ಹಸಿವು, ತೃಷೆ, ನಿದ್ರೆ, ವಿಷಯ ಮೈಥುನ ಬಯಕೆ ಸರ್ವರಿಗೂ ಸಮ. ಅದು ಉಸಿರಾಡಿದಷ್ಟೇ ಸಹಜ. ಅಂತೆಯೇ ಕಾಮವೂ ಕೂಡ. ಆದರೆ ಸಂಬಂಧಗಳನ್ನು ಸಂಕೀರ್ಣಗೊಳಿಸಿ ಪ್ರೇಮ ಮತ್ತು ಕಾಮವನ್ನು ದೈಹಿಕ, ಮಾನಸಿಕ ದಾಸ್ಯದಂತೆ ವ್ಯಾಖ್ಯಾನಿಸಿರುವುದು ವಿಪರ್ಯಾಸ. ಅದಕ್ಕೆ ಸಾಮಾಜಿಕ ಮನ್ನಣೆ ದೊರೆತಿರುವುದು ದುರಂತ. ‘ಕಾಮನ ಹುಣ್ಣಿಮೆ’ ಇಂತಹದ್ದೇ ವೈರುಧ್ಯಗಳ ಸಾರ. ತಂತ್ರಜ್ಞಾನದ ಗಂಧವೂ ತಿಳಿಯದ ಕಾಲದಲ್ಲಿನ ವಸ್ತು ಕಾದಂಬರಿಯ ವಿಷಯ. ಆಧುನಿಕತೆಯ ಕೂಸುಗಳಾದ ಸಿನಿಮಾ, ಟೆಂಟು ಅವುಗಳಿಗೆ ಜನರ ಪ್ರತಿಕ್ರಿಯೆ, ಸ್ಪಂದನೆಗಳು, ಅವು ಉಂಟುಮಾಡಿದ ಅಸಂಗತ ಪರಿಣಾಮಗಳನ್ನೂ, ಗ್ರಾಮ್ಯ ಜೀವನವನ್ನು ಅದು ಪ್ರಭಾವಿಸಿದ ಪರಿಯನ್ನು ನವಿರಾಗಿ ಹೆಣೆದಿದ್ದಾರೆ ನಟರಾಜ್ ಹುಳಿಯಾರ್. ಪೂರ್ವಾಗ್ರಹ ಹಾಗೂ ಅತಿಯಾದ ಮಡಿವಂತಿಕೆ ಆಚರಣೆಯಲ್ಲಿ ದೈಹಿಕ ಸಂಬಂಧಕ್ಕೆ ಚೌಕಟ್ಟು ನಿರ್ಮಿಸಲಾಗಿದೆ. ಅದನ್ನು ಮೀರುವವರನ್ನು ಬೇರೆಯದ್ದೇ ರೀತಿಯಲ್ಲಿ ಕಂಡು, ಬಿಂಬಿಸಲಾಗುತ್ತದೆ. ಹೆಣ್ಣಿನ ವಿಚಾರದಲ್ಲಿ ಇದು ಇನ್ನೂ ಸೂಕ್ಷ್ಮ. ಪಾತಿವ್ರತ್ಯ, ಪತಿಭಕ್ತಿಗೆ ಆಕೆಯನ್ನು ಬಲಿಕೊಡಲಾಗಿದೆ. ಕಾಮನ ಹುಣ್ಣಿಮೆ ಇವುಗಳನ್ನು ಮೀರುವ, ವೈಚಾರಿಕ ಸಂಗತಿಗಳನ್ನು ವಾಸ್ತವದ ನೆಲೆಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದೆ.
ಹೆಣ್ಣಿಗೆ ಮರುಮದುವೆ ಎಂಬುದು ಪ್ರಸ್ತುತ ಕಾಲದಲ್ಲೂ ಅಪ್ರಸ್ತುತ ಎಂಬ ಧೋರಣೆ ಢಾಳಾಗಿದೆ. ಸಂಪ್ರದಾಯದ ಹೆಸರಲ್ಲಿ ಆಕೆಯನ್ನು ಅವಳಿರುವ ಸ್ಥಿತಿಯಲ್ಲೇ ಇಡಬಯಸುವ ಪ್ರಯತ್ನವೂ ಕಾಲದಿಂದ ಕಾಲಕ್ಕೆ ಸಾಗುತ್ತಾ ಬಂದಿದೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯನ್ನು ಅಸಹಾಯಕಳು, ಗಂಡಿನ, ಗಂಡನ ಆಜ್ಞಾನುಪಾಲಕಳಾಗಿಯೇ ಇರಬೇಕೆಂಬ ಕಟ್ಟುಪಾಡುಗಳು ಇಂದಿಗೂ ಇವೆ. ಇದಕ್ಕೆ ತದ್ವಿರುದ್ಧವೆಂಬಂತೆ ಲೇಖಕರು ‘ಚಂದ್ರ’ ಎಂಬ ಪ್ರತಿಮೆಯ ಮೂಲಕ ಒಂದಷ್ಟು ಸಿದ್ಧ ಮಾದರಿಗಳನ್ನು ಮುರಿಯಲೆತ್ನಿಸಿದ್ದಾರೆ. ತನ್ನ ಸಾಂಸಾರಿಕ ಜೀವನಕ್ಕಡಿಯಿಡುವ ಮಗನ ಸಂತೋಷ ಇಮ್ಮಡಿಯಾಗುವುದು ತಾಯಿಯ ಮರುವಿವಾಹದಲ್ಲಿ. ಆಕೆಗೊಂದು ಸಾಂಗತ್ಯ, ಸಾನ್ನಿಧ್ಯ, ಒಲವು ಸಿಕ್ಕ ಸಮಾಧಾನದಲ್ಲಿ. ಮರ್ಯಾದೆ, ಚೌಕಟ್ಟು, ಗೋಡೆಗಳನ್ನು ಮೀರಿ ಮಗನೇ ತಾಯಿಗೆ ಬಂಧವೊಂದನ್ನು ಬೆಸೆಯುತ್ತಾನೆ. ಇಂತಹ ಆರೋಗ್ಯಕರ ಬದಲಾವಣೆಯೊಂದಿಗೆ ಕಾದಂಬರಿ ಸುಖಾಂತ್ಯಗೊಳ್ಳುತ್ತದೆ. ಎಲ್ಲ ಎಲ್ಲೆಗಳನ್ನು ಮೀರಿ ವಿಶಾಲ ಚಿಂತನೆಗೆಡೆ ಮಾಡುವ ಕಾದಂಬರಿ ತನ್ನ ಸರಳ ನಿರೂಪಣೆ ಮತ್ತು ಗ್ರಾಮೀಣ ಭಾಷಾ ಸೊಗಡಿನಿಂದ ಓದುಗರಿಗೆ ಆಪ್ತವೆನಿಸುತ್ತದೆ.
ಪುಸ್ತಕ: ಕಾಮನ ಹುಣ್ಣಿಮೆ
ಲೇಖಕರು: ನಟರಾಜ್ ಹುಳಿಯಾರ್
ಪ್ರಕಾಶನ: ಪಲ್ಲವ ಪ್ರಕಾಶನ, ಬಳ್ಳಾರಿ
ದೂರವಾಣಿ: 88800 87235
ಪುಟಗಳು: 210
ಬೆಲೆ: 180
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.