ADVERTISEMENT

ಗ್ರಾಮ ಸುರಾಜ್ಯ ಪುಸ್ತಕ ವಿಮರ್ಶೆ: ರಾಜ್ಯದ ಗ್ರಾ.ಪಂಗಳಲ್ಲೊಂದು ಸುತ್ತು

​ಪ್ರಜಾವಾಣಿ ವಾರ್ತೆ
Published 16 ಜುಲೈ 2023, 2:04 IST
Last Updated 16 ಜುಲೈ 2023, 2:04 IST
ಗ್ರಾಮ ಸುರಾಜ್ಯ 
ಗ್ರಾಮ ಸುರಾಜ್ಯ    

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವ್ಯವಸ್ಥೆಯ ವಿವಿಧ ಸ್ತರಗಳಲ್ಲಿ ಮೂರು ದಶಕಗಳಿಗೂ ಅಧಿಕ ಕಾಲ ಕೆಲಸ ಮಾಡಿರುವ ಎಂ.ಕೆ. ಕೆಂಪೇಗೌಡ ಅವರ ಅನುಭವದ ಸಂಪನ್ಮೂಲ ಈ ಕೃತಿ. ಇಲಾಖೆಯ ಪಂಚಾಯತ್‌ ರಾಜ್‌ ನಿರ್ದೇಶಕರಾಗಿ ನಿವೃತ್ತಿ ಹೊಂದಿದ ಕೆಂಪೇಗೌಡ ಅವರು ಪಂಚಾಯತ್‌ ರಾಜ್‌ ವ್ಯವಸ್ಥೆ ಹಾಗೂ ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ವಿವರವಾಗಿ ಇಲ್ಲಿ ಸಂಪಾದಿಸಿದ್ದಾರೆ.

ಈ ಕೃತಿಯಲ್ಲಿ ಒಟ್ಟು ಹತ್ತು ಅಧ್ಯಾಯಗಳಿವೆ. ಪಂಚಾಯತ್‌ ರಾಜ್‌ ಪರಿಕಲ್ಪನೆ, ಅದು ನಡೆದು ಬಂದ ಹಾದಿ ಹಾಗೂ ಬೆಳವಣಿಗೆ, ಗ್ರಾಮಸಭೆ, ಗ್ರಾಮ ಪಂಚಾಯತಿಗಳ ರಚನೆ, ಗ್ರಾಮ ಪಂಚಾಯಿತಿಗಳಲ್ಲಿ ಯೋಜನೆಗಳ ರಚನೆ ಹಾಗೂ ಅನುಷ್ಠಾನ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತಿಗಳ ರಚನೆ ಮತ್ತು ಕಾರ್ಯವೈಖರಿ, ಪಂಚಾಯತ್‌ ರಾಜ್‌ ಸಂಸ್ಥೆಗಳ ಮೇಲೆ ಸರ್ಕಾರದ ಅಧಿಕಾರ, ಪಂಚಾಯತ್‌ ರಾಜ್‌ ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸುವ ಕೇಂದ್ರ ಮತ್ತು ರಾಜ್ಯ ಸರ್ಕಾಗಳ ಯೋಜನೆಗಳ ಬಗ್ಗೆ ವಿಸ್ತೃತವಾದ ವಿವರಣೆಯಿದೆ. ಇದು ಈ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವವರಿಗೆ ಮತ್ತು ಈ ವಿಷಯದ ಕುರಿತ ಅಧ್ಯಯನಾಸಕ್ತರಿಗೆ ಆಕರ ಗ್ರಂಥದ ರೀತಿ ಇದೆ. ಕೃತಿಯು ಕೇವಲ ಮಾಹಿತಿ ಭಂಡಾರವಾಗದೆ, ಕರ್ನಾಟಕದಲ್ಲಿ ಈ ವ್ಯವಸ್ಥೆಗೆ ಆಡಳಿತಗಾರರಾಗಿ ಕಾರ್ಯನಿರ್ವಹಿಸಿದ ಮಂತ್ರಿಗಳ ಸಂಕ್ಷಿಪ್ತ ವಿವರವನ್ನೂ ಒಳಗೊಂಡಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಅಭ್ಯರ್ಥಿಗಳ ಸಾಮಾನ್ಯ ಜ್ಞಾನಕ್ಕೊಂದು ಸಾಣೆ ಹಿಡಿಯುವ ಕೃತಿ ಇದಾಗಿದೆ. ಉದಾಹರಣೆಗೆ, ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವರಾಗಿದ್ದ ಏಕಮಾತ್ರ ಮಹಿಳೆ ಯಾರು ಎನ್ನುವ ಮಾಹಿತಿ.

ಕೊನೆಯ ಅಧ್ಯಾಯದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ವಿಸ್ತೃತವಾದ ವಿವರಣೆಯನ್ನು ಲೇಖಕರು ನೀಡಿದ್ದಾರೆ. ಪಂಚಾಯತ್‌ ರಾಜ್‌ ಸಂಸ್ಥೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಮಾಹಿತಿ ಕೋರಿ ಅರ್ಜಿಗಳು ಸಲ್ಲಿಕೆಯಾಗುತ್ತಿರುವ ಕಾರಣ ವಿಷಯವನ್ನು ಪ್ರಸ್ತಾಪಿಸಿರುವುದಾಗಿ ಲೇಖಕರು ಉಲ್ಲೇಖಿಸಿದ್ದಾರೆ. ಕೃತಿಯ ಭಾಷೆ ಸರಳವಾಗಿದೆ. 

ADVERTISEMENT

ಕೃ: ಗ್ರಾಮ ಸುರಾಜ್ಯ

ಲೇ: ಎಂ.ಕೆ.ಕೆಂಪೇಗೌಡ

ಪ್ರ: ವಿಸ್ಮಯ ಬುಕ್‌ ಹೌಸ್‌ ಮೈಸೂರು 

ಸಂ: 0821–2952545

ಪುಟ: 448

ದರ: 500 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.