ADVERTISEMENT

ಪುಸ್ತಕ ವಿಮರ್ಶೆ: ಸಮಾಜವಾದಕ್ಕಾಗಿ ಹೋರಾಡಿದವರ ಕಥನ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 23:30 IST
Last Updated 13 ಜುಲೈ 2024, 23:30 IST
ಮುಖಪುಟ
ಮುಖಪುಟ   

ವೈಚಾರಿಕ ಪ್ರಗತಿಪರ ಸಾಂಸ್ಕೃತಿಕ ಕ್ಷೇತ್ರಗಳ ಕ್ರಾಂತಿಕಾರಕ ಚಟುವಟಿಕೆಗಳು ಮಲೆನಾಡಿನ ತೀರ್ಥಹಳ್ಳಿಯಲ್ಲಿ ಶತಮಾನದ ಹಿಂದಿನಿಂದಲೇ ಆರಂಭಗೊಂಡಿತ್ತು. ಮಹಾತ್ಮಾ ಗಾಂಧಿ ಹಾಗೂ ರಾಮಮನೋಹರ ಲೋಹಿಯಾ ಸೇರಿದಂತೆ ಪ್ರಗತಿಪರ ಮುಖಂಡರ ಗಾಢ ಪ್ರಭಾವಕ್ಕೆ ಒಳಗಾದ ಈ ಪ್ರದೇಶ ಬಹಳಷ್ಟು ಪ್ರಗತಿಪರ ಹೋರಾಟಗಾರರನ್ನು ಈ ನಾಡಿಗೆ ನೀಡಿದೆ.

ಇಂಥ ಸಾಧಕರ ಸಮಾಜವಾದಿ ಆಶಯಗಳ ಬದುಕನ್ನು ತಮ್ಮ ಧ್ಯೇಯವಾಗಿಸಿಕೊಂಡು ಉನ್ನತ ಮೌಲ್ಯಗಳ ತಾಜಾತನಕ್ಕಾಗಿ ಹಂಬಲಿಸಿದ ಹಲವು ಆದರ್ಶ ಜೀವಿಗಳ ಕುರಿತು ಲೇಖಕ ಡಾ. ಜೆ.ಕೆ. ರಮೇಶ ಅವರು ‘ಗಾಳಿಬೆಳಕಿನ ಪಯಣಿಗರು– ತೀರ್ಥಹಳ್ಳಿಯ ಸಮಾಜವಾದಿಗಳು’ ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ. 

ದಿ. ಡಿ.ಎಸ್. ನಾಗಭೂಷಣ ಅವರು ಶಿವಮೊಗ್ಗದಿಂದ ಹೊರತರುತ್ತಿದ್ದ ಮಾಸಿಕ ‘ಹೊಸ ಮನುಷ್ಯ’ದಲ್ಲಿ ಆಗಾಗ ಬಿಡಿಬಿಡಿಯಾಗಿ ಅಚ್ಚಾಗಿದ್ದ ಆದರ್ಶ ವ್ಯಕ್ತಿಗಳ ಕುರಿತ ಲೇಖನಗಳ ಗುಚ್ಚವೇ ಈ ಕೃತಿ. 20ನೇ ಶತಮಾನದ ಮಧ್ಯಭಾಗದಲ್ಲಿ ನಡೆದ ಸ್ವಾತಂತ್ರ್ಯ ಚಳವಳಿಯ ಭಾಗವಾದ ಮೈಸೂರು ಚಳವಳಿ, ಕಾಗೋಡು ಚಳವಳಿ ಸೇರಿದಂತೆ ಹಲವು ಚಳವಳಿಗಳ ರೂವಾರಿಗಳನ್ನು ನೆನಪಿಸಿಕೊಳ್ಳುವ ಯತ್ನವನ್ನು ಲೇಖಕರು ಇಲ್ಲಿ ಮಾಡಿದ್ದಾರೆ.

ADVERTISEMENT

ಜಿ. ಸದಾಶಿವರಾಯರಿಂದ ಆರಂಭಗೊಂಡು, ಬೆಟ್ಟಮಕ್ಕಿ ಬಿ.ಎಸ್. ಗುರುಮೂರ್ತಿ ಭಟ್ಟರು, ಸರದಾರ ಶಾಮೈತಾಳರು, ನಾಗಾನಂದ, ಎಂ.ಡಿ. ಶೇಷಪ್ಪ ಹೆಗ್ಗಡೆ, ಶಾಂತವೇರಿ ಗೋಪಾಲಗೌಡರು, ಎನ್. ಕಿಟ್ಟಪ್ಪಗೌಡರು, ಕೋಣಂದೂರು ಲಿಂಗಪ್ಪ, ಮಿಣುಕಮ್ಮ, ಕಡಿದಾಳು ಶಾಮಣ್ಣ ಇಂಥ ಮಹನೀಯರ ಜತೆಯಲ್ಲಿ ಸಾಹಿತಿಗಳಾದ ಕುವೆಂಪು, ಯು.ಆರ್. ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ ಅವರ ಕುರಿತ ಮೌಲ್ಯಯುತ ಬರಹಗಳ ಸಂಗ್ರಹವೇ ಈ ಕೃತಿ. ಗಾಳಿಬೆಳಕಿನ ಪಯಣಿಗರ ಬಾಳ ಪಯಣದ ಜತೆಗೆ, ಹೋರಾಟದ ಹಾದಿಯನ್ನೂ ಈ ಕೃತಿಯಲ್ಲಿ ವಿವರಿಸಲಾಗಿದೆ. ಈ ಹೋರಾಟಗಾರರು ಬದುಕಿನ ವಿವಿಧ ಸ್ಥರಗಳಿಂದ ಬಂದಿದ್ದರೂ, ಅವರ ನಾಡಿ ಮಿಡಿತ ಸಮಾಜವಾದವೇ ಆಗಿತ್ತು ಎಂಬುದು ವಿಶೇಷ. ತುಳಿತಕ್ಕೊಳಪಟ್ಟವರ ಏಳಿಗೆಯನ್ನೇ ಜೀವನದ ಧ್ಯೇಯವನ್ನಾಗಿಸಿಕೊಂಡು ಹೋರಾಡಿ ಬದುಕಿದ ಧೀಮಂತ ವ್ಯಕ್ತಿಗಳ ಕುರಿತ ಬರಹಗಳು ಈ ಕೃತಿಯಲ್ಲಿದೆ. ⇒v

ಗಾಳಿ ಬೆಳಕಿನ ಪಯಣಿಗರು

ಲೇ: ಡಾ. ಜೆ.ಕೆ. ರಮೇಶ

ಪ್ರ: ಸುವ್ವಿ ಪಬ್ಲಿಕೇಷನ್ಸ್‌

ಸಂ: 98865 33972

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.