ಕನ್ನಡದಲ್ಲಿ ಆರೋಗ್ಯ ಕುರಿತಾದ ಪುಸ್ತಕಗಳು ಹೆಚ್ಚಾಗಿ ಬರುತ್ತಿವೆ. ಕಾಯಿಲೆ ಬಗ್ಗೆ ಅರಿವು ಮೂಡಿಸಲು, ಜನರಿಗೆ ರೋಗದ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಲು, ಆ ಮೂಲಕ ಭಯ ನಿವಾರಣೆ ಮಾಡಲು ಇಂತಹ ಪುಸ್ತಕಗಳು ಸಹಕಾರಿ.
ಗಿಲ್ಲನ್ ಬ್ಯಾರಿ ಸಿಂಡ್ರೋಮ್ ವಿರಳ ಕಾಯಿಲೆಯ ವರ್ಗಕ್ಕೆ ಸೇರಿದ್ದು, ಅನೇಕ ಜನರಿಗೆ ಈ ಕಾಯಿಲೆಯ ಹೆಸರೇ ಹೊಸತು. ವೈದ್ಯ ಸಮುದಾಯಕ್ಕೂ ಈ ವಿಚಾರ ಹೊಸದು ಹಾಗೂ ವೈದ್ಯರ ವೃತ್ತಿ ಬದುಕಿನಲ್ಲಿಯೂ ಇಂತಹ ಪ್ರಕರಣ ನೋಡಿರುವುದು ಬಹಳ ಅಪರೂಪ ಎನ್ನಬಹುದು.
ಗಿಲ್ಲನ್-ಬ್ಯಾರಿ ಸಿಂಡ್ರೋಮ್ ಎನ್ನುವುದು ನರವೈಜ್ಞಾನಿಕ ತೊಂದರೆ. ವ್ಯಕ್ತಿಯ ಸ್ವರಕ್ಷಣಾ ವ್ಯವಸ್ಥೆಯು ಬಾಹ್ಯ ನರಗಳ ಮೇಲೆ ದಾಳಿ ಮಾಡುವ ಅಸ್ವಸ್ಥತೆಯಾಗಿದೆ. ಪ್ರತಿರಕ್ಷಣಾ ವ್ಯವಸ್ಥೆಯಿಂದ ಬಾಹ್ಯ ನರಮಂಡಲಕ್ಕೆ ತೊಂದರೆಯಾಗುವಂತಹ ಪರಿಸ್ಥಿತಿ ಇದಾಗಿದೆ.
ಲೇಖಕ ರಾಸಿತ್ ಅಶೋಕನ್ ಸ್ವತಃ ಗಿಲ್ಲನ್ ಬ್ಯಾರಿ ಸಿಂಡ್ರೋಮ್‌ಗೆ ಒಳಗಾಗಿ ನಾಲ್ಕು ತಿಂಗಳು ಐಸಿಯುವಿನಲ್ಲಿದ್ದು ಚಿಕಿತ್ಸೆ ಪಡೆದು ಸಾವು ಬದುಕಿನ ಮಧ್ಯೆ ಹೋರಾಡಿದ ಅನುಭವ ಈ ಹೊತ್ತಗೆಯಲ್ಲಿದೆ. ಕಾಯಿಲೆಗೆ ತುತ್ತಾಗಿ ಅದರಲ್ಲಿಯೇ ಬೇಯುತ್ತಿದ್ದರೂ ಓದುಗರಿಗೆ ರೋಚಕವಾಗಿ ತಮ್ಮ ಹೋರಾಟದ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ. ಯಾವುದೇ ಭಯಾನಕ ಕಾಯಿಲೆ ಬಂದಾಗ ರೋಗಿ ಮೊದಲಿಗೆ ಮಾನಸಿಕವಾಗಿ ಕುಗ್ಗುತ್ತಾನೆ. ಖಿನ್ನತೆ, ಕೀಳರಿಮೆ ಮುಂತಾದ ಮಾನಸಿಕ ವೇದನೆಗೊಳಗಾಗುತ್ತಾನೆ. ಆದರೆ ಇಲ್ಲಿ ರಾಸಿತ್ ವ್ಯಕ್ತಿತ್ವ ಭಿನ್ನ. ಎಂತಹ ವಿಷಮ ಪರಿಸ್ಥಿತಿಯಲ್ಲೂ ಮನೋಸ್ಥೈರ್ಯ ಕಳೆದುಕೊಳ್ಳದೆ, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುತ್ತಾ ಕಾಯಿಲೆಯನ್ನು ಧೈರ್ಯವಾಗಿ ಎದುರಿಸಿದ ‘ಗಟ್ಟಿಗ’.
ಎಷ್ಟೇ ಕಷ್ಟದ ಸಂದರ್ಭ ಎದುರಾದರೂ ಅದಕ್ಕೆ ಎದೆಗುಂದದೆ ಗಿಲ್ಲನ್ ಬ್ಯಾರಿ ಸಿಂಡ್ರೋಮ್ ಅನ್ನು ಜಯಿಸಿ ಸಹಜ ಜೀವನಕ್ಕೆ ಮರಳಿದ ಕಥೆ ಮಾತ್ರ ಇತರ ರೋಗಿಗಳಿಗೆ ಚೈತನ್ಯ, ಧೈರ್ಯ ತುಂಬುವಂಥದ್ದು. ಇಡೀ ಪುಸ್ತಕದ ಸಾರ ಇದನ್ನೇ ಅನಾವರಣಗೊಳಿಸುತ್ತದೆ. ಮಲಯಾಳದಲ್ಲಿ ಬರೆದ ಪುಸ್ತಕವನ್ನು ಮೂಲ ಆಶಯಕ್ಕೆ ಕೊಂಚವೂ ಧಕ್ಕೆಯಾಗದಂತೆ ಕನ್ನಡಕ್ಕೆ ಅನುವಾದಿಸಿದ ಕೆ. ಪ್ರಭಾಕರನ್ ಅವರ ಕಾರ್ಯ ಮೆಚ್ಚುವಂತಿದೆ.
ಗಿಲ್ಲನ್ ಬ್ಯಾರಿ ಸಿಂಡ್ರೋಮ್
ಮೂಲ: ಮಲಯಾಳಂ: ರಾಸಿತ್ ಅಶೋಕನ್
ಕನ್ನಡಕ್ಕೆ: ಕೆ. ಪ್ರಭಾಕರನ್
ಪ್ರ.: ಅಸ್ಮಿತೆ ಪ್ರಕಾಶನ
ಸಂ:9986840477
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.