ADVERTISEMENT

ಪುಸ್ತಕ ಪರಿಚಯ: ದಲಿತ ಕಣ್ಣಲ್ಲಿ ಗಾಂಧಿ ಹುಟ್ಟುತ್ತಾನೆ!

​ಪ್ರಜಾವಾಣಿ ವಾರ್ತೆ
Published 9 ಜೂನ್ 2024, 0:58 IST
Last Updated 9 ಜೂನ್ 2024, 0:58 IST
ದೇವನೂರ ಮಹಾದೇವ
ದೇವನೂರ ಮಹಾದೇವ   

ಬೇರೆ ಬೇರೆ ಸಂದರ್ಭದಲ್ಲಿ ದಿನ ಪತ್ರಿಕೆಗಳು, ನಿಯತಕಾಲಿಕೆಗಳು, ಪುಸ್ತಕ, ಬ್ಲಾಗ್‌, ಸ್ಮರಣ ಸಂಚಿಕೆ, ಸಂಪಾದಿತ ಕೃತಿಗಳಿಗಾಗಿ ಸಾಮಾಜಿಕ ಕಾರ್ಯಕರ್ತ, ಪ್ರಮುಖ ಲೇಖಕ ದೇವನೂರ ಮಹಾದೇವ ಅವರ ಜೊತೆ ನಡೆಸಿದ ಸಂದರ್ಶನಗಳನ್ನು ಸಂಗ್ರಹಿಸಿ ‘ದೇವನೂರ ಮಹಾದೇವ ಜೊತೆ ಮಾತುಕತೆ’ ಕೃತಿಯಾಗಿದೆ. ಎಚ್‌.ಎಲ್‌.ಪುಷ್ಪಾ, ರಾಜೇಂದ್ರ ಚೆನ್ನಿ, ಮಾವಳ್ಳಿ ಶಂಕರ್‌, ದು. ಸರಸ್ವತಿ, ಡಿ.ಎಸ್‌. ನಾಗಭೂಷಣ, ಓ.ಎಲ್‌. ನಾಗಭೂಷಣಸ್ವಾಮಿ, ರಹಮತ್‌ ತರಿಕೆರೆ ಮೊದಲಾದವರ ಸಂದರ್ಶನಗಳು ಸೇರಿ ಒಟ್ಟು 41 ಬರಹಗಳಿವೆ.

ವರ್ತಮಾನದ ಸಂದರ್ಭಕ್ಕೆ ದೇವನೂರ ಮಹಾದೇವ ಅವರ ಸಂವೇದನೆಯ ನೆಲೆಯನ್ನು ಗುರುತಿಸುವ ಯತ್ನವನ್ನು ಇಲ್ಲಿನ ಸಂದರ್ಶಕರು ಮಾಡಿದ್ದಾರೆ. ವಿಘಟನೆಯಾಗುತ್ತಿರುವ ದಲಿತ ಸಂಘರ್ಷ ಸಮಿತಿ ಒಂದಾಗಬೇಕು ಎಂಬ ಪ್ರಕ್ರಿಯೆ ಆರಂಭವಾದ ಸಂದರ್ಭದಲ್ಲಿ ‘ದಲಿತ ಸಮಾಜ ತಬ್ಬಲಿ ಆಯ್ತು’ ಪ್ರಜಾವಾಣಿ (25.4.2010) ಸುದೇಶ ದೊಡ್ಡಪಾಳ್ಯ ಅವರ ಎಡಗೈ, ಬಲಗೈ ಸಮಸ್ಯೆ ಹಾಗೆ ಉಳಿಯುತ್ತದಲ್ಲವೇ? ಪ್ರಶ್ನೆಗೆ ‘ಬಹಳ ಹಿಂದೆ ಪ್ರಜಾವಾಣಿಯ ವಾಚಕರವಾಣಿಗೆ ನಾನು ಒಂದು ಪತ್ರ ಬರೆದಿದ್ದೆ’ ಎಂದು ಅದರ ಸಾರಾಂಶವನ್ನು ಮತ್ತೆ ಸ್ಮರಿಸುತ್ತಾರೆ. ಆ ಸಮಸ್ಯೆಗೆ ಪರಿಶಿಷ್ಟ ಸಮುದಾಯದ ಜಾತಿ, ಉಪಪಂಗಡಗಳ ಜನಸಂಖ್ಯೆಯ ಗಣತಿ ಸಮರ್ಪಕವಾಗಿ ಮಾಡಬೇಕು. ನಂತರ ಆದ ಅನ್ಯಾಯವನ್ನು ಸರಿಪಡಿಸಬಹುದು ಎನ್ನುವ ಇಂಗಿತವನ್ನು ಮಹಾದೇವ ವ್ಯಕ್ತಪಡಿಸುತ್ತಾರೆ.

ರಾಜ್ಯದಲ್ಲಿ ಸೈದ್ಧಾಂತಿಕ ರಾಜಕೀಯದ ಪ್ರಯೋಗದ ಭಾಗವಾಗಿ ‘ಸರ್ವೋದಯ ಕರ್ನಾಟಕ’ ಪಕ್ಷ ಅಸ್ತಿತ್ವಕ್ಕೆ ಬಂದಿತ್ತು. ಅದಕ್ಕೆ ಹತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ದೇವನೂರ ಮಹಾದೇವ ಅವರ ಜೊತೆ ರಹಮತ್‌ ತರಿಕೆರಿ ನಡೆಸಿದ ಸುದೀರ್ಘ ಮಾತುಕತೆ ‘ಸರ್ವೋದಯ ನಡಿಗೆಯಲ್ಲಿ ತಿಟ್ಹತ್ತಿ ನಿಂತು...’ ಪ್ರಜಾವಾಣಿ, ಮುಕ್ತಛಂದ ಪುರವಣಿಯಲ್ಲಿ (2.8. 2015) ಪ್ರಕಟಗೊಂಡಿದೆ. ಅದರಲ್ಲಿ ದಲಿತರು, ರೈತರು ಹಾಗೂ ಶ್ರಮಿಕ ವರ್ಗವನ್ನು ಒಟ್ಟಾಗಿಸಿ ಪರ್ಯಾಯ ರಾಜಕಾರಣದ ಶಕ್ತಿಯಾಗಿ ಪರಿವರ್ತಿಸುವ ಆಯಾಮದ ಚರ್ಚೆ ಇದೆ. ‘ರಾಜಕೀಯದ ಸುಳಿ ಜೊತೆಗೆ ಗಾಂಧಿ...’ ಎಂಬ ಭಾಗದಲ್ಲಿ ಹತ್ತು ಲೇಖನಗಳು ಇವೆ. ಅದರಲ್ಲಿ ಅಮೃತಾ ದತ್ತ ‘ಗಾಂಧಿಯಿಂದ ದಲಿತರು ಏನು ನಿರೀಕ್ಷೆ ಮಾಡಬೇಕು’ ಎಂದು ಕೇಳುವ ಪ್ರಶ್ನೆಗೆ ‘ಗಾಂಧಿ ಮುಂದಿನ ಜನ್ಮದಲ್ಲಿ ಹರಿಜನ ಆಗಿ ಹುಟ್ಟಬೇಕು ಎನ್ನುತ್ತಾರೆ. ಇದು ಆಗುತ್ತೊ ಇಲ್ಲವೊ ನನಗೆ ಗೊತ್ತಿಲ್ಲ. ಆದರೆ ಗಾಂಧಿ ಬದುಕು ಬರಹ ನಡೆಗಳನ್ನು ದಲಿತ ಕಣ್ಣಲ್ಲಿ ಸಂಪಾದನೆ ಮಾಡಿದರೆ ಅಲ್ಲಿ ದಲಿತ ಗಾಂಧಿ ಹುಟ್ಟುತ್ತಾನೆ’ ಎಂದು ದೇವನೂರ ಸೂಕ್ಷ್ಮವಾಗಿ ಉತ್ತರಿಸುತ್ತಾರೆ. ‌

ADVERTISEMENT

ಆರ್‌ಎಸ್‌ಎಸ್‌ ಆಳ ಮತ್ತು ಅಗಲ, ಚಳವಳಿ, ಕನ್ನಡ ಸಾಹಿತ್ಯ ಸಂವಾದ ಮಾತ್ರವಲ್ಲದೆ, ಸಮಕಾಲೀನ ಅನೇಕ ಘಟನೆಗಳು ಮತ್ತು ದಲಿತ ಸಮಾಜಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ದೇವನೂರ ಮಹಾದೇವ ಅವರ ಪರಿಹಾರ ಸೂಚಕ ಪ್ರಶ್ನೋತ್ತರ ಮಾಲಿಕೆ ಈ ಕೃತಿ.

ದೇವನೂರ ಮಹಾದೇವ ಜೊತೆ ಮಾತುಕತೆ

ಸಂ: ಬನವಾಸಿಗರು

ಪ್ರ: ಅಭಿರುಚಿ ಪ್ರಕಾಶನ

ಸಂ: 9980560013

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.