‘ರಂಗ ವೃತ್ತಾಂತ’ ಕಳೆದುಹೋದ ಕೆಲವು ಮಿಸ್ಸಿಂಗ್ ಲಿಂಕ್‌ಗಳನ್ನು ಶೋಧಿಸುವತ್ತ ಗಮನ ಹರಿಸುವ ಕೃತಿ. ಅದರಲ್ಲಿರುವ ಲೇಖನಗಳು ರಂಗಭೂಮಿಯ ಅನೇಕ ಆಯಾಮಗಳನ್ನು ಚರಿತ್ರೆಯ ದೃಷ್ಟಿಯಿಂದ ನೋಡಿ ದಾಖಲಿಸುವ ರೀತಿಯವು.
ಪ್ರದರ್ಶನ ಕಲೆಯೂ ಸಾಹಿತ್ಯ ಪ್ರಕಾರವೂ ಆಗಿರುವ ನಾಟಕವೆಂಬ ಪ್ರಕಾರವನ್ನೇ ತಮ್ಮ ಅಧ್ಯಯನದ ಆಸಕ್ತಿಯನ್ನಾಗಿ ಮಾಡಿಕೊಂಡ ಹೇಮಾ ಪಟ್ಟಣಶೆಟ್ಟಿ ಅವರ ಕೃತಿ ‘ರಂಗ ವೃತ್ತಾಂತ’. ನಾಟಕಗಳ ಅಧ್ಯಯನವು ರಂಗಭೂಮಿ ಮತ್ತು ಸಾಹಿತ್ಯಗಳೆಂಬ ಎರಡೂ ಜಗತ್ತುಗಳನ್ನು ಒಳಗೊಳ್ಳುವಂಥದ್ದು. ಇದನ್ನು ಅರಿತವರಂತೆ ಹೇಮಾ ಅವರು ನಾಟಕ ಸಾಹಿತ್ಯ ಮತ್ತು ರಂಗಭೂಮಿಗಳೆರಡರ ಮೇಲೆ ಅಧ್ಯಯನ ಮಾಡಿದ್ದಾರೆ. ಗಂಡುಮೆಟ್ಟಿನ ಕ್ಷೇತ್ರವೆನಿಸಿದ ನಾಟಕ ಪ್ರಕಾರವನ್ನು ಸ್ತ್ರೀವಾದಿ ನೆಲೆಯಿಂದ ಪ್ರವೇಶಿಸಿದಾಗ ಸಿಗುವ ಒಳನೋಟಗಳು, ಒಳಬಾಳುಗಳ ಸತ್ಯಗಳು ಕೃತಿಯಲ್ಲಿ ಕಾಣಸಿಗುತ್ತವೆ. ಈಗಾಗಲೇ ‘ಕನ್ನಡ ನಾಟಕಗಳಲ್ಲಿ ಸ್ತ್ರೀಲೋಕ’ ಎನ್ನುವ ಸಂಶೋಧನಾ ಕೃತಿ ತಂದಿದ್ದ ಹೇಮಾ ಅವರ ಆಸಕ್ತಿಯ ಮುಂದುವರೆದ ಭಾಗವಾಗಿ ಪ್ರಸ್ತುತ ‘ರಂಗ ವೃತ್ತಾಂತ’ ಕೃತಿ ಬಂದಿದೆ.
ಪ್ರಸ್ತುತ ಈ ಪುಸ್ತಕವು ಸ್ತ್ರೀಪಕ್ಷಪಾತಿ! ನಾಟಕಗಳು, ರಂಗಭೂಮಿ, ನಾಟಕಕಾರರನ್ನೆಲ್ಲ ಸ್ತ್ರೀದೃಷ್ಟಿಯಿಂದ ನಿವಾಳಿಸುವ ತಂತ್ರದಿಂದ ಈ ಪುಸ್ತಕ ಸೂಕ್ಷ್ಮವಾದ ಗ್ರಹಿಕೆಗಳನ್ನು ಕಾಣಿಸುತ್ತದೆ. ರಂಗಭೂಮಿಯ ಅನುಭವಗಳಿಂದ ಹಾಗೂ ನಾಟಕಗಳ ಓದು/ ಅನುವಾದಗಳಿಂದ ಕಟ್ಟಿಕೊಂಡ ದೃಷ್ಟಿ ಇದಾದುದರಿಂದ ಇಲ್ಲಿನ ಲೇಖನಗಳಿಗೆ ಒಂದು ಅಧಿಕೃತತೆ ಬಂದಿದೆ. ಮುಖ್ಯವಾಹಿನಿಯಲ್ಲಿ ಹುದುಗಿ ಹೋದಂತಿರುವ ರಂಗಭೂಮಿ ಮತ್ತು ಹೆಣ್ಣಿನ ಸಂಬಂಧ ಹಾಗೂ ಆಕೆಯ ಪ್ರಾತಿನಿಧ್ಯವನ್ನು ಕೆದಕಿ ನೋಡುವುದನ್ನು ಇಲ್ಲಿನ ಲೇಖನಗಳು ಮಾಡುತ್ತವೆ. ‘ರಂಗ ವೃತ್ತಾಂತ’ದ ನಾಂದಿ ನುಡಿಯಲ್ಲಿಯೇ ಬಾಳಪ್ಪ ಏಣಗಿ ಅವರ ಎರಡನೇ ಹೆಂಡತಿ ಲಕ್ಷ್ಮೀಬಾಯಿಯವರ ಜೀವನ ಕಥೆಯನ್ನು ಹೇಳಗೊಡದಂತೆ ಮಾಡುವ ಪುರುಷ ಪ್ರಾಧಾನ್ಯವನ್ನು ಕುರಿತು ಲೇಖಕಿ ಪ್ರಸ್ತಾಪ ಮಾಡಿದ್ದಾರೆ. ಪ್ರಸ್ತುತ ಪುಸ್ತಕದಲ್ಲಿ ‘ವೃತ್ತಿರಂಗಭೂಮಿಯ ಸ್ತ್ರೀ ಕಥನ’, ‘ಹವ್ಯಾಸಿ ರಂಗಭೂಮಿಯಲ್ಲಿ ಮಹಿಳೆ’, ‘ಲೇಖಕಿಯರ ನಾಟಕಗಳು’, ‘ಸರಸ್ವತಿಬಾಯಿ ರಾಜವಾಡೆಯವರ ನಾಟಕಗಳು’, ‘ನಾಟಕ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ’ ಮುಂತಾದ ಲೇಖನಗಳಿರುವುದು ಹೇಮಾ ಅವರ ಅಧ್ಯಯನದಲ್ಲಿ ಸ್ತ್ರೀದೃಷ್ಟಿಕೋನವು ಪ್ರಮುಖವಾಗಿದೆ ಎನ್ನುವುದನ್ನು ತೋರುತ್ತದೆ.
ಹೇಮಾ ಅವರ ಸ್ತ್ರೀವಾದಿ ಅಧ್ಯಯನವು ಬಹುಮುಖಿಯಾಗಿದೆ. ರಂಗಭೂಮಿಯಲ್ಲಿ ನಟಿಸುವ ನಟಿಯರ ವೃತ್ತಾಂತಗಳು, ಲೇಖಕಿಯರು ನಾಟಕಕಾರ್ತಿಯರಾಗಿರುವುದನ್ನು ಗಮನಿಸುವುದು ಹಾಗೂ ಲೇಖಕರ ನಾಟಕಗಳಲ್ಲಿ ಸ್ತ್ರೀಸಂವೇದನೆಯು ಹೇಗೆ ಅಭಿವ್ಯಕ್ತವಾಗುತ್ತದೆ ಎನ್ನುವುದನ್ನು ನೋಡುವುದು - ಈ ಮೂರನ್ನೂ ಅವರ ಅಧ್ಯಯನವು ಗಮನಿಸುತ್ತದೆ. ಹಾಗೆಂದು ಸ್ತ್ರೀವಾದಿ ಅಧ್ಯಯನಕ್ಕೆ ಮಾತ್ರವೇ ಸೀಮಿತಗೊಳಿಸಿಕೊಳ್ಳದೆ ಕುವೆಂಪು, ಬೇಂದ್ರೆಯಂತಹ ಲೇಖಕರ ನಾಟಕಗಳನ್ನೂ ವಿಶ್ಲೇಷಣೆ ಮಾಡುತ್ತಾರೆ. ‘ರಂಗಭೂಮಿಗೆ ದಿಕ್ಸೂಚಿ ಧಾರವಾಡ’, ‘ಡಾ. ಅಣ್ಣಾಜಿರಾವ್ ಸಿರೂರ ರಂಗಮಂದಿರ’ ಎಂಬ ಲೇಖನಗಳು ನಾಟಕವಷ್ಟೇ ಅಲ್ಲದೆ ಅದನ್ನು ಪ್ರದರ್ಶಿಸುವ ರಂಗಭೂಮಿ ವೇದಿಕೆಗಳ ಬಗೆಗೂ ಮಾಹಿತಿಯನ್ನು ಒಳಗೊಂಡಿವೆ.
ಪ್ರಸ್ತುತ ಸಂಕಲನದಲ್ಲಿರುವ ‘ವೃತ್ತಿ ರಂಗಭೂಮಿಯ ಸ್ತ್ರೀ ಕಥನ’ ಎನ್ನುವ ಲೇಖನವು ಹೆಣ್ಣು ಮತ್ತು ರಂಗಭೂಮಿಯ ನಡುವಿನ ನಂಟನ್ನು ವಿವರಿಸುತ್ತದೆ. ಸಾರ್ವಜನಿಕವಾಗಿ ಪ್ರದರ್ಶನಗೊಳ್ಳುವ ಕಲೆಗಳಲ್ಲಿ ಭಾಗವಹಿಸುವುದಕ್ಕೆ ಇರುವ ಸಾಮಾಜಿಕ ಕಟ್ಟಳೆಗಳು ಸ್ತ್ರೀಯರನ್ನು ಕುಲೀನ ಸ್ತ್ರೀ, ಪಾತರದ ಸ್ತ್ರೀ ಎಂದು ಭಾಗಮಾಡಿ ನೋಡಿದ್ದ ವಸಾಹತುಶಾಹಿ ಕಾಲದಿಂದ ಆಧುನಿಕ ಕಾಲದವರೆಗೆ ರಂಗಪ್ರಪಂಚದಲ್ಲಿ ಸ್ತ್ರೀಯರ ಪ್ರಾತಿನಿಧ್ಯ ತೊಡಕಿನದೇ ಆಗಿತ್ತು. ರಂಗಕ್ಕೆ ಪ್ರವೇಶ ಪಡೆದು ಹೆಸರು ಮಾಡಿದ ಅನೇಕ ನಟಿಯರು ನಮ್ಮ ಮಧ್ಯೆ ಇಂದು ಇದ್ದರೂ ಸ್ತ್ರೀಯರು ರಂಗಪ್ರವೇಶ ಮಾಡಿದುದಕ್ಕೆ ವೃತ್ತಿರಂಗಭೂಮಿಯ ಚರಿತ್ರೆಯತ್ತ ನೋಡುವ ‘ವೃತ್ತಿರಂಗಭೂಮಿಯ ಸ್ತ್ರೀ ಕಥನ’ ಈ ಹಾದಿಯನ್ನು ‘ಕೆಂಡ ಹಾಯ್ದು ಬಂದ ಕತೆ’ ಎನ್ನುವುದು ಸೂಕ್ತವೇ ಆಗಿದೆ.
ಸ್ತ್ರೀಯರ ರಂಗಪ್ರವೇಶದ ಚರಿತ್ರೆಯನ್ನು ವಿವರಿಸುವಾಗ ಹಲವಾರು ಸ್ವಾರಸ್ಯಕರ ಸಂಗತಿಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಹೆಣ್ಣು ಪಾತ್ರಗಳನ್ನು ರಂಗದ ಮೇಲೆ ಅಭಿನಯಿಸುತ್ತಿದ್ದವರು ಈ ಮೊದಲು ಪುರುಷರು. ನಾಟಕ ಕಂಪನಿಗಳಲ್ಲಿ ಸ್ತ್ರೀಯರನ್ನು ಕರೆದುಕೊಂಡರೆ ತಮ್ಮ ಘನತೆ ಇಳಿಯುತ್ತದೆ ಎಂಬ ಭಾವನೆ ಇತ್ತು. ‘ಸ್ತ್ರೀ ಪ್ರವೇಶದಿಂದ ರಂಗಭೂಮಿ ಪಾವಿತ್ರ್ಯ ಕಳೆದುಹೋಗುವುದಷ್ಟೇ ಅಲ್ಲ ಅಲ್ಲಿಯ ಗಂಡಸರ ಶೀಲಕ್ಕೆ ಸಂಚಕಾರ ಬರುತ್ತದೆ ಎಂಬ ಭಯ, ಅಭದ್ರತೆಯೇ ಅದಕ್ಕೆ ಕಾರಣವಾಗಿತ್ತು’ (ಪು.45) ಎಂದು ಹೇಮಾ ಬರೆಯುತ್ತಾರೆ. ಆದರೆ ಕಾಲಕ್ರಮೇಣ ಹೆಣ್ಣುಪ್ರವೇಶ ಅನಿವಾರ್ಯವಾಯಿತು. ಗರುಡ ಸದಾಶಿವರಂತಹ ಮಡಿವಂತರಿಗೂ ಇದನ್ನು ಸ್ವಾಗತಿಸುವುದು ಅನಿವಾರ್ಯವಾಯಿತು. ಹೀಗೆ ರಂಗಭೂಮಿಯ ಇತಿಹಾಸದಲ್ಲಿ ಹುದುಗಿಹೋದ ಹೆಣ್ಣಿನ ಚರಿತ್ರೆಯನ್ನು ಕೆದಕುವುದರಿಂದ ಸ್ತ್ರೀ ಚರಿತ್ರೆಯನ್ನು ಕಟ್ಟಿಕೊಳ್ಳುವ ಸಾಧ್ಯತೆಗಳನ್ನು ಹೇಮಾ ಕಾಣಿಸುತ್ತಾರೆ.
ಲೇಖಕಿಯರು ಬರೆದ ನಾಟಕಗಳ ಬಗ್ಗೆ ಇರುವ ಲೇಖನವು ಅವರು ನಾಟಕಕಾರ್ತಿಯರಾಗಿ ಎತ್ತಿಕೊಳ್ಳುವ ವಸ್ತು ನಿರ್ವಹಿಸುವ ರೀತಿಗಳನ್ನು ಕುರಿತು ಚರ್ಚಿಸುತ್ತದೆ. ನವೋದಯ ಕಾಲದಲ್ಲಿ ಬರೆಯುತ್ತಿದ್ದ ಲೇಖಕಿಯರಲ್ಲನೇಕರು ನಾಟಕಗಳನ್ನು ಬರೆದಿದ್ದಾರೆ. ಅವುಗಳ ಸತ್ವ, ಗುಣಾಗುಣಗಳನ್ನು ಗಮನಿಸುವುದಕ್ಕಿಂತ ಚಾರಿತ್ರಿಕವಾಗಿ ಲೇಖಕಿಯರು ನಾಟಕ ಪ್ರಕಾರದ ಬಗ್ಗೆ ಆಸಕ್ತಿ ತಳೆದಿದ್ದರು ಎನ್ನುವುದನ್ನು ಗಮನಿಸಬೇಕು. ಆದರೆ ಇವುಗಳ ರಂಗಪ್ರಯೋಗಗಳಾಗಲೀ ಅವುಗಳ ಓದುವಿಕೆಯಾಗಲಿ ಮುಖ್ಯವಾಹಿನಿಯಲ್ಲಿ ನಡೆದಂತೆ ದಾಖಲೆಗಳಿಲ್ಲ. ಈ ಹಿನ್ನೆಲೆಯಲ್ಲಿ ‘ಸರಸ್ವತಿಬಾಯಿ ರಾಜವಾಡೆಯವರ ನಾಟಕಗಳು’ ಲೇಖನವನ್ನು ಸಹ ಗಮನಿಸಬಹುದು.
‘ಬೇಂದ್ರೆ ನಾಟ್ಯಯೋಗ’ ಲೇಖನವು ವಾಸ್ತವವಾದೀ ನೆಲೆಯನ್ನಾಧರಿಸಿ ಬರೆದ ಬೇಂದ್ರೆ ನಾಟಕಗಳನ್ನು ವಿವರಿಸುತ್ತದೆ. ಇಲ್ಲಿ ಬೇಂದ್ರೆಯವರ ನಾಟಕಗಳನ್ನು ಸಾದ್ಯಂತವಾಗಿ ಪರಿಚಯಿಸುವ ಬದಲು ನಾಟಕಗಳಾಗಿ ಬೇಂದ್ರೆಯವರ ರಚನೆಗಳು ಎಲ್ಲಿ ನಿಲ್ಲುತ್ತವೆ ಎನ್ನುವ ವಿಶ್ಲೇಷಣೆ ಮಾಡಿದ್ದಿದ್ದರೆ ಚೆನ್ನಾಗಿತ್ತು. ಅಂತೆಯೇ ಕುವೆಂಪು ನಾಟಕಗಳನ್ನು ವಿಶ್ಲೇಷಿಸುವಾಗ ಅವರ ಗುಣಾತ್ಮಕ ಅಂಶಗಳನ್ನು ಎತ್ತಿ ಹಿಡಿಯಲಾಗಿದೆ.
‘ರಂಗ ವೃತ್ತಾಂತ’ ಕಳೆದುಹೋದ ಕೆಲವು ಮಿಸ್ಸಿಂಗ್ ಲಿಂಕ್‌ಗಳನ್ನು ಶೋಧಿಸುವತ್ತ ಗಮನ ಹರಿಸುವ ಕೃತಿ. ಅದರಲ್ಲಿರುವ ಲೇಖನಗಳು ರಂಗಭೂಮಿಯ ಅನೇಕ ಆಯಾಮಗಳನ್ನು ಚರಿತ್ರೆಯ ದೃಷ್ಟಿಯಿಂದ ನೋಡಿ ದಾಖಲಿಸುವ ರೀತಿಯವು. ಹೇಮಾ ಅವರಿಗೆ ರಂಗಭೂಮಿಯ ಒಟ್ಟೂ ಚರಿತ್ರೆಯು ಮುಖ್ಯವಾದಂತೆಯೇ ಅದರಲ್ಲಿ ಹುದುಗಿರುವ ಸ್ತ್ರೀಬಾಳುಗಳ ಅಲಕ್ಷಿತ ಧೋರಣೆಯನ್ನು ಗಮನಿಸುವುದೂ ಮುಖ್ಯವಾಗಿದೆ. ರಂಗಭೂಮಿಯ ನೆಪದಲ್ಲಿ ಸ್ತ್ರೀ ಬದುಕುಗಳನ್ನು ನೋಡುವುದು ಸ್ತ್ರೀವಾದಿ ಶೋಧನೆಯ ದೃಷ್ಟಿಯಿಂದ ಮುಖ್ಯವೆನಿಸುತ್ತದೆ. ಕೃತಿಯು ಮಾಹಿತಿ ಪ್ರಧಾನವಾಗಿದ್ದು ದಾಖಲೀಕರಣದ ದೃಷ್ಟಿಯಿಂದ ಉಪಯುಕ್ತವಾಗಿ ನಿಲ್ಲುತ್ತದೆ.
***
ರಂಗ ವೃತ್ತಾಂತ
ಲೇ: ಹೇಮಾ ಪಟ್ಟಣಶೆಟ್ಟಿ
ಪ್ರ:ಅನನ್ಯ ಪ್ರಕಾಶನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.