ ಇರುವ ಒತ್ತುವರಿ. ಕುವೆಂಪು ಕೂಡ ತಮ್ಮ ‘ರಾಮಾಯಣ ದರ್ಶನಂ’ನಲ್ಲಿ ಕಾಡು ಮತ್ತು ನಾಡಿನ ಈ ಸಂಘರ್ಷವನ್ನು ಬೇರೆ ಆಯಾಮದಲ್ಲಿ ಚಿತ್ರಿಸಿದ್ದಾರೆ. ಇದು ಸಂಸ್ಕೃತಿ, ನಾಗರಿಕತೆ, ರಾಷ್ಟ್ರೀಯತೆಯ ಪರಿಕಲ್ಪನೆಗಳಡಿಯಲ್ಲಿ ನಡೆಯುತ್ತಿರುವ ವಂಚನೆ.
ಆದಿವಾಸಿ ಬುಡಕಟ್ಟು ಜನರನ್ನು ‘ನಿಮ್ಮ ಊರ‍್ಯಾವುದು’ ಎಂದು ಕೇಳಿದರೆ ತಡಬಡಾಯಿಸುತ್ತಾರೆ. ತಮ್ಮ ಕಾಡಿನ ಹೆಸರನ್ನೋ ತಾವು ಓಡಾಡುವ ಪ್ರಾಂತ್ಯದ ಹೆಸರನ್ನೋ ಹೇಳುತ್ತಾರೆ. ಬುಡಕಟ್ಟು ಜನರಿಗೆ ಕಾಡು ನದಿ ಬೆಟ್ಟಗುಡ್ಡಗಳಿರುವಾಗ ಬೇರೆ ಊರಿನ ಅಗತ್ಯವೇನು ಎನ್ನಿಸುತ್ತದೆ. ಸಾವಿರಾರು ವರ್ಷಗಳಿಂದ ಕಾಡಿನೊಳಗೆ ಬಾಳುತ್ತಿರುವ ಸಮೂಹಗಳಿಗೆ ‘ತಮ್ಮನಾಳ್ವರುಂ ಒಳರೆ?’ ಎಂಬ ಕಲ್ಪನೆ ಇಲ್ಲ. ನಿಮ್ಮನ್ನು ಆಳುತ್ತೇವೆ ಎಂದು ಕಾಡಿನೊಳಗೆ ಹೋದ ಅಧಿಕಾರಶಾಹಿ ಅವರು ಬದುಕುತ್ತಿರುವ ನೆಲದ ಹಕ್ಕುಪತ್ರ ಕೇಳುವುದು ದೊಡ್ಡ ವ್ಯಂಗ್ಯವೇ ಹೌದು. ಹಾಗಾಗಿ ಸೋಲಿಗರು, ಇರುಳಿಗರು, ಸಿದ್ಧಿಗಳು, ಕಾಡುಕುರುಬರು ಮುಂತಾದ ಬುಡಕಟ್ಟು ಜನರು ವಾಸಿಸುವ ಕಾಡಿನ ಆವಾಸ ಸ್ಥಾನಗಳನ್ನು ಅದು ಯಾವ ರಾಜ್ಯವೇ ಆಗಿರಲಿ, ಯಾವ ದೇಶವೇ ಆಗಿರಲಿ ಉಳಿದ ಸಾಮಾನ್ಯ ನೆಲದಂತೆ ಭಾವಿಸಲಾಗದು.
ನಮ್ಮ ಪಾಲಿಗೆ ಮನೆಯೆಂದರೆ ಮಹಡಿಮನೆ, ಮಹಾಮನೆ, ಅರಮನೆ, ಗುರುಮನೆ, ವಿಧಾನಸೌಧ ಇನ್ನೂ ಏನೇನೋ. ಆದರೆ ಸೋಲಿಗರ ಪಾಲಿಗೆ ಅವರದ್ದು ಖಾಲಿ ಗುಡಿಸಲು. ಅವರಿಗೆ ಗೊತ್ತಿದೆ. ಅಂತಿಮವಾಗಿ ಎಲ್ಲರೂ ವಾಸಿಸುವುದು ನಡುವಿನ ಖಾಲಿ ಜಾಗದಲ್ಲಿ. ಖಾಲಿಯೆಂಬುದು ಮಾತ್ರ ಸತ್ಯ. ಅದನ್ನು ಸುಮ್ಮನೆ ಬದುಕುವವರು ಆದಿವಾಸಿಗಳು. ಅದನ್ನು ತೋರಬೇಕು ಎನ್ನುವುದೂ ಇಲ್ಲ. ತೋರಲು ಇರುವುದಾದರೂ ಏನು? ಜಯದೇವ ಕೂಡ ತನ್ನದೆನ್ನುವುದನ್ನು ತ್ಯಜಿಸಿಯೇ ಬದುಕಿದವರು. ಅನಾಥರು, ಪರಿತ್ಯಕ್ತರು, ನನಗಿನ್ನು ಯಾರೂ ಇಲ್ಲವೆಂದುಕೊಂಡ ದೀನರಿಗೆ ಮನೆಯಾದವರು. ಅದು ಒಂದು ಆವರಣವಾದರೆ ಬಿಳಿಗಿರಿರಂಗನ ಬೆಟ್ಟದ ಸೋಲಿಗರ ಸಂಕಟಗಳಿಗೆ ದನಿಯಾಗಿರುವುದು ಮತ್ತೊಂದು.
ಸೋಲಿಗರ ಅತಿ ಮುಖ್ಯ ಆರಾಧ್ಯದೈವ ಒಂದು ದೊಡ್ಡ ಸಂಪಿಗೆ ಮರ! ಈ ಮರ ಒಂದು ಮಾತನಾಡುವ ದೈವ. ಕಾಡನ್ನೇ ದೈವವನ್ನಾಗಿಸಿಕೊಂಡ ಇವರ ದೈವ ಸಾಂಕೇತಿಕ ಸ್ವರೂಪದ್ದಲ್ಲ. ಅವರು ನಮ್ಮಂತೆ ಸಂದೇಹವನ್ನು ಪೂಜಿಸುವುದಿಲ್ಲ. ಅಲ್ಲಿನ ಪೂಜಾರಿಗಳಾಗಲೀ ತಮ್ಮಡಿಗಳಾಗಲೀ ನುಡಿವ ಮಾತು ದೈವದ ಮಾತೇ. ಸ್ವಾರ್ಥವಿಲ್ಲದ ದೈವಸಮಾನವಾದ ಜೀವಿಗಳು ಅವರು. ಅವರ ಬದುಕಿನ ಮೊದಲ ಲಕ್ಷಣವೆಂದರೆ ಅಸಂಗ್ರಹ. ಬೆಳೆದ ಬೆಳೆಯಲ್ಲಿ ಕಾಡುಪ್ರಾಣಿಗಳು ತಿಂದುಳಿದ ಅಲ್ಪಸ್ವಲ್ಪ ಕಾಳುಕಡ್ಡಿಗಳನ್ನೂ ಎಲ್ಲರಿಗೆ ಹಂಚಿಕೊಟ್ಟು, ಮುಂದಿನ ದಿನದಿಂದ ಗೆಣಸು ಅಗೆಯಲು ಹೊರಡುವವರು! ಹಾಗಾಗಿ ಅಲ್ಲಿ ಅಧಿಕಾರ ಕೇಂದ್ರಗಳು ಸೃಷ್ಟಿಯಾಗುವುದಿಲ್ಲ. ಅಲ್ಲಿ ಯಜಮಾನರೂ ಇಲ್ಲ, ಆಳುಗಳೂ ಇಲ್ಲ. ಇನ್ನು ಅವರಿಗೆ ಅಸ್ಮಿತೆಯ ಹಂಗಿಲ್ಲ. ಹಿಂದಿನಿಂದ ಏನನ್ನೂ ತರದ ಮುಂದಕ್ಕೆ ಏನನ್ನೂ ಉಳಿಸಿಹೋಗದ ಪ್ರಯಾಣ. ಹಾಗಾಗಿ ಅಲ್ಲಿ ಮನೆ, ಮನಸ್ಸಿಗೆ ಬೀಗ ಹಾಕುವುದಿಲ್ಲ.
ಗೋರುಕ ಎಂದು ತಮ್ಮನ್ನು ಸೋಲಿಗರು ಗುರುತಿಸಿಕೊಳ್ಳುತ್ತಾರೆ. ಗೋರುಕ ಎಂದರೆ ಜೇಡರ ಬಲೆ. ಅದೊಂದು ಸಂಬಂಧಾತ್ಮಕವಾದ ಜಗತ್ತು. ಇದನ್ನೇ ಬುದ್ಧಗುರು ಪ್ರತೀತ್ಯ ಸಮುತ್ಪಾದ ಎಂದು ಗುರುತಿಸಿದ್ದು. ಬೌದ್ಧ ತಾತ್ವಿಕತೆಯನ್ನು ಬುದ್ಧನ ಹಂಗಿಲ್ಲದೆ ಸೋಲಿಗರು ಬಾಳುತ್ತಿದ್ದಾರೆ. ಲೇಖಕರನ್ನು ಕಾಡುವ ಮತ್ತು ನಮ್ಮನ್ನೂ ಕಾಡುವ ದೊಡ್ಡಪ್ರಶ್ನೆ ಇದು: ಅವರನ್ನು ಅವರಿರುವಂತೆ ಬಿಡುವುದೇ ಅಥವಾ ನಮ್ಮಂತಾಗಿಸುವುದೇ? ಉತ್ತರ ಅಷ್ಟು ಸರಳವಲ್ಲ. ಕಾಡನ್ನು ಬದುಕುತ್ತಿರುವವರಿಗೆ ನಾಡನ್ನು ಕೊಡುವ ನಮ್ಮ ಪ್ರಯತ್ನವೇ ಪ್ರಶ್ನಾರ್ಹವಾದುದು.
ಈ ಹೊತ್ತಿನ ಅವರ ಸ್ಥಿತಿಯನ್ನು ಡಾ.ರತ್ನಮ್ಮನವರ ಈ ಮಾತು ಬಿಂಬಿಸುತ್ತಿದೆ: ‘ಸರ್ಕಾರ ನಮಗೆ ಶಿಕ್ಷಣ ಕೊಟ್ಟಿದೆ; ಅಕ್ಕಿ, ಗೋಧಿ, ಎಣ್ಣೆ, ತುಪ್ಪ ಎಲ್ಲಾನೂ ಕೊಡ್ತಾ ಇದೆ ನಿಜ. ಆದರೆ, ಏನ್ ಪ್ರಯೋಜನ ಸಾರ್? ನಗರಕ್ಕೆ ಬಂದ್ರೆ ನೌಕರಿ ಇಲ್ಲ, ಕಾಡ್‍ಗೋದ್ರೆ ಒಂದಿಷ್ಟಗಲ ಭೂಮಿ ಇಲ್ಲ. ನಮಗೆ ಶಿಕ್ಷಣ ಬೇಕೇ ಬೇಕು ಅಂತ ಏನಿಲ್ಲ. ನಮ್ಮ ಭೂಮಿ ನಮಗೆ ವಾಪಸ್ ಕೊಟ್ರೆ ಸಾಕು. ಎಲ್ಲೆಲ್ಲಿಂದ್ಲೊ ಬಂದ ಟಿಬೇಟನ್ನರಿಗೆ ಕಾಡು ಕಡ್ದು ಭೂಮಿ ಕೊಡ್ತಾರೆ. ಸಾವಿರಾರು ವರ್ಷದಿಂದ ಇಲ್ಲೇ ಇರೋ ನಮಗೆ ನಮ್ ಭೂಮಿ ಬಿಡಲ್ಲ ಅಂತಾರೆ. ಈ ಕಡೆ ಕಾಡೂ ಇಲ್ಲ, ಆ ಕಡೆ ನಾಡೂ ಇಲ್ಲ. ಕಾಡ್ನಲ್ಲಿ ನಮಗಿಷ್ಟ ಬಂದಂಗೆ ನಾವಿರ್ತಿದ್ವಿ. ನಮ್ಮನ್ನ ಎಳಕಂಡ್ ಬಂದು ಶಿಕ್ಷಣ ಕೊಟ್ಟು ಕಾಡು-ನಾಡು ಎರಡೂ ಇಲ್ದಂಗ್ ಮಾಡ್ಬಿಟ್ರು’.
ಆದಿವಾಸಿಗಳ ಈ ಅತಂತ್ರ ಸ್ಥಿತಿಗೆ ಯಾರನ್ನು ಹೊಣೆ ಮಾಡಬೇಕು? ಇದು ನಮ್ಮೆಲ್ಲರ ಮುಂದಿರುವ ಪ್ರಶ್ನೆ. ಎದುರಿಗಿರುವ ಈ ಪುಸ್ತಕದ ಜೊತೆಗೇ ಸಾವಿರಾರು ಸೋಲಿಗ ಆದಿವಾಸಿಗಳು ಉತ್ತರಕ್ಕೆ ಕಾಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.