ADVERTISEMENT

ಇತಿಹಾಸದ ಕನ್ನಡಿಯಲ್ಲಿ ಸಮಕಾಲೀನ ತಲ್ಲಣಗಳ ಬಿಂಬ

ಚ.ಹ.ರಘುನಾಥ
Published 5 ಜನವರಿ 2019, 19:45 IST
Last Updated 5 ಜನವರಿ 2019, 19:45 IST
ಮಹಮೂದ್‌ ಗಾವಾನ್
ಮಹಮೂದ್‌ ಗಾವಾನ್   

ಬಹಮನಿ ಸಾಮ್ರಾಜ್ಯಕ್ಕೆ ಸಾಂಸ್ಕೃತಿಕ, ಶೈಕ್ಷಣಿಕ ಘನತೆಯನ್ನು ತಂದುಕೊಟ್ಟ ಮಹಮೂದ್ ಗಾವಾನ್‌ರ ಜೀವನ– ಸಾಧನೆಯನ್ನು ಕುರಿತ ಚಂದ್ರಶೇಖರ ಕಂಬಾರರ ‘ಮಹಮೂದ್‌ ಗಾವಾನ್‌’ ನಾಟಕ, ವರ್ತಮಾನದ ಬಿಕ್ಕಟ್ಟುಗಳಿಗೆ ಪ್ರತಿಕ್ರಿಯೆಯ ರೂಪದಲ್ಲಿ ಇತಿಹಾಸವನ್ನು ಮುಖಾಮುಖಿಯಾಗಿಸುವ ಮಹತ್ವಾಕಾಂಕ್ಷೆಯ ಪ್ರಯತ್ನ.

ಧಾರ್ಮಿಕ ಸಾಮರಸ್ಯದ ರೂಪಕವಾದ ಗಾವಾನ್‌ನ ಬದುಕು–ಸಾಧನೆ ಆಡಳಿತಶಾಹಿಯೊಳಗೆ ಧರ್ಮದ ಸ್ವರೂಪ ಯಾವ ರೀತಿಯಲ್ಲಿರಬೇಕು ಎನ್ನುವುದನ್ನು ಸೂಚಿಸುವಂತಿದೆ. ವಿದೇಶದಿಂದ ಕನ್ನಡನಾಡಿಗೆ ಬಂದ ವ್ಯಕ್ತಿಯೊಬ್ಬ ಇಲ್ಲಿನವನೇ ಆಗುವುದು ಹಾಗೂ ಈ ನೆಲದ ಸಾಂಸ್ಕೃತಿಕ– ಶೈಕ್ಷಣಿಕ ಘನತೆಯನ್ನು ಎತ್ತರಿಸುವುದು ಕರ್ನಾಟಕದ ಚರಿತ್ರೆಯ ವಿಶಿಷ್ಟ ಅಧ್ಯಾಯಗಳಲ್ಲೊಂದು. ಈ ಅಪೂರ್ವ ಪ್ರಸಂಗವನ್ನು ಹಿಡಿದಿಡುವ ನೆಪದಲ್ಲಿ, ತನ್ನ ಬದುಕು ಮತ್ತು ಕೃತಿಯಲ್ಲಿ ಮಾನವೀಯತೆಯನ್ನು ಪ್ರತಿಪಾದಿಸುವ ಕಥಾನಾಯಕ ಅಂತಿಮವಾಗಿ ಧಾರ್ಮಿಕ ಪಿತೂರಿಗೆ ಬಲಿಯಾಗುವ ವೈರುಧ್ಯವನ್ನು ಕೃತಿ ಚಿತ್ರಿಸುತ್ತದೆ.

ಕಂಬಾರರ ನಾಟಕದ ಮಹತ್ವವವಿರುವುದು ಗಾವಾನ್‌ ಪಾತ್ರದ ಮೂಲಕ ಅವರು ಚಿತ್ರಿಸುವ ಜಾತ್ಯತೀತ ಆಶಯದಲ್ಲಿ. ತೆರಿಗೆ ವಸೂಲಿಗೆಂದು ಗ್ರಾಮವೊಂದಕ್ಕೆ ಬರುವ ಗಾವಾನ್‌ಗೆ ದಾರುಣಚಿತ್ರಗಳು ಎದುರಾಗುತ್ತವೆ. ಮಂಗಳವಾದ್ಯಗಳನ್ನು ನುಡಿಸುವ ಮೂಲಕ ಅಧಿಕಾರಿಯನ್ನು ಸ್ವಾಗತಿಸುವ ದಲಿತರು ನೆಲದ ಮೇಲೆ ಮೂಡುವ ತಮ್ಮ ಹೆಜ್ಜೆಗುರುತುಗಳನ್ನು ಅಳಿಸಲು ಬೆನ್ನಿಗೆ ಕಸಬರಲು ಕಟ್ಟಿಕೊಂಡಿದ್ದಾರೆ. ‘ಈ ಜನ ಅಸ್ಪೃಶ್ಯರು. ಇವರನ್ನು ಮುಟ್ಟಬಾರದು’ ಎಂದು ಪಂತ ಹೇಳುತ್ತಾನೆ. ದೇವರು ಕೂಡ ಇವರನ್ನು ಮುಟ್ಟುವಂತಿಲ್ಲ ಎನ್ನುವ ಪಂತ, ಅವರನ್ನು ಅಸ್ಪೃಶ್ಯರೆನ್ನಲಿಕ್ಕೆ ನೀಡುವ ಕಾರಣ – ‘ಅವರು ಸತ್ತ ದನ ತಿಂತಾರೆ.’ ದೇವರಿಗೂ ಮಡಿವಂತಿಕೆಯನ್ನು ಆರೋಪಿಸುವ ಮನೋಭಾವ ಗಾವಾನ್‌ನಲ್ಲಿ ವಿಷಾದ ಹುಟ್ಟಿಸುತ್ತದೆ.

ADVERTISEMENT

ಅದೇ ಅಸ್ಪೃಶ್ಯರೊಂದಿಗೆ ಒಟ್ಟಿಗೆ ಕೂತು ಊಟ ಮಾಡುವ ಮೂಲಕ ಸಮಾನತೆಯನ್ನು ಪ್ರತಿಪಾದಿಸುತ್ತಾನೆ. ತೆರಿಗೆ ವಸೂಲಿ ಮಾಡಲು ಬಂದವನು, ಬರದ ದವಡೆಗೆ ಸಿಕ್ಕವರಿಗೆ ಅರಮನೆಯ ಕಣಜದಿಂದ ಧಾನ್ಯವನ್ನು ಕೊಡಿಸುತ್ತಾನೆ. ಪ್ರಭುತ್ವ ಹೊಂದಿರಬೇಕಾದ ತಾಯಿಕರುಳಿನ ಅಗತ್ಯವನ್ನು ಮನಗಾಣಿಸುವ ಈ ಪ್ರಸಂಗ ನಾಟಕದಲ್ಲಿನ ಅತ್ಯುತ್ತಮ ಪ್ರಸಂಗ.

ಗಾವಾನ್‌ ನಾಟಕದಲ್ಲಿ ಗಮನಸೆಳೆಯುವ ಮತ್ತೊಂದು ಅಂಶ ಭಕ್ತಿಯನ್ನು ಕಂಬಾರರು ಮಾನವೀಯಗೊಳಿಸಿರುವ ರೀತಿ. ಇಲ್ಲಿನ ಭಕ್ತಿ ಅಹಂಕಾರವನ್ನು ನಾಶ ಮಾಡುವ ಮೂಲಕ ವ್ಯಕ್ತಿಯನ್ನು ವಿನಮ್ರಗೊಳಿಸುವಂತಹದ್ದು. ಗಾವಾನ್‌ ಮುಸ್ಲಿಂ ಆದರೂ ಹಿಂದೂ ದೈವ ವಿಠ್ಠಲನ ಕರುಣೆ ಅವನ ಬೆನ್ನಹಿಂದಿದೆ. ಅಲ್ಲಾ ಮತ್ತು ವಿಠ್ಠಲ ಇಬ್ಬರೂ ಗಾವಾನ್‌ ಕಣ್ಣಿಗೆ ಅಭಿನ್ನರಾಗುತ್ತಾರೆ. ಗಾವಾನ್‌ ವಿರುದ್ಧ ರಾಜನಿಗೆ ದೂರು ಹೋದಾಗ ಅವನ ನೆರವಿಗೆ ಬರುವುದು ಅವನ ಭಕ್ತಿ ಹಾಗೂ ಅದರ ಇನ್ನೊಂದು ರೂಪವಾದ ಮಾನವೀಯತೆ.

ಬೀದರಿನ ಮದರಸಾವನ್ನು ನಾಟಕದಲ್ಲಿನ ಮುದುಕ ಬಣ್ಣಿಸುವುದು ಹೀಗೆ: ‘ಇದನ್ನ ಕಟ್ಟಿಸಿದಾಗ ಇಡೀ ಪ್ರಪಂಚದಲ್ಲಿ ಇಂಥಾ ಶಿಕ್ಷಣ ಸಂಸ್ಥೆ ಇನ್ನೊಂದಿರಲಿಲ್ಲ. ಜಗತ್ತಿನ ಶ್ರೇಷ್ಠ ಪಂಡಿತರು, ವಿಜ್ಞಾನಿಗಳು, ಖಗೋಳ ಶಾಸ್ತ್ರಜ್ಞರು ಅವರೆಲ್ಲಾ ಇಲ್ಲಿದ್ದರು! ಪ್ರಪಂಚದ ಮೂಲೆ ಮೂಲೆಗಳಿಂದ ಜ್ಞಾನಕ್ಕಾಗಿ ಹಸಿದವರೆಲ್ಲಾ ಇಲ್ಲಿಗೇ ಬರುತ್ತಿದ್ದರು! ಇಲ್ಲಿ ಸಿಕ್ಕೋ ವಿದ್ಯೆ ಪ್ರಪಂಚದ ಯಾವ ಮೂಲೆಯಲ್ಲೂ ಸಿಕ್ಕೋದಿಲ್ಲ ಅಂತ ಇದರ ಖ್ಯಾತಿ. ವಿಜಯನಗರದ ಅರಸರಲ್ಲೂ ಇಂಥಾದ್ದೊಂದು ವಿಶ್ವವಿದ್ಯಾಲಯ ಇದ್ದಿರಲಿಲ್ಲ. ಒಬ್ಬ ಪ್ರವಾಸಿಯಂತೂ ಇಲ್ಲಿಯ ಮದರಸಾವನ್ನು ನೋಡಿ ರೋಮ್ ನಗರವನ್ನ ನಾಚಿಸುವಂಥಾದ್ದು ಅಂತ ಬರೆದಿದ್ದಾನೆ.’ ಇಂಥ ಮದರಸಾದ ರೂವಾರಿ ಗಾವಾನ್‌ ಎಷ್ಟು ಕನ್ನಡಿಗರಿಗೆ ಗೊತ್ತು?

ಕಂಬಾರರು ತಮ್ಮ ನಾಟಕದ ಮೂಲಕದ ಚರಿತ್ರೆಯ ವಿಸ್ಮೃತಿಗೆ ಸಿಲುಕಿರುವ ನಾಯಕನನ್ನು ವರ್ತಮಾನದಲ್ಲಿ ಜೀವಗೊಳಿಸುವ ಪ್ರಯತ್ನ ಮಾಡಿದ್ದಾರೆ. ಅಷ್ಟು ಮಾತ್ರವಲ್ಲ– ವರ್ತಮಾನದ ರಾಜಕೀಯ ವಿದ್ಯಮಾನಗಳಿಗೆ ಪ್ರತಿಕ್ರಿಯೆಯ ರೂಪದಲ್ಲೂ ನಾಟಕದಲ್ಲಿನ ಇತಿಹಾಸದ ಮುಖಾಮುಖಿಯನ್ನು ಕಾಣಬಹುದು. ದನ ತಿನ್ನುವವರನ್ನು ಅಸ್ಪೃಶ್ಯರೆಂದು ಕರೆಯುವ ಪಂತ ಈಗ ಒಂದು ಸಮುದಾಯದ ರೂಪವಾಗಿದ್ದಾನೆ. ಶೈಕ್ಷಣಿಕ ಸಂಸ್ಥೆಗಳನ್ನು ಕಟ್ಟಬೇಕಾದ ಪ್ರಜಾಪ್ರತಿನಿಧಿಗಳು ಮಂದಿರ ಕಟ್ಟುವ –ಕೆಡಹುವ ಕ್ರಿಯೆಗಳಲ್ಲಿ ತೊಡಗಿಕೊಂಡಿದ್ದಾರೆ. ಇಂಥ ಸಂದರ್ಭದಲ್ಲಿ – ಧರ್ಮ ಮತ್ತು ರಾಜಕಾರಣದ ನಡುವಣ ಗೆರೆ ತೆಳುವಾಗಿರುವ ಹೊತ್ತಿನಲ್ಲಿ – ಗಾವಾನ್‌ ನಾಟಕ ಈ ಹೊತ್ತಿಗೆ ಅಗತ್ಯವಾದ ಸಾಂಸ್ಕೃತಿಕ– ಸಾಮಾಜಿಕ ಪಠ್ಯದ ರೂಪದಲ್ಲಿ ಮಹತ್ವದ್ದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.