ಕಾಳಿಂಗನನ್ನು ಕಥಾ ವಸ್ತುವನ್ನಾಗಿ ಇಟ್ಟುಕೊಂಡು ಮಲೆನಾಡಿನ ಜೀವ ವೈವಿಧ್ಯತೆಯನ್ನು ಕಟ್ಟಿಕೊಡುವ ಕಿರು ಪುಸ್ತಕ ಇದು. ಮೇಲ್ನೋಟಕ್ಕೆ ಕಾಳಿಂಗ ಸರ್ಪದ ಕುರಿತೇ ಇರುವ ಪುಸ್ತಕ ಎಂದು ಮೇಲ್ನೋಟಕ್ಕೆ ತೋರಿದರೂ, ಅಲ್ಲಿ ಬೇರೆಯದೇ ಕಥೆಗಳಿಗೆ / ಘಟನೆಗಳಿಗೆ ಜಾಗವಿದೆ.
ಕಥೆ ರೂಪದಲ್ಲಿ ಹೆಣೆದಿದ್ದರೂ ಹಲವು ನಿಜ ಸಂಗತಿಗಳು, ಮಲೆನಾಡಿನ ರೈತರ ಬವಣೆ, ಅಧಿಕಾರಶಾಹಿಯ ಗೊತ್ತುಗುರಿಯಿಲ್ಲದ ನಿರ್ಧಾರಗಳು, ಪ್ರಕೃತಿಯ ನಿಗೂಢತೆ, ಲೇಖಕರ ಕಾಳಜಿ, ಆಕ್ರೋಶ, ಪರಿಸರ ಪ್ರೇಮ ಈ ಪುಸ್ತಕದಲ್ಲಿ ಮಿಳಿತವಾಗಿದೆ.
ರಾಜೀವ ಈ ಕಥೆಯ ನಾಯಕ. ತನ್ನ ಅಡಿಕೆ ತೋಟದ ಮೂಲೆಯಲ್ಲಿ ಬೆಳೆದಿರುವ ಕೋಕೊ ಮರಗಳ ಕೆಳಗೆ ಮಗುಮ್ಮಾಗಿ ಮಲಗಿರುವ, ಕಾಳಿಂಗನನ್ನು ಹೋಲುವ ಆಕೃತಿಯ ರಾಜೀವನ ತಲೆಯಲ್ಲಿ ನೆನಪುಗಳ ಮೆರವಣಿಗೆಯನ್ನೇ ಮಾಡಿಸುತ್ತದೆ. ಈ ನೆನಪುಗಳಲ್ಲಿ ಮಲೆನಾಡ ಜನರ ಜೀವನನ್ನು ಲೇಖಕರು ವಿವರಿಸಿದ್ದಾರೆ. ಅಲ್ಲಿನ ಪ್ರಕೃತಿ ಸೌಂದರ್ಯ, ಕೃಷಿ, ಕೃಷಿಕರ ಬವಣೆ, ಶಿಕಾರಿ, ಹಾವುಗಳ ಬಗ್ಗೆ ಜನರಲ್ಲಿ ಇರುವ ಭಯ ಹಾಗೂ ಮೂಢನಂಬಿಕೆ, ಪ್ರಕೃತಿ ಜತೆಗಿನ ಜನರ ಸಹಬಾಳ್ವೆ, ಮಂಕಿ ಪಾರ್ಕ್‌ನಂತಹ ಸರ್ಕಾರದ ಮುಂದಾಲೋಚನೆ ಇಲ್ಲದ ನಿರ್ಧಾರಗಳು, ಬಂಡವಾಳಶಾಹಿಗಳ ಲಾಭಕೋರತನ ಪುಸ್ತಕದಲ್ಲಿ ದಾಖಲಾಗಿದೆ. ರೈತ ಹೋರಾಟಕ್ಕೂ ಕಥೆಯಲ್ಲಿ ಜಾಗವಿದೆ. ಜನಜಾಗೃತಿಯ ಕಾಳಜಿಯೂ ವ್ಯಕ್ತವಾಗಿದೆ.
ದೂಮನಾಯ್ಕ ಎನ್ನುವ ಕಥಾ ಪಾತ್ರದ ಸಾಹಸಕ್ಕೆ ಊರವರಿಂದ ಮನ್ನಣೆ ಸಿಗದಿರುವುದು, ಮಗ ಸತ್ತರೂ ಹಾವಿನ ಬಗ್ಗೆ ಮಹಿಳೆಯೊಬ್ಬರ ಮೌಢ್ಯ ನಿವಾರಣೆಯಾಗದಿರುವುದು, ಕೋತಿಗಳ ಬಗ್ಗೆ ಜನರಿಗೆ ಇರುವ ಆಕ್ರೋಶದ ಕಟ್ಟೆ ಒಡೆಯುವುದು ಓದುಗನಿಗೆ ಮಿಶ್ರ ಭಾವ ಮೂಡಿಸುತ್ತದೆ.
ಪ್ರತಿಯೊಂದನ್ನೂ ಪ್ರಶ್ನಿಸುತ್ತಲೇ ಸಂಶೋಧನಾ ಕಣ್ಣಿರುವ ವ್ಯಕ್ತಿಯಾಗಿ ಕಥಾನಾಯಕನ್ನು ಚಿತ್ರಿಸಿರುವುದು ಲೇಖಕರ ಹೆಚ್ಚುಗಾರಿಕೆ. ಸ್ಥಳೀಯ ಪದಗಳನ್ನೇ ಬಳಸಿರುವುದು ಬೇರೆ ಭಾಗದ ಓದುಗನಿಗೆ ಪಥ್ಯವಾಗುವುದು ಕಷ್ಟ. ಪ್ರಕೃತಿಯ ವರ್ಣನೆ ಅಗತ್ಯಕ್ಕಿಂತ ಹೆಚ್ಚಿದೆ. ಅದಾಗ್ಯೂ ಪರಿಸರ ಸಾಹಿತ್ಯವನ್ನು ಓದುಗನಿಗೆ ರುಚಿಸುವಂತೆ ಮಾಡುವ ಲೇಖಕರ ಪ್ರಯತ್ನ ಗಮನಾರ್ಹ.
ಕಾಳಿಂಗ ಕಥನ
ಲೇ: ನೆಂಪೆ ದೇವರಾಜ್
ಪ್ರ: ಭಾಗ್ಯಶಂಕರ ಪ್ರಕಾಶನ
ಸಂ: 7795091222
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.