ADVERTISEMENT

ಡಿವಿಜಿ ಇಂಗ್ಲಿಷ್ ಬರಹಗಳಿಗೆ ಹೊಸ ಬೆಳಕು

ಎಸ್.ದಿವಾಕರ್
Published 19 ಆಗಸ್ಟ್ 2023, 23:30 IST
Last Updated 19 ಆಗಸ್ಟ್ 2023, 23:30 IST
ಡಿವಿಜಿ ಅವರ ಆಯ್ದ ಲೇಖನಗಳ ಸಂಗ್ರಹ ಕೃತಿಯ ಮುಖಪುಟ
ಡಿವಿಜಿ ಅವರ ಆಯ್ದ ಲೇಖನಗಳ ಸಂಗ್ರಹ ಕೃತಿಯ ಮುಖಪುಟ   

ಬಹುಶ್ರುತ ವಿದ್ವಾಂಸ, ವಿಖ್ಯಾತ ಲೇಖಕ, ಪತ್ರಕರ್ತ, ರಾಜಕೀಯ ಹಾಗೂ ಸಾಮಾಜಿಕ ವ್ಯಾಖ್ಯಾನಕಾರ ಮತ್ತು ಸಂಸ್ಥೆಗಳ ಸ್ಥಾಪಕ ಡಿ.ವಿ. ಗುಂಡಪ್ಪ (17.3.1887-7.10.1975) ಅವರ ಕಾರ್ಯಕೇತ್ರ ಬೆಂಗಳೂರಾಗಿದ್ದರೂ ಅದರ ಹರಹು ಮತ್ತು ಪರಿಣಾಮ ಜಗದ್ವ್ಯಾಪಕವಾಗಿತ್ತು. ಇಪ್ಪತ್ತು ವರ್ಷಕ್ಕೇ ಇಂಗ್ಲಿಷ್, ಸಂಸ್ಕೃತ, ಕನ್ನಡ ಭಾಷೆಗಳ ಮೇಲೆ ಅಸಾಧಾರಣ ಪ್ರಭುತ್ವವನ್ನು ಸಾಧಿಸಿದ್ದ ಅವರು 1913-14ರಷ್ಟು ಹಿಂದೆಯೇ ಒಬ್ಬ ಪತ್ರಕರ್ತರಾಗಿ ರಾಷ್ಟ್ರೀಯ ಮಟ್ಟದ ಪ್ರಸಿದ್ಧಿ ಪಡೆದಿದ್ದರು. ತಮ್ಮ 88 ವರ್ಷಗಳ ಜೀವಿತದಲ್ಲಿ ಸಾರ್ವಜನಿಕ ಜೀವನದ ಗುಣಮಟ್ಟವನ್ನು ಹೆಚ್ಚಿಸುವುದಕ್ಕಾಗಿ ಅವರು ಮಾಡಿದ ಪ್ರಯತ್ನಗಳು ಒಂದೆರಡಲ್ಲ. ರಾಜಕೀಯದಲ್ಲಿ ಮಹದೇವ ಗೋವಿಂದ ರಾನಡೆ, ಗೋಪಾಲಕೃಷ್ಣ ಗೋಖಲೆ, ವಿ.ಎಸ್.ಶ್ರೀನಿವಾಸ ಶಾಸ್ತ್ರಿಯವರ ಉದಾರವಾದಿ ಪಂಥದ ವಾರಸುದಾರರಾಗಿದ್ದು, ಆಳವಾದ ವಿದ್ವತ್ತು, ಬಹುಶ್ರುತತ್ವ, ವಿರಕ್ತ ಜೀವನ, ಪ್ರಾಮಾಣಿಕತೆ, ಇತ್ಯಾದಿಗಳಿಂದಾಗಿ ಅವರು ವಿವಿಧ ಸರ್ಕಾರಗಳ ನಾಯಕರಿಂದ ಹೇಗೋ ಹಾಗೆ ಸಾಮಾನ್ಯ ಜನರಿಂದಲೂ ಅಪೂರ್ವ ಗೌರವಕ್ಕೆ ಪಾತ್ರರಾಗಿದ್ದರು. ಮುನಿಸಿಪಲ್ ಕೌನ್ಸಿಲರಾಗಿ (1912), ಕರ್ನಾಟಕ ಲೆಜಿಸ್ಲೇಟಿವ್ ಕೌನ್ಸಿಲ್‌ನ ಸದಸ್ಯರಾಗಿ (1927-1940), ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ (1927-1943), ಕಾನ್‌ಸ್ಟಿಟ್ಯೂಷನಲ್ ರಿಫಾರ್ಮ್ಸ್‌ ಕಮಿಟಿ ಆಫ್ ಕರ್ನಾಟಕದ ಸದಸ್ಯರಾಗಿ (1938-1939), ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ (1933-1937) ಅವರು ಸಲ್ಲಿಸಿದ್ದು ನಿಸ್ಪೃಹವೂ ಉದಾತ್ತವೂ ಆದ ಸೇವೆ.

ಪತ್ರಿಕೋದ್ಯಮದಲ್ಲಿ ಡಿ.ವಿ.ಜಿ.ಯವರಿಗೆ ಗುರುಸಮಾನರು ಇಂಗ್ಲೆಂಡಿನ ಪ್ರಖ್ಯಾತ ಪತ್ರಕರ್ತ ಡಬ್ಲ್ಯು.ಟಿ. ಸ್ಟೆಡ್. ಸಮಕಾಲೀನ ವಿದ್ಯಮಾನಗಳನ್ನು ಕುರಿತ ತಮ್ಮ ದೃಷ್ಟಿಕೋನವನ್ನು ಪ್ರಚುರಪಡಿಸುವುದಕ್ಕಾಗಿ ಡಿ.ವಿ.ಜಿ.ಯವರೂ ತಮ್ಮದೇ ಪತ್ರಿಕೆಗಳನ್ನು, ನಿಯತಕಾಲಿಕೆಗಳನ್ನು ಪ್ರಕಟಿಸಿದರು. ಅವುಗಳಲ್ಲಿ ‘ಭಾರತಿ’ (ದೈನಿಕ – 1908), ‘ಕರ್ನಾಟಕ’ (ಅರ್ಧವಾರಪತ್ರಿಕೆ - 1913ರಿಂದ 1920ರವರೆಗೆ), ‘ಕರ್ನಾಟಕ ಅಂಡ್ ದಿ ಇಂಡಿಯನ್ ರಿವ್ಯೂ ಆಫ್ ರಿವ್ಯೂಸ್’ (ಮಾಸಿಕ - 1921ರಿಂದ 1927ರವರೆಗೆ, ‘ಪಬ್ಲಿಕ್ ಅಫೇರ್ಸ್’ (ಮಾಸಿಕ - 1949ರಿಂದ 1975ರವರೆಗೆ) ಮುಖ್ಯವಾದುವುದು. ಇವುಗಳಲ್ಲದೆ ‘ಮೈಸೂರ್ ಟೈಮ್ಸ್’, ‘ಹಿಂದೂಸ್ತಾನ್ ರಿವ್ಯೂ’, ‘ನ್ಯೂ ಇಂಡಿಯಾ’, ‘ದಿ ಹಿಂದೂ’, ‘ದಿ ಈವೆನಿಂಗ್ ಮೇಲ್’, ‘ದಿ ಪಯೊನೀರ್’, ‘ಇಂಡಿಯನ್ ಸ್ಟೇಟ್ಸ್ ರಿವ್ಯೂ’, ‘ಸ್ವರಾಜ್ಯ’, ‘ದಿ ಬಾಂಬೆ ಕ್ರಾನಿಕಲ್’, ‘ದಿ ಸರ್ವೆಂಟ್ಸ್ ಆಫ್ ಇಂಡಿಯಾ’, ‘ದಿ ಮದ್ರಾಸ್ ಮೇಲ್’, ‘ಕರೆಂಟ್ ಸೈನ್ಸ್’, ‘ದಿ ಆರ್ಯನ್ ಪಾತ್’, ‘ಮೈಸಿಂಡಿಯಾ’, ‘ತ್ರಿವೇಣಿ’, ‘ಗಾಂಧಿ ಮಾರ್ಗ್’, ‘ಡೆಕನ್ ಹೆರಾಲ್ಡ್’, ‘ದಿ ಇಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’... ಹೀಗೆ ಅವರು ಬರೆಯದ ಇಂಗ್ಲಿಷ್ ಪ್ರತಿಕೆಗಳೇ ಇರಲಿಲ್ಲ. ಜೊತೆಗೆ ಆಗಾಗ ಇಂಗ್ಲಿಷಿನಲ್ಲಿ ಪುಸ್ತಕಗಳನ್ನೂ ಬರೆದದ್ದುಂಟು (ಅವುಗಳ ಸಂಖ್ಯೆ ಇಪ್ಪತ್ತಕ್ಕೂ ಹೆಚ್ಚು.) ಈ ಪುಸ್ತಕಗಳಲ್ಲಿ ಕೆಲವನ್ನು ಇಂಡಿಯಾದ ಪತ್ರಿಕೆಗಳಷ್ಟೇ ಅಲ್ಲ, ಇಂಗ್ಲೆಂಡಿನ ಪತ್ರಿಕೆಗಳೂ ವಿಮರ್ಶಿಸಿದ್ದವು. ಉದಾಹಣೆಗೆ ‘ದಿ ಸ್ಟೇಟ್ಸ್ ಅಂಡ್ ದೇರ್ ಪೀಪಲ್ ಇನ್ ದಿ ಇಂಡಿಯನ್ ಕಾನ್‌ಸ್ಟಿಟ್ಯೂಷನ್’ ಎಂಬ ಕೃತಿ. 200 ಪುಟಗಳ ಈ ಕೃತಿಯ ಬೆಲೆ ₹2 ಅಥವಾ ಷಿಲಿಂಗ್ 3. (ನಾಲ್ಕನೆಯ ಸಂಪುಟದಲ್ಲಿ ಈ ಕೃತಿಯ ಕೆಲವು ಉದ್ಧೃತ ಭಾಗಗಳಿವೆ).

ಸಿ. ಎಫ್. ಆಂಡ್ರ್ಯೂಸ್ ಅವರ ಬಗ್ಗೆ ನಾವೆಲ್ಲ ಕೇಳಿದ್ದೇವಷ್ಟೆ. ಅವರು ಪ್ರಸಿದ್ಧ ಕ್ರಿಶ್ಚಿಯನ್ ಮಿಷನರಿ, ಸಮಾಜ ಸುಧಾರಕರು, ಭಾರತದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದವರು; ದಕ್ಷಿಣ ಆಫ್ರಿಕದಿಂದ ಹಿಂತಿರುಗುವಂತೆ ಮಹಾತ್ಮಾ ಗಾಂಧಿಯವರ ಮನವೊಲಿಸಿದವರು. ಅಂಥವರು ಮೇಲ್ಕಂಡ ಪುಸ್ತಕವನ್ನು ಲಂಡನ್ನಿನ ‘ಸ್ಪೆಕ್ಟೇಟರ್’ ಪತ್ರಿಕೆಯಲ್ಲಿ ವಿಮರ್ಶಿಸಿದ್ದು ಹೀಗೆ:
“It is a well-arranged and documented review of one of the most difficult subjects... The author is outspoken in his disappointment at the Princes’ attitude during the earlier Conference sessions. They bluffed, and in the end surrendered nothing at all. They entrenched their own position, as arbitrary Rulers, at the expense of their subjects. Mr. Gundappa hopes that at the next session, the leading Indian statesmen will not barter away, as they did before, the rights of the Indian States’ subjects.”

ADVERTISEMENT

ಡಿ.ವಿ.ಜಿ.ಯವರ ಇಂಗ್ಲಿಷ್ ಬರಹಗಳು ಅಸಂಖ್ಯಾತ; ಅವರ ಕನ್ನಡ ಬರಹಗಳಿಗಿಂತ ಮೂರು ನಾಲ್ಕು ಪಟ್ಟು ಹೆಚ್ಚು. ಅವುಗಳಲ್ಲಿ ಸಾಕಷ್ಟು ಕಳೆದೇಹೋಗಿವೆ ಎನ್ನಬೇಕು. ಉಳಿದಿರುವ ಬರೆಹಗಳಲ್ಲಿ ಅತ್ಯುತ್ತಮವಾದುದನ್ನು ಸಂಗ್ರಹಿಸಿ ಪ್ರಕಟಿಸುವ ಮಹತ್ವದ ಕಾರ್ಯ ಇದೀಗ ಕೈಗೂಡಿದೆ. ವಿದ್ವಾಂಸರಾದ ಎಸ್. ಆರ್. ರಾಮಸ್ವಾಮಿ ಮತ್ತು ಬಿ.ಎನ್. ಶಶಿಕಿರಣ್ ಅವರ ಪರಿಶ್ರಮದಿಂದಾಗಿ ಡಿ.ವಿ.ಜಿ.ಯವರು ಪತ್ರಿಕೋದ್ಯಮ, ರಾಜಕೀಯ, ಸಾಹಿತ್ಯ, ಸಂಸ್ಕೃತಿ, ಇವುಗಳಿಗೆ ಸಂಬಂಧಿಸಿದಂತೆ ಇಂಗ್ಲಿಷಿನಲ್ಲಿ ಬರೆದಿರುವ ಬರೆಹಗಳ ಒಂಬತ್ತು ಸಂಪುಟಗಳು ಹೊರಬಂದಿವೆ. ಮೊದಲ ಸಂಪುಟದಲ್ಲಿ ಡಿ.ವಿ.ಜಿ. 1908ರಿಂದ 1917ರವರೆಗೆ ಬರೆದ ಮುಖ್ಯ ಲೇಖನಗಳು ಹಾಗೂ ಪುಸ್ತಕಗಳು ಇವೆ. ಎರಡನೆಯ ಸಂಪುಟ 1917-1922; ಮೂರನೆಯದು 1923-1927; ನಾಲ್ಕನೆಯದು 1929-1940; ಐದನೆಯದು 1949-1952;
ಆರನೆಯದು 1954-1955; ಏಳನೆಯದು 1956-1960; ಎಂಟನೆಯದು 1963-1967;
ಒಂಬತ್ತನೆಯದು 1969-1971. ಸದ್ಯದಲ್ಲೇ ಇನ್ನೂ ಎರಡು ಸಂಪುಟಗಳು ಪ್ರಕಟವಾಗಲಿವೆ.

ಮೊದಲ ಸಂಪುಟದಲ್ಲೇ ಇರುವ ವಿಷಯವ್ಯಾಪ್ತಿ, ವಿಚಾರಸ್ಪಷ್ಟತೆ ಗಮನಾರ್ಹ. ಡಿ.ವಿ.ಜಿ. ಪತ್ರಿಕೋದ್ಯಮಕ್ಕೆ ಬಂದು ಮೂರು ವರ್ಷ ಕೂಡ ಆಗಿರಲಿಲ್ಲ. 1908ರಲ್ಲಿ ಮೈಸೂರು ಸಂಸ್ಥಾನದ ದಿವಾನ ವಿ.ಪಿ. ಮಾಧವರಾಯರು ಪತ್ರಿಕಾ ನಿರ್ಬಂಧದ ಕಾನೂನೊಂದನ್ನು ತಂದಾಗ ಪತ್ರಿಕಾಕರ್ತರೆಲ್ಲ ಅದನ್ನು ವಿರೋಧಿಸಿದರು. ಆಗ ಡಿ.ವಿ.ಜಿ. ಆ ಬಗ್ಗೆ ಇಡೀ ದೇಶದ ಪತ್ರಿಕೆಗಳಲ್ಲಿ ಪ್ರಕಟವಾದದ್ದನ್ನು ಸಂಪಾದಿಸಿ ‘ಪ್ರೆಸ್ ಗ್ಯಾಗ್ ಇನ್ ಮೈಸೂರ್’ ಎಂಬ ಗ್ರಂಥವನ್ನು ಪ್ರಕಟಿಸಿದರು. ಕೋಲ್ಕತ್ತದಿಂದ ಪ್ರಕಟವಾಗುತ್ತಿದ್ದ ‘ಹಿಂದೂಸ್ತಾನ್ ರಿವ್ಯೂ’ದಲ್ಲಿ ‘ರಾಮಮೋಹನರಾಯ್, ವಿವೇಕಾನಂದ ಅಂಡ್ ದಿ ಇಂಡಿಯನ್ ನ್ಯಾಷನಾಲಿಸಂ’, 1917ರಲ್ಲಿ ‘ಕೌಂಟ್ ಲಿಯೊ ಟಾಲ್‌ಸ್ಟಾಯ್’ ಎಂಬ ಪುಸ್ತಕ ಮತ್ತು ‘ಕರ್ನಾಟಕ’ ಪತ್ರಿಕೆಯಲ್ಲಿ ಪ್ರಕಟವಾದ 29 ಲೇಖನಗಳ ಆಯ್ದ ಭಾಗಗಳು ಮೊದಲ ಸಂಪುಟದಲ್ಲಿವೆ. ಅಲ್ಲದೆ ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆಯನ್ನು ವಿರೋಧಿಸಿ ಲಂಡನ್ನಿನ ‘ದಿ ಟೈಮ್ಸ್’, ‘ದಿ ಮದ್ರಾಸ್ ಮೇಲ್’ ಮೊದಲಾದ ಪತ್ರಿಕೆಗಳು ಎತ್ತಿದ ಆಕ್ಷೇಪಣೆಗಳಿಗೆ ಡಿವಿಜಿಯವರು ಬರೆದ ಲೇಖನಗಳ ಉದ್ಧೃತ ಭಾಗಗಳೂ ಇವೆ.

ಮೈಸೂರಿನ ಆರ್ಥಿಕ ಅಭಿವೃದ್ಧಿ, ಇಂಗ್ಲಿಷ್ ಗೀತೆಗಳು ಕುರಿತ ವಿಮರ್ಶೆ, ಭಾರತೀಯ ಭಾಷೆಗಳಲ್ಲಿ ವಿಜ್ಞಾನ ಪರಿಭಾಷೆ, ಬೌದ್ಧಿಕ ಉದಾರವಾದ, ಪ್ರಜಾಪ್ರಭುತ್ವ, ಜಾತ್ಯತೀತತೆ, ಮುಂಬರುವ ಕಾಂಗ್ರೆಸ್: ಸರ್ಕಾರ ಮತ್ತು ಪಕ್ಷ, ಶಿಕ್ಷಣ ಸುಧಾರಣೆ, ಯೂರೋಪಿನ ಭವಿಷ್ಯ, ಕಬ್ಬಿಣದ ಪರದೆಯ ಹಿಂದೆ, ಕಲೆ ಮತ್ತು ಸಮುದಾಯ, ಹೀಗೆ ವಿವಿಧ ಲೇಖನಗಳು; ಸಾಕ್ರಟಿಸ್, ಪ್ಲೇಟೊ, ಜೆ.ಎಸ್.ಮಿಲ್, ಜೆರೇಮಿ ಬೆಂಥಮ್, ಕರ್ಕ್ಗಾರ್ಡ್, ಜೋಸೆಫ್ ಮತ್ಸಿನಿ, ಗೋಖಲೆ, ದಾದಾಭಾಯಿ ನವರೋಜಿ, ಫಿಲಿಪ್ ಸ್ಪ್ರಾಟ್, ವಿಜ್ಞಾನಿ ಸಿ.ವಿ.ರಾಮನ್ ಮೊದಲಾದವರ ಜೀವನ, ಸಾಧನೆಗಳ ಚಿತ್ರಗಳು, ಹೀಗೆ ಇತರ ಸಂಪುಟಗಳ ಪರಿವಿಡಿಯನ್ನು ಓದಿದರೂ ಸಾಕು, ಡಿ.ವಿ.ಜಿ.ಯವರ ಆಸಕ್ತಿಯ ಕ್ಷೇತ್ರಗಳು, ಅವುಗಳಲ್ಲಿ ಅವರಿಗಿದ್ದ ವ್ಯಾಪಕ ಅಧ್ಯಯನ, ಅವರ ಚಿಂತನೆಯ ಸ್ವರೂಪ, ಅವರ ಧೀಮಂತ ವ್ಯಕ್ತಿತ್ವ ಬೆರಗು ಹುಟ್ಟಿಸುತ್ತವೆ.

ಹೆಚ್ಚುಕಡಿಮೆ ಒಂದು ಶತಮಾನ ಕಾಲದ ರಾಜಕೀಯ ವಿದ್ಯಮಾನಗಳನ್ನೂ ಸಮಾಜ-ಸಂಸ್ಕೃತಿಗಳನ್ನೂ ಪ್ರತಿಬಿಂಬಿಸುವ ಈ ಸಂಪುಟಗಳು ನಿಸ್ಸಂದೇಹವಾಗಿ ಒಂದು ಉದಾರವಾದಿ ಮನಸ್ಸಿನ ಅಪೂರ್ವ ಚಿಂತನೆಗಳ ಫಲವಾಗಿವೆ.

ಸೆಲೆಕ್ಟೆಡ್ ರೈಟಿಂಗ್ಸ್ ಆಫ್ ಡಿ.ವಿ. ಗುಂಡಪ್ಪ (ಒಂಬತ್ತು ಸಂಪುಟಗಳು)

ಸಂಕಲನ ಮತ್ತು ಸಂಪಾದನೆ ಎಸ್.ಆರ್. ರಾಮಸ್ವಾಮಿ ಮತ್ತು ಬಿ.ಎನ್. ಶಶಿಕಿರಣ್

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಬೆಂಗಳೂರು 560019;

ಒಟ್ಟು ಬೆಲೆ ₹4500.

ಫೋನ್: 9845195858, 080-26613147.

ಡಿವಿಜಿ ಅವರ ಆಯ್ದ ಲೇಖನಗಳ ಕೃತಿಸರಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.