ADVERTISEMENT

ಪುಸ್ತಕ ವಿಮರ್ಶೆ: ಸಾಹಿತ್ಯ ವಿಮರ್ಶೆಯ ಹಂಸ ನ್ಯಾಯ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 23:30 IST
Last Updated 13 ಜುಲೈ 2024, 23:30 IST
   

‘ಹಾಲು ಮತ್ತು ಹಂಸ’ ಸಾಹಿತ್ಯ ವಿಮರ್ಶೆಯ 21 ಲೇಖನಗಳನ್ನು ಒಳಗೊಂಡ ಕೃತಿ. ಇದು ಲೇಖಕರ ಭಾಷಣಗಳು, ಅಭಿನಂದನಾ ಗ್ರಂಥಗಳ ಲೇಖನ, ವಿಚಾರ ಸಂಕಿರಣಗಳಲ್ಲಿ ಮಂಡಿಸಿದ ಬರಹಗಳನ್ನು ಒಳಗೊಂಡಿದೆ. ಸಂಸ್ಕೃತದ ಕಾಳಿದಾಸನ ಕೃತಿಗಳು ಸೇರಿದಂತೆ ಪಂಪನಾದಿಯಾಗಿ ಆಧುನಿಕ ಲೇಖಕರ ಕೃತಿಗಳ ಕುರಿತು ಇಲ್ಲಿ ಚರ್ಚಿಸಿದ್ದಾರೆ. ಕವಿ, ಕಾಲ, ಕಾವ್ಯದ ಜೊತೆ ಮೀಮಾಂಸೆಯ ವಿಶ್ಲೇಷಣೆಯನ್ನೂ ಮಾಡಿದ್ದಾರೆ. 

ಕಾಳಿದಾಸನ ಪಠ್ಯ ಆಧರಿಸಿ ಆತನ ಕಾವ್ಯಶಕ್ತಿಯ ದರ್ಶನವನ್ನು ಮಾಡಿಸಿದ್ದಾರೆ. ಹೇಗೆ ಆತ ತನ್ನ ಸಮಕಾಲೀನ ಕವಿಗಳಿಗೆ ಮೇಲ್ಪಂಕ್ತಿಯನ್ನು ಹಾಕಿದ್ದ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳನ್ನು ಲೇಖಕ ನೀಡಿದ್ದಾರೆ. 

ಭೀಷ್ಮಾಚಾರ್ಯರಿಗೆ ಸೇನಾಧಿಪತಿ ಪಟ್ಟವನ್ನು ಕಟ್ಟುವ ಸಂದರ್ಭದಲ್ಲಿ ಕರ್ಣ ಆಚಾರ್ಯರ ಶಕ್ತಿಗಿಂತ ತಾನೆಷ್ಟು ಮಿಗಿಲು ಎನ್ನುವ ಆಕ್ರೋಶದಲ್ಲಿ ಆಡಿದ ಮಾತನ್ನು ಒಳಗೊಂಡ ಪಂಪನ ಕಂದ ಪದ್ಯದ ವಿಮರ್ಶಾ ನೋಟ ಭಿನ್ನ. ಈ ಕುರಿತು  ಡಿ.ಎಲ್‌.ನರಸಿಂಹಾಚಾರ್‌ ಹಾಗೂ ಎಲ್‌. ಬಸವರಾಜು ಅವರ ಅರ್ಥ ವಿವರಕ್ಕಿಂತ ಬೇರೆಯ ನೋಟವನ್ನು ಈ ಕೃತಿ ಬೀರಿದೆ.  ‘ಶರಣ ಕ್ರಾಂತಿ ಒಂದು ಪ್ರತಿಕ್ರಿಯೆ’ಯಲ್ಲಿ ಹದಗೊಂಡ ಆ ಕಾಲಘಟ್ಟದ ಸಾಮಾಜಿಕ ಪರಿಸ್ಥಿತಿ ಹೊಸ ಧರ್ಮದ ಉದಯಕ್ಕೆ ಸಜ್ಜುಗೊಂಡಿತ್ತು ಎನ್ನುವ ದೃಷ್ಟಿಯಲ್ಲಿ ವಚನಗಳ ಅವಲೋಕನವನ್ನು ಮಾಡುತ್ತಾರೆ. ವಚನ ‘ಸಾಹಿತ್ಯವೆನಿಸಿದ್ದಷ್ಟೇ ಅಲ್ಲ; ಶ್ರೇಷ್ಠ ಸಾಹಿತ್ಯವೆನಿಸಿದ್ದೇ ವಚನ ಚಳವಳಿಯ ನಿಜವಾದ ಪವಾಡ’ ಎನ್ನುತ್ತಾರೆ. 

ADVERTISEMENT

ವಚನಗಳ ಹಿನ್ನೆಲೆಯಲ್ಲಿ ಸಿದ್ಧರಾಮನ ವ್ಯಕ್ತಿತ್ವವನ್ನು ಬಣ್ಣಿಸುವ ಲಕ್ಷ್ಮೀನಾರಾಯಣ ಅವರು ಹಳಗನ್ನಡದ ಜೊತೆ ಹೊಸಗನ್ನಡದ ಸಾಹಿತ್ಯ ಪ್ರಕಾರಗಳ ಕುರಿತೂ ಚರ್ಚಿಸಿದ್ದಾರೆ. ಕಾವ್ಯ ಮೀಮಾಂಸೆಗೆ ಸಂಬಂಧಿಸಿದಂತೆ ತಮ್ಮದೇ ಆದ ಔಚಿತ್ಯ ಪ್ರಜ್ಞೆಯಲ್ಲಿ ಪ್ರತಿಭೆ, ಅಲಂಕಾರ, ರೀತಿ, ರಸ, ಧ್ವನಿಗಳ ಬಗ್ಗೆಯೂ ಅಲ್ಲಲ್ಲಿ ದನಿ ಎತ್ತಿದ್ದಾರೆ. ಮೀಮಾಂಸಕ ಕ್ಷೇಮೇಂದ್ರ ಪತ್ರಿಪಾದಿಸುವ ‘ಔಚಿತ್ಯ ವಿಚಾರ ಚರ್ಚೆ’ಯ ಬಗ್ಗೆ ಸುದೀರ್ಘ ಚರ್ಚೆಯನ್ನು ಮಾಡಿದ್ದಾರೆ.

ಹಾಲು ಮತ್ತು ಹಂಸ

ಲೇ: ಆರ್‌. ಲಕ್ಷ್ಮೀನಾರಾಯಣ

ಪ್ರ: ಕಾಮಧೇನು ಪುಸ್ತಕ ಭವನ ಬೆಂಗಳೂರು

ಸಂ: 9945002444

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.