ADVERTISEMENT

ಪುಸ್ತಕ ವಿಮರ್ಶೆ: ಬದುಕಿಗೊಂದು ಸರಳ ಮಾರ್ಗಸೂಚಿ

ಪ್ರಜಾವಾಣಿ ವಿಶೇಷ
Published 1 ಜೂನ್ 2024, 23:30 IST
Last Updated 1 ಜೂನ್ 2024, 23:30 IST
ಬದುಕಿಗೊಂದು ಪುಟ್ಟ ಥ್ಯಾಂಕ್ಸ್
ಬದುಕಿಗೊಂದು ಪುಟ್ಟ ಥ್ಯಾಂಕ್ಸ್   

ಪ್ರಪಂಚದೊಳಗೆ ನಾವಿರುವಂತೆ ನಮ್ಮೊಳಗೆ ಒಂದು ಪುಟ್ಟ ಪ್ರಪಂಚವಿದೆ. ಹೊರಗಿನ ಪ್ರಪಂಚ ಮತ್ತು ಒಳಗಿನ ಪ್ರಪಂಚಗಳೆರಡೂ ಒಂದಕ್ಕೊಂದು ಬೆಸೆದುಕೊಂಡಿದೆ. ಒಂದನ್ನೊಂದು ಬೆರೆತು, ಒಂದರಿಂದ ಮತ್ತೊಂದು ಪಡೆದುಕೊಂಡು, ಪಡೆದುಕೊಂಡಷ್ಟೆ ಸಲೀಸಾಗಿ ಬೇಡದ್ದನ್ನು ಅಲ್ಲಗಳೆಯುವಷ್ಟು ಗಟ್ಟಿ ಮನಸ್ಥಿತಿಯೊಂದನ್ನು ಕಟ್ಟಿಕೊಳ್ಳುವುದರಲ್ಲಿಯೇ ಬದುಕಿನ ಸ್ವಾರಸ್ಯ ಅಡಗಿದೆ. 

ಧಾವಂತದ ಬದುಕಿನಲ್ಲಿ ಸ್ವೀಕರಿಸುವಷ್ಟೆ ಸರಳವಾಗಿ ನಿರಾಕರಿಸುವುದನ್ನು ಕಲಿಯಬೇಕು. ಅಂಥ ಕಲಿಕೆಗೆ ಸರಳ ಮಾರ್ಗಸೂಚಿಯಂತೆ ಕಾಣುತ್ತದೆ ‘ಬದುಕಿಗೊಂದು ಪುಟ್ಟ ಥ್ಯಾಂಕ್ಸ್’ ಎಂಬ ಪುಸ್ತಕ.

ನಾವಾಡುವ ಪ್ರತಿ ಮಾತಿನ ಹಿಂದೆಯೂ ಜವಾಬ್ದಾರಿಯುತ ನಡೆಯಿರಲಿ. ಪ್ರತಿ ಬಾರಿ ಸಂಕಲ್ಪ ಮಾಡುವಾಗ ಅಗಾಧ ಬದ್ಧತೆಯೊಂದು ಕೈಹಿಡಿದು ನಡೆಸುತ್ತಿರಲಿ, ಕೋಪಗೊಳ್ಳದೆ ಕ್ಷಮಿಸುವುದನ್ನು ಕಲಿತಾಗಲೇ ಜೀವನಪಥ ಮುಂದೆ ಸಾಗುತ್ತದೆ ಎಂಬಂಥ ಹಲವು ಆಶಯಗಳನ್ನು ಈ ಪುಸ್ತಕದಲ್ಲಿ ಕಾಣಬಹುದು. ಇಲ್ಲಿರುವ ಲೇಖನಗಳು ಬೋಧನೆಯಾಗದೆ ಆಪ್ತಸಲಹೆಯಂತಿವೆ. ಬಿಡಿ ಬಿಡಿ ಲೇಖನಗಳನ್ನು ಸಮಗ್ರವಾಗಿ ಗ್ರಹಿಸಿದಾಗ ಹಲವು ವಿಷಯಗಳ ಮೇಲೆ ಕೇಂದ್ರೀಕರಿಸಿದ ಪ್ರಬಂಧದಂತೆ ಅನಿಸದೇ ಇರಲಾರದು. 

ADVERTISEMENT

ಅನುಭವದ್ರವ್ಯ ಒಟ್ಟುಗೂಡಿದಷ್ಟು ಆಪ್ತಸಮಾಲೋಚನೆಯ ಹಾದಿ ಸರಾಗ. ಕೇಳಿಸಿಕೊಳ್ಳುವ ಕಿವಿಗಳ ಹಿಂದಿರುವ ಮನಸ್ಸು ತೆರೆದುಕೊಂಡಷ್ಟು ದುಗುಡ, ಹತಾಶೆ ತುಂಬಿಕೊಂಡ ಮನಸ್ಸು ಮುಕ್ತವಾಗಿ ಮುಂದುವರಿಯುತ್ತದೆ.

ಮನುಷ್ಯನ ಮನಸ್ಸಿನಾಳದಲ್ಲಿ ತಿಳಿ ನೀರಿನ ಕೊಳಕ್ಕೆ ಜಾಗವಿರುವಂತೆ ವ್ಯಾಕುಲತೆ, ಅಸ್ವಸ್ಥತೆ, ಬೇಸರ, ಹಟ, ದುಮ್ಮಾನ, ದುಃಖ, ಹತಾಶೆ, ನೋವು, ಸಂಕಟ ಎಲ್ಲವನ್ನು ಒಡಲಿನಲ್ಲಿಟ್ಟುಕೊಂಡ ಭಾವಸಮುದ್ರವೊಂದು ಭೋರ್ಗರೆಯುತ್ತಿರುತ್ತದೆ. ಇವೆರಡರಲ್ಲಿಯೂ ಈಜದೇ ಬದುಕು ಪುಟಕ್ಕಿಟ್ಟ ಬಂಗಾರವಾದೀತೆ?

 ಸುಷ್ಮ ಸಿಂಧು ಅವರ ಈ ಲೇಖನಗಳು ಪತ್ರಿಕೆಗಾಗಿ ರೂಪುಗೊಂಡಿರುವುದರಿಂದ ಮನೋಭಿತ್ತಿಗೆ ಸಂಬಂಧಿಸಿದ ಮಾತುಗಳೆಲ್ಲ ಆಳಕ್ಕೆ ಇಳಿಯುವಷ್ಟು ವ್ಯವಧಾನವನ್ನು ತೋರಿಸುವುದಿಲ್ಲ. ನಿರ್ದಿಷ್ಟ ಸಮಸ್ಯೆ ಎದುರಿಸುತ್ತಿರುವವರು ನಿರ್ದಿಷ್ಟ ಲೇಖನ ಓದಿ ಆ ಕ್ಷಣಕ್ಕೆ ಬಿಡುಗಡೆ ಪಡೆಯಲಂತೂ ಅಡ್ಡಿಯಿಲ್ಲ. 

ಬದುಕಿಗೊಂದು ಪುಟ್ಟ ಥ್ಯಾಂಕ್ಸ್‌

ಲೇ: ಸುಷ್ಮ ಸಿಂಧು

ಪ್ರಕಾಶನ: ಸಾಹಿತ್ಯಲೋಕ ಪಬ್ಲಿಕೇಷನ್ಸ್

ಮೊ: 99459 39436

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.