ಹಳ್ಳಿಗಳ ಅಭಿವೃದ್ಧಿಯಲ್ಲಿ ಭಾರತದ ಅಭಿವೃದ್ಧಿ ಅಡಗಿದೆ ಎಂದು ನಂಬಿದ್ದ ಮಹಾತ್ಮ ಗಾಂಧೀಜಿ, ಯುವಜನರೆಲ್ಲ ತಂತಮ್ಮ ಹಳ್ಳಿಗಳಿಗೆ ಹೋಗಿ ಅಲ್ಲಿನ ಉದ್ಯೋಗಗಳಲ್ಲಿ ತೊಡಗಿಕೊಳ್ಳಬೇಕು ಎಂದು ಬಯಸಿದ್ದರು. ಗಾಂಧಿ ಅವರ ಆಶಯದಂತೆಯೋ ಅಥವಾ ಆಧುನಿಕ ಜೀವನದ ಒತ್ತಡಗಳಿಂದ ಬೇಸತ್ತೋ ಕೆಲವು ತರುಣತರುಣಿಯರು ನಗರಗಳಿಂದ ಹಳ್ಳಿಗಳತ್ತ ಮುಖ ಮಾಡುತ್ತಿರುವ ಉದಾಹರಣೆಗಳು ನಮ್ಮ ಮುಂದಿವೆ. ಆದರೆ, ಹಳ್ಳಿಗಳು – ಮಹಾತ್ಮನ ಪರಿಕಲ್ಪನೆಯ ಹಳ್ಳಿಗಳು – ಈಗ ಮೂಲಸ್ವರೂಪದಲ್ಲಿ ಉಳಿದಿವೆಯೇ ಎನ್ನುವ ಪ್ರಶ್ನೆಯನ್ನು ನಾವು ಗಂಭೀರವಾಗಿ ಯೋಚಿಸಬೇಕಿದೆ. ಕೆಲವು ಅಪವಾದಗಳನ್ನು ಹೊರತುಪಡಿಸಿದರೆ, ಬಹುತೇಕ ಗ್ರಾಮಗಳು ನಗರಗಳ ತುಂಡುಗಳಂತೆಯೋ ಪಳೆಯುಳಿಕೆಗಳಂತೆಯೋ ರೂಪಾಂತರ ಹೊಂದಿರುವ ಸಂದರ್ಭದಲ್ಲಿ ‘ಹಳ್ಳಿ’ ಎನ್ನುವುದು ಒಂದು ಆದರ್ಶವಾಗಿಯಷ್ಟೇ ಉಳಿದಿರುವಂತಿದೆ. ಹಳ್ಳಿ ಹಾಗೂ ನಗರದ ನಡುವಿನ ಗೆರೆಯೇ ಅಳಿಸಿಹೋಗುತ್ತಿರುವ ಸಂದರ್ಭದಲ್ಲಿ, ನಗರದ ಬಗೆಗಿನ ಹಳಹಳಿಕೆ ಹಾಗೂ ಹಳ್ಳಿಯ ಬಗೆಗಿನ ಕನವರಿಕೆ ಎರಡೂ ಅವಾಸ್ತವದಂತೆಯೇ ಕಾಣುತ್ತದೆ. ಈ ವೈರುಧ್ಯವನ್ನು ರೂಪಕಾತ್ಮಕವಾಗಿ ಹಿಡಿದಿಟ್ಟಿರುವ ಕಾದಂಬರಿ ‘ಹಾಣಾದಿ’.
ಹಾಣಾದಿ ಎಂದರೆ ‘ಹೊಲಕ್ಕೆ ಎತ್ತಿನಗಾಡಿ ಹೋಗುವ ಹಾದಿ’ ಎಂದರ್ಥ. ಕಾದಂಬರಿಯ ಶೀರ್ಷಿಕೆ ಧ್ವನಿಸುವ ಬಂಡಿಜಾಡು, ನಾವು ಈವರೆಗೆ ನಡೆದುಬಂದ ಹಾದಿ ಹಾಗೂ ಅದನ್ನು ಹಿಂತಿರುಗಿ ನೋಡಬೇಕಾದ ಅಗತ್ಯವನ್ನು ಕಾಣಿಸುವಂತಿದೆ. ಕಥಾನಾಯಕ ತನ್ನೂರಿನ ಹಾದಿಯನ್ನು ಹೀಗೆ ಹಿಂತಿರುಗಿ ನೋಡಿದಾಗ ಕಂಡ ದಾರುಣ ಬಿಂಬಗಳು ವರ್ತಮಾನದ ಹಳ್ಳಿಗಳ ಸ್ವರೂಪವೂ ಆಗಿರುವುದನ್ನು ಕಾದಂಬರಿ ತಣ್ಣನೆಯ ದನಿಯಲ್ಲಿ ಸೂಚಿಸುತ್ತದೆ.
ಅಪ್ಪನಿಗೆ ಕಳುಹಿಸಿದ ಮನಿಯಾರ್ಡರ್ ಹಿಂತಿರುಗಿ ಬಂದಾಗ, ಕಥಾನಾಯಕ ಕಳವಳದಿಂದ ಊರಿನ ದಾರಿ ಹಿಡಿಯುತ್ತಾನೆ. ಮರೆತುಹೋದ ತಂತುಗಳನ್ನು ಕೂಡಿಸಿಕೊಳ್ಳುತ್ತ ಹಳ್ಳಿಗೆ ಬಂದರೆ ಅಲ್ಲೇನಿದೆ? ಊರಿಗೆ ಊರೇ ಬಿಕೋ ಎನ್ನುತ್ತಿದೆ; ಯಾರಿಂದಲೋ ಸೂರೆಗೊಂಡು ಸ್ಮಶಾನವಾದಂತೆ ಭಯ ಹುಟ್ಟಿಸುತ್ತಿದೆ. ಮನೆಗಳೆಲ್ಲ ಪಾಳುಬಿದ್ದಿವೆ. ಕಥಾನಾಯಕನ ಮನೆಯೂ ತನ್ನ ಚಹರೆ ಕಳೆದುಕೊಂಡಿದೆ. ಮನೆಯೆದುರು ಧ್ವಜಸ್ಥಂಭದಂತಿದ್ದ ಬಾದಾಮಿ ಮರ ಕಾಲು ಮೂಡಿ ಎಲ್ಲಿಗೋ ನಡೆದುಕೊಂಡು ಹೋದಂತೆ ಮಾಯವಾಗಿದೆ. ಆ ಮರವನ್ನು ಪ್ರಾಣದಂತೆ ಪ್ರೀತಿಸುತ್ತಿದ್ದ ಅಪ್ಪನೂ ಮನೆಯಲ್ಲಿಲ್ಲ. ಅಪರಿಚಿತ ಮುದುಕಿಯೊಬ್ಬಳು ಅಲ್ಲಿ ತಳವೂರಿದ್ದಾಳೆ. ಆ ಮುದುಕಿಯೋ ನಾಯಕನ ಗತ ವರ್ತಮಾನಗಳನ್ನೆಲ್ಲ ಬಲ್ಲೆ ಎಂದು ವರ್ತಿಸುತ್ತಾಳೆ.
ಗುಬ್ಬಿ ಆಯಿ ಎಂದು ಕರೆಸಿಕೊಳ್ಳುವ ಆ ಅಜ್ಜಿ ಗವಿಯೊಂದರಲ್ಲಿ ಆಶ್ರಯ ಪಡೆದಿದ್ದ ಒಂಟಿಹೆಣ್ಣು. ಅವಳ ಮೇಲೆ ಕಾಮುಕರ ಕಣ್ಣು ಬಿದ್ದಾಗ, ಅವಳಿಗೆ ಕಥಾನಾಯಕನ ಅಪ್ಪ ತನ್ನ ಮನೆಯಲ್ಲಿ ಆಶ್ರಯ ಕೊಡುತ್ತಾನೆ. ಅದೇ ಅಜ್ಜಿ ಈಗ ಅಪ್ಪನನ್ನು ಹುಡುಕಿಕೊಂಡು ಬಂದ ಮಗನಿಗೆ ರೊಟ್ಟಿ–ಪಲ್ಲೆ ನೀಡಿ ಉಪಚರಿಸುತ್ತಾಳೆ. ಆಕೆಯ ಮೂಲಕ ಊರಿನ ಗುಟ್ಟುಗಳು ಒಂದೊಂದಾಗಿ ತೆರೆದುಕೊಳ್ಳುತ್ತವೆ. ಆಕೆಯ ಮಾತುಗಳ ಮೂಲಕವೇ ಅಪ್ಪ ಹಾಗೂ ಮನೆಯ ಮುಂದಿನ ಬಾದಾಮಿ ಗಿಡ ಜೀವಗೊಳ್ಳುತ್ತಾರೆ. ಅದೇನು ಬರಿಯ ಮರವೇ; ಅಪ್ಪನ ಪಾಲಿಗೆ ಜೀವವುಳ್ಳ ಮಗ; ಊರಿನ ಪಾಲಿಗೆ ತಮ್ಮ ಕಷ್ಟಸುಖದ ಮಾತುಗಳು ಹೇಳಿಕೊಳ್ಳಲು ಹಾಗೂ ದಣಿವಾರಿಸಿಕೊಳ್ಳಲು ಒಂದು ಜಾಗ. ಇದ್ದೊಬ್ಬ ಮಗ ತನ್ನ ಬದುಕು ಹುಡುಕಿಕೊಂಡು ಊರು ಬಿಟ್ಟಮೇಲೆ ಅಪ್ಪನ ಪಾಲಿಗೆ ಮರವೇ ಕರುಳಕುಡಿ. ಅವನೆದೆಯ ನೋವು ನಲಿವುಗಳಿಗೆಲ್ಲ ಹೂಂ ಎನ್ನುತ್ತಿದ್ದುದು ಮರವೇ.
‘ನಿನ್ನಪ್ಪ ಹೊಲವನ್ನೇ ಮನೆ ಮಾಡಿಕೊಂಡು ಬಹಳ ಕಾಲವಾಯಿತು. ಅವನನ್ನು ಭೇಟಿ ಮಾಡಿಸುತ್ತೇನೆ ಬಾ’ ಎಂದು ಇರುಳಲ್ಲಿ ನಾಯಕನನ್ನು ಕರೆದುಕೊಂಡು ಮುದುಕಿ ಹೊಲದತ್ತ ಹೊರಡುತ್ತಾಳೆ. ಗವ್ವೆನ್ನುವ ಕತ್ತಲೆಯ ಹಾದಿಯಲ್ಲಿ ದುರಂತರ ಕಥೆ ಬಿಚ್ಚಿಕೊಳ್ಳುತ್ತದೆ.
ದೇವರಂಥ ಮರವೂ ಅಪವಾದಕ್ಕೆ ಗುರಿಯಾಗುತ್ತದೆ. ಊರಿನಲ್ಲಿ ನಡೆಯುವ ಎಲ್ಲ ಅನಾಹುತಗಳಿಗೂ ದೆವ್ವ ಹೊಕ್ಕಿರುವ ಬಾದಾಮಿ ಗಿಡವೇ ಕಾರಣ ಎನ್ನುವಂತಾಗುತ್ತದೆ. ಕಣ್ಣಿಗೆ ಕಂಡ ಬಾದಾಮಿ ಗಿಡಗಳನ್ನೆಲ್ಲ ಕಡಿದ ನಂತರ, ಕಥಾನಾಯಕನ ಮನೆಯಂಗಳದ ಗಿಡದ ತಂಟೆಗೆ ಊರವರು ಬಂದಾಗ ಅಪ್ಪ ಸಿಡಿದೇಳುತ್ತಾನೆ. ಮರಕ್ಕಾಗಿ ಊರವರನ್ನು ಎದುರುಹಾಕಿಕೊಳ್ಳಲೂ ಹಿಂಜರಿಯುವುದಿಲ್ಲ. ಶಂಕೆಯ ಭೂತಕ್ಕೆ ಪಕ್ಕಾದ ಮನಸ್ಸುಗಳು ಸುಮ್ಮನಿರುತ್ತವೆಯೇ? ಮನೆಯ ಯಜಮಾನ ಇಲ್ಲದಿದ್ದಾಗ ಬಂದು ಮರವನ್ನು ಕಡಿದು ಚೆಲ್ಲುತ್ತಾರೆ. ಮರವನ್ನು ಕಳಕೊಂಡ ಅಪ್ಪ ‘ಪುತ್ರಶೋಕ’ದಿಂದ ನೆಲಕಚ್ಚುತ್ತಾನೆ. ಒಂದು ದಿನ, ಅಜ್ಜಿಯನ್ನು ಮನೆಯಲ್ಲಿ ಕೂಡಿಹಾಕಿ ಕಡಿದುಹೋದ ಮರಗಳ ದಿಮ್ಮಿಗಳನ್ನು ಚಿತೆಯಾಗಿಸಿ ಅದರಲ್ಲಿ ಹಾರಿ ತನ್ನನ್ನು ಕೊಂದುಕೊಳ್ಳುತ್ತಾನೆ. ಹೀಗೆ ಸಹಗಮನ ಮಾಡುವಾಗ, ‘ದೆವ್ವವಾಗಿ ಊರಿನ ಮೇಲೆ ಸೇಡು ತೀರಿಸಿಕೊಳ್ಳುತ್ತೇನೆ’ ಎಂದು ಶಪಥವನ್ನೂ ಮಾಡುತ್ತೇನೆ. ಪಾಪಕೃತ್ಯಕ್ಕಂಜಿ ಜನ ಊರು ಬಿಡುತ್ತಾರೆ. ಹೀಗೆ ಹಳ್ಳಿಯೊಂದು ತನ್ನ ಅವಸಾನ ಕಾಣುತ್ತದೆ.
ಅಜ್ಜಿಯಿಂದ ತನ್ನಪ್ಪನ ತನ್ನೂರಿನ ಸಾವಿನ ಕಥೆಯನ್ನು ಕೇಳಿ ನಾಯಕ ಅನುಭವಿಸುವ ದಿಗ್ಭ್ರಮೆ ಓದುಗರದೂ ಆಗುವುದು ‘ಹಾಣಾದಿ’ ಕಥನದ ಯಶಸ್ಸಾಗಿದೆ. ಶಿವರಾಮ ಕಾರಂತರ ಮೂಕಜ್ಜಿಯ ತಂಗಿಯಂತೆ ಕಾಣಿಸುವ ಇಲ್ಲಿನ ಗುಬ್ಬಿ ಆಯಿ, ಕಾಲದ ಸರಿ–ತಪ್ಪುಗಳನ್ನು ವಿವೇಚಿಸುವ ವಿವೇಕದಂತೆ ಕಾಣಿಸುತ್ತಾಳೆ.
ವರ್ತಮಾನದಲ್ಲಿ ಭೂತಕಾಲವನ್ನು ಜೀವಂತವಾಗಿಸುವ ಕಾದಂಬರಿಕಾರ ಕಪಿಲ, ಅದ್ಭುತ ರಮ್ಯ (ಮಾಂತ್ರಿಕ ವಾಸ್ತವವಾದ) ತಂತ್ರದಲ್ಲಿ ಸಮಕಾಲೀನ ಗ್ರಾಮಭಾರತದ ದುರಂತದ ಬಗ್ಗೆ ಗಮನಸೆಳೆಯುತ್ತಾರೆ. ಹಾಣಾದಿಯ ಬಾದಾಮಿಮರ ಹಳ್ಳಿಗಳಲ್ಲಿನ ಸಮೃದ್ಧಿ–ನೆಮ್ಮದಿಯ ಸಂಕೇತವಾಗಿಯೂ, ಆ ಮರದ ನಾಶಕ್ಕೆ ಕಾರಣವಾದ ಮೌಢ್ಯಗಳು ಆಧುನಿಕತೆಯ ವಿಷಫಲಗಳ ರೂಪವಾಗಿಯೂ ಕಾಣಿಸುತ್ತವೆ. ಅಪ್ಪನೊಂದಿಗೆ ತನ್ನೂರನ್ನೂ ಕಳೆದುಕೊಂಡ ಕಥಾನಾಯಕ ಒಂಟಿಯಾಗಿ ನಿಲ್ಲುವ ವಿಷಣ್ಣಕ್ಷಣ ಈ ಹೊತ್ತಿನ, ಹಳ್ಳಿ–ನಗರಗಳ ನಡುವೆ ತುಯ್ಯುತ್ತಿರುವ ತ್ರಿಶಂಕು ಸ್ಥಿತಿಯ ತರುಣ ತರುಣಿಯರದೂ ಆಗಿರುವ ವೈಪರೀತ್ಯವನ್ನು ಅತ್ಯಂತ ಸೂಚ್ಯವಾಗಿ ಕಾದಂಬರಿ ಮನಗಾಣಿಸುತ್ತದೆ.
ಇಡೀ ಕಾದಂಬರಿ ಒಂದು ದುಃಸ್ವಪ್ನದಂತೆ, ದುರಂತ ಕಾವ್ಯದಂತೆ ಸಹೃದಯರನ್ನು ಆವರಿಸಿಕೊಳ್ಳುತ್ತದೆ. ಹಳ್ಳಿ, ಅಪ್ಪ, ಬಾದಾಮಿ ಗಿಡ, ಗುಬ್ಬಿ ಆಯಿ ಎಲ್ಲವೂ ಒಂದು ಕನಸಿನಂತೆ, ಕಥಾನಾಯಕ ಕೂಡ ಒಂದು ಕನಸಿನಂತೆ, ಆ ಕನಸುಗಳೆಲ್ಲ ನಾವೇ ಆಗಿರುವಂತೆ – ಹೀಗೆ ನಮ್ಮ ಕಥೆಯನ್ನು ನಮಗೇ ಕಾಣಿಸುತ್ತಿರುವ ಭಾವವನ್ನು ‘ಹಾಣಾದಿ’ ಹುಟ್ಟಿಸುತ್ತದೆ. ಕಾವ್ಯದ ಕಸುವುಳ್ಳ ಭಾಷೆಯ ಬಳಕೆ ಕಾದಂಬರಿಯ ರೂಪಕ ಶಕ್ತಿಯನ್ನು ಹೆಚ್ಚಿಸಿದೆ.
ಕಾದಂಬರಿಕಾರ ಕಪಿಲ ಇಪ್ಪತ್ತೆರಡರ ತರುಣ. ಗುಲಬರ್ಗಾ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯ ಎರಡನೇ ವರ್ಷದ ವಿದ್ಯಾರ್ಥಿ. ‘ಹಾಣಾದಿ’ ಅವರ ಚೊಚ್ಚಿಲ ಕಾದಂಬರಿ. ಕೃತಿಕಾರನ ವಯಸ್ಸಿನ ಹಂಗು ಮೀರಿದಂತೆ ಕಾಣಿಸುವ ‘ಹಾಣಾದಿ’ ಇತ್ತೀಚಿನ ವರ್ಷಗಳ ಕನ್ನಡದ ಮುಖ್ಯವಾದ ಕಾದಂಬರಿಗಳಲ್ಲೊಂದು. ನವುರು ಭಾಷೆಯಲ್ಲಿ ರಮ್ಯ ವಿವರಗಳನ್ನು ಪೋಣಿಸುವ ಕಾದಂಬರಿಗಳೇ ಉತ್ತಮ ಕೃತಿಗಳೆಂದು ಬಿಂಬಿತವಾಗುತ್ತಿರುವ ಸಂದರ್ಭದಲ್ಲಿ, ಗಟ್ಟಿ ಜೀವನನುಭವ ಹಾಗೂ ಕಾಲ–ದೇಶಗಳ ಕುರಿತು ಮಾತನಾಡುವ ‘ಹಾಣಾದಿ’ ಕಾದಂಬರಿ ಪ್ರಕಾರದ ಬಗ್ಗೆ ಪ್ರೀತಿ ಹುಟ್ಟಿಸುವ ಕೃತಿ.
----------
ಹಾಣಾದಿ
ಲೇ: ಕಪಿಲ ಪಿ. ಹುಮನಾಬಾದೆ
ಪು: 112; ಬೆ: ರೂ. 110
ಪ್ರ: ಕಾವ್ಯಮನೆ ಪ್ರಕಾಶನ, 220, ವೀರೇಂದ್ರ ಪಾಟೀಲ್ ಬಡಾವಣೆ, 1ನೇ ಬ್ಲಾಕ್, ಸೇಡಂ ರಸ್ತೆ, ಕಲಬುರ್ಗಿ–585105, ಫೋನ್: 7829464653
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.