ADVERTISEMENT

ಗೋಪಾಲಗೌಡರ ವ್ಯಕ್ತಿತ್ವದ ಸಮಗ್ರ ದರ್ಶನ

ಬಿ.ಎಂ.ಹನೀಫ್
Published 11 ಜನವರಿ 2020, 19:30 IST
Last Updated 11 ಜನವರಿ 2020, 19:30 IST
ಗೋಪಾಲಗೌಡ
ಗೋಪಾಲಗೌಡ   

ಶಾಂ ತವೇರಿ ಗೋಪಾಲಗೌಡರ ಜೀವನ ಮತ್ತು ಸಾಧನೆಯ ಕುರಿತು ಕನ್ನಡದಲ್ಲಿ ಹಲವು ಪುಸ್ತಕಗಳು, ನೂರಾರು ಲೇಖನಗಳು ಪ್ರಕಟವಾಗಿವೆ. ಅದಕ್ಕೆ ಮೌಲ್ಯಯುತ ಹೊಸ ಸೇರ್ಪಡೆ ಡಾ.ನಟರಾಜ್‌ ಹುಳಿಯಾರ್‌ ಬರೆದಿರುವ ಕೃತಿ ‘ಶಾಂತವೇರಿ ಗೋಪಾಲಗೌಡ’. ರೈತ ಹೋರಾಟ ಮತ್ತು ರಾಜಕೀಯವನ್ನು ಸಮೀಕರಿಸಿ ಗೋಪಾಲಗೌಡರು ನಡೆದಾಡಿದ ಶಿವಮೊಗ್ಗ, ಸಾಗರ, ತೀರ್ಥಹಳ್ಳಿಗಳ ಸುತ್ತಮುತ್ತ ಅಡ್ಡಾಡಿ ನಟರಾಜ್‌ ಈ ಪುಸ್ತಕವನ್ನು ಬರೆದಿದ್ದಾರೆ. ಕೋಣಂದೂರು ವೆಂಕಪ್ಪಗೌಡರು ಸಂಪಾದಿಸಿದ ‘ಜೀವಂತ ಜ್ವಾಲೆ’, ಡಾ.ವಿಷ್ಣುಮೂರ್ತಿ ಸಂಪಾದಿಸಿದ ‘ಗೋಪಾಲಗೌಡರ ಡೈರಿ, ಪತ್ರಗಳು ಇತ್ಯಾದಿ’, ಕೋಣಂದೂರು ಲಿಂಗಪ್ಪ ಸಂಪಾದಿಸಿದ ‘ಶಾಸನಸಭೆಯಲ್ಲಿ ಶಾಂತವೇರಿ’, ಜಿ.ವಿ.ಆನಂದಮೂರ್ತಿ/ ಕಾಳೇಗೌಡ ನಾಗವಾರ ಸಂಪಾದಿಸಿದ ‘ಶಾಂತವೇರಿ ಗೋಪಾಲಗೌಡ ನೆನಪಿನ ಸಂಪುಟ’ ಹಾಗೂ ಗೋಪಾಲಗೌಡರ ಸಮಕಾಲೀನರ ಆತ್ಮಚರಿತ್ರೆಗಳಿಂದ ಅನೇಕ ವಿವರಗಳನ್ನು ಒಗ್ಗೂಡಿಸಿ ಲೇಖಕರು ಪುಸ್ತಕಕ್ಕೊಂದು ಹೊಸ ಆಯಾಮ ಒದಗಿಸಿದ್ದಾರೆ.

ಗೋಪಾಲಗೌಡರ ಸಂಗಾತಿಗಳಾದ ಹಾದಿಗಲ್‌ ರಾಮಪ್ಪ, ಮಿಣುಕಮ್ಮ, ಕಿಟ್ಟಪ್ಪಗೌಡ, ಕೋಲಿಗೆ ಶಿವಪ್ಪಗೌಡ, ಎ.ಪಿ.ರಾಮಪ್ಪ, ಪರಮೇಶ್ವರ ಭಟ್ಟ, ಕೋಣಂದೂರು ಲಿಂಗಪ್ಪ, ದಿವಾಕರ ಹೆಗಡೆ, ಕಾಗೋಡು ತಿಮ್ಮಪ್ಪ, ಪೆರಡೂರು ಪುಟ್ಟಯ್ಯ ಅವರು ಹಂಚಿಕೊಂಡ ನೆನಪುಗಳು ಈ ಪುಸ್ತಕದಲ್ಲಿವೆ. ಪಿ.ಲಂಕೇಶ್‌, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಯು.ಆರ್‌.ಅನಂತಮೂರ್ತಿಯವರು ಅಲ್ಲಲ್ಲಿ ಬರೆದಿರುವ ಟಿಪ್ಪಣಿಗಳ ಮತ್ತು ಸಮಾಜವಾದಿ ಚಳವಳಿಯ ಇತಿಹಾಸ ಕುರಿತ ಹಲವು ಪುಸ್ತಕಗಳಿಂದ ಸಮರ್ಥನೆಗಾಗಿ ಆಯ್ದ ವಿವರಗಳೂ ಇವೆ. ಹೊಸ ತಲೆಮಾರಿನ ಓದುಗರಿಗೆ ಸಂಕ್ಷಿಪ್ತರೂಪದಲ್ಲಿ ಶಾಂತವೇರಿ ಗೋಪಾಲಗೌಡರನ್ನು ಪರಿಚಯಿಸುವ ಈ ಪುಸ್ತಕ, ಕನ್ನಡ ಸಾಹಿತ್ಯಲೋಕಕ್ಕೊಂದು ಅಮೂಲ್ಯ ಸೇರ್ಪಡೆ.

ಶಿವಮೊಗ್ಗ ಜಿಲ್ಲೆಯಲ್ಲಿ ಹುಟ್ಟಿ ನಾಡಿನ ರಾಜಕೀಯಕ್ಕೆ ಸಮಾಜವಾದಿ ದಿಕ್ಕೊಂದನ್ನು ತೋರಿದ ಗೋಪಾಲಗೌಡರು ಸಮಾಜವಾದಿ ಪಕ್ಷದಿಂದ ಮೈಸೂರು ರಾಜ್ಯದ ಚುನಾವಣಾ ಕಣಕ್ಕೆ ಇಳಿದದ್ದು ಆಕಸ್ಮಿಕವೇ. ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಒಮ್ಮೆ ಸೋಲುಂಡಿದ್ದರು. ಗೆದ್ದರೂ, ಸೋತರೂ ಅವರ ಸಮಾಜವಾದಿ ನಿಲುವು ಬದಲಾಗಲಿಲ್ಲ.ಆರಗದಲ್ಲಿದ್ದ ಪುಟ್ಟ ಗುಡಿಸಲು ಹಾಗೂ ಬೆಂಗಳೂರಿನಲ್ಲಿ ಪಕ್ಷದ ಕಚೇರಿಯಲ್ಲಿ ವಾಸವಾಗಿಯೇ ಅವರು ಭೂಹೀನರ ಮತ್ತು ದುರ್ಬಲರ ಪರ ಹೋರಾಟದ ಹಾದಿ ತುಳಿದರು. ಅವರ ಸರಳ ಬದುಕಿನ ಶೈಲಿ, ಜಾತ್ಯತೀತ ವ್ಯಕ್ತಿತ್ವ ಮತ್ತು ನಿಷ್ಠುರ ವಿಮರ್ಶಾನೋಟಗಳನ್ನು ಈ ಕೃತಿ ಸಮರ್ಥವಾಗಿ ಪ್ರತಿಬಿಂಬಿಸಿದೆ.ಭೌತಿಕ ನಿರ್ಗಮನದ 47 ವರ್ಷಗಳ ನಂತರವೂ ಕರ್ನಾಟಕದಲ್ಲಿ ಆದರ್ಶ ರಾಜಕಾರಣದ ಅತ್ಯುತ್ತಮ ಮಾದರಿಯಾಗಿ ಉಳಿದುಕೊಂಡಿರುವ ಶಾಂತವೇರಿಯವರ ಜೀವನ ಮತ್ತು ಹೋರಾಟದ ವಿವರಗಳನ್ನು ಓದುತ್ತಾ ಹೋದಂತೆ, ಇವತ್ತಿನ ರಾಜಕೀಯ ಹಿಡಿದಿರುವ ಅಧಃಪತನದ ದಾರಿಯೂ ಕಣ್ಣಮುಂದೆ ನಿಚ್ಚಳವಾಗುತ್ತದೆ.

ADVERTISEMENT

ಅಭ್ಯರ್ಥಿ ಮತ್ತು ಮತದಾರರಿಬ್ಬರೂ ಭ್ರಷ್ಟಗೊಳ್ಳದ ಚುನಾವಣೆಯ ಮಾದರಿಗಳನ್ನು ಯೋಚಿಸುವಾಗೆಲ್ಲ ಗೋಪಾಲಗೌಡರು ನೆನಪಾಗುತ್ತಾರೆ. ‘ಒಂದು ವೋಟು, ಒಂದು ನೋಟು’ ಪ್ರಯೋಗದ ಮೂಲಕ ಅವರು ಚುನಾವಣೆ ಗೆಲ್ಲುತ್ತಿದ್ದ ರೀತಿ, ವಿದ್ಯಾವಂತರು ಮತ್ತು ಅವಿದ್ಯಾವಂತರನ್ನು ಒಂದೇ ಸಮದಲ್ಲಿ ತಲುಪುತ್ತಿದ್ದ ಅವರ ರಾಜಕೀಯ ಭಾಷಣಗಳು, ಎಂತಹ ಸಂದರ್ಭದಲ್ಲೂ ತತ್ವಸಿದ್ಧಾಂತದ ಕುರಿತು ರಾಜಿಯಾಗದ ಮನೋಭಾವಗಳನ್ನು ಲೇಖಕರು ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.

ಒಟ್ಟು 11 ಅಧ್ಯಾಯಗಳಿದ್ದು, ‘ಸಾಂಸ್ಕೃತಿಕ ಲೋಕದ ಸಖ’, ‘ನೈತಿಕ ಸಿಟ್ಟು ಮತ್ತು ಚಿಕಿತ್ಸಕ ವ್ಯಂಗ್ಯ’ ಹಾಗೂ ‘ಸಮಾಜವಾದಿಯ ಕೊನೆಯ ವರ್ಷಗಳು’ ಅಧ್ಯಾಯಗಳು ಆಪ್ತವಾಗಿ ದಾಖಲಾಗಿವೆ. ಅಗ್ರಹಾರದಲ್ಲಿ ಮಾಧ್ಯಮಿಕ ಶಾಲೆಯ ವಿದ್ಯಾಭ್ಯಾಸ, ಅಲ್ಪಕಾಲ ಓದು ನಿಲ್ಲಿಸಿ ದನ ಮೇಯಿಸಿದ್ದು, ಹೈಸ್ಕೂಲಿಗೆ ನಿತ್ಯ 12 ಕಿ.ಮೀ ನಡೆದೇ ಹೋಗಿ ಬರುತ್ತಿದ್ದುದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮುನ್ನ ನಡೆವ ಸೆಲೆಕ್ಷನ್‌ ಟೆಸ್ಟ್ ಬರೆಯುತ್ತಿದ್ದಾಗ ತೀರ್ಥಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಬಂದ ಸ್ವಾತಂತ್ರ್ಯ ಹೋರಾಟಗಾರರ ಮೆರವಣಿಗೆಯ ಜೊತೆಗೆ ತಾವೂ ಹೊರಟು ನಿಂತದ್ದು, ಪೋಸ್ಟ್‌ಬಾಕ್ಸ್‌ಗಳ ಅಪಹರಣ, ತಂತಿ ಕತ್ತರಿಸುವುದು ಮುಂತಾದ ಭೂಗತ ಚಟುವಟಿಕೆಗಳಲ್ಲಿ ಭಾಗವಹಿಸಿ ಜೈಲು ಸೇರಿದ್ದು, ಕೋರ್ಟ್‌ನಲ್ಲಿ ವಾದಿಸಿ ಸರ್ಕಾರಿ ವಕೀಲರ ಫಜೀತಿಗೆ ಕಾರಣರಾದದ್ದು, 3 ತಿಂಗಳ ಜೈಲುಶಿಕ್ಷೆ ಆದಾಗ ರೆವಿನ್ಯೂ ಇನ್ಸ್‌ಪೆಕ್ಟರ್‌ ಆಗಿದ್ದ ಅಣ್ಣ ಜಾಮೀನು ನೀಡಲು ಬಂದರೂ ನಿರಾಕರಿಸಿದ್ದು, ಜೈಲಿನಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ಭೇಟಿ, ಜೂನಿಯರ್‌ ಇಂಟರ್‌ಮಿಡಿಯೆಟ್‌ನಲ್ಲಿ ಹಣದ ಮುಗ್ಗಟ್ಟಿನಿಂದಾಗಿ ಬೀಡಿ ಕಟ್ಟಿ, ಹೊಲಿಗೆ ಕೆಲಸ ಮಾಡಿ ಜೀವನ ಸಾಗಿಸಿದ್ದು– ಮುಂತಾಗಿ ಗೋಪಾಲಗೌಡರ ಬಾಲ್ಯದ ಕುರಿತ ಅಪರೂಪದ ವಿವರಗಳೆಲ್ಲ ಇಲ್ಲಿವೆ.

ಮೊದಲ ಬಾರಿ ಚುನಾವಣೆಗೆ ನಿಂತಾಗ ಅವರ ಚಿನ್ಹೆ ಆಲದ ಮರ. ಇವತ್ತು ಕರ್ನಾಟಕದ ರಾಜಕೀಯ ಇತಿಹಾಸವನ್ನೊಮ್ಮೆ ಹೊರಳಿ ನೋಡಿದರೆ ಗೋಪಾಲಗೌಡರ ಆಲದಮರದಂತಹ ಮೇರುವ್ಯಕ್ತಿತ್ವದ ಮಹತ್ವ ಎದ್ದು ಕಾಣುತ್ತದೆ. ‌ಈ ಮರದ ನೆರಳಲ್ಲಿ ಬೆಳೆದ ಅರಸು, ಬಂಗಾರಪ್ಪ, ಪಟೇಲ್‌ ಮುಖ್ಯಮಂತ್ರಿಗಳಾದರು. 1971ರಲ್ಲಿ ವೀರೇಂದ್ರ ಪಾಟೀಲರ ಸಂಪುಟ ರಾಜೀನಾಮೆ ನೀಡಿದಾಗ ಸಂಯುಕ್ತ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಗೋಪಾಲಗೌಡರೇ ಮುಖ್ಯಮಂತ್ರಿ ಆಗುವ ಅವಕಾಶವೊಂದು ಕೈತಪ್ಪಿತ್ತು.

ಸಾಹಿತಿಗಳ ಜೊತೆಗಿನ ಗೌಡರ ಸಾಹಚರ್ಯದ (ಡೈರಿಯಲ್ಲಿ ಟಿಪ್ಪಣಿಸಿದ) ರಸನಿಮಿಷಗಳೂ ಇಲ್ಲಿವೆ. ಲಂಕೇಶಪ್ಪನ ಜೊತೆ ಬಂದಿದ್ದ ಕೆ.ಎಸ್‌.ನಿಸಾರ್‌ ಅಹ್ಮದ್ ಪದ್ಯ ಓದಿದ್ದು/ ನೆಬೊಕೊವ್‌ನ 'ಲೋಲಿತಾ' ಕಾದಂಬರಿ ಓದಿದ್ದು/ ‘ಚೌದವೀ ಕ ಚಾಂದ್‌’ ಸಿನಿಮಾ ನೋಡಿದ್ದು/ ತೀರ್ಥಹಳ್ಳಿಯಲ್ಲಿ ಇದ್ದಾಗ ಹೊಳೆಯಾಚೆ ಹೋಗಿ ಕಳ್ಳುಕುಡಿದು ಬಂದದ್ದು/ ಬಂಧನದಲ್ಲಿದ್ದ ಆಫ್ರಿಕಾದ ಪೆಟ್ರೀಷಿಯಾ ಲುಮುಂಬಾ ಕುರಿತ ಟಿಪ್ಪಣಿ, ಶ್ರೀರಾಂಪುರದಲ್ಲಿದ್ದ ಪುಟ್ಟ ಮನೆಗೆ ದೇವರಾಜ ಅರಸು, ಎಸ್‌.ವೆಂಕಟರಾಂ, ಅಜೀಜ್‌ ಸೇಠ್‌, ಪಟೇಲ್‌, ಕೊಣಂದೂರು ಲಿಂಗಪ್ಪ, ಬಿ.ಬಸವಲಿಂಗಪ್ಪ ಬಂದು ಹೋಗುತ್ತಿದ್ದುದು, ಎಂ.ಡಿ.ನಂಜುಂಡಸ್ವಾಮಿ ಜರ್ಮನಿಯಿಂದ ಬಂದಾಗ ಗೌಡರ ಮನೆಯಲ್ಲಿ ಉಳಿದು ‘ಮಾನವ’ ಪತ್ರಿಕೆ ರೂಪಿಸುತ್ತಿದ್ದುದು– ಹೀಗೆ ಕುತೂಹಲಕರ ಮಾಹಿತಿಗಳು ಒಂದೇ ಕಡೆ ಓದಲು ಸಿಗುತ್ತವೆ. ಹೊಸ ತಲೆಮಾರಿನ ರಾಜಕೀಯ ವಿಜ್ಞಾನದ ವಿದ್ಯಾರ್ಥಿಗಳಿಗೆ ಇದೊಂದು ಪುಷ್ಕಳ ಓದಿನೌತಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.