ಕೃತಿ: ಜಾತಿ-ಲಿಂಗತ್ವದ ಒಳನೇಯ್ಗೆ
ಲೇ: ಉಮಾ ಚಕ್ರವರ್ತಿ
ಅನು: ಎನ್. ಗಾಯತ್ರಿ ಮತ್ತು ಆರ್. ಪೂರ್ಣಿಮಾ
ಪ್ರ: ಹಿತೈಷಿಣಿ
ಸಂ: 9449612792
ಭಾರತೀಯ ಸ್ತ್ರೀವಾದವು ಬಹುರೂಪಿ ಆಯಾಮಗಳಲ್ಲಿ ತೆರೆದುಕೊಳ್ಳುತ್ತಿದೆ. ಆದರೆ, ಮಹಿಳೆಯರ ಮೇಲೆ ನಡೆಯುತ್ತಿರುವ ಹಿಂಸೆ, ದೌರ್ಜನ್ಯ, ಅತ್ಯಾಚಾರ, ದಮನ - ಇವು ಏಕರೂಪಿಯಾಗಿರುವುದಿಲ್ಲ. ಇವು ಆಯಾ ಮಹಿಳೆಯರ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನಿಂದ ನಿರ್ಧಾರಿತವಾಗುತ್ತವೆ. ಇವುಗಳಾಚೆಗೂ ಹಲವು ಪ್ರಶ್ನೆಗಳಿವೆ. ಈ ಹಿನ್ನೆಲೆಯಲ್ಲಿ ಪ್ರಖ್ಯಾತ ಸ್ತ್ರೀವಾದಿ ಚಿಂತಕಿ ಉಮಾ ಚಕ್ರವರ್ತಿಯವರ ಬಹುಚರ್ಚಿತ ‘ಜೆಂಡರಿಂಗ್ ಕ್ಯಾಸ್ಟ್: ಥ್ರೂ ಎ ಫೆಮಿನಿಸ್ಟ್ ಲೆನ್ಸ್’ ಕೃತಿಯು ಹಲವು ಕಾರಣಗಳಿಂದ ಮಹತ್ವದ್ದಾಗಿದೆ. ಏಕೆಂದರೆ, ಇದು ಭಾರತೀಯ ಸಾಮಾಜಿಕ ಶ್ರೇಣೀಕರಣದಲ್ಲಿ ಹೆಣ್ಣಿನ ಸ್ಥಾನಮಾನದ ಪ್ರಶ್ನೆಗಳನ್ನು ಮುಂಚೂಣಿಗೆ ತಂದಿದೆ. ಇಂತಹ ಗಂಭೀರ ಕೃತಿಯು ಎನ್. ಗಾಯತ್ರಿ ಹಾಗೂ ಆರ್. ಪೂರ್ಣಿಮಾ ಅವರ ಉಸ್ತುವಾರಿಯಲ್ಲಿ ‘ಜಾತಿ-ಲಿಂಗತ್ವದ ಒಳನೇಯ್ಗೆ’ ಶೀರ್ಷಿಕೆಯಲ್ಲಿ ಕನ್ನಡದಲ್ಲಿ ಓದಲು ಸಿಗುವಂತಾಗಿದೆ.
ಕಾಲಮಾನದ ದೃಷ್ಟಿಯಿಂದ ಈ ಕೃತಿಯ ಹರವು ತುಂಬ ದೊಡ್ಡದು. ಭಾರತದ ಪ್ರಾಚೀನ ಕಾಲದಿಂದ ಹಿಡಿದು 21ನೇ ಶತಮಾನದ ಇಂದಿನವರೆಗೂ ವ್ಯಾಪಿಸಿದೆ. ಉಮಾ ಚಕ್ರವರ್ತಿಯವರು ಮೂಲತಃ ಇತಿಹಾಸದ ಪ್ರಾಧ್ಯಾಪಕರು. ಆದ್ದರಿಂದ ಸಹಜವಾಗಿಯೇ ಅವರ ಅಧ್ಯಯನವು ಚರಿತ್ರೆಗೆ ಸಂಬಂಧಿಸಿರುತ್ತದೆ. ಆದರೆ, ಅವರ ಹುಡುಕಾಟವು ಭಾರತದ ಜಾತಿ ಶ್ರೇಣೀಕರಣದ ವ್ಯವಸ್ಥೆಯು ಹೆಣ್ಣಿನ ಮೂಲಕ ರೂಪುಗೊಂಡು, ಅದು ಹೇಗೆಲ್ಲ ಉಪಖಂಡವನ್ನು ಆವರಿಸಿಕೊಂಡಿತು ಎಂಬುದಾಗಿದೆ. ಆಯಾ ಕಾಲಘಟ್ಟದ ಯಜಮಾನಿಕೆಯು ಹೆಣ್ಣಿನ ಲೈಂಗಿಕತೆಯನ್ನು ಒಂದು ಸಂಪನ್ಮೂಲವಾಗಿ ಬಳಸಿಕೊಳ್ಳಲು ಕಾರಣವಾದ ಸಾಂಸ್ಕೃತಿಕ ರಾಜಕಾರಣವನ್ನು ವಿವಿಧ ಆಕರಗಳಿಂದ ಅವರು ಸಾಬೀತುಪಡಿಸುತ್ತಾರೆ. ಜಾತಿ, ವರ್ಗ, ಲಿಂಗ, ಅಸ್ಪೃಶ್ಯತೆ, ಧರ್ಮ, ಪ್ರಭುತ್ವ-ಇವುಗಳ ಸಂಬಂಧವು ಒಳಗೊಳಗೆ ಹೆಣೆದುಕೊಂಡಿರುವುದನ್ನು ಅವರು ಗುರುತಿಸಲು ಪ್ರಯತ್ನಿಸಿದ್ದಾರೆ.
ಈ ಕೃತಿಯು ಜಾತಿ ವ್ಯವಸ್ಥೆಯನ್ನು ‘ಪರಸ್ಪರ ಅವಲಂಬಿತ’ ಅಥವಾ ‘ವೃತ್ತಿ ಆಧರಿಸಿದ ವಿಭಜನೆ’ ಎಂಬುದನ್ನು ನಿರಾಕರಿಸುತ್ತದೆ; ಜಾತಿ ಬಗೆಗಿನ ಶುದ್ಧ-ಅಶುದ್ಧತೆಯ ವಿಶ್ಲೇಷಣೆಯು ಅಸಮರ್ಪಕವೆಂದು ತಿರಸ್ಕರಿಸುತ್ತದೆ; ಜಾತಿಯು ‘ಸಾಂಸ್ಥೀಕೃತವಾದ ಅಸಮಾನತೆ’ ಎನ್ನುವ ವಾದವು ಕೃತಿಯುದ್ದಕ್ಕೂ ಹಾಸುಹೊಕ್ಕಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಶ್ರೇಣೀಕರಣಕ್ಕೆ ಲಿಂಗತ್ವವು ಜಾತಿ ಮತ್ತು ವರ್ಗದೊಂದಿಗೆ ತಳಕು ಹಾಕಿಕೊಂಡಿದೆ; ಸ್ವಜಾತಿಗಳಲ್ಲಿಯೇ ನಡೆಯುವ ವಿವಾಹಗಳು ತಂತಮ್ಮ ಜಾತಿಯೊಳಗೆ ಸ್ವಾಯತ್ತತೆಯನ್ನು ಕಾಪಿಡುತ್ತವೆ; ಇದರಿಂದಾಗಿಯೇ ಬೇರೆ ಜಾತಿಗಳ ನಡುವೆ ಶ್ರೇಣೀಕರಣ ನೆಲೆಗೊಳ್ಳುವಂತಾಗುತ್ತದೆ. ಯಾಕೆಂದರೆ ಜಾತಿ ಹಾಗೂ ಲಿಂಗತ್ವದ ನಡುವೆ ಅಂತರ್ ಸಂಬಂಧವಿದೆ. ಆದ್ದರಿಂದ ಜಾತಿ ವ್ಯವಸ್ಥೆಯ ಸ್ಥಿರೀಕರಣದಲ್ಲಿ ಮಹಿಳೆಯರು ಹೆಬ್ಬಾಗಿಲುಗಳಾಗಿದ್ದಾರೆ ಎನ್ನುವ ಅಂಬೇಡ್ಕರರ ವಾದವು ಕೃತಿಯ ಅಡಿಪಾಯವಾಗಿದೆ. ಜಾತಿ ವ್ಯವಸ್ಥೆಯ ಪುನರ್ ಸೃಷ್ಟಿಯಲ್ಲಿ ಮಹಿಳೆಯರ ಪಾತ್ರವು ಮುಖ್ಯವಾಗಿದೆ. ಚರಿತ್ರೆಯಲ್ಲಿ ಹೆಣ್ಣಿನ ಅಧೀನತೆಯ ಪ್ರಶ್ನೆಗಳನ್ನು ಈ ಕೃತಿ ತೀಕ್ಷ್ಣವಾದ ವಿಮರ್ಶೆಗೆ ಗುರಿಪಡಿಸುತ್ತದೆ.
ಚಾರಿತ್ರಿಕವಾಗಿ ಮಹಿಳೆಯರ ಅಸ್ಮಿತೆಯನ್ನು ತುಚ್ಛೀಕರಣಗೊಳಿಸುವುದರ ಮುಖಾಂತರ ಅವರ ಇರುವಿಕೆಯನ್ನು ಪುರುಷಾಧಿಕಾರಕ್ಕೆ ವಿಧೇಯರನ್ನಾಗಿಸಲಾಗಿದೆ ಎಂಬುದೇ ಉಮಾ ಚಕ್ರವರ್ತಿಯವರ ವಾದದ ಪ್ರಧಾನ ತಿರುಳಾಗಿದೆ. ಇದರ ಸಮರ್ಥನೆಗೆ ಪ್ರಮಾಣಗಳನ್ನು ಒದಗಿಸುವ ‘ಮನುಸ್ಮೃತಿ’ ಹಾಗೂ ‘ಭಗವದ್ಗೀತೆ’ಯಂತಹ ಅನೇಕ ಗ್ರಂಥಗಳನ್ನು ಅವರು ಸಾಕಷ್ಟು ವಿಸ್ತಾರವಾಗಿ ವಿಶ್ಲೇಷಿಸಿದ್ದಾರೆ. ಇವು ಹೆಂಗಸರು ಸಹಜವಾಗಿಯೇ ಅತಿ ಕಾಮಾಸಕ್ತರು, ಪಾಪಾತ್ಮರು, ದುರುಳರು, ಚಂಚಲರು, ಮೋಸಗಾರರು ಎಂದೆಲ್ಲ ಆಪಾದಿಸಿ ಅವರನ್ನು ತಾಯ್ತನ ಮತ್ತು ಪಾತಿವ್ರತ್ಯದ ನೆಲೆಯಲ್ಲಿ ಆದರ್ಶೀಕರಿಸಿದವು; ಅದರಲ್ಲೂ ಮುಖ್ಯವಾಗಿ ಬ್ರಾಹ್ಮಣ ಪುರುಷ ಪ್ರಾಧಾನ್ಯತೆಯು ತಮ್ಮ ಜಾತಿಯ ಮಹಿಳೆಯರನ್ನು ಲೈಂಗಿಕವಾಗಿ ನಿಯಂತ್ರಿಸಿತು. ಲೈಂಗಿಕ ಪಾವಿತ್ರ್ಯವೇ ಹೆಣ್ಣಿನ ಆತ್ಯಂತಿಕ ಗುಣಧರ್ಮ ಎಂಬ ತತ್ವವನ್ನು ರೂಪಿಸಿತು. ಹಾಗಾಗಿ ರಾಮಾಯಣದ ಸೀತೆಯು ಇಂದಿಗೂ ಆದರ್ಶ ಪತಿವ್ರತೆಯ ಉತ್ಕೃಷ್ಟ ಮಾದರಿಯಾಗಿದ್ದಾಳೆ. ಇವೆಲ್ಲವೂ ಮಹಿಳೆಯನ್ನು ಪುರುಷಾಧಿಕಾರಕ್ಕೆ ಕಟ್ಟಿ ಹಾಕಿದವು. – ಇವು ಉಮಾ ಅವರ ವಾದ-ವಾಗ್ವಾದಗಳ ಒಂದು ಸ್ಥೂಲ ವಿವರಣೆಯೆಂದು ಗುರುತಿಸಬಹುದಾಗಿದೆ.
ಉಮಾ ಅವರ ಈ ಇಂಗ್ಲಿಷ್ ಕೃತಿಯು 2003ರಲ್ಲಿ ಪ್ರಕಟವಾಯಿತು. ಇದರ ಪರಿಷ್ಕೃತ ಆವೃತ್ತಿಯು 2018ರಲ್ಲಿ ಹೊರಬಂದಿದೆ. ಸಮಕಾಲೀನ ಸಂದರ್ಭದಲ್ಲಿ ಜಾತಿಪ್ರಜ್ಞೆ ಎಂಬುದು ಯುವ ಪೀಳಿಗೆಯಲ್ಲಿ ಬೇರೆ ಬೇರೆ ರೂಪಗಳಲ್ಲಿ ಜೀವಂತವಾಗಿರುವುದನ್ನು ತೆರೆದಿಟ್ಟಿದೆ. ಇಂತಹ ಪಲ್ಲಟಗಳನ್ನು ಬಹು ವಿನ್ಯಾಸಗಳಲ್ಲಿ ಹಿಡಿದಿಟ್ಟಿದೆ. ಅವರು ತಮ್ಮ ಅಧ್ಯಯನಕ್ಕೆ ಬಳಸಿರುವ ಆಕರಗಳ ವ್ಯಾಪ್ತಿ ಕೂಡ ದೊಡ್ಡದು. ಕೆಲವು ಕಡೆಯಲ್ಲಿ ದೀರ್ಘವಾದ ಉಲ್ಲೇಖಗಳಿವೆ. ಕಡಿಮೆ ಸ್ಪೇಸ್‌ನಲ್ಲಿ ಹೆಚ್ಚು ವಿಷಯಗಳನ್ನು ಮಂಡಿಸುವುದರಿಂದ ಓದಲು ಕೊಂಚ ಭಾರ ಅನ್ನಿಸಬಹುದು. ಆದರೆ, ಅವಸರದ ಓದಿಗೆ ಈ ಪುಸ್ತಕವಲ್ಲ; ಇದು ಸಾವಧಾನದ ಓದನ್ನು ಅಪೇಕ್ಷಿಸುವ ಗಂಭೀರ ಕೃತಿ. ಕೆಲವು ಕಡೆಯಲ್ಲಿ ನಮ್ಮ ನಿಲುವುಗಳನ್ನು ಬುಡಮೇಲು ಮಾಡುತ್ತದೆ.
ಭಾರತದಲ್ಲಿ ಉಮಾ ಚಕ್ರವರ್ತಿ, ಶರ್ಮಿಳಾ ರೇಗೆ, ಅನುಪಮಾ ರಾವ್ - ಇವರು ಸ್ತ್ರೀವಾದಿ ಚಿಂತನೆಗಳನ್ನು ಅಂಬೇಡ್ಕರರ ಮೂಲಕ ವ್ಯಾಪಕವಾಗಿ ವಿಸ್ತರಿಸಿದ್ದಾರೆ. ಕನ್ನಡ ಸ್ತ್ರೀವಾದವು ಅಂಬೇಡ್ಕರರ ಮಹಿಳಾ ಕೇಂದ್ರಿತ ವಿಚಾರಧಾರೆಗಳನ್ನು ಇಂದಿಗೂ ಅಧ್ಯಯನದ ತೆಕ್ಕೆಗೆ ತೆರೆದುಕೊಂಡಿಲ್ಲದಿರುವುದು ಸೋಜಿಗವೇ ಆಗಿದೆ. ಆದ್ದರಿಂದ ಈ ಕೃತಿಯು ಕನ್ನಡದಲ್ಲಿ ಲಿಂಗತ್ವ ಅಧ್ಯಯನಕ್ಕೆ ಖಂಡಿತವಾಗಿಯೂ ಹೊಸ ಹಾದಿಗಳನ್ನು ತೆರೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.