ಇದು ರಸ್ತೆ ಇರದ ಕಾಲದ ಕತೆ. ಮಂಗಳೂರು ಹೆಂಚುಗಳು ಆಗ ಹೊಸತಾಗಿ ತಯಾರಿಸುತ್ತಿದ್ದ ಕಾಲದ ಕತೆ. ದಕ್ಷಿಣ ಕನ್ನಡದ ಹವ್ಯಕ ಸಂಸ್ಕೃತಿಯನ್ನು ಪದರಪದರವಾಗಿ ಬಿಚ್ಚಿಡುತ್ತ ಹೋಗುತ್ತದೆ. ಹವ್ಯಕರ ಭಾಷೆ, ಆಹಾರ, ಆಚರಣೆ, ಮನೆ, ಒಡವೆ, ಒಡ್ಯಾಣ, ಪೀಠೋಪಕರಣ, ಅಡಕೆ, ತೆಂಗಿನ ತೋಟ, ಆಳುಮಕ್ಕಳು, ದೇವರು, ದೈವ ಹೀಗೆ ಒಂದು ಸಮುದಾಯದ ಸಮಗ್ರ ಚಿತ್ರಣವನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ. ಜೊತೆಗೆ ಗಾಂಧಿ ಪ್ರಭಾವ ದಟ್ಟವಾಗಿ ಕಾಣುತ್ತದೆ. ಎರಡನೆಯ ತಲೆಮಾರು ಗಾಂಧಿಯನ್ನು ಕಾಣದಿದ್ದರೂ ಗಾಂಧಿಗಿರಿಗೆ ಒಳಗಾಗುವುದು, ಸಮಾಜ ಸುಧಾರಣೆಯತ್ತ ಆಗುವ ಬದಲಾವಣೆ ಯಾವತ್ತಿಗೂ ನಿಧಾನವೆಂಬುದು ನಿರೂಪಿತವಾಗುತ್ತ ಹೋಗುತ್ತದೆ.
ವೈಧವ್ಯ, ಪರಿತ್ಯಕ್ತ, ವಿಧುರ, ಧರ್ಮಬೀರು ದಾಂಪತ್ಯ, ಪಟೇಲಿಕೆ, ಒಡೆತನ, ಆಳುಮಕ್ಕಳನ್ನು ನೋಡಿಕೊಳ್ಳುವ ವ್ಯವಸ್ಥೆ ಇವೆಲ್ಲವೂ ಕೊಪ್ಪರಿಗೆ ಮನೆಯ ಮೂಲಕ ಸಮಕಾಲೀನ ಬಾಂಧವ್ಯಗಳನ್ನೂ ನಿಕಷಕ್ಕೆ ಒಡ್ಡುತ್ತವೆ.
ಎರಡು ತಲೆಮಾರುಗಳ ಕತೆಯನ್ನು ನಿರೂಪಿಸುತ್ತಲೇ ಸ್ವಾತಂತ್ರ್ಯ ಸಂಗ್ರಾಮ, ಸ್ತ್ರೀಪಾತ್ರಗಳನ್ನು ಗೌರವದಿಂದಲೇ ನಡೆಸಿಕೊಳ್ಳುವ ಈ ಕಥನದಲ್ಲಿ ಸ್ತ್ರೀಪರ ಧೋರಣೆಯನ್ನು ಕಾದಂಬರಿ ಎತ್ತಿಹಿಡಿಯುತ್ತದೆ. ಪರಿತ್ಯಕ್ತರಾಗಿದ್ದಕ್ಕೆ, ಬಂಜೆತನ ಅನುಭವಿಸಿದ್ದಕ್ಕೆ ಸ್ವಹತ್ಯೆಯ ಪಾತ್ರಗಳಿದ್ದರೂ ಆ ಕಾಲದ ಚಿತ್ರಣವನ್ನು ಸಶಕ್ತವಾಗಿ ಕಟ್ಟಿಕೊಡುವಲ್ಲಿ ಇವು ಅಗತ್ಯವೆನಿಸುತ್ತವೆ.
ಓದನ್ನು ಆರಂಭಿಸುವುದಷ್ಟೆ ಓದುಗರ ಕೆಲಸ. ಮುಗಿಸಿಕೊಳ್ಳುವುದು ಈ ಕಥನದ ವಿಶೇಷವಾಗಿದೆ. ಕೊಪ್ಪರಿಗೆ ಮನೆಯ ಪರಿಸರ ಓದುಗನನ್ನು ಆವರಿಸಿಕೊಳ್ಳುತ್ತದೆ.
ಹವ್ಯಕರ ಮನೆಲೇ: ಡಾ. ನಾ. ಮೊಗಸಾಲೆ
ಪ್ರ: ಸಾಹಿತ್ಯ ಪ್ರಕಾಶನ
ಸಂ: 9448110034
ಪುಟಗಳು: 400 ಬೆಲೆ: ₹ 500
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.