ADVERTISEMENT

ವಿಮರ್ಶೆ: ಕನ್ನಡದಲ್ಲಿ ‘ಸಿಮೊನ್‌’ ಹೊನಲು

ಎಸ್.ನಟರಾಜ ಬೂದಾಳು
Published 27 ನವೆಂಬರ್ 2021, 19:30 IST
Last Updated 27 ನವೆಂಬರ್ 2021, 19:30 IST
ಸಿಮೊನ್‌ ದ ಬೋವಾ
ಸಿಮೊನ್‌ ದ ಬೋವಾ   

‘ಸ್ತ್ರೀ ಯಾಗಿ ಯಾರೂ ಹುಟ್ಟುವುದಿಲ್ಲ. ಅವರನ್ನು ಸ್ತ್ರೀಯರನ್ನಾಗಿ ರೂಪಿಸಲಾಗುತ್ತದೆ. ಹೆಣ್ಣುಮಕ್ಕಳಲ್ಲಿ ಸಾಮರ್ಥ್ಯವಿಲ್ಲವೆಂದಲ್ಲ. ಸಮಾಜ ಅವಳ ಚಲನೆಯನ್ನು ಕಟ್ಟಿಹಾಕಿದೆ. ಚರಿತ್ರೆಯ ವೈಫಲ್ಯಗಳಿಂದ ಹತಾಶರಾಗಬೇಕಿಲ್ಲ. ಇದು ಗಂಡಸರ ಲೋಕವೆಂದು ಸುಮ್ಮನಿರಬಾರದು. ಮಹಿಳೆಯರು ತಮಗಾಗಿ ಒಂದು ಖಾಲಿ ಹಾಳೆಯನ್ನು ಹುಡುಕಿಕೊಳ್ಳಬೇಕು. ಅದರೊಳಗೆ ಹೊಸಲೋಕದ ಹೆಜ್ಜೆಗುರುತುಗಳನ್ನು ಮೂಡಿಸಬೇಕು.’

ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಸಿಮೊನ್ ದ ಬೋವಾ ಆಡಿ ಬದುಕಿದ ಈ ಮಾತುಗಳು ಅನುರಣಿತವಾಗುತ್ತಲೇ ಇವೆ. ಸಿಮೋನ್ ದ ಬೋವಾ ಕೇವಲ ಸ್ತ್ರೀವಾದಿ ಚಿಂತಕಿಯಲ್ಲ. ಆಕೆ ಮಹಾನ್ ಮಾನವತಾವಾದಿ. ಹೇಳುವುದನ್ನು ಬದುಕಿ ತೋರಿದವಳು. ತತ್ವಶಾಸ್ತ್ರಕ್ಕೂ ಮಹತ್ವದ ಕಾಣಿಕೆ ನೀಡಿದವಳು. ಸ್ತ್ರೀವಾದದ ಹಲವು ಕವಲುಗಳಲ್ಲಿ ಅವಳದೂ ಒಂದು. ಇದು ಅವಳ ಮಾತು ಕಥನಗಳ ಅನುವಾದಿತ ಕೃತಿಯ ಈ ಹೊತ್ತಿನ ಪ್ರಸ್ತುತತೆ.

ಈ ಪುಸ್ತಕವನ್ನು ತಂದಿರುವ ಅಚ್ಚುಕಟ್ಟುತನ ಮೊದಲಿಗೆ ನಮ್ಮನ್ನು ಸೆಳೆಯುತ್ತದೆ. ಇದನ್ನು ತನ್ನದೇ ಪುಸ್ತಕವೆಂಬಂತೆ ಅಕ್ಕರಾಸ್ತೆಯಲ್ಲಿ ಅನುವಾದಿಸಿರುವ ವಿಕ್ರಮ ವಿಸಾಜಿ ಮತ್ತು ಅದನ್ನು ಅಷ್ಟೇ ಪ್ರೀತಿಯಿಂದ ಸಿದ್ಧಪಡಿಸಿ ನೀಡಿರುವ ಪ್ರಕಾಶಕ ಪಲ್ಲವ ವೆಂಕಟೇಶ್ ಅವರಿಗೆ ಅಭಿನಂದನೆಗಳು. ಸಿಮೊನ್ ದ ಬೋವಾ ಬರೆದ ನಾಲ್ಕು ಆತ್ಮಕಥೆಗಳ ಕೆಲವು ಭಾಗಗಳು, ಬಿಡಿ ಬಿಡಿ ನೆನಪುಗಳು, ಸಂದರ್ಶನಗಳು, ಪತ್ರಗಳು, ಪ್ರವಾಸ ಕಥನಗಳು, ಉಪನ್ಯಾಸಗಳು, ಭಾಷಣಗಳು ಮತ್ತು ಲೇಖನಗಳನ್ನು ಒಟ್ಟುಮಾಡಿ ಅನುವಾದಿಸಲಾಗಿದೆ.

ADVERTISEMENT

ಸಿಮೊನ್ ದ ಬೋವಾ (1908-1986) ಚಿಂತನೆಗಳು ಮತ್ತು ಹೋರಾಟದ ದಾಖಲೆಗಳಾಗಿ ಇರುವ ಪ್ರಮುಖ ಕೃತಿಗಳೆಂದರೆ: ‘ಮೆಮೈರ್ಸ್ ಆಫ್ ಎ ಡ್ಯೂಟಿಫುಲ್ ಡಾಟರ್’, ‘ದ ಪ್ರೈಮ್ ಆಫ್ ಲೈಫ್’, ‘ಫೋರ್ಸ್ ಆಫ್ ಸರ್ಕಮ್‍ಸ್ಟೆನ್ಸಸ್’, ‘ಆಲ್ ಸೆಡ್ ಅಂಡ್ ಡನ್’ ಎಂಬ ಆತ್ಮಕಥೆಯ ನಾಲ್ಕು ಭಾಗಗಳು, ‘ದಿ ಮಂದಾರಿನ್ಸ್’, ‘ಷಿ ಕೇಮ್ ಟು ಸ್ಟೇ’ ಮುಂತಾದ ಕಾದಂಬರಿಗಳು, ‘ದ ಸೆಕೆಂಡ್ ಸೆಕ್ಸ್’, ‘ದ ಲಾಂಗ್ ಮಾರ್ಚ್’ ಮುಂತಾದ ಹೋರಾಟ ತತ್ವಚಿಂತನೆಯ ಕೃತಿಗಳು. ಇವೆಲ್ಲ ಬೋವಾ ಅವರ ಲೋಕಾನುಸಂಧಾನ ಮತ್ತು ಹೋರಾಟದ ಬದುಕನ್ನು ಮುಂದಿಡುತ್ತವೆ. ಪ್ರಸ್ತುತ ಕೃತಿಯಲ್ಲಿ ಬೋವಾ ಅವರ ಬದುಕಿನ ಪ್ರಮುಖ ಘಟನೆಗಳ ಜೊತೆಗೆ ಅವರ ಜೊತೆಗೆ ನಡೆಸಿದ ಕೆಲವು ಸಂದರ್ಶನಗಳನ್ನು ಮತ್ತು ಅವರು ಸಂಗಾತಿ ಸಾರ್ತ್ರ ಮತ್ತು ಪ್ರಿಯ ಗೆಳೆಯ ನೆಲ್ಸನ್‍ಗೆ ಬರೆದ ಕೆಲವು ಪತ್ರಗಳನ್ನು ದಾಖಲಿಸಿದೆ. ಇವೆಲ್ಲ ಅವರ ವ್ಯಕ್ತಿತ್ವದ ಘನತೆಯನ್ನು ಹಿಡಿದಿಟ್ಟಿವೆ.

ಸಿಮೊನ್ ದ ಬೋವಾ ಅವರ ‘ದ ಸೆಕೆಂಡ್ ಸೆಕ್ಸ್’ ಕನ್ನಡಕ್ಕೆ ಅನುವಾದಗೊಂಡಿದೆ. ಅದು ಕನ್ನಡದ ಈ ಹೊತ್ತಿನ ಚಿಂತನಾಕ್ರಮದ ಭಾಗವಾಗಿದೆ. ಬೋವಾ ಅವರ ಲೋಕಗ್ರಹಿಕೆಯು ಜೀವನ ಮೀಮಾಂಸೆಯ ಅನೇಕ ಪ್ರಮುಖ ನಿಲುವುಗಳನ್ನು ಮುನ್ನೆಲೆಗೆ ತರುವಂತಿದೆ. ಹೆಣ್ಣುಮಕ್ಕಳ ಹುಡುಕಾಟ, ಹೋರಾಟಗಳಿಗೆ ದೀರ್ಘಕಾಲೀನ ಇತಿಹಾಸವಿದೆ. ಈ ಹೋರಾಟಗಳಿಗೆ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಆಯಾಮಗಳ ಸ್ಪಷ್ಟರೂಪ ದೊರಕಿದ್ದು ಪಾಶ್ಚಾತ್ಯದೇಶಗಳ ಚಿಂತಕ–ಚಿಂತಕಿಯರು ಮತ್ತು ಹೋರಾಟಗಾರರಿಂದ. ಅದರಲ್ಲಿ ಸಿಮೊನ್ ದ ಬೋವಾ ಅವರದು ದೊಡ್ಡ ಹೆಸರು.

ಈ ಅನುವಾದಿತ ಕೃತಿ ಬೋವಾ ಚಿಂತನೆಯ ಪ್ರಮುಖ ನಿಲುವುಗಳ ಸುವ್ಯವಸ್ಥಿತ ಸಂಪಾದನೆಯಂತಿದೆ. ಬೋವಾ ಪ್ರತಿಪಾದಿಸಿದ ನಿಲುವುಗಳನ್ನು ಅವರ ಮಾತುಗಳಲ್ಲಿ ಕೇಳುವುದಾದರೆ, ‘ಮೊದಲನೆಯದಾಗಿ ಹೆಣ್ಣು ತನ್ನ ಮೇಲೆ ಅವಲಂಬಿತಳಾಗುವುದು ಮುಖ್ಯ. ಆದರೆ, ಪರಂಪರೆಯಿಂದಲೂ ಹೆಣ್ಣು ಯಾರ‍್ಯಾರದೋ ಆಸ್ತಿಯಾಗುವವಳೇ ಹೊರತು ಸ್ವಂತ ಆಸ್ತಿ ಆಗುವುದಿಲ್ಲ. ಒಬ್ಬ ಹೆಣ್ಣು ಮದುವೆಯಾದರೆ ಗಂಡ ಮತ್ತು ಮಕ್ಕಳ ಆಸ್ತಿಯಾಗುವಳು. ಆಗದೇ ಇರುವಾಗ ತಂದೆ ತಾಯಿಯ ಆಸ್ತಿಯಾಗುವಳು. ಯಾವುದೇ ಸಮಯದಲ್ಲಿ ಗಂಡ ಮತ್ತು ಮಕ್ಕಳು ಆಕೆಯಿಂದ ಸ್ಪಷ್ಟೀಕರಣ, ಸಹಾಯ ಕೇಳಬಹುದು. ಇದನ್ನು ಪೂರೈಸುವುದು ಆಕೆಯ ಕರ್ತವ್ಯ. ಆಕೆ ಕುಟುಂಬಕ್ಕೆ ಸಂಬಂಧಿಸಿದವಳು. ಸಮಾಜಕ್ಕೆ ಸಂಬಂಧಿಸಿದವಳು. ಆದರೆ ತನಗೆ ಮಾತ್ರ ಸಂಬಂಧಿಸಿದವಳಲ್ಲ.’

ಎರಡನೆಯದಾಗಿ, ‘ಸ್ತ್ರೀಯರನ್ನೂ ಪುರುಷರನ್ನೂ ಸಂಪೂರ್ಣ ಮನುಷ್ಯರನ್ನಾಗಿಸುವುದು ಈ ಕಾಲದ ಅಗತ್ಯ. ಇಬ್ಬರ ನಡುವಿನ ಭೇದ ನಾಶವಾಗಬೇಕಿದೆ. ಸ್ತ್ರೀಯರ ಹೋರಾಟಕ್ಕೆ ಅದರದ್ದೆ ಆದ ಅನನ್ಯತೆ ಇದೆ. ಅಲ್ಲದೆ ಈ ಚಳವಳಿಯನ್ನು ಪುರುಷರ ಜೊತೆ ನಿಂತುಕೊಂಡು ಮಾಡಬೇಕಾದ ಅಗತ್ಯವಿದೆ. ಸ್ತ್ರೀವಾದಿ ಚಳವಳಿಗಳಿಂದ ಪುರುಷರನ್ನು ಪ್ರತ್ಯೇಕಿಸಿ ಇಡುವ ಬಗೆಗೆ ನನಗೆ ನಂಬಿಕೆಯಿಲ್ಲ. ಇದು ಒಂದು ನಿಲುವಾದರೆ, ಮಹಿಳೆಯರು ತಮ್ಮ ಹಣೆಬರಹವನ್ನು ತಾವೇ ಬರೆದುಕೊಳ್ಳಬೇಕು. ಯಾವ ಉದ್ಧಾರಕನಿಗಾಗಿಯೂ ಕಾಯಬೇಕಾಗಿಲ್ಲ ಎಂಬುದು ಇನ್ನೊಂದು ಗಟ್ಟಿಯಾದ ನಂಬುಗೆ.’

ಇವು ವಿಶ್ವದ ಎಲ್ಲ ಹೆಣ್ಣುಮಕ್ಕಳಿಗೆ ಸಿಮೊನ್ ಮಾಡುವ ಒತ್ತಾಯ. ಜೊತೆಗೆ ಅದಕ್ಕೆ ನಾನೇ ಸಾಕ್ಷಿ ಎನ್ನುವಷ್ಟು ಪ್ರಾಮಾಣಿಕವಾದ ನಡೆ. ಫ್ರೆಂಚ್ ಯೋಚನಾಕ್ರಮದಲ್ಲಿಯೇ ಇಂತಹ ಮೊದಲ ನಡೆ ನಮ್ಮದು ಎಂಬ ಸಣ್ಣ ಅಹಮಿಕೆಯೊಂದು ಇದ್ದೇ ಇರುತ್ತದೆ. ನಮ್ಮ ಬಂಗಾಳಿಗಳ ಹಾಗೆ! ಬೋವಾ ತಾನು ಬದುಕಿ ತೋರಿಸುತ್ತೇನೆ ನೋಡಿ ಎಂಬಂತೆ ನಡೆದವರು. ಜೊತೆಗೆ ಸಾರ್ತ್ರರ ಬೌದ್ಧಿಕಸಾಂಗತ್ಯ ಮತ್ತು ಅವರು ನಿರಂತರ ಎಚ್ಚರದಿಂದ ಕಾಪಾಡಿಕೊಂಡ ಸ್ವಾತಂತ್ರ್ಯ ಇವೆರಡೂ ಒಬ್ಬ ಹೋರಾಟಗಾರ್ತಿಯ ಪ್ರಾಥಮಿಕ ಅಗತ್ಯಗಳಂತಿದ್ದವು. ಇಲ್ಲಿಯ ಪಠ್ಯ ಜೋಡಣೆಯಲ್ಲಿ ಈ ಸಂಗತಿಗಳನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ ಎಂಬುದು ಮೆಚ್ಚುಗೆಯ ಸಂಗತಿಯಾಗಿದೆ.

ಬೋವಾ ಅವರ ಬದುಕಿನ ದೃಷ್ಟಿಕೋನವನ್ನು ಪ್ರತಿಬಿಂಬಿಸುವ ಅನೇಕ ಸಂಗತಿಗಳು ಇಲ್ಲಿ ಚರ್ಚಿಸಲ್ಪಟ್ಟಿವೆ. ಶ್ರದ್ಧಾವಂತ ಕ್ಯಾಥೊಲಿಕ್ ಕುಟುಂಬದಲ್ಲಿ ಬೆಳೆದ ಬೋವಾ ಕಾಲ್ಪನಿಕ ಪೊಳ್ಳು ನಂಬಿಕೆಗಳು ರಾಜಕೀಯದ್ದಾಗಿರಲಿ, ಧಾರ್ಮಿಕತೆಯದ್ದಾಗಿರಲಿ, ಸಾಮಾಜಿಕವಾದದ್ದಾಗಿರಲಿ ಅವುಗಳನ್ನು ತೀವ್ರವಾಗಿ ಪ್ರತಿರೋಧಿಸಿದವರು.

ಇಲ್ಲಿ ಸೇರ್ಪಡೆಯಾಗಿರುವ ಸಿಮೊನ್ ಬದುಕಿನ ಸಣ್ಣ ವಿವರಗಳು ಆಸಕ್ತಿ ಹುಟ್ಟಿಸುವಂತಿವೆ. ಅಂಥವುಗಳನ್ನು ಹೆಕ್ಕಿ ನೀಡಿರುವುದರಿಂದ ಈ ಪುಸ್ತಕದ ಅಂದ ಮತ್ತೂ ಹೆಚ್ಚಿದೆ. ಚಿಕ್ಕಪುಟ್ಟ ಗಲ್ಲಿಗಳು, ಚೌಕಗಳು, ಸಂತೆಯ ಪ್ರದೇಶಗಳು, ನದಿ ದಡಗಳಲ್ಲಿ ಸದಾ ತಿರುಗುವುದು, ಗಿಜಿಗಿಜಿ ಎನ್ನುವ ಸಣ್ಣ ಹೋಟಲುಗಳಲ್ಲಿ ತಿನ್ನುವುದು, ಫ್ರೆಂಚರ ಆರೋಪಿತ ಸಭ್ಯತೆಯನ್ನು ಬೇಕೆಂದೇ ದಾಟುವುದು ಇವೆಲ್ಲ ಬೋವಾ ಯಾವುದೂ ಅಮುಖ್ಯವಲ್ಲ ಎಂಬ ನಿಲುವನ್ನು ಬದುಕಿದ ಸಾಕ್ಷಿಯಾಗಿವೆ.

ಅನುವಾದದ ಬಗೆಗೆ ಹೇಳಲೇಬೇಕಾದ ಎರಡು ಮಾತುಗಳಿವೆ. ಮೊದಲನೆಯದಾಗಿ ಅನುವಾದವನ್ನು ಪುಟ್ಟ ಪುಟ್ಟ ವಾಕ್ಯಗಳನ್ನಾಗಿ ಮಾಡಿವುದರಿಂದ ಓದಿನ ಆಯಾಸ ಉಂಟಾಗುವುದಿಲ್ಲ. ಎರಡನೆಯದಾಗಿ ಇದೊಂದು ಅನುವಾದದಂತಿರದೆ ಮೂಲಲೇಖಕರ ನೇರ ಮಾತುಕತೆಯಂತಿದೆ. ಅನುವಾದಕರು ಪಕ್ಕಕ್ಕೆ ಸರಿದು ನಿಂತಿದ್ದಾರೆ. ಇದೊಂದು ಸೂಕ್ಷ್ಮ ಸಂಗತಿ. ಓದುಗರನ್ನೂ ಕೇಳಿಸಿಕೊಳ್ಳಬಯಸುವುದಾದರೆ ಇದು ಮಾದರಿಕ್ರಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.