ಕಥೆ–ಕಾದಂಬರಿ–ವೈಚಾರಿಕ ಲೇಖನ–ವಿಮರ್ಶೆಗಳಂತಹ ಕೃತಿಗಳ ಬಗ್ಗೆ ಮಾತಾಡುವಾಗ ಲೇಖಕರ ಅನುಭವ, ಅಧ್ಯಯನಶೀಲತೆ, ಜ್ಞಾನಾರ್ಜನೆಯ ಬಗ್ಗೆ ಚರ್ಚಿಸುತ್ತೇವೆ. ಆದರೆ, ಕಾವ್ಯಲೋಕದ ಬಗ್ಗೆ ಹೇಳುವಾಗ ಕವಿಯ ಭಾವಕೋಶವೇ ಪ್ರಧಾನವಾಗುತ್ತದೆ. ಒಂದು ಕವಿತೆ ಎಷ್ಟು ವಜನವಾಗಿದೆ ಎನ್ನುವುದು ಆತನ ಭಾವಕೋಶ ಎಷ್ಟು ಸಮೃದ್ಧವಾಗಿದೆ ಎನ್ನುವುದರ ಮೇಲೆಯೇ ಅವಂಬಿತವಾಗಿರುತ್ತದೆ.
ವೃತ್ತಿಯಿಂದ ಶಿಕ್ಷಕರಾಗಿರುವ, ಶಿವಮೊಗ್ಗ ಜಿಲ್ಲೆಯ ಪಾಲಾಕ್ಷಪ್ಪ ಎಸ್.ಎನ್. ಅವರ ಚೊಚ್ಚಲ ಕವನ ಸಂಕಲನ ‘ಮಾನವೀಯತೆಯ ಮಾತು’ ಇದಕ್ಕೊಂದು ನಿದರ್ಶನ. ಹದವಾದ ಭೂಮಿಗೆ ಬೀಳುವ ಬೀಜಗಳಂತೆ ಅವರ ಕವಿತೆಗಳು ಯಾವ ಪ್ರಯಾಸವೂ ಇಲ್ಲದೆ ಅಂತರಾಳಕ್ಕೆ ಇಳಿಯುತ್ತ ಹೋಗುತ್ತವೆ. ಮೊದಲ ಮಳೆ ಹನಿಗೆ ಭೂಮಿ ಅರಳುವಂತೆ ಇಲ್ಲಿನ ಕವಿತೆಗಳು ಮನವನ್ನು ಅರಳಿಸುತ್ತವೆ.
ತಮ್ಮ ಶಿಕ್ಷಕ ವೃತ್ತಿಯನ್ನು ಅವರು ಎಷ್ಟು ಆಳವಾಗಿ ಪ್ರೀತಿಸುತ್ತಾರೆ ಎನ್ನುವುದಕ್ಕೆ ಇಲ್ಲಿನ ಕೆಲವು ಕವಿತೆಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಮಕ್ಕಳಿಗೆ ತಿಳಿಹೇಳಲಿಚ್ಛಿಸುವ ವೈಜ್ಞಾನಿಕ ಸಂಗತಿಗಳನ್ನೂ ಅವರು ಕವಿತೆಯ ಶೀಶೆಯೊಳಗೆ ತುಂಬಿ ಆಕರ್ಷಕಗೊಳಿಸಿ, ಮುಂದಿಡುತ್ತಾರೆ. ಅಷ್ಟೆ ಅಲ್ಲ, ವೈಯಕ್ತಿಕ ಬದುಕಿನಲ್ಲಿಯೂ ಅವರು ಎಷ್ಟು ಸೂಕ್ಷ್ಮಜೀವಿ ಎನ್ನುವುದನ್ನೂ ಅವರ ಕವಿತೆಗಳು ಅರಿವಿಗೆ ತರುತ್ತವೆ. ಇದಕ್ಕೆ ಅಮ್ಮ, ಅಪ್ಪ, ಮಗನೆಂಬ ಮಿತ್ರ, ಮಗಳು ಕವಿತೆಗಳು ನಿದರ್ಶನ.
ಕಾಗೆಯ ಸಾವು, ಹಾಡುಹಕ್ಕಿ, ಗೀಜಗನ ಗೂಡು, ಹಕ್ಕಿ ಸಂಸಾರ, ಹೊಸ ಗೂಡು, ಗುಬ್ಬಿ ಗೂಡು ಕವಿತೆಗಳು ಪಕ್ಷಿ ಸಂಕುಲದ ಮೇಲೆ ಅವರಿಗಿರುವ ಒಲವು–ಅಕ್ಕರೆಯನ್ನು ಪರಿಚಯಿಸುತ್ತವೆ.
ಕಲ್ಪನೆಗಿಂತ ತಾವು ಒಡನಾಡಿದ, ಕಂಡುಂಡ, ತಮ್ಮನ್ನು ತಟ್ಟಿದ ತಮ್ಮ ಭಾವಲೋಕವನ್ನು ವಿಸ್ತೃತಗೊಳಿಸಿದ ಸಂಗತಿಗಳಿಗೇ ಕವಿತೆಯ ರೂಪ ನೀಡಿರುವುದರಿಂದ ಅವರ ಕವಿತೆಗಳು ಹೆಚ್ಚು ಆಪ್ತವಾಗುತ್ತವೆ. ಮಾನವೀಯ ಸಂಬಂಧಗಳು, ನಿಸರ್ಗದ ವಿಸ್ಮಯಗಳು, ಪಕ್ಷಿ ಸಂಕುಲದ ವೈಚಿತ್ರ್ಯಗಳು, ಸಾಂಸಾರಿಕ ಸಂಬಂಧಗಳ ಮಾಧುರ್ಯ ಇಂಥವುಗಳನ್ನು ಅರ್ಥವತ್ತಾಗಿ, ಸರಳವಾಗಿ, ಸ್ನೇಹಮಯವಾಗಿ ನಿರೂಪಿಸಿರುವ, ಮಾನವೀಯತೆಯೇ ಪ್ರಧಾನವಾಗಿರುವ ಈ ಸಂಕಲನಕ್ಕೆ ‘ಮಾನವೀಯತೆಯ ಮಾತು’ ಶೀರ್ಷಿಕೆ ಅನ್ವರ್ಥವಾಗಿದೆ.
ಪುಸ್ತಕ: ಮಾನವೀಯತೆಯ ಮಾತು (ಕವನ ಸಂಕಲನ)
ಲೇಖಕ: ಪಾಲಾಕ್ಷಪ್ಪ ಎಸ್.ಎನ್.
ಪು: 112
ದ: ₹110
ಪ್ರ: ಅಂತರಂಗ ಪ್ರಕಾಶನ ಸಿಂಗಾಪುರ ರಸ್ತೆ ಅಂಬಾಪುರ ಅಂಚೆ ಕುಗ್ವೆ. ಸಾಗರ–577401
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.