ADVERTISEMENT

ವಿಮರ್ಶೆ | ಇತಿಹಾಸದ ಕುತೂಹಲಕರ ವಿವರ; ತೆಳ್ಳಗಿನ ಗ್ರಹಿಕೆ

ಬಿ.ಎಂ.ಹನೀಫ್
Published 11 ಸೆಪ್ಟೆಂಬರ್ 2021, 19:30 IST
Last Updated 11 ಸೆಪ್ಟೆಂಬರ್ 2021, 19:30 IST
ಅನಾಧಪ್ರಜ್ಞೆ ಕೃತಿ
ಅನಾಧಪ್ರಜ್ಞೆ ಕೃತಿ   

21ನೇ ಶತಮಾನದ ಭಾರತೀಯ ಮುಸ್ಲಿಮರ ಅನಾಥಪ್ರಜ್ಞೆ
ಲೇ: ಎನ್.ಕೆ.ಮೋಹನ್‌ರಾಂ
ಪ್ರ: ಚಾರುಮತಿ ಪ್ರಕಾಶನ, ಬೆಂಗಳೂರು
ಪುಟ 280 ಬೆಲೆ ರೂ 250
9448235553

ಮುಸ್ಲಿಮರ ಇತಿಹಾಸ, ಬದುಕು, ನಿಟ್ಟುಸಿರು, ಹೆಗ್ಗಳಿಕೆ, ವರ್ತಮಾನಗಳನ್ನು ಕೇಂದ್ರವಾಗಿಟ್ಟುಕೊಂಡು ಬರೆದ 35 ಲೇಖನಗಳ ಸಂಕಲನವಿದು. ಈ ಪುಸ್ತಕದ ಲೇಖನಗಳು ಬಿಡಿಯೂ ಹೌದು, ಕೊಲಾಜ್‌ನಂತಹ ಇಡಿಯೂ ಹೌದು. ಮೊತ್ತಮೊದಲು ಭಾರತಕ್ಕೆ ದಂಡೆತ್ತಿ ಬಂದ ಮೊಹಮ್ಮದ್ ಬಿನ್ ಕಾಸಿಂನಿಂದ ಹಿಡಿದು, ವಿಭಜನೆಯ ಸಂದರ್ಭದಲ್ಲಿ ಹೊಸ ದೇಶವೊಂದನ್ನು ಬಗಲಲ್ಲಿ ಇಟ್ಟುಕೊಂಡು ವಲಸೆ ಹೋದ ಮೊಹಮ್ಮದ್ ಅಲಿ ಜಿನ್ನಾವರೆಗೆ- ಮುಸ್ಲಿಮರಿಗೆ ಸಂಬಂಧಿಸಿದ ಇತಿಹಾಸದ ಎಲ್ಲ ಘಟನೆಗಳ ಬಗ್ಗೆ ಇಲ್ಲಿ ಉಲ್ಲೇಖಗಳಿವೆ. ಉಲ್ಲೇಖ ಮಾತ್ರವಲ್ಲ, ಆ ಘಟನೆಗಳನ್ನು ಕಟ್ಟಿಕೊಡುವ ಒಂದು ಭಾಷಾ ಚೌಕಟ್ಟು ಮತ್ತು ವಿಶ್ಲೇಷಿಸುವ ವಿಶಿಷ್ಟ ದಿಕ್ಸೂಚಿಸಹ ಇದೆ.

ಮೊದಲ ಓದಿಗೆ ಇದೊಂದು ಮಾಹಿತಿಗಳ ಆಗರದಂತೆ ಕಾಣಿಸುತ್ತದೆ. ಆದರೆ ಇದು ಇತಿಹಾಸದ ಕ್ರಮಬದ್ಧ ಓದು ಅಲ್ಲ. ಅಬ್ರಹಾಂ ಇರಾಲೆ, ಡಾ.ರಫೀಕ್ ಜಕಾರಿಯಾ, ಎಸ್.ಇರ್ಫಾನ್ ಹಬೀಬ್, ಅಬ್ದುಲ್ ರೆಹಮಾನ್, ಮೊಹಮ್ಮದ್ ಮಮ್ದಾನಿ ಮತ್ತು ಡಾ. ಅಸ್ಗರ್ ಅಲಿ ಇಂಜಿನಿಯರ್ ಅವರು ಬರೆದ ಹಲವು ಪುಸ್ತಕಗಳ ಸಾರವನ್ನು ಹೀರಿ ಮೋಹನ್‌ರಾಂ ಅವರು ಬರೆದಿರುವ ಪ್ರಬಂಧ ಮಾದರಿಯ ಇತಿಹಾಸದ ಸಂಕಥನವಿದು. ಇದರ ಮುಖ್ಯ ಉದ್ದೇಶ ಇತಿಹಾಸದ ಹೆಸರಿನಲ್ಲಿ ಹಿಂದೂ ಮುಸ್ಲಿಮರ ಮಧ್ಯೆ ವಿಷಬೀಜ ಬಿತ್ತುತ್ತಿರುವ ರಾಜಕೀಯಾಸಕ್ತರ ವಾದಕ್ಕೆ ಪ್ರತಿವಾದಗಳನ್ನು ಇತಿಹಾಸದ ಆಕರದಿಂದಲೇ ಎತ್ತಿಕೊಡುವುದು ಮತ್ತು ಈ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯದ ಜವಾಬ್ದಾರಿ ಏನು ಎನ್ನುವುದನ್ನು ನೆನಪಿಸುವುದು.

ADVERTISEMENT

‘ಬಂದದ್ದು ಇಲ್ಲಿ ನೆಲೆಸಲೆಂದೇ, ಕೊಳ್ಳೆಗಾಗಿ ಅಲ್ಲ’ ಎನ್ನುವ ಮೊದಲ ಅಧ್ಯಾಯದಿಂದ ಹಿಡಿದು ‘ಉದ್ದುದ್ದ ಒಡೆದ ರುಬ್ಬುಕಲ್ಲು ದೇಶ ವಿಭಜನೆಯ ರೂಪಕವಾಗಿತ್ತೇ?’ ಎನ್ನುವ ಕೊನೆಯ ಅಧ್ಯಾಯದವರೆಗೆ ಕುತೂಹಲದಿಂದ ಓದಿಸಿಕೊಂಡು ಹೋಗುವ ಗುಣ ಈ ಕೃತಿಗಿದೆ. ‘ಮುಸ್ಲಿಮರ ಭಾರತ ಪ್ರವೇಶ ಜಿಹಾದ್ ಆಗಿರಲಿಲ್ಲ’, ‘ಬಾಬರ್ ಬರದಿದ್ದರೆ ನಾದಿರ್‌ನೋ ಮತ್ತೊಬ್ಬನೋ ಬರುತ್ತಿದ್ದ’, ‘ಇಲ್ಲುಳಿದವರು ಹಸಿದವರು ಮತ್ತು ಬಡವರು’, ‘ಅಲ್ಪಸಂಖ್ಯಾತರೆಂಬ ರಾಜಕೀಯ ಗಿಮಿಕ್’, ‘ಬೇಕಾಗಿದೆ ಸಮಾನ ನಾಗರಿಕ ಸಂಹಿತೆ’ ಮುಂತಾಗಿ ಇಲ್ಲಿರುವ ಲೇಖನಗಳ ತಲೆಬರಹಗಳೇ ಎಲ್ಲವನ್ನೂ ಹೇಳುತ್ತವೆ.

ಮೊಘಲ್ ದೊರೆಗಳು ದೇಶ ಎನ್ನುವ ಕಲ್ಪನೆಯನ್ನು ಸಾಕಾರಗೊಳಿಸಿ, ಅಭಿವೃದ್ಧಿಗೆ ನಾಂದಿ ಹಾಡಿದ್ದು, ದೇಶವೊಂದನ್ನು ಖಾಸಗೀಕರಣಗೊಳಿಸಿದ ವಿಶ್ವದ ಮೊದಲ ಬಹುರಾಷ್ಟ್ರೀಯ ಕಂಪೆನಿಯ ದೌರ್ಜನ್ಯ, ಈಸ್ಟ್ ಇಂಡಿಯಾ ಕಂಪೆನಿಯ ಸೈನ್ಯದಲ್ಲಿ ಬ್ರಾಹ್ಮಣರ ರೆಜಿಮೆಂಟ್ ಸೃಷ್ಟಿಯಾದದ್ದರ ಹಿನ್ನೆಲೆ- ಹೀಗೆ ಇತಿಹಾಸದ ಹಲವು ಕುತೂಹಲಕರ ವಿವರಗಳನ್ನು ಲೇಖಕರು ಇಲ್ಲಿ ಕಟ್ಟಿಕೊಟ್ಟಿದ್ದಾರೆ.

ಅಲ್ಲಲ್ಲಿ ಕಂಡುಬರುವ ಬೀಸುಹೇಳಿಕೆಗಳು ಈ ಕೃತಿಯ ಮಹತ್ವವನ್ನು ಕುಂದಿಸಿವೆ. ಎರಡು ಉದಾಹರಣೆಗಳನ್ನು ಇಲ್ಲಿ ಗಮನಿಸಬಹುದು:

1. ‘1982ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಗುಂಡೂರಾಯರು, ‘ನಮಗೆ ಬೇರೆ ಯಾರ ವೋಟೂ ಬೇಡ. ಮುಸ್ಲಿಂ ಮತ್ತು ದಲಿತರದ್ದು ಸಾಕು’ ಎಂದು ಘೋಷಿಸಿದ್ದೇ ರಾಜ್ಯದಲ್ಲಿ ಕಾಂಗ್ರೆಸ್ ಸೋಲಿಗೆ ಆಲಾಪನೆಯಾಯಿತು. ಮುಸ್ಲಿಮರು ಎಚ್ಚೆತ್ತುಕೊಳ್ಳುವುದರೊಳಗೆ 2014, 2019ರ ಚುನಾವಣೆಗಳು ನಡೆದು ಅವರ ದುಃಸ್ವಪ್ನದ ದಿನಗಳು ಆರಂಭವಾದವು.’ ಗುಂಡೂರಾಯರ ನೇತೃತ್ವದ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಲು ರೈತರ ಮೇಲೆ ನಡೆದ ಗೋಲಿಬಾರ್‌ ಕಾರಣ ಎನ್ನುವುದು ಸರ್ವವಿಧಿತ.

2. ಡೆಕ್ಕನ್ ಹೆರಾಲ್ಡ್‌ನ ಭಾನುವಾರದ ಪುರವಣಿಯಲ್ಲಿ ಪ್ರಕಟವಾದ ಕಥೆಯ ಮತ್ತು ಬಳಿಕ ನಡೆದ ದಾಂಧಲೆ, ಗೋಲಿಬಾರ್‌ನ ಪ್ರಸ್ತಾಪ. ‘ಕಥೆಯನ್ನು ಪ್ರಕಟಿಸಿದ ಸಾಪ್ತಾಹಿಕದ ಮುಖ್ಯಸ್ಥ ಮತ್ತು ಸಂಪಾದಕರನ್ನು ಆಡಳಿತ ಮಂಡಳಿ ಕೆಲಸದಿಂದ ಕಿತ್ತುಹಾಕಿತು’ ಎನ್ನುವ ಊಹಾಪೋಹದ ಮಾತನ್ನು ಸತ್ಯವೆಂದೇ ಲೇಖಕರು ಇಲ್ಲಿ ದಾಖಲಿಸಿದ್ದಾರೆ. ಅವರಿಬ್ಬರೂ ಘಟನೆ ನಡೆದ ಬಳಿಕ ಹಲವು ವರ್ಷಗಳ ಕಾಲ ಪತ್ರಿಕೆಯಲ್ಲಿ ಸೇವೆಯಲ್ಲಿದ್ದರು. ಇದಲ್ಲದೆ, ಹೇರಳ ಮುದ್ರಣ ತಪ್ಪುಗಳೂ ಈ ಕೃತಿಯಲ್ಲಿವೆ.

ಕೃತಿಯ ಆಶಯಗಳನ್ನು ಮೆಚ್ಚಬಹುದಾದರೂ, ತಲೆಬರಹಕ್ಕೆ ಸೂಕ್ತವಾಗಿ ಕೃತಿ ಮೂಡಿಬಂದಿಲ್ಲ. ಭಾರತೀಯ ಮುಸ್ಲಿಮರು ಒಟ್ಟಾರೆಯಾಗಿ ಅನಾಥಪ್ರಜ್ಞೆ ಅನುಭವಿಸುತ್ತಿದ್ದಾರೆ ಎನ್ನುವ ಗ್ರಹಿಕೆಯೇ ತೆಳ್ಳಗಿನದ್ದು ಮತ್ತು ರಾಜಕೀಯ ಧೋರಣೆಯದ್ದು. ಬಲಪಂಥೀಯ ಹಿಂದೂ ದಾರ್ಷ್ಟ್ಯದಿಂದ ಉಂಟಾಗುತ್ತಿರುವ ಕಾನೂನುಬಾಹಿರ ಚಟುವಟಿಕೆಗಳಿಂದ ಪ್ರೇರಿತವಾದದ್ದು. ಇಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ನಿಗ್ರಹಿಸಲು ಸರ್ಕಾರವೊಂದು ರಾಜಕೀಯ ಇಚ್ಛಾಶಕ್ತಿ ತೋರಿಸಿದರೆ ಸಮಸ್ಯೆ ಇಲ್ಲವಾಗುತ್ತದೆ. ವೋಟ್‌ಬ್ಯಾಂಕ್ ಧ್ರುವೀಕರಣದ ಈ ರಾಜಕೀಯ ಕಸರತ್ತು ತಂದೊಡ್ಡಿರುವ ಸಂಕಷ್ಟಗಳು ಭಾರತೀಯ ಮುಸ್ಲಿಮರಲ್ಲಿ ಸಿಟ್ಟು ಮತ್ತು ತಳಮಳವನ್ನು ಹುಟ್ಟುಹಾಕಿವೆ ಎನ್ನುವುದೂ ಸುಳ್ಳಲ್ಲ. ಆದರೆ ಅದು ಒಟ್ಟಾರೆಯಾಗಿ ಅನಾಥಪ್ರಜ್ಞೆಯನ್ನು ಉಂಟು ಮಾಡಿದೆ ಎನ್ನುವುದು ಅರ್ಧಸತ್ಯ. ಅದೇನೇ ಇದ್ದರೂ, ಇತಿಹಾಸದ ಕುತೂಹಲಕರ ಹಾಗೂ ವಿಪರ್ಯಾಸಮಯ ಘಟನೆ ಮತ್ತು ವಿವರಗಳನ್ನು ತಿಳಿದುಕೊಳ್ಳುವ ಆಸಕ್ತಿ ಇದ್ದವರು ಓದಲೇಬೇಕಾದ ಪುಸ್ತಕವಿದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.