ಚಾಂದಬೀ ಸರಕಾರ
ಲೇ: ಚಂದ್ರಶೇಖರ ಕಂಬಾರ
ಪ್ರ: ಅಂಕಿತ ಪುಸ್ತಕ, ಬೆಂಗಳೂರು
ಸಂ: 080–26617100
ಡಾ. ಚಂದ್ರಶೇಖರ ಕಂಬಾರರ ‘ಚಾಂದಬೀ ಸರಕಾರ’ ಕಾದಂಬರಿಯು ಕೃಷ್ಣ ಪಾರಿಜಾತ ನಾಟಕ ತಂಡದ ಕಲಾವಿದೆಯೊಬ್ಬಳ ಜೀವನದ ಯಶೋಗಾಥೆ.
ದೇವದಾಸಿಯ ಮಗಳಾಗಿ ಹುಟ್ಟಿದ ಚಾಂದಬೀ ಅತ್ಯುನ್ನತ ನಟಿಯಾಗಿ ಜನಮನ್ನಣೆ ಗಳಿಸುತ್ತಾಳೆ. ಮುಂದೆ ಖ್ಯಾತ ಗಾಯಕನೊಬ್ಬನನ್ನು ಮದುವೆಯಾಗುತ್ತಾಳೆ. ಆದರೆ, ಆತನ ಮೊದಲ ಹೆಂಡತಿಯ ಅಸಹನೀಯ ಕಿರುಕುಳದಿಂದಾಗಿ ಈ ಮದುವೆಯ ಬಂಧ ಹೆಚ್ಚು ಕಾಲ ಮುಂದುವರೆಯುವುದಿಲ್ಲ, ಮುರಿದು ಬೀಳುತ್ತದೆ. ಮುಂದೆ ದೇಶಪಾಂಡೆ ಎಂಬವರ ಆಶ್ರಯ ಲಭಿಸಿ ಅವರ ಮನೆಮಗಳಂತೆ ಇರುತ್ತಾಳೆ. ಈ ಸಂದರ್ಭದಲ್ಲಿ ಆಕಸ್ಮಾತ್ತಾಗಿ ಶಿವಾಪುರದ ಬಲದೇವ ನಾಯಕನೆಂಬ ಜಮೀನ್ದಾರನ ಕಣ್ಣಿಗೆ ಬಿದ್ದು, ಆತ ಆಕೆಯನ್ನು ವಿವಾಹವಾಗುತ್ತಾನೆ. ಅಲ್ಲಿಂದ ಮುಂದೆ ಆಕೆ ‘ಚಾಂದಬೀ ಸರಕಾರ’ ಆಗುತ್ತಾಳೆ. ಇದು ಕಾದಂಬರಿಯ ಕಥಾ ಹಂದರ.
ಪ್ರಾತಿನಿಧಿಕವಾಗಿ ಶಿವಾಪುರ ಎಂಬ ಗ್ರಾಮದ ಆವರಣದಲ್ಲಿ ಸುತ್ತುತ್ತಲೇ ಕತೆ ಸಮಕಾಲೀನ ಕೌಟುಂಬಿಕ, ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ವಿಸ್ತಾರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ‘ಸರಕಾರ’ ಅನಿಸಿಕೊಳ್ಳುವ ಚಾಂದಬೀಯು ತನ್ನ ಸುತ್ತಮುತ್ತಲಿನ ಪರಿಸರವನ್ನು ಕ್ರಿಯಾಶೀಲಗೊಳಿಸುವ, ಸಮೃದ್ಧಿಯೆಡೆಗೆ ಚಲಿಸುವಂತೆ ಮಾಡುವ ಕೌತುಕದ ಕಥನವನ್ನು ಬಹಳ ಧ್ವನಿಪೂರ್ಣವಾಗಿ ಓದುಗರಿಗೆ ವಾಸ್ತವದ ಅನುಭವವಾಗುವಷ್ಟು ಸಹಜವಾಗಿ ತಮ್ಮದೇ ಆದ ವಿಶಿಷ್ಟ ಭಾಷಾ ಶೈಲಿಯಲ್ಲಿ ಕಂಬಾರರು ಹೆಣೆದಿದ್ದಾರೆ.
ಈ ಕೃತಿಯಲ್ಲಿ ಕೆಲವು ಘಟನೆಗಳು, ವಿವರಗಳು, ಸಂಗತಿಗಳು ಅಸಹಜವೆನಿಸಿದರೂ ಇವು ಕೃತಿಯ ವಸ್ತುವಿಗೆ ಪೂರಕವಾಗಿದ್ದು, ಈ ವಸ್ತುವಿನ ಅಂತರಂಗದ ಶೋಧ ನಡೆಸುತ್ತವೆ. ಗಂಡು-ಹೆಣ್ಣು ಸಂಬಂಧ, ಅಧಿಕಾರ ದಾಹ, ಭೂ ಸುಧಾರಣೆ, ಶೋಷಣೆ, ಚುನಾವಣೆಯ ಸಮಸ್ಯೆ, ಕುಡಿತ, ಬಡತನ, ಭೂ ಆಕ್ರಮಣ, ಆಧುನಿಕತೆಯ ಪ್ರಭಾವದಿಂದ ಉಂಟಾಗಿರುವ ಸಮಸ್ಯೆ, ಎಲ್ಲವೂ ಇಲ್ಲಿ ಶೋಧನೆಗೆ ಒಳಗಾಗಿ ಅವುಗಳ ಸಾಧಕ ಬಾಧಕ ಓದುಗರ ಎದೆತಟ್ಟುತ್ತವೆ. ಇವುಗಳನ್ನು ಆಯಾ ಪಾತ್ರಗಳ ಬದುಕಿನಲ್ಲೇ ಗ್ರಹಿಸಿ ಅನಾವರಣಗೊಳಿಸಿರುವ ರಚನಾ ವಿನ್ಯಾಸ ಈ ಕಾದಂಬರಿಯದ್ದು. ಇಲ್ಲಿ ಆಕರ್ಷಕವಾದ ನಿರೂಪಣೆಯು ವಸ್ತುವಿನೊಂದಿಗೆ ಬೆರೆತು ಹೋಗಿ ಕಾದಂಬರಿಯ ಅರ್ಥ ಸಾಧ್ಯತೆಯನ್ನು ಹಿಗ್ಗಿಸಿದೆ.
ಬಲದೇವ ನಾಯಕನನ್ನು ವರಿಸಿ ಶಿವಾಪುರ ಸೇರುವ ಚಾಂದಬೀ ಅಯ್ಯಾ ಸರಕಾರನ ದ್ವೇಷ ಕುಟಿಲೋಪಾಯಗಳನ್ನು ಉಪಾಯದಿಂದ ಎದುರಿಸಿ ಶಿವಾಪುರದಲ್ಲಿ ಹೆಣ್ಣುಮಕ್ಕಳ ಶಾಲೆ ಆರಂಭಿಸುವುದು; ಆಧುನಿಕತೆಯ ಪ್ರಭಾವಕ್ಕೊಳಗಾದ ಬಡ್ಡಿಬಂಗಾರಮ್ಮ ಬಾರ್ ತೆರೆದಾಗ ಗಂಡಸರು ಕುಡಿತದ ದಾಸರಾಗಿ ಜಮೀನು ಕಳಕೊಳ್ಳುವುದು, ಹೆಂಗಸರು ಒಗ್ಗಟ್ಟಿಂದ ವಿರೋಧಿಸುವುದು; ಅಯ್ಯಾ ಸರಕಾರನ ಚುನಾವಣಾ ತಂತ್ರ, ಬಲದೇವನ ಕೊಲೆಗಾಗಿ ಮಾಡುವ ಪಿತೂರಿ... ಹೀಗೆ ಚಾಂದಬೀಯ ಸುತ್ತ ನಡೆಯುವ ಘಟನೆಗಳು ಅವಳ ಹಾಗೂ ಆ ಗ್ರಾಮದ ಕತೆ ಮಾತ್ರ ಆಗಿರದೆ ಒಂದು ರಾಜ್ಯದ, ಒಂದು ರಾಷ್ಟ್ರದ ಕತೆಯೂ ಆಗಿದೆ. ಮಾನವೀಯತೆ ಎತ್ತ ಸಾಗುತ್ತಿದೆ ಎಂಬುವುದಕ್ಕೆ ಕನ್ನಡಿ ಹಿಡಿಯುವುದಷ್ಟೇ ಅಲ್ಲ, ಕಾಡುವ ಸಮಸ್ಯೆಗಳಿಗೆ ಏನು ಚಿಕಿತ್ಸೆಯೆಂದು ಚಿಂತಿಸುವಂತೆಯೂ ಮಾಡುತ್ತದೆ.
ಕಾದಂಬರಿಯುದ್ದಕ್ಕೂ ಹರಿಯುವ ರಾಜಕೀಯ ಲೋಕ ವಿಶಿಷ್ಟವಾದುದು. ಇಲ್ಲಿನ ಊಳಿಗಮಾನ್ಯ ವ್ಯವಸ್ಥೆ, ಆಧುನಿಕ ಚುನಾವಣಾ ಸ್ವರೂಪ ಬದಲಾಗದ ಜನಸಾಮಾನ್ಯರ ಸ್ಥಿತಿಗತಿ ಕುರಿತು ಹೇಳುತ್ತಲೇ ಸಮಾಜವೊಂದು ಆಧುನಿಕ ಬಾಹ್ಯ ಪ್ರಚೋದನೆ ಹಾಗೂ ಆಂತರಿಕ ವಿಚ್ಛಿದ್ರಕಾರಿ ಶಕ್ತಿಗಳಿಂದ ಅವನತಿಯತ್ತ ನಡೆದಾಗ ಅದನ್ನು ಸುಸ್ಥಿತಿಯತ್ತ ಚಲಿಸುವಂತೆ ಮಾಡುವ ಮತ್ತೊಂದು ವ್ಯವಸ್ಥೆಯೂ ಅದರೊಳಗೇ ಹುಟ್ಟಿಕೊಳ್ಳುತ್ತದೆ ಎಂಬುದನ್ನು ಹಿಡಿದಿಡುತ್ತದೆ. ಇಲ್ಲಿನ ಸಾಂಕೇತಿಕ ‘ಸಂಪಿಗೆ ಮರ’ ಇದಕ್ಕೆ ನಿದರ್ಶನ. ಕಾದಂಬರಿಯಲ್ಲಿ ಈ ಮರವೂ ಒಂದು ಜೀವಂತ ಪಾತ್ರವಾಗಿ ಗಂಡು-ಹೆಣ್ಣು ಸಂಬಂಧ, ದೇಹ-ಆತ್ಮ, ದೈವ-ಮನುಷ್ಯ, ಪ್ರಕೃತಿ-ಮನುಷ್ಯ ತೊಳಲಾಟಗಳ ಸಂಬಂಧಗಳ ಗೂಢ ಸ್ವರೂಪಕ್ಕೆ ಬಳಸಿರುವ ಜನಪದ ತಂತ್ರಗಾರಿಕೆಯ ಪ್ರತಿಮೆಯಾಗಿ ವಿವಿಧ ಸಾಧ್ಯತೆಗಳನ್ನು ಶೋಧಿಸಲು ಓದುಗನಿಗೆ ನೆರವಾಗುತ್ತದೆ.
ದೇವದಾಸಿಯೊಬ್ಬಳು ತನ್ನ ಕಲಾಬಲದಿಂದ, ಆತ್ಮಬಲದಿಂದ ಅಗಾಧ ಶಕ್ತಿಯಾಗಿ ಬೆಳೆಯುವ, ಗ್ರಾಮವನ್ನು ಬೆಳೆಸುವ ಚಿತ್ರದ ಈ ಕೃತಿಯು ಕೇವಲ ಒಂದು ಗ್ರಾಮದ ಕಥನವಾಗದೆ ಆಧುನಿಕ ಪ್ರಭಾವಗಳಿಗೆ ಒಳಗಾದರೂ ಮೂಲ ಸ್ವರೂಪ ಕಳಕೊಳ್ಳದೆ, ಸಮೃದ್ಧಿಯತ್ತ ಸಾಗಬೇಕು ಎಂಬ ಆಶಯದ ಎಲ್ಲ ಭಾರತೀಯ ಗ್ರಾಮಗಳ ಪ್ರಾತಿನಿಧಿಕ ಕಥನವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.