ADVERTISEMENT

ದುರ್ಗದ ಬೇಡರ್ದಂಗೆ: ಕಾದಂಬರಿ ರೂಪದಲ್ಲಿ ‘ಬೇಡರ್ದಂಗೆ’

ಅಭಿಲಾಷ್ ಪಿ.ಎಸ್‌.
Published 9 ಏಪ್ರಿಲ್ 2022, 19:30 IST
Last Updated 9 ಏಪ್ರಿಲ್ 2022, 19:30 IST
ದುರ್ಗದ ಬೇಡರ್ದಂಗೆ
ದುರ್ಗದ ಬೇಡರ್ದಂಗೆ   

1857ರಲ್ಲಿ ನಡೆದ ಸಿಪಾಯಿ ದಂಗೆಯೇ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂಬುವುದು ಇತಿಹಾಸದಲ್ಲಿ ದಾಖಲಾದ ವಿಷಯ. ಈ ವಿಷಯದ ಕುರಿತು ಇನ್ನೂ ಹಲವು ತಕರಾರುಗಳಿವೆ, ಚರ್ಚೆಗಳೂ ನಡೆಯುತ್ತಿವೆ. ಸಿಪಾಯಿ ದಂಗೆಗಿಂತ ಮೊದಲೇ ನಡೆದಿದ್ದ ಕಿತ್ತೂರು ಸಂಗ್ರಾಮವೇ ದೇಶದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಹಲವರು ಪ್ರತಿಪಾದಿಸಿದರೆ, 1849ರಲ್ಲಿ ಚಿತ್ರದುರ್ಗದ ಏಳು ಬೇಡ ಹುಡುಗರ ದಂಡು ಬ್ರಿಟಿಷರ ವಿರುದ್ಧ ದಂಗೆ ಎದ್ದಿದ್ದೇ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದೂ ಹೇಳಲಾಗುತ್ತಿದೆ.

ಈಗಾಗಲೇ ಚಿತ್ರದುರ್ಗದ ಇತಿಹಾಸವನ್ನು ಆಧಾರವಾಗಿಟ್ಟುಕೊಂಡು ಹಲವು ಐತಿಹಾಸಿಕ ಕಾದಂಬರಿಗಳನ್ನು ಹಾಗೂ ಕಥಾಸಂಕಲನಗಳನ್ನು ಕಾದಂಬರಿಕಾರ ಬಿ.ಎಲ್‌. ವೇಣು ರಚಿಸಿದ್ದಾರೆ. ಇದೀಗ, 1849ರಲ್ಲಿ ದುರ್ಗದಲ್ಲಿ ಬೇಡ ಹುಡುಗರು ದಂಡು ಕಟ್ಟಿ ನಡೆಸಿದ ದಂಗೆಯ ಕುರಿತು ಸಂಶೋಧಕರಾದ ಬಿ.ನಂಜುಂಡಸ್ವಾಮಿ ಅವರು ನೀಡಿದ ಉಪನ್ಯಾಸವೊಂದರಿಂದ ಪ್ರೇರಿತರಾಗಿ, ಇತಿಹಾಸದ ಈ ಘಟನೆಯನ್ನು ಆಧರಿಸಿ ಕಲ್ಪನೆಯ ಪಾಕ ಬೆರೆಸಿ ‘ದುರ್ಗದ ಬೇಡರ್ದಂಗೆ’ ಶೀರ್ಷಿಕೆಯಡಿ ಕಾದಂಬರಿ ರೂಪದಲ್ಲಿ ಓದುಗರ ಮುಂದಿಟ್ಟಿದ್ದಾರೆ.

ಉಪನ್ಯಾಸ ಕೇಳುತ್ತಿರುವಾಗಲೇ ಅಲ್ಲಿನ ಅಧಿಕಾರಿ ವರ್ಗ, ಘಟನೆಗಳು ಕ್ರಮವಾಗಿ ಪಾತ್ರಗಳಾಗಿ ಸನ್ನಿವೇಶ
ಗಳಾಗಿ ಅಚ್ಚೊತ್ತಿದ್ದವು ಎಂದು ಮುನ್ನುಡಿಯಲ್ಲಿ ವೇಣು ಉಲ್ಲೇಖಿಸುತ್ತಾರೆ. ಬೆಳೆದ ಭೂಮಿಗೆ ಸುಂಕದ ಜೊತೆಗೆ,
ಪಾಳುಭೂಮಿಗೂ ಸುಂಕ ಕೇಳಿದ ಬ್ರಿಟಿಷರ ವಿರುದ್ಧ ರೈತರು, ಪಾಳೆಪಟ್ಟಿನವರು, ಜಮೀನ್ದಾರರು ಸಿಡಿದೆದ್ದ ಘಟನೆಯೊಂದಿಗೆ ‘ದುರ್ಗದ ಬೇಡರ್ದಂಗೆ’ ಆರಂಭವಾಗುತ್ತದೆ. ನಾಯಕನಹಟ್ಟಿ ಪಾಳೇಗಾರ ಕೆಂಚಮಲ್ಲಪ್ಪ ನಾಯಕನ ಮೊಮ್ಮಗ ವಾಲ್ಮೀಕಿ ನಾಯಕನ ಆರ್ಭಟದೊಂದಿಗೆ ಪುಟಗಳು ತಿರುವುತ್ತಲೇ ಚಾರಿತ್ರಿಕವಾದ ಘಟನೆಗಳು ಕಲ್ಪನೆಯ ಸನ್ನಿವೇಶದೊಂದಿಗೆ ಸಾಗುತ್ತವೆ. ಇತಿಹಾಸದಲ್ಲಿನ ಘಟನೆಗಳ ಸುತ್ತ ಕಲ್ಪನೆಯ ಕಥೆ ಕಟ್ಟುವುದು ಕಠಿಣ. ಆದರೆ ದಂಗೆಯ ಎಳೆಯನ್ನಿಟ್ಟುಕೊಂಡುಬೇಡ ಯುವಕರ ಸಾಹಸಗಾಥೆಯನ್ನು ವಿವರಿಸುತ್ತಾ ವೇಣು ಅವರು ಕಾದಂಬರಿಗೆ ಅಗತ್ಯವಾದ ರೋಚಕತೆಯನ್ನು ಸೃಷ್ಟಿಸಿದ್ದಾರೆ.

ADVERTISEMENT

‘ಪರಂಗೇರು ಹೇಳಿದಂತೆ ಭಾರತ ದೇಶಾನೇ ಕೇಳ್ತಾ ಅದೆ. ನೀವೇನು ಉಪರ್‍ಸೆ ಇಳಿದಿದೀರಾ? ನೀವೇನು ಪೆಶಲ್ಲಾ?’ ಎನ್ನುವಚೀಫ್‌ ಸೋಲ್ಜರ್‌ ಖಾದರ್‌ ಖಾನ್‌ ಪಾತ್ರದ ಉರ್ದುಮಿಶ್ರಿತ ಕನ್ನಡ, ಬ್ರಿಟಿಷ್‌ ಅಧಿಕಾರಗಳ ಇಂಗ್ಲಿಷ್‌ ಮಿಶ್ರಿತ ಕನ್ನಡ ಹೀಗೆ ಪಾತ್ರಕ್ಕೆ ತಕ್ಕಂತೆಯೇ ಭಾಷೆ ಬಳಕೆ ಓದಿಗೆ ಓಘ ನೀಡುತ್ತದೆ. ಪ್ರಸಕ್ತ ಸಂದರ್ಭದಲ್ಲಿ ಎದ್ದಿರುವ ಸಾಮಾಜಿಕ, ಧಾರ್ಮಿಕ ಸಂಘರ್ಷದ ಎಳೆಯನ್ನೂ ವೇಣು ಅವರು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಶೋಷಣೆಯಿಂದ ಬಿಡುಗಡೆಯ ನಿಲುವೂ ಹಲವು ಪಾತ್ರಗಳ ಮಾತಿನಲ್ಲಿದೆ. ಚಿತ್ರದುರ್ಗದ ಇತಿಹಾಸವನ್ನು ಕಾದಂಬರಿ ರೂಪದಲ್ಲಿ ಕಟ್ಟಿಕೊಡುವ ವೇಣು ಅವರ ಕೃತಿಗಳ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿ ಈ ‘ಬೇಡರ್ದಂಗೆ’ ಮೂಡಿಬಂದಿದೆ.

ಕೃತಿ: ದುರ್ಗದ ಬೇಡರ್ದಂಗೆ

ಲೇ: ಡಾ.ಬಿ.ಎಲ್‌.ವೇಣು

ಪ್ರ: ಗೀತಾಂಜಲಿ ಪುಸ್ತಕ ಪ್ರಕಾಶನ

ಸಂ: 9449886390

ಪುಟ: 316

ದರ: 300

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.