ಅಪ್ರತಿಮ ವಾಕ್ಚಾತುರ್ಯದಿಂದ, ಸುಲಲಿತ ತರ್ಕ ಪ್ರತಿಭೆ ಹೊಂದಿದ್ದ ದಿ.ಮಲ್ಪೆ ಶಂಕರನಾರಾಯಣ ಸಾಮಗರು ‘ದೊಡ್ಡ ಸಾಮಗರು’ ಎಂದೇ ಜನಜನಿತರು. ಸ್ವಾತಂತ್ರ್ಯ ಹೋರಾಟದಲ್ಲಿ ಜೈಲುವಾಸ ಅನುಭವಿಸಿದವರು, ದಾರ್ಶನಿಕರು, ಗಾಂಧಿವಾದಿ ಮತ್ತು ಹರಿಕಥಾದಾಸರು. ಯಕ್ಷಗಾನದಲ್ಲೂ ತಾಳಮದ್ದಳೆಯಲ್ಲೂ ಪ್ರತ್ಯುತ್ಪನ್ನಮತಿತ್ವ ಮತ್ತು ಪಾಂಡಿತ್ಯದಿಂದ ಬಹುಬೇಡಿಕೆಯ ಕಲಾವಿದರಾಗಿದ್ದ ಅವರ ಪ್ರತಿಭೆಯನ್ನು ನಾಲ್ಕೂ ದಿಕ್ಕಿನಿಂದ ಪರಿಚಯಿಸುವ ಗ್ರಂಥವೇ ‘ಸಾಮಗರ ನಾಲ್ಮೊಗ’. ಈ ಜೀವನ ದರ್ಶನದ ಗ್ರಂಥವನ್ನು ಸಂಪಾದಿಸಿ ನಿರೂಪಿಸಿದವರು ಕಲಾವಿದ ಹಾಗೂ ಪ್ರಸಂಗಕರ್ತರೂ ಆಗಿರುವ ದಿನೇಶ್ ಉಪ್ಪೂರರು.
ದೊಡ್ಡ ಸಾಮಗರ ಜೀವಿತಾವಧಿಯಲ್ಲಿ (1911-1999) ಈಗಿನಂತೆ ಸಾಮಾಜಿಕ ಮಾಧ್ಯಮಗಳೇನೂ ಇಲ್ಲದ ಕಾರಣದಿಂದಾಗಿ, ಅವರ ಜೀವನ ಚರಿತ್ರೆಗೆ ಚಾರಿತ್ರಿಕ ದಾಖಲೆಗಳಿಲ್ಲ. ಆದರೂ, ಸಾಮಗರ ಒಡನಾಡಿಗಳು, ಸ್ವಂತ ಅನುಭವಗಳು, ಪುತ್ರರು, ಸಹೋದರರು, ಅಭಿಮಾನಿಗಳು, ಸಹ ಕಲಾವಿದರ ಕಡೆಯಿಂದ ಅವರ ಬಗೆಗೆ ಕೇಳಿ ತಿಳಿದುಕೊಂಡು, ಜೊತೆಗೆ ತಮ್ಮ ಕಲ್ಪನಾಶಕ್ತಿಯೊಂದಿಗೆ ಆ ಘಟನೆಗಳ ಮರುಸೃಷ್ಟಿಯೊಂದಿಗೆ ದಿನೇಶ ಉಪ್ಪೂರರು ಈ ಅಮೂಲ್ಯ ಕೃತಿಯನ್ನು ಕಟ್ಟಿಕೊಟ್ಟಿದ್ದಾರೆ. ಯಕ್ಷಗಾನದ ಮಟ್ಟಿಗೆ ಇದೊಂದು ಸಂಗ್ರಹಯೋಗ್ಯ ಕೈಪಿಡಿಯಾಗಬಲ್ಲುದು. ನಿರೂಪಣಾ ಶೈಲಿಯು ಅನನ್ಯವಾದುದರಿಂದ ಇದನ್ನು ಜೀವನ ಚರಿತ್ರೆ ಎನ್ನುವುದಕ್ಕಿಂತಲೂ ಆ ಕಾಲದ ಏರಿಳಿತಗಳನ್ನು, ಯಕ್ಷಗಾನದ ಇತಿಹಾಸವನ್ನಷ್ಟೇ ಅಲ್ಲದೆ, ಸಾಮಾಜಿಕ ಸ್ಥಿತ್ಯಂತರಗಳ ಮೇಲೆ ಬೆಳಕುಚೆಲ್ಲುವ ಕೃತಿ ಎನ್ನಬಹುದು.
ದೊಡ್ಡ ಸಾಮಗರ ನಾಲ್ಮೊಗ
ಲೇ: ದಿನೇಶ ಉಪ್ಪೂರ
ಪ್ರ: ಮಣಿಪಾಲ ಯೂನಿವರ್ಸಲ್ ಪ್ರೆಸ್
ಸಂ: 0820-2922954
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.