ADVERTISEMENT

ವಿಮರ್ಶೆ: ಸಂಸ್ಕೃತಿಗಳೊಂದಿಗೆ ಸಂವಾದಿಸುವ ಕತೆಗಳು

ಎಚ್.ದಂಡಪ್ಪ
Published 10 ಸೆಪ್ಟೆಂಬರ್ 2022, 19:30 IST
Last Updated 10 ಸೆಪ್ಟೆಂಬರ್ 2022, 19:30 IST
ಇಂದ್ರಜಿತ್‌ ಮತ್ತು ಇನ್ನಿತರ ಕಥೆಗಳು
ಇಂದ್ರಜಿತ್‌ ಮತ್ತು ಇನ್ನಿತರ ಕಥೆಗಳು   

‘ಇಂದ್ರಜಿತ್ ಮತ್ತು ಇನ್ನಿತರ ಕಥೆಗಳು’ ಎಂಬ ಶೀರ್ಷಿಕೆಯಡಿಯಲ್ಲಿ ವಿಕ್ರಂ ಚದುರಂಗ ಅವರು ಜಗತ್ತಿನ ಪ್ರಸಿದ್ಧ ಲೇಖಕರ ಆರು ಕತೆಗಳನ್ನು ಅನುವಾದಿಸಿ ಪ್ರಕಟಿಸಿದ್ದಾರೆ. ‘ಪ್ರಪಂಚ ಚಿಕ್ಕದಾಗುತ್ತಾ, ಎಲ್ಲಾ ಸಂಸ್ಕೃತಿಗಳ ಜನ ಹತ್ತಿರ ಬರುತ್ತಿರುವ ಈ ಹೊತ್ತಿನಲ್ಲಿ ‘ಅನುವಾದಿಸು, ಇಲ್ಲ ಸಾಯಿ’ ಎಂಬ ಮಾತನ್ನು ಪಾಲ್ ಏಂಜಲ್ ಹೇಳುತ್ತಾರೆ. ಈ ಮಾತು ಅನುವಾದದ ಮಹತ್ವವನ್ನು ಸೂಚಿಸುತ್ತದೆ.

ಅನುವಾದ ಮಾಡುವಾಗ ಮೂಲಪಠ್ಯದ ಸಾಮಾಜಿಕ, ಸಾಂಸ್ಕೃತಿಕ ಪರಿಸರವು ಕಾಣಿಸಿಕೊಳ್ಳಬೇಕು. ಆ ಪರಿಸರವು ಅನುವಾದವನ್ನು ಓದುವ ಓದುಗನ ಅನುಭವಕ್ಕೆ ಬರಬೇಕು. ಇಲ್ಲದಿದ್ದರೆ ಅದು ವ್ಯರ್ಥವಾದ ಅನುವಾದವಾಗುತ್ತದೆ. ಮೂಲಪಠ್ಯದಲ್ಲಿರುವ ಸಾಂಸ್ಕೃತಿಕ ಮೌಲ್ಯಗಳನ್ನು, ಮಾನವೀಯ ಮೌಲ್ಯಗಳನ್ನು ಅನುವಾದಕ ಓದುಗನಿಗೆ ತಲುಪಿಸುತ್ತಿರುತ್ತಾನೆ.

ಈ ದಿಕ್ಕಿನಲ್ಲಿ ಪ್ರಸ್ತುತ ಸಂಕಲನದಲ್ಲಿರುವ ಕ್ಯಾಥರಿನ್ ಮ್ಯಾನ್‌ಫೀಲ್ಡ್ ಅವರ ‘ಗೊಂಬೆ ಮನೆ’ (ದಿ ಡಾಲ್ಸ್ ಹೌಸ್) ಕತೆಯನ್ನು ನೋಡಬಹುದು. ಈ ಕತೆಯು ವರ್ಗ ತಾರತಮ್ಯದ ಅಮಾನವೀಯ ಸ್ಥಿತಿಯೊಂದನ್ನು ನಿರೂಪಿಸುತ್ತದೆ. ಕೆಲ್ವಿಯ ಮಕ್ಕಳು ಬಡವರಾಗಿರುವುದರಿಂದ ಶ್ರೀಮಂತರ ಮಕ್ಕಳೊಂದಿಗೆ ಶಾಲೆಯಲ್ಲಾಗಲಿ, ಮನೆಯ ಹೊರಗಡೆಯಾಗಲಿ ಬೆರೆತು ಮಾತನಾಡುವಂತಿಲ್ಲ. ಇದು ಮಕ್ಕಳಿಗೆ ತಂದೆ ತಾಯಿಯರೇ ವಿಧಿಸಿರುವ ಕಟ್ಟುಪಾಡು.

ADVERTISEMENT

ವರ್ಗ ತಾರತಮ್ಯದ ಸ್ವಭಾವ, ಅದರಿಂದ ಉಂಟಾಗುವ ಅವಮಾನ, ಮೇಲ್ವರ್ಗದವರ ಮನಸ್ಥಿತಿಗಳ ವಿಕಾರ ಸ್ವರೂಪ, ಅಮಾನವೀಯ ನಡವಳಿಕೆ, ಬಡವರ ಮನೆಯಲ್ಲಿ ಹುಟ್ಟಿ ಅವಮಾನಕ್ಕೊಳಗಾಗುವ ಮಕ್ಕಳ ಮನಸ್ಥಿತಿ, ಕೊನೆಗೆ ಅವರಲ್ಲಿ ಹುಟ್ಟುವ ಆಶಾವಾದವನ್ನು ಈ ಕತೆ ಸರಳವಾಗಿ ದಾಟಿಸುವಂತಹ ನಿರೂಪಣೆಯಲ್ಲಿದೆ. ವರ್ಗ ತಾರಮ್ಯವುಳ್ಳ ಸಾಮಾಜಿಕ ಸಾಂಸ್ಕೃತಿಕ ಪರಿಸರವನ್ನು ಅದರ ಎಲ್ಲಾ ಆಯಾಮಗಳೊಂದಿಗೆ ಸರಳವಾಗಿ ಧ್ವನಿಪೂರ್ಣವಾಗಿ ಅನುವಾದಿಸಲಾಗಿದೆ.

ಕತೆಗಳ ಅನುವಾದವು, ವಿವೇಕವನ್ನು ಪ್ರಸಾರ ಮಾಡುವ, ವಿಶ್ವಾತ್ಮಕ ಮಾನವನನ್ನಾಗಿ ರೂಪಿಸುವ ಕರ್ತವ್ಯವೂ ಹೌದು. ಅನುವಾದಗೊಂಡ ಕತೆ ಕಾಲದೇಶಗಳನ್ನು ಮೀರಬೇಕಾಗುತ್ತದೆ. ಸಾರ್ವಕಾಲಿಕ, ಸಾರ್ವತ್ರಿಕ ಮತ್ತು ತತ್ಕಾಲಿನತೆಯನ್ನು ಒಳಗೊಳ್ಳದಿದ್ದರೆ ಅನುವಾದಕ್ಕೆ ಬೆಲೆ ಇರುವುದಿಲ್ಲ. ಮೂಲದಲ್ಲಿರುವ ಕಲಾತ್ಮಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅನುವಾದ ಮಾಡಬೇಕಾಗುತ್ತದೆ. ಅದಕ್ಕೆ ಡಿ.ಎಚ್. ಲಾರೆನ್ಸ್‌ನ ‘ಮರದ ಕುದುರೆ’ (ದಿ ರಾಂಕಿಂಗ್ ಹಾರ್ಸ್ ವಿನ್ನರ್) ಪ್ರಸಿದ್ಧ ಕತೆಯನ್ನು ಗಮನಿಸಬಹುದು.

ಅತೃಪ್ತಿ, ಅದೃಷ್ಟ, ದುರಾಸೆ ಮುಂತಾದ ಮನುಷ್ಯನ ಮಾನಸಿಕ ಪ್ರವೃತ್ತಿಗಳನ್ನು ಶೋಧಿಸುವ ಕತೆ ಇದು. ಈ ರೀತಿ ಶೋಧಿಸುತ್ತಲೇ ಸಾಮಾಜಿಕ ರಾಜಕೀಯ, ಆರ್ಥಿಕ ಸ್ಥಿತಿಗತಿಯನ್ನು ಮತ್ತು ಈಗಿನ ಕೊಳ್ಳುಬಾಕ ಸಂಸ್ಕೃತಿಯ ಸ್ವರೂಪವನ್ನು ಅನಾವರಣಗೊಳಿಸುವ ಕತೆಯೂ ಹೌದು. ಅದರಲ್ಲೂ ಹಣವೇ ಪ್ರಧಾನವಾಗಿರುವ ಈಗಿನ ಪರಿಸರದ ಎಲ್ಲಾ ಆಯಾಮಗಳನ್ನು ದುರಂತಗಳನ್ನೂ ನಿರೂಪಿಸುವ ಧ್ವನಿಪೂರ್ಣ ನಿರೂಪಣೆ ಇದೆ.

ಇಲ್ಲಿ ಬರುವ ಮರದ ಕುದುರೆ ಅದೃಷ್ಟವನ್ನೇನೂ ತರುವುವುದಿಲ್ಲ. ತನ್ನ ತಾಯಿ ಅದೃಷ್ಟವಂತೆಯಲ್ಲ ಎಂದು ಪದೇ ಪದೇ ಹೇಳುವುದನ್ನು ಕೇಳಿಸಿಕೊಂಡ ಮಗ ಮರದ ಕುದುರೆಯನ್ನೇರಿ ತನ್ನ ಅದೃಷ್ಟ ಪರೀಕ್ಷಿಸಿಕೊಂಡು ಜೂಜಾಡಿ ಸಾವಿಗೀಡಾಗುತ್ತಾನೆ. ಐಷಾರಾಮಿ ಬದುಕು ಬೇಕು, ಅದಕ್ಕಾಗಿ ಹಣಬೇಕು, ಆದ್ದರಿಂದ ಇಡೀ ಮನೆ ಹಣ ಹಣ ಎಂದು ಪ್ರತಿಧ್ವನಿಸುವುದು, ಮರದ ಕುದುರೆಯನ್ನೇರಿ ಅದೃಷ್ಟ ಪರೀಕ್ಷಿಸುವುದು, ಜೂಜಾಡುವುದು, ವಿಫಲವಾಗಿ ಹತಾಶೆ, ನೋವು, ಯಾತನೆ, ಅತೃಪ್ತಿಯಿಂದ ನರಳಿ ದರಂತಕ್ಕೊಳಗಾಗುವುದು ಇವೆಲ್ಲವನ್ನೂ ಈ ಕತೆ ಕಲಾತ್ಮಕವಾಗಿ ಹಿಡಿದಿಟ್ಟಿದೆ.

ಮೂಲ ಭಾಷೆಯ ಸ್ವರೂಪ ಮತ್ತು ಅದರ ಸಾಂಸ್ಕೃತಿಕ ಪರಿಸರದ ತಿಳಿವಳಿಕೆ ಇದ್ದರೆ ಅನುವಾದಿತ ಕತೆ ಹೆಚ್ಚು ಶಕ್ತಿಯುತವಾಗುತ್ತದೆ. ಈ ದಿಕ್ಕಿನಲ್ಲಿ ಜಾರ್ಜ್‌ ಲೂಯಿ ಬೋರ್ಹೆ ಅವರ ‘ಬಿಲ್ಲೆ’ (ದಿ ಡಿಸ್ಕ್), ಥಾಮಸ್ ಮನ್ ಅವರ ‘ನಿಗೂಢ ದೇವ’ (ಡೆತ್ ಇನ್ ವೆನಿಸ್ ಕೃತಿಯ ಆಯ್ದ ಮುಖ್ಯ ಭಾಗ) ಕತೆಗಳನ್ನು ಗಮನಿಸಬಹುದು. ಬೋರ್ಹೆಯ ದಿ ಡಿಸ್ಕ್ ಒಂದು ಪ್ಯಾಂಟಸಿ ಕತೆ, ಪ್ಯಾಂಟಸಿಯೊಂದಿಗೆ ತಾತ್ವಿಕವಿಚಾರಗಳು ಸಾವಯವ ಸಂಬಂಧದಲ್ಲಿ ಬೆರೆತಿವೆ. ಜೊತೆಗೆ ಬೋರ್ಹೆ ಮಾಂತ್ರಿಕ ವಾಸ್ತವವಾದದ ಮೊದಲನೆಯ ಕತೆಗಾರ ಎಂಬ ಹೆಗ್ಗಳಿಕೆಗೂ ಪಾತ್ರನಾಗಿರುವುದರಿಂದ ಈ ಕತೆಯಲ್ಲಿ ಅದರ ಛಾಯೆ ಇದ್ದೇ ಇದೆ. ಮಾಂತ್ರಿಕ ವಾಸ್ತವವಾದ, ಪ್ಯಾಂಟಸಿ, ಬದುಕಿನ ನಿಗೂಢ ತತ್ವಗಳ ಶೋಧನೆಯ ಈ ಕತೆಯನ್ನು ಅದರ ಎಲ್ಲಾ ಸಾಧ್ಯತೆ ಉಳಿಸಿಕೊಂಡು ಅನುವಾದ ಮಾಡಲಾಗಿದೆ.

ಕತೆಗಳಲ್ಲಿ ಸಂಕೇತಗಳಿರುತ್ತವೆ. ಜೊತೆಗೆ ಒಂದೊಂದು ಕತೆಯಲ್ಲಿ ಒಂದೇ ನಿರ್ದಿಷ್ಟ ಅರ್ಥವಿರುವುದಿಲ್ಲ. ಅನುವಾದವು ಮೂಲದ ವಿವರಗಳನ್ನು, ಪದಗಳನ್ನು, ಪ್ರತಿಮೆ, ಸಂಕೇತಗಳನ್ನು ಪುನರ್ ರೂಪಿಸಿಕೊಳ್ಳಬೇಕಾಗುತ್ತದೆ. ಅನುವಾದಕ ಈ ಬಗೆಯ ಭಾಷಾ ಚೈತನ್ಯವನ್ನು ತಂದಾಗ ಅದು ಒಳ್ಳೆಯ ಅನುವಾದವಾಗುತ್ತದೆ. ಈ ಹಿನ್ನೆಲೆಯಲ್ಲಿ ಮ್ಯಾಕ್ಸಿ ಗಾರ್ಕಿಯ ‘ಹುಲ್ಲುಗಾವಲು’ (ಇನ್ ದಿ ಸ್ಟೆಪೆ) ಮತ್ತು ಟಾಲ್‌ಸ್ಟಾಯ್ ಅವರ ‘ಇಂದ್ರಜಿತ್’ (ಫಾದರ್ ಸೆರ್ಗಿಯಸ್) ಕತೆಗಳನ್ನು ಗಮನಿಸಬಹುದು.

ಹುಲ್ಲುಗಾವಲು ಕತೆಯಲ್ಲಿ ಗಾರ್ಕಿ, ಮನುಷ್ಯನ ವಕ್ರತೆ, ಬಡತನದ ಸ್ವರೂಪ, ಮನುಷ್ಯನನ್ನು ಸದಾ ಕಿತ್ತು ತಿನ್ನುವ ಹಸಿವು, ಅದರಿಂದ ಉಂಟಾಗುವ ಮಾನಸಿಕ ಮತ್ತು ದೈಹಿಕ ಕ್ಷೋಭೆ, ಮನುಷ್ಯನ ಸ್ವಾರ್ಥ, ಅವನ ದುಷ್ಟಚರ್ಯೆ, ದುರ್ಬುದ್ಧಿ, ಮಾನವತೆಯನ್ನೆ ಕಳೆದುಕೊಳ್ಳುವ ಅವನ ಸ್ವಭಾವವನ್ನು ಈ ಕತೆಯಲ್ಲಿ ಸಮಾಜವಾದಿ ವಾಸ್ತವತೆಯ ಮಾರ್ಗದಲ್ಲಿ ನಿರೂಪಿಸಿದ್ದಾರೆ.

ಮನುಷ್ಯನ ಸ್ವಭಾವದಲ್ಲಿ ಪಾಶವೀತನವೂ ಇದೆ. ಹಾಗೆಯೇ ಒಳ್ಳೆಯತನವೂ ಸ್ವಲ್ಪಮಟ್ಟಿಗೆ ಇದೆ. ಸದ್ಯಕ್ಕೆ ಪಾಶವೀತನ ಮೇಲುಗೈ ಪಡೆದಿರಬಹುದು. ಅದನ್ನು ಸರಿಪಡಿಸಿಕೊಳ್ಳಬೇಕಾದದ್ದು ಎಲ್ಲರ ಕರ್ತವ್ಯ. ಈ ಕತೆಯಲ್ಲಿ ಬರುವ ಪಾತ್ರಗಳು, ತಮ್ಮ ಹಸಿವನ್ನು ತಣಿಸಿಕೊಳ್ಳಲು ಮಾಡುವ ಕಸರತ್ತುಗಳನ್ನು ನಿರೂಪಿಸಿಸುತ್ತಲೇ ಇಡೀ ಜಗತ್ತಿನ ಮಾನವರ ಹದಗೆಟ್ಟಿರುವ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಪರಿಸರವನ್ನು ಅನಾವರಣಗೊಳಿಸಿರುವುದು ಗಾರ್ಕಿಯವರ ಕಲಾತ್ಮಕ ಶಕ್ತಿಗೆ ದ್ಯೋತಕ.

ಈ ಸಂಕಲನದ ನೀಳ್ಗತೆ ಟಾಲ್‌ಸ್ಟಾಯ್ ಅವರ ಇಂದ್ರಜಿತ್ (ಫಾದರ್ ಸೆರ್ಗಿಯಸ್). ಟಾಲ್‌ಸ್ಟಾಯ್ ವಾಸ್ತವತಾವಾದಿ ಬರಹಗಾರ. ವಿಜ್ಞಾನದೊಂದಿಗೆ ಚಲನಶೀಲವಾದ ಆಧ್ಯಾತ್ಮಿಕ ವಿಚಾರಗಳನ್ನು ಒಟ್ಟುಗೂಡಿಸಿ ರಚನೆಯಾಗಿರುವ ಕತೆಯು ತನ್ನ ಪ್ರಭಾವದಿಂದ ಮನುಷ್ಯನ ಬದುಕಿಗೆ ಶಾಂತಿ ಮತ್ತು ಸಂತೋಷವನ್ನು ಕೊಡುತ್ತದೆ. ಅದು ಮನುಷ್ಯನ ಉನ್ನತಿ, ಅವನ ಐಕ್ಯತೆ, ಸಹಬಾಳ್ವೆ, ಭ್ರಾತೃತ್ವಗಳಿಗೆ ಸಹಕಾರಿಯಾಗಿರುತ್ತದೆ ಎಂದು ನಂಬಿದ ಟಾಲ್‌ಸ್ಟಾಯ್ ಕಲೆಯನ್ನು, ಜಗತ್ತನ್ನು ಪ್ರಗತಿ ಪಥದಲ್ಲಿ ಸಾಗಿಸುವ ಒಂದು ಸಾಧನ ಎಂದು ಪರಿಗಣಿಸಿದವರು.

ಪ್ರಸ್ತುತ ಫಾದರ್ ಸೆರ್ಗಿಯಸ್ ಕತೆಯಲ್ಲಿ, ಕೋಪಗೊಳ್ಳದಿರು, ಕಾಮಿಯಾಗದಿರು, ಸಜ್ಜನ ದುರ್ಜನರಿಬ್ಬರಿಗೂ ಒಳ್ಳೆಯವನಾಗು ಮುಂತಾದ ಮನಷ್ಯನ ಬದುಕಿಗೆ ಬೇಕಾದ ತತ್ವಗಳನ್ನು ಅಂತರ್ಗತಗೊಳಿಸಿಕೊಳ್ಳಲಾಗಿದೆ. ಮನುಷ್ಯನನ್ನು ಇಲ್ಲಿ ಬಿಡಿಬಿಡಿಯಾಗಿ ನೋಡದೆ ಎಲ್ಲರನ್ನೂ ಒಂದು ಐಕ್ಯತೆಯ ಆವರಣದಲ್ಲಿ ನೋಡಲಾಗಿದೆ. ಈ ಕತೆಯಲ್ಲಿ ನೈತಿಕ ಮೌಲ್ಯಗಳ ಶ್ರದ್ಧೆ ಇದೆ. ಇಡೀ ಕತೆಗೆ ರೂಪ ಕೊಡುವ ಕಲಾತ್ಮಕತೆಯನ್ನು ಸಾಧಿಸಲು ನೆರವಾಗುವ ಕೇಂದ್ರ ಪ್ರಜ್ಞೆಯೂ ಇದೆ. ಈ ಕತೆಯನ್ನು ಓದಿ ಮುಗಿಸಿದಾಗ ಸಾಮಾಜಿಕ ಕಳಕಳಿಯುಳ್ಳ ಕತೆಯೂ ಎನಿಸಿಡುತ್ತದೆ. ಇಲ್ಲಿನ ಅನುವಾದ ಅರ್ಥಕೇಂದ್ರಿತವೂ ಹೌದು, ಸಂವಹನ ಕೇಂದ್ರಿತವೂ ಹೌದು.

ಇಂದ್ರಜಿತ್‌ ಮತ್ತು ಇನ್ನಿತರ ಕಥೆಗಳು

ಲೇ: ವಿಕ್ರಂ ಚದುರಂಗ

ಪ್ರ: ಕನ್ನಡ ಸಂಘ, ಕ್ರೈಸ್ಟ್‌, ಬೆಂಗಳೂರು

ಸಂ:080–40129027

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.