ADVERTISEMENT

ವಿಮರ್ಶೆ: ನಾಡಿನ ಅಧ್ಯಾತ್ಮ ಪರಂಪರೆಯ ದರ್ಶನ

ಎಸ್.ನಟರಾಜ ಬೂದಾಳು
Published 17 ಏಪ್ರಿಲ್ 2021, 19:30 IST
Last Updated 17 ಏಪ್ರಿಲ್ 2021, 19:30 IST
ಕರ್ನಾಟಕ ಗುರುಪಂಥ ಕೃತಿ
ಕರ್ನಾಟಕ ಗುರುಪಂಥ ಕೃತಿ   

ಕರ್ನಾಟಕ ಗುರುಪಂಥ
ಲೇ:
ರಹಮತ್ ತರೀಕೆರೆ
ಪ್ರಕಾಶಕರು: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
ಪುಟಗಳು 316 ಬೆಲೆ: 300

ಭಾರತೀಯ ಜೀವನಕ್ರಮವನ್ನು ದೈವಮಾರ್ಗಕ್ಕೆ ಸರಿಸಾಟಿಯಾಗಿ ಪ್ರಭಾವಿಸಿದ ಮಾರ್ಗವೆಂದರೆ ಅದು ಗುರುಮಾರ್ಗ. ಇವುಗಳ ನಡುವೆ ಅಲ್ಲಲ್ಲಿ ಅನ್ಯೋನ್ಯ ಸಾಹಚರ್ಯವಿದ್ದರೂ ಗುರುಮಾರ್ಗವು ನಿರ್ಣಾಯಕವಾಗಿ ತನ್ನ ತಾತ್ವಿಕತೆಯನ್ನು ಅಲಾಯಿದ ಉಳಿಸಿಕೊಂಡು ಬಂದಿದೆ. ಶ್ರಮಣಧಾರೆಗಳು ಎಂದು ಗುರುತಿಸುವ ಜೈನ, ಬೌದ್ಧ, ಸಿದ್ಧ, ನಾಥ, ವಚನ, ಅವಧೂತ, ಸೂಫಿ, ಆರೂಢ, ಅಚಲ, ಶಾಕ್ತ ಮತ್ತು ಅನೇಕ ತತ್ವಪದ ಪರಂಪರೆಗಳೆಲ್ಲ ಗುರುಮಾರ್ಗಗಳೇ ಆಗಿವೆ.

ಕರ್ನಾಟಕದಲ್ಲಿ ಈ ಎಲ್ಲ ಪಂಥಗಳೂ ಸಾವಿರಾರು ವರುಷಗಳಿಂದ ಸಮೂಹಗಳನ್ನು ಬಾಳಿಸುತ್ತ ಬಂದಿವೆ. ಅವೆಲ್ಲ ಈಗಲೂ ಜೀವಂತವಾಗಿವೆ. ಪ್ರಸ್ತುತ ‘ಕರ್ನಾಟಕ ಗುರುಪಂಥ’ ಕೃತಿಯು ಶ್ರಮಣಧಾರೆಗಳ ಸಂಗಮಭೂಮಿಯಾದ ತತ್ವಪದಗಳ ಆವರಣಗಳನ್ನು ಮುನ್ನೆಲೆಯಲ್ಲಿ ಇಟ್ಟುಕೊಂಡು ನಡೆಸಿದ ಜೀವಂತ ದರ್ಶನಗಳ ಅಧ್ಯಯನವಾಗಿದೆ.

ADVERTISEMENT

ಕನ್ನಡದ ಅನುಭಾವಿ ಪಂಥಗಳ ತಾತ್ವಿಕತೆ, ಅವುಗಳ ಅಭಿವ್ಯಕ್ತಿ ಮತ್ತು ಜೀವನಕ್ರಮಗಳ ಜೊತೆಗೆ ಗಾಢವಾದ ಸಂಬಂಧವಿದೆ. ಈ ಮೂರೂ ಎಳೆಗಳನ್ನು ಜಗ್ಗಿ ಮಾತನಾಡಿಸಿದರೆ ಮಾತ್ರ ಅಲ್ಲಿಂದ ಉತ್ತರ ದೊರಕುತ್ತದೆ. ಅದು ನಿರಂತರ ಎಚ್ಚರದಲ್ಲಿಯೇ ಸಾಗುವ ಯಾನ. ನಿಂತು ಮಾತನಾಡುವವರು ಅಲ್ಲಿ ಯಾರೂ ಸಿಗುವುದಿಲ್ಲ. ತತ್ವಯಾನಿಗಳಿಗೆ ಮಾತ್ರ ಸಹಪ್ರಯಾಣ. ನೆರವಿಗೆ ಸಾಧಕ ಸಂಹಿತೆಯೋ ತತ್ವಸಂಹಿತೆಯೋ ಇರಬೇಕು. ಅದು ಬಹುಪಾಲು ಕತ್ತಲ ಜಗತ್ತಿನಲ್ಲಿ ಅನಾವರಣವಾಗುವ ಅರಿವಿನ ಬೆಳಕು. ಹಾಗಾಗಿ ಈ ಕೃತಿಯ ಮೂಲಕ ಕನ್ನಡದ ಒಳಜಗತ್ತೊಂದು ಶೈಕ್ಷಣಿಕ ಆವರಣವನ್ನು ಪ್ರವೇಶಿಸಿದೆ. ಇದರಿಂದ ನಮ್ಮ ಸಾಂಸ್ಕೃತಿಕ ಲೋಕ ಮತ್ತಷ್ಟು ವಿಸ್ತಾರವಾಗಿದೆ. ಈವರೆಗೆ ಹೊರಗೇ ಉಳಿದಿದ್ದ ದೇಸಿ ಅನುಭಾವ, ಕಾವ್ಯ, ಕಾವ್ಯ ಮೀಮಾಂಸೆ, ಮತ್ತು ಜೀವನಕ್ರಮಗಳು ಒಳ ಬರಲಾರಂಭಿಸಿವೆ. ಮರೆವಿಗೆ ಸಂದಿದ್ದ ನಮ್ಮದೇ ಹೊಸ ಮಗ್ಗುಲುಗಳನ್ನು ಮರುಜೋಡಿಸಿಕೊಳ್ಳಲು ಸಾಧ್ಯವಾಗಿದೆ. ಈ ಹಾದಿಯ ಒಂದು ಮಹತ್ವದ ಮೈಲುಗಲ್ಲಾಗಿ ಈ ಕೃತಿ ಹೊರಬಂದಿದೆ.

ಕರ್ನಾಟಕದ ಉದ್ದಗಲಕ್ಕೂ ಹರಡಿಕೊಂಡಿರುವ ಗುರುಮಾರ್ಗದ ಅಧ್ಯಯನ ಗಂಭೀರ ಸವಾಲುಗಳನ್ನು ಒಡ್ಡುತ್ತದೆ. ಕರ್ನಾಟಕದ ವೈದಿಕ-ಅವೈದಿಕ ಧಾರೆಗಳ ಆಳವಾದ ಅರಿವನ್ನು ಬೇಡುತ್ತದೆ. ತತ್ವ, ನಾದ, ಲಯ, ಆಚರಣೆ, ಅನ್ನಾಹಾರ, ಗುಹ್ಯ ಮತ್ತು ವಿಕ್ಷಿಪ್ತ ನಡವಳಿಕೆ, ಇವೆಲ್ಲವುಗಳನ್ನೂ ಮೀರಿದ ಲೋಕಾನುಕಂಪ ಇತ್ಯಾದಿಗಳನ್ನು ಒಂದು ಕ್ಯಾನ್ವಾಸಿಗೆ ತಂದು ನಿರ್ವಹಿಸುವ ಸಂಶೋಧನೆ ಅಪಾರವಾದ ಸಾಮರ್ಥ್ಯವನ್ನು ಬೇಡುತ್ತದೆ. ಲೇಖಕರು ಈ ಹಾದಿಯ ದೀರ್ಘಕಾಲದ ಪಯಣಿಗರಾದ ಕಾರಣ ಇದು ಸಾಧ್ಯವಾಗಿದೆ.

ಭಾರತದ ತತ್ವ ನಕಾಶೆಯ ಬಹುಭಾಗವನ್ನು ರೂಪಿಸಿರುವ ನಾಥ, ಸಿದ್ಧ, ಬೌದ್ಧ, ಸೂಫಿ, ಆರೂಢ, ಆಜೀವಿಕ, ಅಚಲ ಮುಂತಾದ ಪಂಥಗಳನ್ನು ಕಾಲುದಾರಿಗಳೆಂದು ಕರೆದು, ಸಣ್ಣಪುಟ್ಟ ಪಂಥಗಳನ್ನು ಪ್ರಧಾನವೆಂದು ಗುರುತಿಸಿಕೊಳ್ಳುವ ಸಾಂಸ್ಕೃತಿಕ ರಾಜಕಾರಣಕ್ಕೆ ಸಾವಿರಾರು ವರ್ಷಗಳ ಸಂಘರ್ಷಾತ್ಮಕ ಇತಿಹಾಸವಿದೆ. ಈ ಹೊತ್ತಿನ ಅಧ್ಯಯನಗಳಿಗೆ ಇದು ತೀವ್ರವಾದ ಬಿಕ್ಕಟ್ಟನ್ನು ಒಡ್ಡುತ್ತಿದೆ. ಅವುಗಳನ್ನು ಮುಖಾಮುಖಿಯಾಗಿಸದೆ ಮುಂದುವರಿಯಲಾಗದು.

‘ಕರ್ನಾಟಕ ಗುರುಪಂಥ’ ಶೂದ್ರ ಅಧ್ಯಾತ್ಮದ ಒಂದು ವಿಸ್ತರಣೆ. ಈ ನೆಲದ ಶೂದ್ರ ಅಧ್ಯಾತ್ಮ ಆಚರಣಾಪ್ರಧಾನವಾದುದು. ಅನ್ವಯಗೊಳ್ಳದ ತಾತ್ವಿಕತೆಯನ್ನು ಅದು ಮುಖ್ಯವೆಂದು ಪರಿಗಣಿಸುವುದಿಲ್ಲ. ಅಂತಹ ಆಚರಣಾ ಲೋಕಕ್ಕೆ ಅಕ್ಕರೆಯಿಲ್ಲದೆ ಹೋಗಲಾಗದು. ಈ ನೆಲದ ಜೀವಸತ್ವವಾದ ಬಹುತ್ವದ ಬಗೆಗೆ ವಿಶ್ವಾಸವಿರುವವರಿಗೆ ಮಾತ್ರ ಸಾಧ್ಯವಾಗುವ ಇಂತಹ ಪ್ರವೇಶಗಳು ಅಲ್ಲಿಂದ ಮಹತ್ವದ ಸಾಂಸ್ಕೃತಿಕ ಸಂವಿಧಾನಗಳನ್ನು ಹೊರತರುತ್ತವೆ. ಕರ್ನಾಟಕದ ನಾಥ, ಸೂಫಿ ಪಂಥಗಳ ಅಧ್ಯಯನಗಳೂ ನಮ್ಮ ಸಾಂಸ್ಕೃತಿಕ ಸಂವಿಧಾನದ ಬೇರೆ ಬೇರೆ ಅಧ್ಯಾಯಗಳೆಂದು ಭಾವಿಸಬಹುದಾಗಿದೆ.

ನಾವು ಕಳೆದುಕೊಂಡಿದ್ದ ದಾರಿಯೊಂದು ಮತ್ತೆ ತೆರೆದುಕೊಂಡಿದೆ. ಕರ್ನಾಟಕದ ಉದ್ದಗಲಕ್ಕೂ ಗುರುಗದ್ದುಗೆಗಳಿವೆ. ಶಿರಡಿಯಿಂದ ಕಡಕೋಳ ಮಡಿವಾಳಪ್ಪ, ಚಿಕ್ಕನಾಯಕನಹಳ್ಳಿಯ ತಾತಯ್ಯ ಮತ್ತು ಪಕ್ಕದಲ್ಲೇ ಇರುವ ಚಿಕ್ಕೇನಹಳ್ಳಿಯ ಮಾಲಿಂಗಪ್ಪತಾತನ ಗದ್ದುಗೆವರೆಗೆ ಅದರ ವಿಸ್ತಾರವಿದೆ. ಇವುಗಳಿಗೆ ಎಲ್ಲ ಸಮೂಹಗಳು ಭಿನ್ನಭೇದವಿಲ್ಲದೆ ನಡೆದುಕೊಳ್ಳುತ್ತವೆ. ಧರ್ಮ, ಕಾಲ-ದೇಶಮುಕ್ತರಾದ ಗುರುಮಾರ್ಗಿಗಳನ್ನು ಸೀಮಿತ ಭೌಗೋಳಿಕ ದೃಷ್ಟಿಯಿಂದಾಗಲೀ, ಪಾಂಥಿಕ ದೃಷ್ಟಿಯಿಂದಾಗಲೀ ನೋಡುವುದು ಸಾಧುವಲ್ಲ. ಸಮೂಹವು ಇಂತಹವುಗಳಿಂದ ಮುಕ್ತವಾಗಿಯೇ ಅವರನ್ನು ನೋಡಿದೆ. ಲೇಖಕರು ಈ ಕಾಲುದಾರಿಯನ್ನು ದೀರ್ಘಕಾಲದಿಂದ ಸವೆಸಿದ್ದಾರೆ.

ಇದು ಅನೇಕ ಜ್ಞಾನ ಶಿಸ್ತುಗಳನ್ನು ದುಡಿಸಿಕೊಂಡಿರುವ ಅಧ್ಯಯನ. ಇಲ್ಲಿ ಕಸುಬು, ತತ್ವಶಾಸ್ತ್ರ, ಸಂಗೀತ, ಧ್ಯಾನ, ಸಮಾಜೋಧಾರ್ಮಿಕ ಚಳವಳಿ, ಭಾಷೆ ಮತ್ತು ಸಾಮಾಜಿಕ ಚಲನೆಯ ಸ್ವರೂಪ ಪರಸ್ಪರ ಗಾಢವಾಗಿ ಹೆಣೆದುಕೊಂಡಿವೆ. ತತ್ವ, ಸಾಧಕ ನಡೆ ಮತ್ತು ಆಚರಣೆಗಳು ಬೆರೆತಿರುವ ಲೋಕ. ನಿರಂತರ ಚಲನಶೀಲವಾಗಿರುವ ಸಂಸ್ಕೃತಿಯ ಅಧ್ಯಯನಕ್ಕೆ ಅಗತ್ಯವಾದ ಬಹುಮುಖಿ ನೋಟಕ್ರಮವನ್ನು ಅನ್ವಯಿಸಿಕೊಳ್ಳದೆ ಮುಂದಡಿ ಇಡಲಾಗದು. ಈ ಹೊತ್ತಿನ ತುರ್ತಿಗೆ ಈ ಧಾರೆಗಳು ಹೇಗೆ ಪ್ರಸ್ತುತವಾಗುತ್ತವೆ ಎನ್ನುವ ಪ್ರಶ್ನೆಯನ್ನು ಅಂಗೈಯಲ್ಲೇ ಇಟ್ಟುಕೊಂಡಿರುವ ಈ ಅಧ್ಯಯನ ಎದುರಿನ ಮತ್ತು ತನ್ನ ಮಿತಿಗಳೆರಡನ್ನೂ ಕಾಣಿಸಿದೆ.

ಈ ಕೃತಿಯ ಓದು ಒಂದು ಸಂಗತಿಯನ್ನು ಅರಿವಿಗೆ ತರುತ್ತದೆ. ನಮ್ಮ ಶೈಕ್ಷಣಿಕ ಆವರಣಗಳು ರೂಢಿಸಿಕೊಟ್ಟಿರುವ ಓದಿನ ಮಾದರಿಗಳನ್ನು ಪಕ್ಕಕ್ಕಿಟ್ಟು ನಮ್ಮದೇ ಆದ ಓದಿನ ಕ್ರಮಗಳನ್ನು ಒದಗಿಸಿಕೊಂಡರೆ ಮಾತ್ರ ಗುರುಮಾರ್ಗಗಳು ತೆರೆದುಕೊಳ್ಳುತ್ತವೆ. ಅದು ಸರಳ ಸಂಗತಿಯಲ್ಲ. ಹೋಗಹೋಗುತ್ತಲೇ ಕೇಳಿಕೊಂಡು ಹೋಗುವ ದಾರಿ. ಸಾಧಕ ಸಂಹಿತೆ ಅಥವಾ ತತ್ವಸಂಹಿತೆಯ ಊರುಗೋಲು ಬೇಕಾಗುತ್ತದೆ.

ಗುರುಪಂಥಗಳಿಗೆ ತೀವ್ರತರವಾದ ಬಿಕ್ಕಟ್ಟುಗಳಿವೆ. ಮಹಾವ್ಯಾಖ್ಯಾನಗಳ ಮೂಲಕ ಪ್ರಮಾಣಗಳನ್ನು ನಿರ್ಮಿಸಿಕೊಂಡಿರುವ ವೈದಿಕ ಇತ್ಯಾದಿ ಧರ್ಮಗಳ ಪಾಂಥಿಕತೆಯನ್ನು ಎದುರುಹಾಕಿಕೊಳ್ಳುವ ಅನಿವಾರ್ಯ ಒಂದಾದರೆ, ಜಾತಿ, ವರ್ಣ, ಲಿಂಗ ತಾರತಮ್ಯಗಳನ್ನು ಉಸಿರಾಡುತ್ತಿರುವ ಸಮೂಹಗಳ ನಡುವೆ ಅವುಗಳನ್ನು ತ್ಯಜಿಸಿ ಸಾಮರಸ್ಯದ ಬಾಳುವೆಯೊಂದನ್ನು ಮುಂದಿಡುವ ಜವಾಬ್ದಾರಿಯನ್ನೂ ಅವು ನಿರ್ವಹಿಸಬೇಕಿದೆ. ಸಾಂಸ್ಕೃತಿಕ ವಸಾಹತುಶಾಹಿ ಮತ್ತು ಅದರ ಅಡಿಯಾಳಾಗಿರುವ ಅಧಿಕಾರ ಕೇಂದ್ರಗಳು ಈ ಆವರಣಗಳಿಗೆ ನುಗ್ಗಿ ತಮ್ಮ ಆಧಿಪತ್ಯ ಸ್ಥಾಪಿಸುತ್ತವೆ. ನಮ್ಮ ಆವರಣಗಳು ನಮ್ಮ ಕೈತಪ್ಪುತ್ತಿವೆ. ಅವು ಉಳಿಯಬೇಕಿದೆ. ನಮ್ಮ ನಿಜ ಆವರಣಗಳಿಗೆ ಕರೆದೊಯ್ಯುವ ಇಂತಹ ಅಧ್ಯಯನಗಳು ಕನ್ನಡ ವಿಶ್ವವಿದ್ಯಾಲಯದ ಮಹತ್ವವನ್ನು ಹೆಚ್ಚಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.