ಕನ್ನಡ ಸಾಹಿತ್ಯಕ್ಕೆ ಎರಡೂವರೆ ಸಾವಿರ ವರ್ಷಗಳ ಇತಿಹಾಸವಿದೆ. ಆದರೆ ದಲಿತ ಸಾಹಿತ್ಯ ಪ್ರಖರಗೊಂಡಿದ್ದು, ನಿಕಷಕ್ಕೆ ಒಡ್ಡಿಕೊಂಡಿದ್ದು 1970–80ರ ದಶಕದಲ್ಲಿ. ಅಷ್ಟೇ ವೇಗದಲ್ಲಿ ತನ್ನ ಬಾಹುಗಳನ್ನು ಚಾಚುತ್ತಾ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬೇರು ಬಿಟ್ಟು, ವಿಶಾಲ ರೆಂಬೆಗಳನ್ನು ಚಾಚಿದ್ದೂ ಗಮನಾರ್ಹ. ಅಂತೆಯೇ 70–80ರ ದಶಕ ದಲಿತ ಸಂವೇದನೆಯ ಪುನರುತ್ಥಾನದ ಯುಗ. ಅಕ್ಷರ ಕಲಿತ ಮೊದಲ ತಲೆಮಾರಿನ ದಲಿತ ಲೇಖಕರು, ಕವಿಗಳು, ಸಾಹಿತಿಗಳು ದಮನಿತರ ನೋವಿಗೆ ದನಿಯಾದ ಕಾಲ. ಆಳುವ ಮತ್ತು ಮೇಲ್ವರ್ಗಗಳಿಂದ ತಮಗಾದ ಅನ್ಯಾಯದ ವಿರುದ್ಧ ಸಿಡಿದೆದ್ದು, ಅವೆಲ್ಲವನ್ನೂ ಹೋರಾಟ ಮತ್ತು ಅಕ್ಷರ ರೂಪಕ್ಕಿಳಿಸಿ ಪ್ರತಿಭಟಿಸಿದ ಆ ಹೊತ್ತು ದಲಿತ ಸಾಹಿತ್ಯದ ಅರುಣೋದಯವಾಯಿತು.
ದಲಿತ ಸಾಹಿತ್ಯ, ಬರಹ ಮತ್ತು ಬದುಕಿಗೆ ಅವಿನಾಭಾವ ಸಂಬಂಧ, ಸಾಮ್ಯತೆಯಿದೆ ಅಥವಾ ಬದುಕು, ಅನುಭವವೇ ಬರಹದ ರೂಪಕ್ಕಿಳಿದಿದೆ. ಅರ್ಥಾತ್ ದಲಿತ ಬರಹಗಳೆಂದರೆ ಅಸ್ಮಿತೆ, ಚಹರೆ, ಗುರುತು. ದೇವನೂರು ಮಹಾದೇವ, ಸಿದ್ಧಲಿಂಗಯ್ಯನವರಂತಹ ಪ್ರಮುಖರನ್ನು ಹೊರತುಪಡಿಸಿದರೆ ಹಲವುದಲಿತ ಯುವ ಕವಿಗಳು ಮತ್ತವರ ಬರಹ ಇನ್ನೂ ಮರೆಯಲ್ಲೇ ಇರುವುದು ದಿಟ. ಈ ಕೊರತೆ ತುಂಬುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ‘ದಲಿತ ಸಾಹಿತ್ಯ ಸಂಪುಟ’ದ ಮೂಲಕ ಕಾವ್ಯ, ಸಣ್ಣಕಥೆ, ಜಾನಪದ, ಸಂಶೋಧನೆ ಮತ್ತು ಮಾನವಿಕ ದಲಿತ ಬರಹಗಳನ್ನು ಸಂಗ್ರಹಿಸಿ, ಸಂಕಲನವಾಗಿಸಿ ಹೊರತಂದಿದೆ. ಇವುಗಳಲ್ಲಿ ಹಿರಿಯ ಸಾಹಿತಿ, ಕವಿಗಳ ಬರಹದೊಟ್ಟಿಗೆ ನವಕವಿಗಳ ಆಶಯ, ಚಿಂತನೆ, ಭಾವ, ಅಭಿವ್ಯಕ್ತಿ ಅನಾವರಣಗೊಂಡಿದ್ದು ಆ ಮೂಲಕ ದಮನಿತರ ಹಾದಿಗೆ ಬೆಳಕಿನ ದೊಂದಿ ಹಿಡಿದಿವೆ.
ತಮ್ಮ ಅಸ್ಮಿತೆಯ ಜಗತ್ತನ್ನು ತಿಳಿಯುತ್ತಲೇ ಉಳಿದ ಅಸ್ಮಿತೆಯ ಜಗತ್ತನ್ನು ಪಾರಸ್ಪರಿಕವಾಗಿ ಅರ್ಥ ಮಾಡಿಕೊಳ್ಳುವುದು ಇಂದಿನ ಅವಶ್ಯಕತೆಗಳಲ್ಲಿ ಒಂದು. ದಲಿತ ಬರಹಗಾರರ ಒಟ್ಟು ಸೃಜನಶೀಲ ಮತ್ತು ಸೃಜನೇತರ ಶಕ್ತಿ – ಸಾಮರ್ಥ್ಯಗಳನ್ನು, ಸಾಹಿತ್ಯದ ವಿವಿಧ ಪ್ರಕಾರಗಳನ್ನು ಪ್ರಸ್ತುತ ಸಂಪುಟಗಳು ಇಲ್ಲಿ ರುಜುವಾತುಗೊಳಿಸುತ್ತವೆ. ಆಚರಣೆಯ ಮೂಲಕ ಅಸ್ತಿತ್ವ ಗುರುತಿಸಿಕೊಳ್ಳುವ ಪ್ರಯತ್ನದ ಜತೆಗೆ ತುಳಿಯಲ್ಪಟ್ಟ ಜಾತಿಗಳ ಜನ ವಿವಿಧ ಆಚರಣೆಗಳ ಮೂಲಕ ಶೋಷಕ ಸಮಾಜಕ್ಕೆ ತಮ್ಮ ಪ್ರತಿಭಟನೆ ಸಲ್ಲಿಸುತ್ತಾರೆ. ಅದರ ನಿಚ್ಚಳತೆ ಇಲ್ಲಿದೆ.
‘ದಲಿತರು ಅಂದಿನಿಂದ ಇಂದಿನವರೆಗೂ ಓಟ್‌ಬ್ಯಾಂಕ್ ರಾಜಕಾರಣದ ದಾಳಗಳಾಗಿದ್ದಾರೆ’ ಎನ್ನುತ್ತಾರೆ ಡಾ.ಎಲ್.ಹನುಮಂತಯ್ಯ. ಆಶ್ಚರ್ಯವಿಲ್ಲ, ಶತಮಾನಗಳ ಶೋಷಣೆ ಹಾಗೆಯೇ ಮುಂದುವರಿದಿದೆ ಅಥವಾ ಮತ್ತಷ್ಟು ಹೆಚ್ಚಿದೆ. ಕೆಲ ರಾಜಕೀಯ ವ್ಯಕ್ತಿಗಳು ಮತ್ತು ಬಣಗಳೇ ಓಟಿಗಾಗಿ ಜಾತಿಗಳನ್ನು ಅವುಗಳಿರುವ ಪರಿಸ್ಥಿತಿಯಲ್ಲೇ ಇಡಬಯಸುತ್ತಿವೆ. ದಲಿತರ, ಶೋಷಿತರ ಗಂಟಲನ್ನು ಉದ್ದೇಶಪೂರ್ವಕವಾಗಿ ಅದುಮಿ ಹಿಡಿಯುತ್ತಿವೆ.ಇಂದಿಗೂ ಅದೆಷ್ಟೋ ಕಡೆಗಳಲ್ಲಿ ಜಾತಿ ಕಾರಣಕ್ಕಾಗಿ ದಲಿತರಿಗೆ ದೇವಾಲಯಕ್ಕೆ, ಬಾವಿಗೆ, ಸಾರ್ವಜನಿಕ ನಲ್ಲಿಗೆ, ಮಾತ್ರವಲ್ಲ ಮೇಲ್ಜಾತಿಯವರ ಮನೆಯ ಪಡಸಾಲೆಗೂ ಪ್ರವೇಶವಿಲ್ಲ.ಅಂತರ್ಜಾತಿ ವಿವಾಹ ಮಾಡಿಕೊಂಡನವದಂಪತಿಗಳನ್ನು ಮೇಲು ಕೀಳಿನ ಜಿಟ್ಟುಗಟ್ಟಿದ ಮನೋಭಾವನೆಯಿಂದಾಗಿಜೀವಂತ ಸುಡುವ ಘಟನೆಗಳೂ ಇಲ್ಲದಿಲ್ಲ. ಇಂತಿಪ್ಪ ಸಂದಿಗ್ಧದಲ್ಲಿ ಮೇಲ್ನೋಟದ ಕಣ್ಣೊರೆಸುವ ಕ್ರಿಯೆಗಳೆಲ್ಲ ಸ್ವಹಿತಾಸಕ್ತಿಯ ಹಿನ್ನೆಲೆಯಿಂದ ಪ್ರೇರಿತವಾದವುಗಳೇ ಹೊರತು ಸ್ವಜಾತಿಯ ಹಿತಾಸಕ್ತಿಗಳಾಚೆಗಿನ ಆಲೋಚನೆ ನಿರೀಕ್ಷೆಯಾಗೇ ಉಳಿದಿವೆ. ಇಂತಹದ್ದೇ ಕಟು ವಾಸ್ತವದ ಚಿತ್ರಣವನ್ನು ಕಟ್ಟಿಕೊಡುತ್ತದೆ ದಲಿತ ಸಾಹಿತ್ಯ ಸಂಪುಟ.
ಇಲ್ಲಿನ ಒಟ್ಟು ಬರಹಗಳುದಲಿತ ಸಮುದಾಯದ ಸಂಕಟ, ತವಕ, ತಲ್ಲಣ, ಬಿಕ್ಕು, ನೋವು, ನಿಂದೆ, ಅಪಮಾನ, ಅಸ್ಪೃಶ್ಯತೆಯ ಮೂರ್ತಿ. ಕಾವ್ಯವೂ ಕೂಡ. ಕಾವ್ಯಕ್ಕೆ ನೋವನ್ನು ಮರೆಸುವ ಶಕ್ತಿಯಿದೆ ಎಂಬ ಮಾತೊಂದಿದೆ. ಇಲ್ಲಿನ ಕಾವ್ಯಸಂಪುಟ ದಮನಿತರ ನೋವಿಗೆ ಹಿಡಿದ ಕೈಗನ್ನಡಿ. ಪ್ರಸ್ತುತ ದಲಿತ ಸಂಶೋಧನೆ, ದಲಿತ ಸಂಶೋಧಕರು ಕಳೆದ ನಲ್ವತ್ತು ವರ್ಷಗಳಿಂದ ನಡೆಸಿದ ಶೋಧನೆಯ ನಾನಾ ಮಾರ್ಗಗಳನ್ನು ಗುರುತಿಸಲು ಪ್ರಯತ್ನಿಸಿದ ಫಲ. ವರ್ಣ ಮತ್ತು ಜಾತಿಗಳ ಚಾರಿತ್ರಿಕ ಪರಿಕಲ್ಪನೆ ಕುರಿತ ವಿಶ್ಲೇಷಣೆಯೂ ಇಲ್ಲಿದೆ. ಆದರೆ ಚರಿತ್ರೆ ಇಂತಹದ್ದರ ಬಗ್ಗೆ ಮೌನ ವಹಿಸಿರುವುದು ದುರಂತ. ಮಾನವಿಕ ಸಂಪುಟ ತೆರೆದಿಡುವ ಜಗತ್ತೇ ಭಿನ್ನ. ದಲಿತರು ಬಾರಿಬಾರಿಗೂ ನೋವು, ದಬ್ಬಾಳಿಕೆಯನ್ನೇ ಭೆಟ್ಟಿಯಾದ ಬದುಕಿನ ವಿವಿಧ ಮಜಲುಗಳನ್ನು ಮನೋಜ್ಞವಾಗಿ ಚಿತ್ರಿಸಿದೆ. ಇದರ ಭಾಗವಾಗಿಯೇ ಲೇಖಕಿಯೊಬ್ಬರ ‘ಒಟ್ಟಾರೆ ದೇವದಾಸಿಯರ ಇತಿಹಾಸ ಗಮನಿಸಿದರೆ ಶೇ 99ರಷ್ಟು ದಲಿತ, ಹಿಂದುಳಿದ ಜಾತಿಯ ಮಹಿಳೆಯರು ಮತ್ತು ಶೇ 1ರಷ್ಟು ಮೇಲ್ಜಾತಿಯವರು ಈ ಪದ್ಧತಿಗೆ ಒಳಗಾಗಿರುವುದನ್ನು ಗಮನಿಸಬಹುದು’ ಎಂದಿದ್ದಾರೆ. ದಲಿತರ ಬದುಕಿನ ಕರಾಳತೆಗೆ ಇದೊಂದು ನಿದರ್ಶನವಷ್ಟೆ.ಇಂತಹುದೇ ಹುನ್ನಾರಗಳು ತುಳಿತಕ್ಕೊಳಗಾದವರನ್ನು, ಶೋಷಿಸುತ್ತಿರುವ ವಾಸ್ತವಕ್ಕೆ ಕಣ್ಣು ತೆರೆಯಿಸುವ ಬದಲು ಅವರನ್ನು ಕಣ್ಣು ಮುಚ್ಚಿಸುತ್ತಿವೆ. ತಮ್ಮ ಕಷ್ಟ–ನಿಷ್ಟುರಗಳಿಗೆ ಬಹಿರಂಗದಲ್ಲಿ ಕಾರಣ ಹುಡುಕುವಂತೆ ಮಾಡುವ ಬದಲು, ಶೋಷಿತರನ್ನು ಅಂತರ್‌ಮುಖಿಗಳನ್ನಾಗಿ ಮಾಡುತ್ತಿವೆ. ವಾಸ್ತವದಲ್ಲಿ ಆಗುತ್ತಿರುವುದು ಅದೇ. ಇವುಗಳ ನೈಜ ದರ್ಶನ ಈ ಸಂಪುಟದಲ್ಲಿ ಸಿಗುತ್ತದೆ.
ದಲಿತ ಸಾಹಿತ್ಯ ಸಂಪುಟಗಳ ಪ್ರಕಟಣೆಯನ್ನು ದಲಿತ ಅಸ್ಮಿತೆಯ ಭಾಗವಾಗಿ ನೋಡಬೇಕು. ಸೃಜನೇತರ ಪ್ರಕಾರಗಳಲ್ಲಿ ದಲಿತ ಸಂವೇದನೆಯ ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚಲು ಹಾಗೂ ಒಟ್ಟು ಕನ್ನಡ ಕಟ್ಟುವ ಕಾಯಕದಲ್ಲಿ ದಲಿತ ವಿದ್ವಾಂಸರ ಪಾಲ್ಗೊಳ್ಳುವಿಕೆಯನ್ನು ಈ ಸಂಪುಟಗಳ ಮೂಲಕ ಗುರುತಿಸಬಹುದು. ದಲಿತ ಅಸ್ಮಿತೆಯ ಚಹರೆಯನ್ನು ಈ ಎಲ್ಲ ಸಂಪುಟಗಳು ಹೆಚ್ಚು ಸ್ಪಷ್ಟಗೊಳಿಸುತ್ತವೆ ಎಂಬುದು ಮನು ಬಳಿಗಾರ್ ಅವರ ಅಂಬೋಣ.ಜಾತಿ ಅಸ್ಪೃಶ್ಯತೆಯ ತಾರತಮ್ಯಗಳು ಮತ್ತು ಅದರ ಮೂಲದಲ್ಲಿ ಹೆಣೆದುಕೊಂಡಿರುವ ವರ್ಗ ತಾರತಮ್ಯಗಳ ಶೋಷಣೆ ಅರಿಯುವಲ್ಲಿ ಇವುಗಳ ಪ್ರಸ್ತುತತೆ ಇಂದಿನ ಅಗತ್ಯ ಹಾಗೂ ತುರ್ತು.
ದಲಿತ ಸಾಹಿತ್ಯ ಸಂಪುಟವನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರ ಪ್ರಧಾನ ಸಂಪಾದಕತ್ವದಲ್ಲಿ ಹೊರತರಲಾಗಿದೆ. ಡಾ. ಸಣ್ಣರಾಮ ಸಣ್ಣ ಕಥೆ, ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಕಾವ್ಯ, ಡಾ. ಅರ್ಜುನ ಗೊಳಸಂಗಿ ಮಾನವಿಕ, ಪ್ರೊ. ಎಚ್. ಟಿ. ಪೋತೆ ಜಾನಪದ ಹಾಗೂ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಸಂಶೋಧನೆ ಸಂಪುಟ ಸಂಪಾದಿಸಿದ್ದಾರೆ. ಎಲ್ಲ ಸಂಪುಟಗಳ ಒಟ್ಟು ಬೆಲೆ ₹1680.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.