ಎಸ್. ಶ್ರೀಕಂಠಶಾಸ್ತ್ರೀ ಅವರು ನಮ್ಮ ದೇಶ ಕಂಡಿರುವ ಶ್ರೇಷ್ಠ ಇತಿಹಾಸಕಾರರಲ್ಲಿ ಪ್ರಮುಖರು. ಅವರ ಸಂಶೋಧನ ಪ್ರಬಂಧಗಳು, ಗ್ರಂಥಗಳು ಇಂದಿಗೂ ನಮ್ಮ ಸಂಸ್ಕೃತಿಯನ್ನು, ಇತಿಹಾಸವನ್ನು ಅರಿಯಲು ನೆರವಾಗುತ್ತಿವೆ. ಅವರ ‘ಸೋರ್ಸಸ್ ಆಫ್ ಕರ್ನಾಟಕ ಹಿಸ್ಟರಿ’ಯ ಕನ್ನಡ ಅನುವಾದವೇ ‘ಕರ್ನಾಟಕ ಇತಿಹಾಸದ ಆಕರಗಳು.’ ಇಂಗ್ಲಿಷ್‌ನಲ್ಲಿ ಮೊದಲಿಗೆ ಈ ಕೃತಿ ಪ್ರಕಟವಾದದ್ದು 1940ರಲ್ಲಿ. ಈಗ ಈ ಕೃತಿಯ ಲಿಪ್ಯಂತರ ಮತ್ತು ಅನುವಾದವನ್ನು ಎಚ್.ಎಸ್. ಗೋಪಾಲರಾವ್ ಅವರು ಮಾಡಿದ್ದಾರೆ.
ಆರ್.ಸಿ. ಮಜುಂದಾರ್ ಅವರ ಮಾತುಗಳು ಈ ಕೃತಿಯನ್ನು ಚೆನ್ನಾಗಿ ಪರಿಚಯಿಸಿವೆ: ‘ಇದು ಕರ್ನಾಟಕ ಇತಿಹಾಸಕ್ಕೆ ಸಂಬಂಧಿಸಿದ ಎಲ್ಲಾ ಆಕರಗಳ ಸಂಗ್ರಹಿತ ಉಲ್ಲೇಖವಾಗಿದ್ದು, ಬಹಳ ಉಪಯುಕ್ತ ಮಾಹಿತಿ ಮತ್ತು ಆಸಕ್ತಿದಾಯಕ ಗ್ರಂಥವಾಗಿದೆ. ಇದು ಕರ್ನಾಟಕ ಇತಿಹಾಸದ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿದೆ’ ಈ ವಿಷಯದಲ್ಲಿನ ಸಂಶೋಧನೆಗೆ ಹೆಚ್ಚಿನ ಅವಕಾಶವನ್ನು ಕಲ್ಪಿಸುತ್ತದೆ. ಸಂಗ್ರಹಿತ ಉಲ್ಲೇಖಗಳನ್ನು ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡಿ, ವಿಮರ್ಶಾತ್ಮಕವಾಗಿ ಸಂಪಾದಿಸಲಾಗಿದೆ.’
ಸುದೀರ್ಘವಾದ 26 ಪುಟಗಳ ಪೀಠಿಕೆಯಲ್ಲಿ ಕರ್ನಾಟಕದ ಭೌಗೋಳಿಕ ಪರಿಚಯ, ರಾಜಕೀಯ ಇತಿಹಾಸ, ಸಾಹಿತ್ಯ ಮತ್ತು ಕುಶಲ ಕಲೆಗಳು, ಧರ್ಮ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಜೊತೆಗೆ ರಾಜ್ಯವನ್ನಾಳಿದ ವಂಶಾವಳಿಗಳ ಪಟ್ಟಿ, ಪ್ರಮುಖ ನಾಣ್ಯಗಳ ಮಾದರಿಯ ವಿವರಗಳಿದ್ದು ಇವು ಸಾಮಾನ್ಯ ಓದುಗನಿಗೂ ಆಸಕ್ತಿ ಹುಟ್ಟಿಸುತ್ತವೆ. ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಸಂಸ್ಕೃತ, ಗ್ರೀಕ್, ಚೀನಿ, ಪರ್ಷಿಯನ್ ಮತ್ತು ಮರಾಠೀ ಆಕರಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಕನ್ನಡದ್ದೇ ಸ್ವತಂತ್ರ ಕೃತಿ ಎನ್ನುವಂತೆ ಗೋಪಾಲರಾವ್ ಅವರ ಅನುವಾದವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.