ADVERTISEMENT

ಪುಸ್ತಕ ವಿಮರ್ಶೆ: ಶಿಕ್ಷಕರೊಬ್ಬರ ಬದುಕಿನ ಬಿಡಿ ಚಿತ್ರಗಳು

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2023, 23:29 IST
Last Updated 26 ಆಗಸ್ಟ್ 2023, 23:29 IST
   

‘ಕಲಿಸು ಬಾಗದೆ ಸೆಟೆವುದನ್ನು, ಬಾಗುವುದನ್ನು’ ಪುಸ್ತಕದ ಕುರಿತಾಗಿನ ಪ್ರಸ್ತಾವನೆಯನ್ನು ಮುಗಿಸುವ ಮುನ್ನ ಮಹಾಬಲೇಶ್ವರ ರಾವ್‌ ಬಳಸಿರುವ ಸಾಲಿದು. ನಾಡಿನ ಜನಪ್ರಿಯ ಶಿಕ್ಷಣ ತಜ್ಞರಾಗಿ, ಲೇಖಕರಾಗಿ ಗುರುತಿಸಿಕೊಂಡಿರುವ ಬೈಕಾಡಿ ಮಹಾಬಲೇಶ್ವರ ರಾವ್‌ ಅವರ ಆತ್ಮಚರಿತ್ರೆ ‘ನೆನಪಿನ ಸೌಟು’. ಈ ಕೃತಿಯಲ್ಲಿ ಬದುಕಿನ ಸಾಕಷ್ಟು ಸ್ವಾರಸ್ಯಕರ ಸಂಗತಿಗಳನ್ನು ಬಿಡಿಬಿಡಿಯಾಗಿ ಹರವಿಕೊಂಡಿದ್ದಾರೆ. ಈ ಕೃತಿ ಓದುವ ಮಕ್ಕಳಿಗೊಂದು ಪಾಠವೆಂಬಷ್ಟು ಸೊಗಸಾಗಿ ಬದುಕಿನ ಭಿತ್ತಿ ಚಿತ್ರಗಳನ್ನು ಕೆತ್ತುತ್ತ ಹೋಗಿದ್ದಾರೆ.

ಮಣೂರು ಮಹಾಬಲೇಶ್ವರ ಮಯ್ಯರು, ಬೈಕಾಡಿಗೆ ಹೋಗಿ ಆದ್ಯಂತದಲ್ಲಿ ‘ರಾವ್‌’ ಆಗಿ ಬದಲಾಗುವ ಕಥೆಯಿಂದ ಕೃತಿ ಪ್ರಾರಂಭವಾಗುತ್ತದೆ. ಸಣ್ಣ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಮಗುವಿನ ಕಷ್ಟ ಮತ್ತು ಬದುಕು, ಅದು ಕಲಿಸುವ ಪಾಠ ಮೊದಲ ಅಧ್ಯಾಯದಲ್ಲಿದೆ. ಇಡೀ ಕೃತಿಯಲ್ಲಿ ಒಟ್ಟು 17 ಲೇಖನಗಳಿವೆ. ಇವೆಲ್ಲವೂ ರಾವ್‌ ಅವರ ಬದುಕಿನ ವಿವಿಧ ಘಟ್ಟಗಳ ದಾಖಲೀಕರಣ. ತದ್ವಿರುದ್ಧ ಆಲೋಚನೆಯುಳ್ಳ ಗಂಡ–ಹೆಂಡತಿಯ ಸಂಸಾರ ರಥ ಸಾಗಿದ ರೀತಿ, ಉಂಟಾದ ವಾದ–ವಿವಾದಗಳು, ತಮ್ಮಿಬ್ಬರ ಮದುವೆಯ ಪ್ರಸಂಗವನ್ನು ಲೇಖಕರು ಬಹಳ ಲಘು ದಾಟಿಯಲ್ಲಿಯೇ ಬರೆದಿದ್ದರೂ, ಪ್ರಸ್ತಾಪಿಸಿದ ವಿಷಯಗಳು ಗಂಭೀರವಾಗಿ ಮನಸ್ಸಿಗೆ ನಾಟುವಂತಹದ್ದು.

‘ಸ್ವಮೌಲ್ಯಮಾಪನದಲ್ಲಿ ನಾನು ಯಾವತ್ತೂ ಹಿಂದೆ ಬಿದ್ದಿಲ್ಲ. ನನ್ನ ಹಲವಾರು ತಪ್ಪುಗಳನ್ನು ತಿದ್ದಿಕೊಂಡಿದ್ದೇನೆ...ನಾನಿನ್ನೂ ಮಾಗಿಲ್ಲ. ಮಾಗುವುದು ಒಂದು ದೀರ್ಘಕಾಲೀನ ಪ್ರಕ್ರಿಯೆ. ಪೂರ್ತಿ ಮಾಗುವುದಕ್ಕೆ ಜೀವಮಾನ ಸಾಲದೇ ಹೋದೀತು!’ ತಮ್ಮ ಒಟ್ಟು ಬಾಳಿನ ಕುರಿತು ಬರೆದ ಅಪ್ಪಟ ಪ್ರಾಮಾಣಿಕತೆಯ ನುಡಿಗಳಿವು ಎಂದು ಚಿಂತಾಮಣಿ ಕೊಡ್ಲೆಕೆರೆ ಕೃತಿ ಕುರಿತಾದ ಮುನ್ನುಡಿಯಲ್ಲಿ ಬರೆಯುತ್ತಾರೆ. ಎಲ್ಲಿಯೂ ಆತ್ಮಚರಿತ್ರೆ, ಸ್ವಪ್ರಶಂಸೆಯ ಹೊತ್ತಿಗೆ ಎನ್ನಿಸಿದೇ ಬದುಕಿಗೇ ಬರವಣಿಗೆ ರೂಪ ನೀಡಿರುವ, ಓದುಗನಿಗೂ ಬದುಕಿನ ಪಾಠವಾಗಬಲ್ಲ ಕೃತಿಯಂತಿದೆ.

ADVERTISEMENT

ನೆನಪಿನ ಸೌಟು (ಆತ್ಮಕಥೆ)

ಲೇ: ಮಹಾಬಲೇಶ್ವರ ರಾವ್‌

ಪ್ರ:ವಂಶಿ ಪ್ರಕಾಶನ

ಸಂ: 9916595916

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.